ಬುಧವಾರ, ಮೇ 19, 2021
27 °C

ಹೆಗ್ಗಣ ತೆಗೆಯಲು ಹೋಗಿ ಮೃತಪಟ್ಟ ಕಾರ್ಮಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ತಾಲ್ಲೂಕಿನ ವಿವಿಧೆಡೆ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಮೃತಪಟ್ಟವರನ್ನು ವಿಶ್ವನಾಥ ರಾಮಸ್ವಾಮಿ (42),  ಬೊಬ್ರುವಾಡ ನಾಯ್ಕ (20) ಮತ್ತು ಗೋಪಾಲ ಮರಾಠೆ (35) ಎಂದು ಗುರುತಿಸಲಾಗಿದೆ.ತಾಲ್ಲೂಕಿನ ಬಾಳೆಗುಳಿಯ ವಡ್ಡರ ಕಾಲೊನಿಯಲ್ಲಿನ ಸಾರ್ವಜನಿಕ ಬಾವಿಯಲ್ಲಿ ಬಿದ್ದಿದ್ದ ಹೆಗ್ಗಣವನ್ನು ತೆಗೆದು ಶುಚಿಗೊಳಿಸಲು ಬಾವಿಗೆ ಇಳಿದಿದ್ದ ವಿಶ್ವನಾಥ ರಾಮಸ್ವಾಮಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.50 ಅಡಿ ಆಳದ ಮತ್ತು ಚಿಕ್ಕ ವ್ಯಾಸದ ಬಾವಿಯಲ್ಲಿ ಇಳಿದಾಗ 15 ಅಡಿ ಆಳದ ನೀರಿಗೆ ಬಿದ್ದ ಈತನು ತೊಂದರೆಗೆ ಸಿಕ್ಕಿದ್ದನ್ನು ಕಂಡ ಅಶೋಕ ಬಂಗಾರಸ್ವಾಮಿ ನೀರಿಗೆ ಇಳಿದು ರಕ್ಷಿಸಲು ಧಾವಿಸಿದ್ದಾರೆ.ಆಮ್ಲಜನಕದ ತೊಂದರೆಯಿಂದ ಅವರೂ ಅಸ್ವಸ್ಥಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿದರು. ತಕ್ಷಣ ಅಲ್ಲಿಯೇ ಇದ್ದ ಶಿವಕುಮಾರ ಚೌಡಪ್ಪ ಸ್ವಾಮಿ ನೀರಿಗಿಳಿದು ಅಶೋಕನನ್ನು ರಕ್ಷಿಸಿದ್ದಾರೆ.ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ವಿಶ್ವನಾಥ ಪತ್ನಿ ತುಳಸಿ, ಮಕ್ಕಳಾದ ವಿಜಯ, ವಿನೋದ ಮತ್ತು ಕವಿತಾರನ್ನು ಅಗಲಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆ ತೆಗೆದರು.  ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ. ಜಾಯ್ ಆಂಟನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬುದ್ದಿವಾದ ಹೇಳಿದಕ್ಕೆ ವಿಷ ಕುಡಿದ ಯುವಕ: ತಂದೆ ಬುದ್ದಿವಾದ ಹೇಳಿದನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೊಬ್ರುವಾಡದಲ್ಲಿ ನಡೆದಿದೆ. ವಿಷಸೇವಿಸಿದವನನ್ನು ಮಂಜುನಾಥ ನಾರಾಯಣ ನಾಯ್ಕ (20) ಎಂದು ಗುರುತಿಸಲಾಗಿದೆ.ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುವ ತಂದೆ ನಾರಾಯಣ ರೈತರ ಜಮೀನಿನಲ್ಲಿ ಶೇಂಗಾ ಬೆಳೆಯುವ ಉಪಕಸುಬನ್ನು ಮಾಡುತ್ತಿದ್ದರು. ಶೇಂಗಾ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕವನ್ನೇ ಬೆಳಿಗ್ಗೆ 10 ಗಂಟೆಗೆ ಸೇವಿಸಿದ ಮಂಜುನಾಥನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಿನಲ್ಲಿ ಈತ ಮೃತಪಟ್ಟಿದ್ದಾನೆ.  ಪಿ.ಎಸ್.ಐ. ವೈ.ಎಂ. ಹಾಲರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಡಿಕೆ ಮರದಿಂದ ಬಿದ್ದು ಸಾವು: ಅಚವೆ ಗ್ರಾ.ಪಂ. ವ್ಯಾಪ್ತಿಯ ವಾಡಗಾರದ ತೋಟವೊಂದರಲ್ಲಿ ಅಡಿಕೆಗೊನೆ ಕೊಯ್ಯಲು ಮರವೇರಿದ್ದ ಗೋಪಾಲ ಜನಗ್ಯಾ ಮರಾಠೆ (35) ಎಂಬ ಕೂಲಿ ಕಾರ್ಮಿಕ ಆಯತಪ್ಪಿ ಬಿದ್ದು  ಮೃತಪಟ್ಟಿದ್ದಾರೆ.ಎಂದಿನಂತೆ ಮರವೇರಿದ್ದ ಗೋಪಾಲನಿಗೆ ಕೆಂಗಳಕನ ಹುಳು ಕಚ್ಚಿದಾಗ ಉರಿತಾಳದೇ ಹುಳುವನ್ನು ಓಡಿಸಲು ಯತ್ನಿಸುವಾಗ ಆಯತಪ್ಪಿ ಬಿದ್ದಿದ್ದಾನೆಂದು ಗೊತ್ತಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಸುಮಾರು 5 ಕಿ.ಮೀ.ವರೆಗೆ ಹೊತ್ತುಕೊಂಡು ಚೆನಗಾರವರೆಗೆ ತರಲಾಗಿದೆ.ಚೆನಗಾರನಿಂದ ಹಿರೇಗುತ್ತಿ 108 ವಾಹನದಲ್ಲಿ ಕುಮಟಾ ಆಸ್ಪತ್ರೆಗೆ ಸಾಗಿಸುವ ವೇಳೆಗೆ 5 ತಾಸುಗಳು ಕಳೆದುಹೋಗಿದ್ದು, ಆಸ್ಪತ್ರೆ ತಲುಪುವಷ್ಟರಲ್ಲಿಯೇ ಕೂಲಿ ಕಾರ್ಮಿಕ ಇಹಲೋಕ ತ್ಯಜಿಸಿದ್ದಾರೆ.ಕುಟುಂಬದ ಆಧಾರಸ್ಥಂಭವನ್ನು ಕಳೆದುಕೊಂಡಿರುವ ಮೃತನ ಪತ್ನಿ ಮತ್ತು ಮೂವರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಡಗಾರನಿಂದ ಚೆನಗಾರವರೆಗೆ ರಸ್ತೆ ಹದಗೆಟ್ಟಿರುವುದರಿಂದ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗುತ್ತಿಲ್ಲ.ಅಪರಿಚಿತ ವ್ಯಕ್ತಿ ನೇಣಿಗೆ ಶರಣು

ಹಳಿಯಾಳ: ತಾಲ್ಲೂಕಿನ ಬಿ.ಕೆ.ಹಳ್ಳಿ ಗ್ರಾಮದ ಹತ್ತಿರ ವಿರುವ ಅರಣ್ಯ ಪ್ರದೇಶದಲ್ಲಿ ಸುಮಾರು 40-50 ವರ್ಷದ ಅಪರಿಚಿತ ಪುರುಷನೊಬ್ಬ ಕಳೆದ ಹತ್ತು ದಿವಸದ ಹಿಂದೆ ಮರವೊಂದಕ್ಕೆ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪ್ರಕರಣ ಹಳಿಯಾಳ ಠಾಣೆಯಲ್ಲಿ ದಾಖಲಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.