ಮಂಗಳವಾರ, ಜೂನ್ 22, 2021
28 °C

ಹೊಂದಾಣಿಕೆಯಿಂದ ಹೆಜ್ಜೆ ಇಡಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಮಟ್ಟಿಗೆ ಕ್ರೀಡಾಡಳಿತ ಯಾರ ಕೈನಲ್ಲಿರಬೇಕು ಎನ್ನುವ ಪ್ರಶ್ನೆಯೇ ಕ್ಲೀಷೆ. ಇಂತಹವರ ಕೈನಲ್ಲೇ ಇರಬೇಕೆಂದು ತೀರ್ಮಾನಿಸುವ ಧೋರಣೆ ಕೂಡಾ ಸಂಕೀರ್ಣವೇ ಹೌದು. ಕ್ರೀಡಾಭಿವೃದ್ಧಿಯ ಬಗ್ಗೆ ಒಡಲಲ್ಲಿ ತುಡಿತ ಇರಿಸಿಕೊಂಡಿರುವವರೆಲ್ಲರೂ ಈ ದಿಸೆಯಲ್ಲಿ ಕೈಜೋಡಿಸಬೇಕು. ಇದರಿಂದ ಕ್ರೀಡಾ ಕ್ಷೇತ್ರಕ್ಕೆ ಲಾಭವಾಗುತ್ತದೆ. ಆದರೆ ಆ ರೀತಿ ಕ್ರೀಡಾಡಳಿತದ ಚೌಕಟ್ಟಿನೊಳಗೆ ಹೆಜ್ಜೆ ಇಡುವವರು ತಮ್ಮ ತಮ್ಮ ಮಿತಿಗಳ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದರೆ ಸಾಕು.ಕ್ರೀಡಾಡಳಿತದಲ್ಲಿ ಶೇಕಡ ಎಪ್ಪತ್ತರಷ್ಟು ಮಂದಿ ಕ್ರೀಡಾಪಟುಗಳೇ ಕಾರ್ಯಪ್ರವೃತ್ತರಾಗುವುದು ಬಹಳ ಒಳ್ಳೆಯದು. ಇದರ ಅರ್ಥ ಇತರರೂ ಇರಬೇಕೆಂಬುದೇ ಆಗಿದೆ. ಆದರೆ ಪರಸ್ಪರ ಹೊಂದಾಣಿಕೆಯೇ ಬಲು ಮುಖ್ಯ.

ಈಗ ಹಾಕಿ ಕರ್ನಾಟಕದ ಚುಕ್ಕಾಣಿ ಹಿಡಿದಿರುವ ನನಗೆ ಯಾವಾಗ ಯಾವ ಟೂರ್ನಿ ನಡೆಸಬೇಕು, ಎಲ್ಲಿ ನಡೆಸಬೇಕು, ಆಟಗಾರರಿಗೆ ಕೊಡಬೇಕಾದ ಅತ್ಯುತ್ತಮ ಕಿಟ್‌ ಇತ್ಯಾದಿಗಳೆಲ್ಲದರ ಸ್ಪಷ್ಟ ಅರಿವು ಇದೆ. ತಂಡದ ಆಟಗಾರರಿಗೆ ನೀಡಬೇಕಾದ ಅತ್ಯುತ್ತಮ ವಸತಿ ಸೌಲಭ್ಯ, ಉತ್ತಮ ಊಟದ ವ್ಯವಸ್ಥೆ, ಸುಖಕರವಾದ ಪ್ರಯಾಣ ವ್ಯವಸ್ಥೆ ಇತ್ಯಾದಿಗಳೆಲ್ಲದರ ಬಗ್ಗೆಯೂ ನಾನು ಗಂಭೀರವಾಗಿ ಯೋಚಿಸಲು ಸಾಧ್ಯ.ಕಾಲು ಶತಮಾನದ ಕಾಲ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಅಂಗಣದಲ್ಲಿ ಆಡಿರುವ ನನಗೆ ಆಟಗಾರರ ನೋವು ನಲಿವುಗಳೆಲ್ಲದರ ಅರಿವು ಇದೆ. ಹೀಗಾಗಿ ಹಾಕಿ ಸಂಸ್ಥೆಯ ಆಡಳಿತಗಾರನಾಗಿ ಇದೀಗ ಉತ್ತಮವಾದುದನ್ನು ಮಾಡಲು ಸಾಧ್ಯವಾಗಿದೆ.ಆದರೆ ಕ್ರೀಡಾಡಳಿತಗಾರರ ಗುಂಪಿನಲ್ಲಿ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಇರಲೇ ಬೇಕು. ಸಂಬಂಧ ಪಟ್ಟ ಕ್ರೀಡಾ ಸಂಘಟನೆಗೆ ಸಂಬಂಧಿಸಿದಂತೆ ಹಣಕಾಸಿನ ಮೂಲವನ್ನು ಗಟ್ಟಿಗೊಳಿಸುವುದಕ್ಕೆ ಉದ್ಯಮಿಗಳು ಬೇಕು. ಜತೆಗೆ ಸರ್ಕಾರ ಮತ್ತು ಪ್ರಮುಖ ಖಾಸಗಿ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಆಟಗಾರರಿಗೆ ಅಗತ್ಯವಾದ ಹಣ ಹೊಂದಿಸುವುದಕ್ಕೆ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತಡ ಹೇರುವ ದಿಸೆಯಲ್ಲಿ ರಾಜಕಾರಣಿಗಳ ಅಗತ್ಯ ಇದ್ದೇ ಇದೆ.ಇದೆಲ್ಲಾ ಬಲು ಸೂಕ್ಷ್ಮ ವಿಚಾರ. ಆಟಗಾರನು ಕ್ರೀಡಾಡಳಿತ ಗಾರನಾದಾಗ ಆತ ತಾಂತ್ರಿಕ ಅಂಶಗಳು ಮತ್ತು ಆಟಗಾರರ ಬೇಕು ಬೇಡಗಳ ಬಗ್ಗೆಯೇ ಹೆಚ್ಚು ಗಮನ ಹರಿಸಬೇಕು. ಅದರಲ್ಲಿ ಆತ ಸಮರ್ಥನಾಗಿರುತ್ತಾನೆ. ಆದರೆ ಆತ ಸರ್ಕಾರದ ಮೇಲೆ ಒತ್ತಡ ಹೇರುವ ಅಥವಾ ಹಣಕಾಸು ಕ್ರೋಡೀಕರಿಸುವ ಜವಾಬ್ದಾರಿ ಹೊತ್ತುಕೊಂಡರೆ ಸ್ವಲ್ಪ ಮಟ್ಟಿಗೆ ಪರದಾಡಬೇಕಾಗುತ್ತದೆ. ಅದೇ ರೀತಿ ರಾಜಕಾರಣಿ ಅಥವಾ ಉದ್ಯಮಿಗಳು ಕ್ರೀಡಾಡಳಿತಗಾರರಾದಾಗ ಅವರು ತಾಂತ್ರಿಕ ಅಂಶಗಳ ಬಗ್ಗೆಯಷ್ಟೇ ಗಮನ ಹರಿಸಿ ಕುಳಿತು ಬಿಟ್ಟರೆ ಪರಿಸ್ಥಿತಿ ಹೇಗಿರಬಹುದು ಹೇಳಿ ?.ಇಂತಹ ಸಂದಿಗ್ಧದಲ್ಲಿ ಎಲ್ಲರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು, ತಮ್ಮ ತಮ್ಮ ಜವಾಬ್ದಾರಿ, ಮಿತಿಗಳನ್ನು ಅರಿತುಕೊಂಡು ಕೆಲಸ ಮಾಡಿದರೆ ಮಹತ್ವದ್ದನ್ನೇ ಸಾಧಿಸಬಹುದು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಪ್ರಫುಲ್ಲ ಪಟೇಲ್‌ ಮತ್ತು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೀಂದರ್‌ ಬಾತ್ರಾ ಅವರ ಕಾರ್ಯ ವೈಖರಿ.

ಹಾಕಿಯ ಬಗ್ಗೆ ಅಪಾರ ಪರಿಜ್ಞಾನ ಇರುವ ಬಾತ್ರಾ ಅವರು ಹಾಕಿ ಇಂಡಿಯಾದ ಚುಕ್ಕಾಣಿ ಹಿಡಿದ ಮೇಲೆ ಭಾರತದಲ್ಲಿ ಈ ಕ್ರೀಡೆ ಇದೀಗ ಮರುಹುಟ್ಟು ಪಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹೀಗಾಗಿ ಕ್ರೀಡಾಡಳಿತದಲ್ಲಿ ಆಟಗಾರ, ಉದ್ಯಮಿ, ರಾಜಕಾರಣಿಗಳೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಜತೆಗೂಡಿ ನಡೆದರೆ ಯಶಸ್ಸು ಸಾಧ್ಯ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

(ಲೇಖಕರು: ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟ, ವಿಶ್ವಕಪ್‌ ಹಾಕಿ ಕೂಟಗಳಲ್ಲಿ ಭಾರತ ತಂಡದ ಪರ ಆಡಿದವರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.