ಭಾನುವಾರ, ಏಪ್ರಿಲ್ 18, 2021
33 °C

ಹೆದ್ದಾರಿ ಊರಿಗೆ ಬಾರದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಗ್ರಾಮಗಳಲ್ಲಿ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಮಂಚೂಣಿಯಲ್ಲಿದೆ. ಆದರೆ, ಇದೇ ಗ್ರಾಮದಲ್ಲಿ ಸಮಸ್ಯೆಗಳೂ ಸಹ ವೇಗವಾಗಿ ಬೆಳೆದು ನಿಂತಿವೆ.ಗ್ರಾ.ಪಂ. ಕೇಂದ್ರ ಸ್ಥಳವಾಗಿರುವ ರಾಂಪುರ ಪ್ರಸ್ತುತ ತಾಲ್ಲೂಕಿನಲ್ಲಿ ಪರೋಕ್ಷವಾಗಿ ರಾಜಕೀಯ ಶಕ್ತಿಕೇಂದ್ರವೂ ಹೌದು. 3,500ಕ್ಕೂ ಹೆಚ್ಚು ಮನೆಗಳನ್ನು, 13 ಸಾವಿರ ಜನಸಂಖ್ಯೆ ಹೊಂದಿರುವ ಜತೆಗೆ, 30ಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರವಾಗಿರುವ ರಾಂಪುರ ಬೆಂಗಳೂರು-ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿದೆ.ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕಳೆದ ಮೂರು ವರ್ಷಗಳಿಂದ ಹೇಳಲಾಗುತ್ತಿದೆ. ಆದರೆ, ಯಾವುದೇ ಕ್ರಮಗಳನ್ನು ಈವರೆಗೆ ಕೈಗೊಂಡಿಲ್ಲ. ಪರಿಣಾಮ ಬೀಳುವ ಸ್ಥಿತಿಯಲ್ಲಿನ ಕಟ್ಟಡದಲ್ಲಿ ಹೆರಿಗೆವಾರ್ಡ್, ತುರ್ತುಚಿಕಿತ್ಸಾ ಘಟಕ ಇದೆ. ಸಿಬ್ಬಂದಿಯೂ ಇಲ್ಲ. ಪಕ್ಕದಲ್ಲಿನ ಪಶು ಆಸ್ಪತ್ರೆ ಸಿಬ್ಬಂದಿ, ಕಟ್ಟಡ ಎರಡೂ ಸರಿಯಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ದೊಡ್ಡ ಗ್ರಾಮವಾದರೂ ಇಲ್ಲಿ ಸೂಕ್ತ ಶಿಕ್ಷಣ ಸೌಲಭ್ಯವಿಲ್ಲದೇ ಎಲ್ಲದಕ್ಕೂ ಬಳ್ಳಾರಿ ಕಡೆ ಮುಖ ಮಾಡುವಂತೆ ಮಾಡಿದೆ. ಸರ್ಕಾರಿ ಪ್ರೌಢಶಾಲೆ ಸಹ ಇಲ್ಲದ ಪರಿಣಾಮ ಅನೇಕರು ಸಮೀಪದ ದೇವಸಮುದ್ರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಸರ್ಕಾರದ ಶಿಕ್ಷಣ ಸೌಲಭ್ಯ 7ನೇ ತರಗತಿಗೆ ಸೀಮಿತವಾಗಿದೆ.ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಇಲ್ಲಿ ಸ್ವ-ಉದ್ಯೋಗಕ್ಕೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಆರಂಭಿಸಬೇಕು ಎಂಬ ಕೂಗು ಇನ್ನೂ ಹೊಣೆ ಹೊತ್ತವರ ಕಿವಿಗೆ ಬಿದ್ದಂತಿಲ್ಲ ಎಂದು ಆರೋಪಿಸಲಾಗಿದೆ.ರಾಂಪುರ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳು ಸೇರಿದಂತೆ ಪಕ್ಕದ ರಾಯದುರ್ಗ, ಕೂಡ್ಲಿಗಿ, ಸಂಡೂರು ತಾಲ್ಲೂಕಿನ ಹಲವು ಗ್ರಾಮಗಳ ರೈತರಿಗೆ ಅನುಕೂಲವಾಗಲಿ ಎಂದು 15 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯರ್ಥವಾಗುತ್ತಿದೆ. ವಾರಕ್ಕೆ ಎರಡು ಬಾರಿ ಕುರಿ ಮಾರಾಟ ಮಾಡಲು ಮಾತ್ರ ಬಳಸಲಾಗುತ್ತಿದೆ.ವಾರದ ಸಂತೆ, ದೈನಂದಿನ ತರಕಾರಿ ಮಾರುಕಟ್ಟೆಯನ್ನು ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡುವ ಮಾತು ಕಾರ್ಯರೂಪಕ್ಕೆ ಇಳಿದಿಲ್ಲ.ಗ್ರಾಮ ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಅಪವಾದ ಎಂಬಂತೆ ಬಡಾವಣೆಗಳಲ್ಲಿ ರಸ್ತೆಗಳು ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಸ್ವಚ್ಛತೆ ಪ್ರಮಾಣ ಗ್ರಾಮಕ್ಕೆ ಮುಂಚೆ ಇದ್ದ ‘ಈರುಳ್ಳಿ ರಾಂಪುರ’ ಹೆಸರನ್ನು ‘ಸೊಳ್ಳೆ ರಾಂಪುರ’ ಎಂದು ಕರೆಯುವ ಸ್ಥಿತಿಗೆ ಕರೆದೊಯ್ದಿದೆ. ಗ್ರಾ.ಪಂ.ನ್ನು ಪ.ಪಂ.ಯನ್ನಾಗಿ ಪರಿವರ್ತನೆ ಮಾಡಬೇಕು ಎಂಬ ಮನವಿಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ದೂರಿದ್ದು, ಇನ್ನಾದರೂ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು  ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೊಂಡ್ಲಹಳ್ಳಿ ಜಯಪ್ರಕಾಶ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.