ಶನಿವಾರ, ಜೂನ್ 19, 2021
22 °C

ಹೆಣ್ಣನ್ನು ಕೀಳಾಗಿ ಕಾಣುವ ಸ್ಥಿತಿ ಹೋಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇಂದಿನ ಆಧುನಿಕ ಕಾಲದಲ್ಲಿಯೂ ಮಹಿಳೆಯ ಮೇಲಿನ ಶೋಷಣೆ ಹಾಗೂ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿಷಾದಿಸಿದರು.ನಗರದಲ್ಲಿ ನಿಡುಮಾಮಿಡಿ ಮಹಾ ಸಂಸ್ಥಾನದ ವತಿಯಿಂದ ಗುರುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಜಗತ್ತು ಇಂದು ಎಷ್ಟೇ ಮುಂದುವರಿದಿದೆ ಎಂದು ತಿಳಿದಿದ್ದರೂ ಸಮಾಜದಲ್ಲಿ ಹೆಣ್ಣು ಮತ್ತು ಗಂಡಿನ ನಡುವಿನ ಅಸಮಾನತೆ ಹೆಚ್ಚಾಗುತ್ತಲೇ ಇದೆ. ಸಮಾನತೆಯ ಆಶಯಗಳು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಆಚರಣೆಗೆ ಬಂದಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲಿನ ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಿವೆ. ಹೆಣ್ಣಿನ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಈ ಎಲ್ಲ ದೌರ್ಜನ್ಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು~ ಎಂದು ಅವರು ಕರೆ ನೀಡಿದರು.`ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಧಾರ್ಮಿಕ ಕ್ಷೇತ್ರದಲ್ಲಿಯೂ ಮಹಿಳೆಯನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿಯೇ ನೋಡಲಾಗುತ್ತಿದೆ. ಜಾತಿಯ ಕಂದರಗಳನ್ನೂ ಮೀರಿ ಹೆಣ್ಣನ್ನು ಕೀಳಾಗಿನೋಡುವ ಮನಸ್ಥಿತಿ ಇನ್ನೂ ನಮ್ಮ ಸಮಾಜದಿಂದ ಹೋಗಿಲ್ಲ. ಗ್ರಾಮೀಣ ಮಹಿಳೆ ಇಂದಿಗೂ ಸಾಮಾಜಿಕ ಸಮಾನತೆಯ ಆಶಯಗಳು ಹಾಗೂ ವಿಚಾರಗಳನ್ನು ತಿಳಿಯುವ ಪರಿಸ್ಥಿತಿಯೇ ನಿರ್ಮಾಣವಾಗಿಲ್ಲ~ ಎಂದು ಅವರು ಕಳವಳ ವ್ಯಕ್ತ ಪಡಿಸಿದರು. `ಸರ್ಕಾರಗಳು ಅನೇಕ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆದರೆ ಇಂದಿನ ಗ್ರಾಮೀಣ ಮಹಿಳೆಗೆ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸರ್ಕಾರಗಳು ಸೋತಿವೆ. ಸರ್ಕಾರಗಳು ಕೇವಲ ಯೋಜನೆಗಳನ್ನು ರೂಪಿಸಿದರೆ ಸಾಲದು ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಮಾನವೀಯತೆಯ ಅಂತಃಕರಣವೂ ಬೇಕಾಗುತ್ತದೆ. ಮುಂಬರುವ ಬಜೆಟ್‌ನಲ್ಲಿ ರಾಜ್ಯದಲ್ಲಿ ವ್ಯವಸ್ಥಿತವಾಗಿ ಶೌಚಾಲಯಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು~ ಎಂದು ಅವರು ಹೇಳಿದರು.ಸಾಹಿತಿ ಬಿ.ಟಿ.ಲಲಿತಾನಾಯಕ್ ಮಾತನಾಡಿ, `ಹಿಂದಿನಿಂದಲೂ ಸಮಾಜ ಹೆಣ್ಣಿನ ಮೇಲೆ ನಡೆಸಿಕೊಂಡು ಬಂದಿರುವ ದಬ್ಬಾಳಿಕೆಯನ್ನೇ ಇಂದಿಗೂ ಮುಂದುವರಿಯುತ್ತಿದೆ. ಸಂಪ್ರದಾಯ ಹಾಗೂ ಆಚರಣೆಗಳ ಹೆಸರಿನಲ್ಲಿ ಹೆಣ್ಣನ್ನು ಮೌಢ್ಯದ ಕಡೆಗೆ ತಳ್ಳಲಾಗುತ್ತಿದೆ. ಈ ವಿಷಮ ಪರಿಸ್ಥಿತಿಯಿಂದ ಹೊರಬರಲು ಹೆಣ್ಣು ತನ್ನ ಅರಿವನ್ನು ವಿಸ್ತರಿಸಿಕೊಳ್ಳಬೇಕು~ ಎಂದು ಅವರು ತಿಳಿಸಿದರು.ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಮಾತನಾಡಿ, `ಮಹಿಳಾ ದಿನಾಚರಣೆಯ ಆಚರಣೆ ಕೇವಲ ಸಾಂಕೇತಿಕವಾಗಬಾರದು. ಪ್ರಸ್ತುತ ದಿನಗಳಲ್ಲಿ ಮಹಿಳಾ ಚಳವಳಿಗಳು ತಮ್ಮ ತೀವ್ರತೆಯನ್ನು ಕಳೆದುಕೊಳ್ಳುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಮಹಿಳೆಯರು ಹೋರಾಟಕ್ಕೆ ತಮ್ಮನ್ನು ಸದಾ ಸಜ್ಜುಗೊಳಿಸಿಕೊಳ್ಳಬೇಕು. ಯುವ ಜನಾಂಗ ಸಮಾಜದಲ್ಲಿ ಲಿಂಗ ಸಮಾನತೆಗಾಗಿ ಹೊಸ ಚಿಂತನೆ ಹಾಗೂ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು~ ಎಂದರು. ಸಮಾರಂಭದಲ್ಲಿ ಮೈಸೂರಿನ ಸಮಾತಾ ವೇದಿಕೆಯ ಸಂಚಾಲಕಿ ಮೀರಾ ನಾಯಕ್ ಅವರಿಗೆ ಮಠದ ವತಿಯಿಂದ `ಶಕ್ತಿ ಶ್ರೀ~ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಾಹಿತಿ ಡಾ. ಇಂದಿರಾ ಹೆಗಡೆ ಮಾತನಾಡಿದರು. ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಲೀಲಾವತಿ, ಸಮತಾ ವೇದಿಕೆಯ ಸದಸ್ಯೆ ಪ್ರೊ.ರೂಪಾರಾವ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.