ಶನಿವಾರ, ಮೇ 28, 2022
27 °C
ಸಾಂಪ್ರದಾಯಿಕ ಟೆಂಡರ್ ಪದ್ಧತಿಗೆ ಮೊರೆ

ಹೆದ್ದಾರಿ ನಿರ್ಮಾಣ ವಿಳಂಬ ಸಂಭವ

ಪ್ರಜಾವಾಣಿ ವಾರ್ತೆ / ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಬ್ಯಾಂಕ್ ನೆರವಿನ 565 ಕಿ.ಮೀ ಉದ್ದದ ನಾಲ್ಕು ಪ್ರಮುಖ ರಾಜ್ಯ ಹೆದ್ದಾರಿಗಳ ನಿರ್ಮಾಣ ಯೋಜನೆಯನ್ನು `ಪರಿಷ್ಕೃತ ಅನ್ಯೂಟಿ'ಗೆ ಬದಲಾಗಿ ಸಾಂಪ್ರದಾಯಿಕ ಟೆಂಡರ್ ಪದ್ಧತಿ ಮೂಲಕವೇ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕಾರಣದಿಂದ ರಸ್ತೆ ಅಭಿವೃದ್ಧಿ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.ಎರಡನೇ ಹಂತದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಕೆ-ಶಿಪ್) ಮಳವಳ್ಳಿ- ಪಾವಗಡ, ಮುಧೋಳ- ಮಹಾರಾಷ್ಟ್ರ ಗಡಿ, ಶಿಕಾರಿಪುರ- ಆನಂದಪುರಂ, ಶಿವಮೊಗ್ಗ- ಹಾನಗಲ್ ಮತ್ತು ಮನಗೂಳಿ- ದೇವಪುರ ನಡುವಿನ ರಸ್ತೆಗಳನ್ನು `ಅನ್ಯೂಟಿ' ನಿಯಮದಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು.ಇದಕ್ಕೆ ವಿಶ್ವಬ್ಯಾಂಕ್ ಸುಮಾರು ರೂ 800 ಕೋಟಿ  ಸಾಲ ನೀಡುವುದಕ್ಕೂ ಸಮ್ಮತಿ ಸೂಚಿಸಿತ್ತು. ಆದರೆ, ಟೆಂಡರ್‌ನಲ್ಲಿ ಭಾಗವಹಿಸಿದ್ದ ಗುತ್ತಿಗೆದಾರ ಸಂಸ್ಥೆಗಳು ನಿಗದಿಗಿಂತ ಶೇ 23ರಿಂದ 37ರಷ್ಟು ಹೆಚ್ಚಿನ ದರ ನಮೂದಿಸಿದ್ದರಿಂದ ಈ ಯೋಜನೆ ಕಾರ್ಯಸಾಧುವಲ್ಲ ಎನ್ನುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ.ಸಾಂಪ್ರದಾಯಿಕ ಟೆಂಡರ್ ಪದ್ಧತಿ ಮೂಲಕ ಕೈಗೆತ್ತಿಕೊಳ್ಳುವ ಕಾಮಗಾರಿಗೂ, ಅನ್ಯೂಟಿ ನಿಯಮದಡಿ ಕೈಗೆತ್ತಿಕೊಳ್ಳುವ ಕಾಮಗಾರಿಗೂ ದರಗಳಲ್ಲಿ ಅಜಗಜ ಅಂತರ ಇದೆ. ಸಾಮಾನ್ಯ ಟೆಂಡರ್ ಕಾಮಗಾರಿಗಳಿಗಿಂತ `ಅನ್ಯೂಟಿ' ಕಾಮಗಾರಿಗಳ ನಿರ್ಮಾಣ ವೆಚ್ಚ ಶೇ 16ರಿಂದ 18ರಷ್ಟು ಹೆಚ್ಚು ಇದ್ದರೂ ಅದನ್ನು ಸಹಿಸಬಹುದು. ಆದರೆ, ಅದಕ್ಕಿಂತ ಜಾಸ್ತಿ ಇದ್ದರೆ ಅದು ಅನುಷ್ಠಾನ ಯೋಗ್ಯ ಅಲ್ಲ ಎಂದು ಈ ಕುರಿತು ಪರಿಶೀಲಿಸಿ ವರದಿ ನೀಡಲು, ಸರ್ಕಾರ ನೇಮಿಸಿದ್ದ `ಪ್ರೈಸ್ ವಾಟರ್ ಕೂಪರ್' ಸಂಸ್ಥೆ ಅಭಿಪ್ರಾಯಪಟ್ಟಿದೆ.ಈ ವರದಿ ಆಧಾರದ ಮೇಲೆ `ಅನ್ಯೂಟಿ' ಪ್ರಕಾರ ರಸ್ತೆ ನಿರ್ಮಾಣ ಬೇಡ ಎನ್ನುವ ಸಲಹೆಯನ್ನು ಹಣಕಾಸು ಇಲಾಖೆ ನೀಡಿದೆ. ಇದಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಯೋಜನಾ ನಿರ್ವಹಣಾ ಮಂಡಳಿ ಕೂಡ ಸಮ್ಮತಿಸಿದ್ದು, ಸಾಂಪ್ರದಾಯಿಕ ಟೆಂಡರ್ ಪದ್ಧತಿ ಮೂಲಕವೇ ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.ವಿಳಂಬ: `ಅನ್ಯೂಟಿ' ಪ್ರಕಾರ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿಶ್ವಬ್ಯಾಂಕ್ ಸಾಲ ನೀಡುವುದಕ್ಕೂ ಒಪ್ಪಿಗೆ ಸೂಚಿಸಿತ್ತು. ದುಬಾರಿ ಎನ್ನುವ ಕಾರಣಕ್ಕೆ ಅದನ್ನು ರದ್ದುಪಡಿಸಿ, ಪುನಃ ಎಲ್ಲ ಪ್ರಕ್ರಿಯೆಗಳನ್ನು ಹೊಸದಾಗಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಕನಿಷ್ಠ ಒಂದು ವರ್ಷ ತಡ ಆಗುವ ಸಾಧ್ಯತೆ ಇದೆ.ರಸ್ತೆ ಕಾಮಗಾರಿ ಇನ್ನೇನು ಆರಂಭವಾಗುತ್ತದೆ ಎನ್ನುವ ಕಾರಣಕ್ಕೆ ರಸ್ತೆ ಪಕ್ಕದ ಮರಗಳನ್ನು ವರ್ಷದ ಹಿಂದೆಯೇ ಕಡಿದು ಹಾಕಲಾಯಿತು. ವಿದ್ಯುತ್, ದೂರವಾಣಿ, ನೀರಿನ ಕೊಳವೆ ಮಾರ್ಗ... ಹೀಗೆ ರಸ್ತೆ ಕಾಮಗಾರಿಗೆ ಅಡ್ಡಿಯಾಗದಂತೆ ಎಲ್ಲವನ್ನೂ ಸ್ಥಳಾಂತರಿಸಲಾಯಿತು. ಭೂಸ್ವಾಧೀನ ಕೂಡ ಪೂರ್ಣಗೊಂಡಿತ್ತು. ಹೊಸ ಬಸ್ ನಿಲ್ದಾಣಗಳೂ ಸಿದ್ಧ ಆಗಿದ್ದವು. ಟೆಂಡರ್ ಅಂತಿಮವಾದ ನಂತರ ಕಾಮಗಾರಿ ಆರಂಭಿಸುವುದಷ್ಟೇ ಬಾಕಿ ಇತ್ತು. ಇಂತಹ ಸಂದರ್ಭದಲ್ಲಿ ಯೋಜನೆಯ ರೂಪುರೇಷೆ ಬದಲಿಸಿರುವುದು ವಿಳಂಬಕ್ಕೆ ಕಾರಣವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.ವಿಶ್ವ ಬ್ಯಾಂಕ್‌ಗೆ ಪತ್ರ: ಅನ್ಯೂಟಿ ಬದಲಿಗೆ, ಸಾಂಪ್ರದಾಯಿಕ ಟೆಂಡರ್ ಪದ್ಧತಿ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ವಿಶ್ವಬ್ಯಾಂಕ್ ಗಮನಕ್ಕೆ ತರಲು ಪತ್ರ ಬರೆಯಲಾಗಿದೆ. ಅಲ್ಲಿಂದ ಒಪ್ಪಿಗೆ ಪತ್ರ ಬಂದ ನಂತರ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ `ಪ್ರಜಾವಾಣಿ'ಗೆ ತಿಳಿಸಿದರು.ಅನ್ಯೂಟಿ ಯೋಜನೆಯಡಿ ಕೈಗೆತ್ತಿಕೊಂಡಿದ್ದರೆ 10 ವರ್ಷಗಳ ಕಾಲ ಗುತ್ತಿಗೆದಾರ ಸಂಸ್ಥೆಯೇ ರಸ್ತೆಗಳ ನಿರ್ವಹಣೆ ಮಾಡಬೇಕಿತ್ತು. ಈಗ ಅದನ್ನು ರದ್ದುಪಡಿಸಿರುವುದರಿಂದ, ಸರ್ಕಾರ ಆ ಕೆಲಸ ಮಾಡಲಿದೆ ಎಂದು ಹೇಳಿದರು.ರ್ಕಾರದಿಂದ ಹೂಡಿಕೆ: ಒಟ್ಟು 565 ಕಿ.ಮೀ ರಸ್ತೆ ನಿರ್ಮಾಣಕ್ಕೆ ಸುಮಾರು ರೂ 1,522 ಕೋಟಿ   ಖರ್ಚಾಗಲಿದೆ. ಇದರಲ್ಲಿ ಶೇ 50ರಷ್ಟು ಹಣವನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.ನಿರ್ಮಾಣ ಅವಧಿಯನ್ನು ಎರಡು ವರ್ಷಗಳಿಗೆ ನಿಗದಿ ಮಾಡಲಾಗಿದೆ. ಅದರ ನಂತರದ ಒಂದು ವರ್ಷ, ನಿರ್ಮಾಣ ಸಂದರ್ಭದಲ್ಲಿ ಆದ ತಪ್ಪುಗಳನ್ನು ಸರಿ ಮಾಡಲು ಅವಕಾಶ ನೀಡಲಾಗುತ್ತದೆ. ಸರ್ಕಾರವೇ ರಸ್ತೆ ನಿರ್ವಹಣೆ ಮಾಡಲಿದೆ.

`ಪರಿಷ್ಕೃತ ಅನ್ಯೂಟಿ' ಅಂದರೆ...

ಬೆಂಗಳೂರು: `ಪರಿಷ್ಕೃತ ಅನ್ಯೂಟಿ'- ಇದೊಂದು ವಿನೂತನ ಪದ್ಧತಿ. ನಿರ್ಮಾಣ ಸಂಸ್ಥೆಯೇ ಯೋಜನೆಯ ವಿನ್ಯಾಸ, ನಿರ್ಮಾಣ, ಹೂಡಿಕೆ, ಕಾರ್ಯಾಚರಣೆ, ನಿರ್ವಹಣೆ ಎಲ್ಲವನ್ನೂ ಮಾಡುತ್ತದೆ. ನಿಗದಿತ ಅವಧಿ ನಂತರ ಸರ್ಕಾರಕ್ಕೆ ಅದನ್ನು ಹಸ್ತಾಂತರ ಮಾಡುತ್ತದೆ.ಗುತ್ತಿಗೆ ಪಡೆದ ಸಂಸ್ಥೆಯೇ ತನ್ನ ಅನುದಾನದಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಅದು ಪೂರ್ಣಗೊಂಡ ನಂತರ ಹೂಡಿಕೆಯ ಶೇ 50ರಷ್ಟು ಹಣವನ್ನು ಸರ್ಕಾರವು ಗುತ್ತಿಗೆದಾರ ಸಂಸ್ಥೆಗೆ ಪಾವತಿ ಮಾಡಲಿದೆ. ಉಳಿದ     ಶೇ 50ರಷ್ಟು ಹಣವನ್ನು ಪ್ರತಿ ಆರು ತಿಂಗಳಿಗೊಮ್ಮೆ ಇಂತಿಷ್ಟು ಎಂದು ಹಂತಹಂತವಾಗಿ ಪಾವತಿ ಮಾಡಲಿದೆ. ಈ ನಡುವೆ ರಸ್ತೆ ಬಳಕೆ ಶುಲ್ಕವನ್ನು ಸಂಗ್ರಹಿಸುವಂತಿಲ್ಲ. ರಾಜ್ಯದಲ್ಲಿ ಆದ ಒಪ್ಪಂದದ ಪ್ರಕಾರ ಹತ್ತು ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಿ, ಬಳಿಕ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಿತ್ತು.ಹತ್ತು ಮೀಟರ್ ಅಗಲ

ವಿಶ್ವಬ್ಯಾಂಕ್ ನೆರವಿನ ಈ ಯೋಜನೆಯಡಿ 10 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತದೆ. ನಗರ ಮತ್ತು ಪಟ್ಟಣಗಳು ಇರುವ ಕಡೆ ಮಾತ್ರ ನಾಲ್ಕು ಪಥದ ರಸ್ತೆ ನಿರ್ಮಿಸಲಾಗುವುದು. ಉಳಿದಂತೆ ಎರಡು ಪಥದ ರಸ್ತೆ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. 7.5 ಮೀಟರ್ ಅಗಲದ ಎರಡು ಪಥದ ರಸ್ತೆಯನ್ನು ಸಾಮಾನ್ಯವಾಗಿ ನಿರ್ಮಾಣ ಮಾಡಲಾಗುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಗಾಡಿ ಇತ್ಯಾದಿ ಸ್ಥಳೀಯ ಜನರ ಅನುಕೂಲಕ್ಕಾಗಿ ಅದನ್ನು 10 ಮೀಟರ್‌ಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

2ನೇ ಹಂತದ ಕೆ-ಶಿಪ್ ರಸ್ತೆಗಳು

ರಸ್ತೆ ಹೆಸರು ಉದ್ದ ಅಂದಾಜು ವೆಚ್ಚ  (ಕಿ.ಮೀ.ಗಳಲ್ಲಿ) (ರೂ ಕೋಟಿಗಳಲ್ಲಿ)

ಮಳವಳ್ಳಿ- ಪಾವಗಡ 193.34 559.75

ಮುಧೋಳ- ಮಹಾರಾಷ್ಟ್ರ ಗಡಿ 107.937 317.6

ಶಿಕಾರಿಪುರ- ಆನಂತಪುರಂ,ಶಿವಮೊಗ್ಗ- ಹಾನಗಲ್ 153.665 397.44

ಮನಗುಳಿ- ದೇವಪುರ 109.953 248.08

ಒಟ್ಟು 564.895 1522.87

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.