ಶನಿವಾರ, ಜೂಲೈ 11, 2020
28 °C

ಹೃದಯಸ್ಪರ್ಶಿ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅದೊಂದು ಆತ್ಮೀಯ ಕ್ಷಣ. ಕಳೆದ ಐದು ವರ್ಷ ಜತೆಗೂಡಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿದ, ಯೋಜನೆ ರೂಪಿಸಿದ ಜನಪ್ರತಿನಿಧಿಗಳಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕೆಲವರು ಕಳೆದ ಐದು ವರ್ಷದಲ್ಲಿ ತಾವು ನಡೆದು ಬಂದ ದಾರಿ ಮೆಲುಕು ಹಾಕಿದರೆ, ಇನ್ನು ಕೆಲವರು ತಾವು ಕೈಗೊಂಡ ಯೋಜನೆ, ಮುಂದಿನವರು ಮಾಡಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಐದು ವರ್ಷಗಳ ಸಭೆಯಲ್ಲಿ ಒಮ್ಮೆಯೂ ಮಾತನಾಡದ ಹಲವು ಸದಸ್ಯೆಯರೂ ಹೃದಯ ತುಂಬಿ ಮಾತನಾಡಿದ್ದು ವಿಶೇಷವಾಗಿತ್ತು.

ಆರಂಭದಲ್ಲಿ ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಮಾತನಾಡಿ, ಗುಣಾತ್ಮಕ ಕೆಲಸ ಆಗಿದೆ ಎಂಬುದಕ್ಕಿಂತ ಅದರತ್ತ ಹೆಜ್ಜೆ ಹಾಕಿದ್ದೇವೆ ಎನ್ನುವುದು ಸೂಕ್ತ.260 ಗ್ರಾ.ಪಂ.ಗಳಲ್ಲಿ 240 ಗ್ರಾ.ಪಂ.ಗಳು ಇದೇ ಅವಧಿಯಲ್ಲಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಒಳಗಾಗಿವೆ. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ ಎಂಟನೇ ಸ್ಥಾನ ಪಡೆದಿದೆ. ಯಾವುದೇ ಅನುದಾನ ಹಿಂದಕ್ಕೆ ಹೋಗದಂತೆ ಸಮರ್ಪಕ ಬಳಕೆಯಾಗಿದೆ ಎಂದು ಐದು ವರ್ಷಗಳ ಸಾಧನೆಗಳನ್ನು ಮೆಲುಕು ಹಾಕಿದರು.ತಿಳಿವಳಿಕೆ ಇರುವ ಸದಸ್ಯರಿದ್ದರಿಂದ ಸುದೀರ್ಘ ಚರ್ಚೆ ನಡೆಯುತ್ತಿತ್ತು. ಹಾಗಾಗಿ, ಶಿವಮೊಗ್ಗ ಜಿ.ಪಂ. ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

ಅಧಿಕಾರಿಗಳ ಪರವಾಗಿ ಡಿಡಿಪಿಐ ಎಸ್.ಎಲ್. ಚವಾಣ್, ರೇಷ್ಮೆ ಇಲಾಖೆ ಉಪನಿರ್ದೇಶಕ ತಿಪ್ಪೇರುದ್ರಪ್ಪ, ಭದ್ರಾವತಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಜಿ.ಪಂ. ಅಧಿಕಾರಿ ವರ್ಗಿಸ್ ಮಾತನಾಡಿದರು.ಸನ್ಮಾನ ಸ್ವೀಕರಿಸಿದ ಸದಸ್ಯರಾದ ಅರವಿಂದ್, ಷಡಕ್ಷರಿ, ಯೋಗೀಶ್, ಪ್ರೇಮ್‌ಕುಮಾರ್, ದೇವಕಿ ಪಾಣಿರಾಜಪ್ಪ, ಭಾರತಿ ಮಂಜುನಾಥಯ್ಯ, ಹುಣವಳ್ಳಿ ಗಂಗಾಧರಪ್ಪ ಮಾತನಾಡಿ, ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಕೆಲವೊಮ್ಮೆ ಅಧಿಕಾರಿಗಳ ಜತೆ ಗಂಭೀರವಾಗಿಯೂ ನಡೆದುಕೊಂಡಿದ್ದೇವೆ. ಇದರಲ್ಲಿ ಸ್ವಾರ್ಥ ಇರಲಿಲ್ಲ. ಮುಂದೆಯೂ ನಿಮ್ಮ ಸಹಕಾರ ಎಂದಿನಂತಿರಲಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.ಸದಸ್ಯೆರಾದ ಎ.ಟಿ. ನಾಗರತ್ನಾ, ಚನ್ನಮ್ಮ, ಶೃತಿ ವೆಂಕಟೇಶ್ ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ಸದಸ್ಯರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದರು.ಸದಸ್ಯ ಕಲಗೋಡು ರತ್ನಾಕರ, ‘ಅಧ್ಯಕ್ಷರಿಗೆ ಸಹಕಾರ ನೀಡಿದ್ದೇವೆ. ನಿರೀಕ್ಷೆಯಂತೆ ಕೆಲಸ ಆಗಿಲ್ಲ. 11 ಮತ್ತು 12ನೇ ಹಣಕಾಸು ಆಯೋಗದ ಹಣ ಬಂದಿದ್ದರೆ ಇನ್ನಷ್ಟು ಕೆಲಸಗಳು ಆಗುತ್ತಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.   ಜಿ.ಪಂ. ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಅಧಿಕಾರಿಗಳು-ಜನಪ್ರತಿನಿಧಿಗಳ ಹೊಂದಾಣಿಕೆಯಿಂದ ಐದು ವರ್ಷದ ಅವಧಿಯಲ್ಲಿ ಉತ್ತಮ ಕೆಲಸಗಳು ಆಗಿವೆ ಎಂದು ಸ್ಮರಿಸಿದರು.ಸದಸ್ಯರಾದ ಭಾಗ್ಯಮ್ಮ, ತೇಜಪ್ಪ, ಚಂದ್ರಕುಮಾರ್, ಶಾಂತಲಾ ಭೂಕಾಂತ್, ಶೋಭಾ ಸುರೇಶ್, ಸರಸ್ವತಮ್ಮ ಹಾಲಪ್ಪ, ರಾಮಾನಾಯಕ್ ಸೇರಿದಂತೆ ಜಿ.ಪಂ. ಅಧಿಕಾರಿಗಳಾದ ಎಂ.ಬಿ. ಶಂಕರಪ್ಪ, ಎ. ಹನುಮನರಸಯ್ಯ, ಎಂ.ಬಿ. ಶ್ರೀಕಂಠ ಮತ್ತಿತರರು ಪಾಲ್ಗೊಂಡಿದ್ದರು. ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ ಕಾರ್ಯಕ್ರಮನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.