ಭಾನುವಾರ, ಮೇ 9, 2021
22 °C
ಅಸಮರ್ಪಕ ಪ್ರೋತ್ಸಾಹಧನ ನೀತಿಯ ಅನಾಹುತ

ಹೆಚ್ಚು ಸಾಧಿಸಿ ಶೂನ್ಯ ಸಂಪಾದಿಸಿ

ಎಸ್. ಜನಾರ್ದನ ಮರವಂತೆ Updated:

ಅಕ್ಷರ ಗಾತ್ರ : | |

ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ನೀಡುವ ವಾರ್ಷಿಕ ಶಾಸನಬದ್ಧ ಅನು­ದಾನ, ಅವುಗಳ ಸಂಪನ್ಮೂಲದ ಒಂದು ಪ್ರಧಾನ ಭಾಗ. ಅದನ್ನು ಸಿಬ್ಬಂದಿ ವೇತನಕ್ಕೆ, ವಿದ್ಯುತ್ ಶುಲ್ಕ ಪಾವ­ತಿಗೆ ಬಳಸಬೇಕೆಂಬ ನಿರ್ಬಂಧವಿದೆ. ಏನಾದರೂ ಮಿಕ್ಕಿ­ದರಷ್ಟೆ ಅದನ್ನು ಅಭಿವೃದ್ಧಿಗೆ ಬಳಸಬಹುದು. ಈ ಅನುದಾನವನ್ನು ನಾಲ್ಕು ಸಮಾನ ತ್ರೈಮಾಸಿಕ ಕಂತು­ಗಳಲ್ಲಿ ಪಾವತಿಸಲಾಗುತ್ತದೆ. ಇಷ್ಟರಲ್ಲಿ ಪ್ರಸಕ್ತ ವರ್ಷದ ಒಂದು ಕಂತು ಜಮೆಯಾಗಬೇಕಿತ್ತು. ಅದು ಬಿಡಿ; ಕಳೆದ ವರ್ಷದ ಮಾರ್ಚ್‌ ಒಳಗೆ ಬರ­ಬೇಕಾ­ಗಿದ್ದ ಕೊನೆಯ ಕಂತೇ ಇನ್ನೂ ಗ್ರಾಮ ಪಂಚಾ­ಯಿತಿಗಳ ಕೈ­ಸೇರಿಲ್ಲ ಎಂದರೆ ಗ್ರಾಮ ಪಂಚಾಯಿತಿಗಳು ಸದ್ಯ ಎಂತಹ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರಬಹುದು ಎನ್ನು­­ವುದನ್ನು ಯಾರು ಬೇಕಾದರೂ ಊಹಿಸ­ಬಹುದು.ಇದೀಗ ಆಗಸ್ಟ್ 1 ರಂದು ಹೊರಬಿದ್ದ, ಕಳೆದ ವರ್ಷದ ಕೊನೆಯ ಕಂತು ಬಿಡುಗಡೆಯ ಸರ್ಕಾರಿ ಆದೇಶ ಕೆಲವು ಗ್ರಾಮ ಪಂಚಾಯಿತಿಗಳಿಗೆ ಆಘಾತ ನೀಡಿ­ದರೆ, ಇನ್ನು ಕೆಲವು ಪಂಚಾಯಿತಿಗಳಿಗೆ ಅಸಮಾಧಾನ ತಂದಿದೆ.  ಅದಕ್ಕೆ ಕಾರಣ ವಾರ್ಷಿಕ ತೆರಿಗೆ ಸಂಗ್ರಹಕ್ಕೆ ಜಿಲ್ಲಾವಾರು ನಿಗದಿಗೊಳಿಸಿದ ಕನಿಷ್ಠ ಗುರಿ ತಲುಪಲಾಗದ ಗ್ರಾಮ ಪಂಚಾಯಿತಿಗಳ ವಿರುದ್ಧ ಸರ್ಕಾರ ತನ್ನ ಕೆಂಗಣ್ಣು ಬೀರಿ ಅವುಗಳಿಗೆ ನೀಡ­ಬೇಕಾದ ಶಾಸನಬದ್ಧ ಅನುದಾನಕ್ಕೆ ಕತ್ತರಿ ಪ್ರಯೋಗಿಸಿ­ರುವುದು. ಅಂತಹ ಗ್ರಾಮ ಪಂಚಾಯಿತಿ­ಗಳಿಗೆ ಬಿಡುಗಡೆ­ಯಾಗುವ 2013–14ನೆಯ ವರ್ಷದ ನಾಲ್ಕನೆ ತ್ರೈಮಾಸಿಕ ಕಂತಿನಲ್ಲಿ ತಲಾ ₨ 1 ಲಕ್ಷ ಕಡಿತ ಮಾಡಲಾಗಿದೆ.ಹೀಗೆ ಮಾಡಿರುವ ಕಡಿತದ ಮೊತ್ತವನ್ನು ಉತ್ತಮ ಸಾಧನೆ ಮಾಡಿರುವ ಪಂಚಾಯಿತಿಗಳಿಗೆ ಹಂಚುವ ಮೂಲಕ ಅವುಗಳಿಗೆ ಪ್ರೋತ್ಸಾಹ ನೀಡಿದೆ. ಅದರೆ ಗುರಿ ನಿಗದಿಯಲ್ಲಿ ಜಿಲ್ಲೆಗಳ ನಡುವೆ ತಾರತಮ್ಯ ನೀತಿ ಅನುಸರಿಸಿದ ಕಾರಣ, ನಿಜವಾಗಿಯೂ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳು ಒಂದೋ ಪ್ರೋತ್ಸಾಹ ಧನದಿಂದ ವಂಚಿತವಾಗಿವೆ, ಇಲ್ಲವೆ ಚಿಲ್ಲರೆ ಭಿಕ್ಷೆ ಪಡೆದಿವೆ.   ರಾಜ್ಯ ಸರ್ಕಾರವು ರಾಜ್ಯದ 5,629 ಗ್ರಾಮ ಪಂಚಾಯಿತಿಗಳಲ್ಲಿ 8,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 4,211 ಗ್ರಾಮ ಪಂಚಾಯಿತಿಗಳಿಗೆ ತಲಾ ₨ 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 1,418 ಗ್ರಾಮ ಪಂಚಾಯಿತಿಗಳಿಗೆ ತಲಾ ₨ 12 ಲಕ್ಷ ವಾರ್ಷಿಕ ಅನುದಾನ ನೀಡುತ್ತದೆ. ಇದನ್ನು ನಾಲ್ಕು ಸಮಾನ ತ್ರೈಮಾಸಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.ಕೆಲವೊಮ್ಮೆ ಇದನ್ನು ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್‌ಗೆ ಹೊಂದಾಣಿಕೆ ಮಾಡುವುದು, ಕೊನೆಯ ಕಂತನ್ನು ಪಾವತಿಸದಿರುವುದೂ ಉಂಟು. ಈ ಬಾರಿ 2013–14ರ ಕೊನೆಯ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ 2014ರ  ಫೆ .2ರಂದು ಹೊರಡಿಸಿದ ಆದೇಶದಲ್ಲಿ ಒಮ್ಮೆ ತಿಳಿಸಿತ್ತು. ಆದರೆ ಆ ಹಣ ಪಂಚಾಯಿತಿ ಖಾತೆ­ಗಳಿಗೆ ಈವರೆಗೂ ಜಮೆ ಆಗಿಲ್ಲ. ಅದಕ್ಕಾಗಿ ಕಾದಿದ್ದ ಗ್ರಾಮ ಪಂಚಾಯಿತಿಗಳಿಗೆ ಈಗಷ್ಟೇ ತಲು­ಪಿದ ಆಗಸ್ಟ್ 1ರ ಸರ್ಕಾರದ ಆದೇಶ ಬಿಸಿ ತಗುಲಿಸಿದೆ.  

ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ತೆರಿಗೆ, ದರ, ಶುಲ್ಕಗಳ ಮೂಲಕ ಸ್ವಂತ ಸಂಪನ್ಮೂಲ ಕ್ರೋಢೀಕರಿಸುವ ಅವಕಾಶವಿದೆ. ಅವು ಈ ಅವಕಾಶ­ವನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣಾ­ಭಿವೃದ್ಧಿ ಸಾಧಿಸಬೇಕೆನ್ನುವುದು ಕಾಯಿದೆಯ ಉದ್ದೇಶ. ಆದರೆ, ರಾಜ್ಯದ ಬಹುತೇಕ ಗ್ರಾಮ ಪಂಚಾ­ಯಿತಿಗಳು ಕಾಲಕಾಲಕ್ಕೆ ನಿಯಮಾನುಸಾರ ತೆರಿಗೆ ನಿಗದಿಗೊಳಿಸಿ, ಸಂಗ್ರಹಿ­ಸುವ ವಿಚಾರದಲ್ಲಿ ಅಸಡ್ಡೆ ತೋರು­ತ್ತಿರುವ ಅಥವಾ ವಿಫಲವಾಗುತ್ತಿರುವ ಕಾರಣ ಇದನ್ನು ನಿರುತ್ತೇಜಿಸಲು ಸರ್ಕಾರ  ಈ ಕಠೋರ ಕ್ರಮಕ್ಕೆ ಮುಂದಾಗಿದೆ.ಆದರೆ, ಇಲ್ಲಿ ಅನುಸರಿಸಿದ ಕ್ರಮದ ಹಿಂದೆ ವಿವೇಚನೆಯ ಕೊರತೆ ಕಂಡುಬರುತ್ತಿದೆ. ಇದರಲ್ಲಿ ಉತ್ತಮ, ನ್ಯಾಯಪರ ಆಡಳಿತ ಸೂತ್ರದ ಲೋಪ ಢಾಳಾಗಿದೆ. ಮೊದಲೇ ತೆರಿಗೆ ಸಂಗ್ರಹಿಸಲಾಗದೆ ಬಡವಾಗಿರುವ ಗ್ರಾಮ ಪಂಚಾಯಿತಿಗಳು ಇನ್ನಷ್ಟು ಗತಿಗೇಡಾಗುವಂತೆ ಮಾಡಲಾಗಿದೆ.ಉತ್ತಮ ಆರ್ಥಿಕ ನಿರ್ವಹಣೆಯ ಒಂದು ಮಹತ್ವದ ಭಾಗವಾಗುವ ತೆರಿಗೆ ಸಂಗ್ರಹದ ಗುರಿ ಶೇ 100 ಇರಬೇಕು. ಸರ್ಕಾರ ಹಾಗೆ ಮಾಡುವ ಬದಲು ಜಿಲ್ಲೆಗೊಂದೊಂದು ಗುರಿ ನಿಗದಿಗೊಳಿಸಿದೆ. ಮಾತ್ರ­ವಲ್ಲ ಅದಕ್ಕೆ ಅವುಗಳ ಕಳಪೆ ಸಾಧನೆಯನ್ನೇ ಮಾನ­ದಂಡ­ವಾಗಿರಿಸಿಕೊಂಡಿದೆ. ರಾಜ್ಯದ 30 ಜಿಲ್ಲೆಗಳನ್ನು (ಹಿಂದುಳಿ­ದಿರುವಿಕೆಯ ಆಧಾರದಲ್ಲಿ?) ನಾಲ್ಕು ಗುಂಪು­ಗಳಾಗಿ ಮಾಡಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಚಾಮರಾಜ­ನಗರ ಜಿಲ್ಲೆ­ಗಳಿಗೆ ಶೇ 60, ಬೆಂಗಳೂರು ನಗರ, ಗ್ರಾಮಾಂತರ, ರಾಮ­ನಗರ, ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಗಳಿಗೆ ಶೇ 50, ಕೋಲಾರ, ಚಿಕ್ಕ­ಬಳ್ಳಾಪುರ, ತುಮಕೂರು, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ, ಧಾರವಾಡ, ಗದಗ, ರಾಯ­ಚೂರು, ಕೊಪ್ಪಳ, ಬೀದರ್, ಬಳ್ಳಾರಿ, ಗುಲ್ಬರ್ಗಾಗೆ ಶೇ 40 ಮತ್ತು ಚಿತ್ರದುರ್ಗ, ವಿಜಾಪುರ, ಯಾದಗರಿ, ಹಾವೇರಿ ಜಿಲ್ಲೆಗಳಿಗೆ ಕನಿಷ್ಠತಮವಾದ ಶೇ 30 ಗುರಿ ನಿಗದಿಗೊಳಿಸಿದೆ.ಈ ಗುರಿ ತಲಪಲು ವಿಫಲವಾದ ಗ್ರಾಮ ಪಂಚಾ­ಯಿತಿ­ಗಳ ಅನುದಾನದಲ್ಲಿ ಕಡಿತಗೊಳಿಸಿದ ಮೊತ್ತ­ವನ್ನು ತಾಲ್ಲೂಕುವಾರು ಕೂಡಿಸಿ, ಆಯಾ ತಾಲ್ಲೂಕಿ­ನಲ್ಲಿ ಗುರಿ ಸಾಧಿಸಿದ ಗ್ರಾಮ ಪಂಚಾಯಿತಿಗಳಿಗೆ ಸಮಾನ­ವಾಗಿ ಹಂಚಿಕೆ ಮಾಡಿದೆ. ಇದರಿಂದ ನಿಗದಿತ ಗುರಿ ಸಾಧಿಸದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ­ಗಳು ಕಳೆದುಕೊಳ್ಳುವ ಮೊತ್ತ ಸಮಾನವಾಗಿದ್ದರೂ, ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳು ಗಳಿಸುವ ಪ್ರೋತ್ಸಾಹ ಧನ ಸಮಾನವಾಗಿಲ್ಲ. ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ 51 ಗ್ರಾಮ ಪಂಚಾಯಿತಿಗಳಲ್ಲಿ ನಿಗದಿತ ಗುರಿ ಸಾಧಿಸದ 45 ಗ್ರಾಮ ಪಂಚಾಯಿತಿಗಳು ತಲಾ 1 ಲಕ್ಷ ಕಳೆದುಕೊಳ್ಳುವುದರಿಂದ ಉಳಿದ 6 ಗ್ರಾಮ­ಪಂಚಾ­ಯಿತಿಗಳಿಗೆ ತಲಾ ₨ 7.5 ಲಕ್ಷ ಪ್ರೋತ್ಸಾಹಧನ ಸಿಗು­ತ್ತದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂ­ಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಗುರಿ ತಲುಪದ 39 ಗ್ರಾಮ ಪಂಚಾಯಿತಿಗಳ ಅನುದಾನದಿಂದ ಕತ್ತರಿಸಲಾಗುವ ಮೊತ್ತ ₨ 39 ಲಕ್ಷ. ಅದರಿಂದ ಗುರಿ ಸಾಧಿಸಿದ 3ಗ್ರಾಮ ಪಂಚಾಯಿತಿಗಳಿಗೆ ತಲಾ ₨13 ಲಕ್ಷ ಬಂಪರ್ ಬಹುಮಾನ ದೊರೆಯಲಿದೆ. ಆದರೆ ಉತ್ತಮ ಆಡಳಿತ, ಸಮರ್ಪಕ ಸಂಪನ್ಮೂಲ ಸಂಗ್ರಹದ ಮೂಲಕ ಭಿನ್ನತೆ ಮೆರೆಯುವ ಕರಾವಳಿ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳ ಗ್ರಾಮ ಪಂಚಾ­ಯಿತಿಗಳು ತಮ್ಮ ಸಾಧನೆಯಿಂದ ತೃಪ್ತಿ ಪಡ­ಬೇಕಾ­ಗುತ್ತದೆ. ಉದಾಹರಣೆಗೆ ಉಡುಪಿ ಜಿಲ್ಲೆಯ ಮೂರು ತಾಲ್ಲೂಕುಗಳ 146 ಗ್ರಾಮ ಪಂಚಾಯಿತಿ­ಗಳಲ್ಲಿ ಕುಂದಾಪುರ ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿಗಳು ಮಾತ್ರ ಗುರಿ ಮುಟ್ಟಿಲ್ಲ. ಅವುಗಳ ಅನುದಾನದಲ್ಲಾಗುವ ಕಡಿತ ರೂ. 2 ಲಕ್ಷ ಮಾತ್ರ. ಅದರಿಂದ ಗುರಿ ಸಾಧಿಸಿದ 54 ಗ್ರಾಮ ಪಂಚಾಯಿತಿ­ಗಳಿಗೆ ತಲಾ ರೂ. 4 ಸಾವಿರ ಚಿಲ್ಲರೆ ಕಾಸು ‘ಪ್ರೋತ್ಸಾಹ ಧನ’ವಾಗಿ ಸಿಗಲಿದೆ.ಉಡುಪಿ ಮತ್ತು ಕಾರ್ಕಳ ತಾಲ್ಲೂಕುಗಳ ಎಲ್ಲ 90 ಗ್ರಾಮ ಪಂಚಾಯಿತಿಗಳು ಗುರಿ ಸಾಧಿಸಿರುವುದರಿಂದ ಅಲ್ಲಿ ಯಾವ ಗ್ರಾಮ ಪಂಚಾಯಿತಿಯೂ ಪ್ರೋತ್ಸಾಹ ಧನ ಪಡೆ­ಯಲು ಅರ್ಹವಾಗಿಲ್ಲ ! 203 ಗ್ರಾಮ ಪಂಚಾ­ಯಿತಿ­ಗಳಿರುವ ದಕ್ಷಿಣ ಕನ್ನಡದಲ್ಲಿ ಗುರಿ ಸಾಧಿಸಲು ವಿಫಲ­ವಾಗಿರುವುದು ಕೇವಲ ಐದು ಗ್ರಾಮ ಪಂಚಾಯಿತಿ­ಗಳಾದುದರಿಂದ ಅಲ್ಲಿ ದೊರೆಯುವ ಪ್ರೋತ್ಸಾಹ ಧನ ತೀರ ಕನಿಷ್ಠ. ಮೊದಲ ಸ್ಥಾನ­ದಲ್ಲಿ­ರುವ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಬಹ­ಳಷ್ಟು ಗ್ರಾಮ ಪಂಚಾಯಿತಿಗಳು ಪ್ರತಿ ವರ್ಷ ತೆರಿಗೆ ಸಂಗ್ರಹದಲ್ಲಿ ಶೇ 100 ಸಾಧನೆ ಮಾಡುವ ಪರಂಪರೆ ಹೊಂದಿವೆ. ಸರ್ಕಾರ ರೂಪಿಸಿರುವ ಈ ಸೂತ್ರದಿಂದ ಅವು­ಗಳಿಗೆ ಸಿಗುವ ಪ್ರೋತ್ಸಾಹಧನ ಶೂನ್ಯ. ಆದರೆ, ಶೇ 30 ಗುರಿ ‘ಸಾಧನೆ’ ಮಾಡಿರುವ ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ₨ 13 ಲಕ್ಷ ಅಂದರೆ ರಾಜ್ಯದ ಯಾವುದೇ ಗ್ರಾಮ ಪಂಚಾಯಿತಿಗೆ ಸರ್ಕಾರ ನೀಡುವ ವಾರ್ಷಿಕ ಅನುದಾನಕ್ಕಿಂತ 1 ಲಕ್ಷ ಅಧಿಕ ಪ್ರೋತ್ಸಾಹಧನ ಸಿಗುತ್ತದೆ!  ಇದರಿಂದ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಪರೋಕ್ಷವಾಗಿ ನಿಗದಿಗೊಳಿಸಿದ ‘ಉತ್ತಮ ಆಡಳಿತ’ ಮತ್ತು ‘ಆರ್ಥಿಕ ಶಿಸ್ತಿ’ನ ವಿನೂತನ ಸೂತ್ರವನ್ನು ‘ಕಡಿಮೆ ಸಾಧಿಸಿ, ಅಧಿಕ ಗಳಿಸಿ–ಹೆಚ್ಚು ಸಾಧಿಸಿ, ಶೂನ್ಯ ಸಂಪಾದಿಸಿ’ ಎಂದು ಹೆಸರಿಸಬೇಕಾಗುತ್ತದೆ. ಇನ್ನು ಗ್ರಾಮ ಪಂಚಾಯಿತಿಗಳ ಸಾಧನೆ ಪರಿಗಣಿಸಿ ಪ್ರೋತ್ಸಾಹ ಧನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾ­ರದ ಔದಾರ್ಯರಹಿತ, ಬಾಯುಪಚಾರ, ವಚನ­ಭಂಗ­ಗಳಿಗೆ ಪೂರ್ವ ನಿದರ್ಶನಗಳಿವೆ.2003ರಲ್ಲಿ ಹಣಕಾಸು ಸಚಿವರ ಆಯವ್ಯಯ ಭಾಷಣವನ್ನು ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್ ರಾಜ್ ಇಲಾಖೆ ಸುತ್ತೋಲೆ­ಯೊಂ­ದನ್ನು ಹೊರಡಿಸಿತ್ತು. ಅದರಲ್ಲಿ ಡಿಸೆಂಬರ್‌ ಮಾಸದೊಳಗೆ ಶೇ 75 ಕಟ್ಟಡ ತೆರಿಗೆ ಮತ್ತು ನೀರಿನ ದರ ಸಂಗ್ರಹಿಸುವ ಗ್ರಾಮ ಪಂಚಾಯಿತಿಗಳಿಗೆ ₨ 50,000 ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಅದಾದ ಮೂರು ವರ್ಷಗಳ ಬಳಿಕ ಹೊರಬಿದ್ದ ಇನ್ನೊಂದು ಸುತ್ತೋಲೆ ಸಕಾಲ­ದಲ್ಲಿ ವಿದ್ಯುತ್ ಬಿಲ್ ಪಾವತಿಸುವ ಗ್ರಾಮ ಪಂಚಾ­ಯಿತಿ­ಗಳಿಗೆ ಶೇ 25 ‘ಪವರ್ ಸಬ್ಸಿಡಿ’ ನೀಡುವುದಾಗಿ ತಿಳಿ­ಸಿತ್ತು. ಇವೆರಡೂ ಸುತ್ತೋಲೆಗಳು ಅವು ಹೊರ­ಬಿದ್ದ ವರ್ಷವೇ ಫಲ ನೀಡುವ ಮುನ್ನವೇ ಸರ್ಕಾರದ ಶೈತ್ಯಾಗಾರ ಸೇರಿಹೋದವು. ಅವು ಮತ್ತೆಂದೂ ಹೊರಬರಲಿಲ್ಲ.ಈಗ ಸರ್ಕಾರ ಜಾರಿಗೊಳಿಸುತ್ತಿರುವ ಅನುದಾನ ಕಡಿತದ ಶಿಕ್ಷೆ ಮತ್ತು ಪ್ರೋತ್ಸಾಹ ಧನವೆಂಬ  ಬಹು­ಮಾನದ ಯೋಜನೆಯಿಂದ ನಷ್ಟ ಅನುಭವಿ­ಸುವ ಮತ್ತು ಸಾಧನೆ ಮಾಡಿಯೂ ಪ್ರೋತ್ಸಾಹ ಧನದಿಂದ ಎರ­ವಾಗುವ ಎರಡೂ ವರ್ಗದ ಗ್ರಾಮ ಪಂಚಾ­ಯಿತಿಗಳು ಅಸಮಾಧಾನ­ಗೊಳ್ಳು­ವಂತಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಅವುಗಳಿಗೆ ಪ್ರಸಕ್ತ ಕಡಿತ ಮತ್ತು ನಿರಾಕರಣೆ ಗಾಯಕ್ಕೆ ಉಪ್ಪು ಸವರಿದ ಅನುಭವ ನೀಡುವುದು ಖಂಡಿತ. ಈ ಕ್ರಮ ನೈಜ ಸಾಧನೆ ಮಾಡಿದ ಗ್ರಾಮ ಪಂಚಾಯಿತಿ­ಗಳನ್ನು ಸಮಾನ ನ್ಯಾಯದಿಂದ ವಂಚಿತರನ್ನಾಗಿ ಮಾಡಿದೆ.ಇದರ ಬದಲಿಗೆ ಸರ್ಕಾರ ಗ್ರಾಮ ಪಂಚಾ­ಯಿತಿ­ಗಳಿಗೆ ಅವುಗಳ ಸಾಧನೆಗೆ ಅನುಗುಣವಾದ ಸೂಕ್ತ ಮೊತ್ತದ ಪ್ರೋತ್ಸಾಹ ಧನ ನೀಡುವುದು ನ್ಯಾಯ­ಸಮ್ಮತ ಮತ್ತು ಉತ್ತಮ ಆಡಳಿತದ ಒಂದು ಉಪಕ್ರಮ­ವೆನಿಸುತ್ತಿತ್ತು ಎನ್ನುವುದು ಅದರಿಂದ ‘ಸಂತ್ರಸ್ತ’­ರಾಗಿರುವ ಗ್ರಾಮ ಪಂಚಾಯಿತಿಗಳ ಪ್ರತಿನಿಧಿ­ಗಳ ಆಶಯವಾಗಿದೆ.(ಲೇಖಕರು ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.