ಗುರುವಾರ , ಮೇ 19, 2022
21 °C
ಸೇತುವೆ ಮೇಲೆ ಹರಿದ ನೀರು

ಹೊಲಗಳು ಜಲಾವೃತ: ರಸ್ತೆ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬೀದರ್ ತಾಲ್ಲೂಕಿನ ಅಲಿಯಂಬರ್ ಬಳಿ ಮೂರು ಸೇತುವೆಗಳ ಮೇಲಿಂದ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.ತಾಲ್ಲೂಕಿನಾದ್ಯಂತ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧೆಡೆ ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಅಲಿಯಂಬರ್ ಬಳಿ ಕಿರಿದಾದ ಮೂರು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಹೀಗಾಗಿ ಈ ಮಾರ್ಗದಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಸಂಚಾರ ಸ್ಥಗಿತಗೊಂಡಿತು.ಸೇತುವೆ ಮೇಲಿಂದ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗದ ಕಾರಣ ಸಾಯಂಕಾಲದವರೆಗೂ ಪ್ರಯಾಣಿಕರು ತೀವ್ರ ಪರದಾಟ ನಡೆಸಬೇಕಾಯಿತು. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ವಿವಿಧ ಕೆಲಸ ಕಾರ್ಯಗಳಿಗೆ ತೆರಳಬೇಕಾದವರೂ ಸಮಸ್ಯೆ ಎದುರಿಸಬೇಕಾಯಿತು.ಗಂಟೆಗಟ್ಟಲೆ ಕಾದರೂ ನೀರು ನಿಲ್ಲುವ ಮುನ್ಸೂಚನೆ ಕಾಣದೆ ಅನೇಕರು ಬಂದ ದಾರಿಯಲ್ಲೇ ವಾಪಸ್ಸಾದರು. ನೀರಿನ ರಭಸದಿಂದ ಸೇತುವೆ ಮೇಲಿನ ರಸ್ತೆಯಲ್ಲಿ ತಗ್ಗುಗಳು ಸೃಷ್ಟಿಯಾಗಿವೆ ಎಂದು ಹೇಳುತ್ತಾರೆ ನಾಗರಿಕರು.`ಮೂರು ಸೇತುವೆಗಳು ಜಲಾವೃತವಾದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಬೀದರ್‌ನಿಂದ ಅಲಿಯಂಬರ್, ಚಂದಾಪುರ, ಬಾಳೂರು, ರಾಜನಾಳ, ಯರನಳ್ಳಿ ಮತ್ತಿತರ ಕಡೆಗೆ ಹೋಗುವವರು ಹೈರಾಣಾಗಬೇಕಾಯಿತು. ಬೀದರ್‌ಗೆ ಬರುವುದಕ್ಕೂ ಹರಸಾಹಸ ಪಡಬೇಕಾಯಿತು' ಎನ್ನುತ್ತಾರೆ ಅಲಿಯಂಬರ್ ಗ್ರಾಮದ ಯುವ ಮುಖಂಡ ಸಂಗಮೇಶ್ ಪಾಟೀಲ್.ಸೇತುವೆ ದಾಟುವ ವೇಳೆ ವ್ಯಕ್ತಿಯೊಬ್ಬರು ನೀರಿನಲ್ಲಿ ಹರಿದು ಹೋಗಿದ್ದು, ಬಳಿಕ ಈಜಾಡಿ ದಡ ಸೇರಿದ್ದಾರೆ. ಸೇತುವೆ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 20 ಎಕರೆ ಜಮೀನಿನಲ್ಲಿ ನೀರು ನಿಂತುಕೊಂಡಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಹೇಳುತ್ತಾರೆ.ಸೇತುವೆಗಳು ಕಿರಿದಾಗಿದ್ದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿತವಾಗುತ್ತಿದೆ. ಕಳೆದ ವರ್ಷ ಸೇತುವೆ ದಾಟುತ್ತಿದ್ದ ಬೈಕ್ ಸವಾರರೊಬ್ಬರು ಬೈಕ್‌ನೊಂದಿಗೇ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದರು. ಬೆಳೆ ಹಾನಿಯೂ ಆಗಿತ್ತು. ಬಳಿಕ ಜನಪ್ರತಿನಿಧಿಗಳು ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ, ಈವರೆಗೆ ಸೇತುವೆ ಎತ್ತರ ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಅವರು.ಕೂಡಲೇ ಮೂರೂ ಸೇತುವೆಗಳ ಎತ್ತರ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ. ಮಳೆಯಿಂದಾಗಿ ತಾಲ್ಲೂಕಿನಲ್ಲಿ ಯಾವುದೇ ರೀತಿಯ ಆಸ್ತಿ, ಜೀವ ಹಾನಿ ಆಗಿರುವ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ ಎಂದು ತಹಸೀಲ್ದಾರ್ ಕೀರ್ತಿ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.