ಸೋಮವಾರ, ಮೇ 10, 2021
20 °C

ಹೊಸಹುಟ್ಟಿನ ಹಂಬಲದಲ್ಲಿ ದಲಿತ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಚಳವಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸಂದರ್ಭದಲ್ಲಿ ಮೂರು ವಾದಗಳಿವೆ: ಒಂದನೆಯದು, ಬಲಿಷ್ಠ ದಲಿತ ಚಳವಳಿಯನ್ನು ಕಟ್ಟುವುದು ಕಷ್ಟ. ಎರಡನೆಯದು, ದಲಿತ ಚಳವಳಿಯ ಸಮಸ್ಯೆಯೆಂದರೆ ಅದರಲ್ಲಿರುವ ದ್ವಂದ್ವಗಳು. ಮೂರನೆಯದು, ದಲಿತ ಚಳವಳಿ  ದಮನಿತ ಸಮುದಾಯಗಳ ಚಳವಳಿ ಆಗಲಾರದು. ಇವು ಗಂಭೀರವಾದ ವಾದಗಳಲ್ಲದೇ ಆಪಾದನೆಗಳು ಕೂಡ ಹೌದು.ದಲಿತ ಚಳವಳಿ ಎಂದಾಗಲೆಲ್ಲ 1970ರ ದಶಕದ ನೆನಪು ಬರುವುದು ಸಹಜ. ಅದರೊಟ್ಟಿಗೆ `ಇಕ್ರಲಾ ಒದೀರ‌್ಲಾ~ ಎಂಬಿತ್ಯಾದಿ ಪದ್ಯಗಳು, ಸಿದ್ದಲಿಂಗಯ್ಯನವರ `ಹೊಲೆ ಮಾದಿಗರ ಹಾಡು~, ದೇವನೂರ ಮಹಾದೇವ ಅವರ `ದ್ಯಾವನೂರು~ ಇತ್ಯಾದಿಗಳು ಕೂಡ ನೆನಪಾಗುತ್ತವೆ.

 

ಎಪ್ಪತ್ತರ ದಶಕ ದಲಿತ ಚಳವಳಿಯ ತೀವ್ರತೆಯ ದಶಕ; ದಲಿತ ಆಧುನಿಕತೆಯ ಸಂದರ್ಭವೆಂದರೂ ತಪ್ಪಲ್ಲ. ಈ ಆಧುನಿಕತೆಗೆ ಅಂಬೇಡ್ಕರ್ ಮೂಲಾಧಾರವಾದರೂ, ಮಾರ್ಕ್ಸ್, ಲೋಹಿಯಾ, ಜೆ.ಪಿ ಮುಂತಾದವರ ತತ್ವಗಳೊಂದಿಗೆ ಅನುಸಂಧಾನ ಮಾಡುವಷ್ಟು ಶಕ್ತಿಯಿತ್ತು. ಅದೇ ಸಂದರ್ಭದ `ಬೂಸಾ ಪ್ರಕರಣ~ ದಲಿತ ಆಕ್ರೋಶ ಹಾಗೂ ದಲಿತ ಆಧುನಿಕತೆಯ ರೂಪಕವಾಗಿತ್ತು.ವಿಚಿತ್ರವೆಂದರೆ ಆಕ್ರೋಶ ಹಾಗೂ ವೈಚಾರಿಕತೆ ಜೊತೆ ಜೊತೆಯಾಗಿ ಬೆಳೆದವು. ಆ ಆಕ್ರೋಶದಲ್ಲಿ ಸಾಮಾಜಿಕ ನ್ಯಾಯದ ಮೂಲಭೂತ ಪ್ರಶ್ನೆಗಳಿದ್ದವು, ಭೂ ಒಡೆತನದ ಪ್ರಶ್ನೆಗಳಿದ್ದವು. 1977ರ ಸಿದ್ಲಾಪುರ ಹೋರಾಟ, 1979ರ ಚೆನ್ನಂಗೋಡ್ ಹೋರಾಟ, 1985ರ ನಾಗಸಂದ್ರ ಹೋರಾಟ, 1987ರ ಮೆಡಕಿನಲಾ ಹೋರಾಟ ಇದರ ರೂಪಕಗಳು. ಅದೇ ಸಂದರ್ಭದಲ್ಲಿ ಜನಕಲಾ ಸಾಂಸ್ಕೃತಿಕ ಜಾಥಾ, ದಲೇಖದ ಸೆಮಿನಾರುಗಳು, ಅದರೊಟ್ಟಿಗೆ ಹುಟ್ಟಿಕೊಂಡ ಸಾವಿರಾರು ಅಂಬೇಡ್ಕರ್ ಸಂಘಗಳನ್ನು ನೆನಪಿಸಬೇಕು.ಇವೆಲ್ಲವೂ ದಲಿತ ಸಂಘರ್ಷ ಸಮಿತಿಯ ಚೌಕಟ್ಟಿನಲ್ಲಿನಡೆದವು

ದಲಿತ ಚಳವಳಿ ಅತ್ಯಂತ ಶಕ್ತಿಶಾಲಿಯಾದ ಚಳವಳಿಯಾಗಿ ಯಾಕೆ ಹೊರಹೊಮ್ಮಲಿಲ್ಲ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. 1985ರ ನಂತರ ಆಂತರಿಕ ಘರ್ಷಣೆ ಹಾಗೂ ತದನಂತರದ ಹತ್ತು ಹಲವು ವಿಭಜನೆಗಳು ದಲಿತ ಹೋರಾಟವನ್ನು ಹೆಚ್ಚೂಕಡಿಮೆ ಕ್ಷೀಣಿಸುವಂತೆ ಮಾಡಿದವು ಎನ್ನುವ ವಾದ ಇಲ್ಲಿ ಪ್ರಸ್ತುತವೆನಿಸುತ್ತದೆ

ದಲಿತ ಹೋರಾಟ ಹುಟ್ಟಿಕೊಂಡದ್ದೇ ದ್ವಂದ್ವಗಳ ನಡುವೆ.ಸಾಮಾಜಿಕ ಹಾಗೂ ರಾಜಕೀಯ ಐಡೆಂಟಿಟಿಗಳ ನಡುವೆ ಯಾವುದು ಮುಖ್ಯವೆಂಬ ದ್ವಂದ್ವ ಆರಂಭದಿಂದಲೂ ಇತ್ತು. ಕೆಲವೊಮ್ಮೆ ರಾಜಕೀಯ ಐಡೆಂಟಿಟಿ ಅದಕ್ಕೆ ಮುಖ್ಯವಾಗಿತ್ತು. ಸರ್ಕಾರಿ ನೌಕರಿ, ಸರ್ಕಾರಿ ಸವಲತ್ತು, ಸರ್ಕಾರಿ ಉದ್ಯೋಗ, ಸರ್ಕಾರಿ ಶಿಕ್ಷಣ ಅದಕ್ಕೆ ಪ್ರಮುಖವಾಗಿತ್ತೇ ಹೊರತು ರಾಜಕೀಯದಾಚೆಯ ಆರ್ಥಿಕ ಮಾರುಕಟ್ಟೆಯಲ್ಲ, ಅದರ  ಕುರಿತು ಗಂಭೀರವಾದ ಚರ್ಚೆಗಳಾಗಲೇ ಇಲ್ಲ.ಇದರ ಫಲಶ್ರುತಿ ಎಂದರೆ ಆರ್ಥಿಕ ಮಾರುಕಟ್ಟೆಯಿಂದ ದಲಿತರ  ನಾಪತ್ತೆ. ಬೆಂಗಳೂರಿನ ಹೈಪರ್ ಮಾರುಕಟ್ಟೆಗಳಲ್ಲಿ, ಹೈಟೆಕ್ ಕೈಗಾರಿಕೆಗಳಲ್ಲಿ, ಸಗಟು ವ್ಯವಹಾರಗಳಲ್ಲೆಲ್ಲೂ ದಲಿತರಿಲ್ಲ. ಇಲ್ಲಿ ನಾಪತ್ತೆಯಾದ ದಲಿತರು ಪತ್ತೆಯಾಗುವುದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಹಳ್ಳಿಯ ಕೇರಿಗಳಲ್ಲಿ. ಆ ಕಾರಣವೇ ಕರ್ನಾಟಕದ ರಾಜಕೀಯದಲ್ಲಿ ದಲಿತರು ನಿರ್ಣಾಯಕ ಶಕ್ತಿಗಳಲ್ಲ. ದುರಂತವೆಂದರೆ ಚಳವಳಿಯನ್ನು ಕಟ್ಟಿದವರೇ ರಾಜಕೀಯದೊಂದಿಗೆ ಅನುಸಂಧಾನ ಮಾಡುತ್ತಾ ಅದರ ಭಾಗವಾದರು. ಇದು ಚಳವಳಿಯ ದುರಂತವೂ ಹೌದು.ದಲಿತ ಚಳವಳಿ ಜಾತೀಯತೆಯ ನೆಲೆಯಲ್ಲಿ ಸ್ಥಾಪಿತವಾದರೂ, ಕಾಲಕ್ರಮೇಣ ಕೇವಲ ಜಾತಿ ಸಂಘಟನೆಯಾಗಿ ಪರಿವರ್ತಿತವಾಗುತ್ತಾ ಹೋಯಿತೆಂಬ ಎರಡನೇ ಆರೋಪವಿದೆ. ಇದನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ.ವಾಸ್ತವವಾಗಿ ಆರಂಭದ ದಿನಗಳಲ್ಲಿ ಚಳವಳಿ  ಎಲ್ಲಾ ಜಾತಿಗಳನ್ನೊಳಗೊಂಡ ಹೋರಾಟವಾಗಿತ್ತು. ಪ್ರಗತಿಪರರ, ಚಿಂತಕರ, ಬುದ್ಧಿಜೀವಿಗಳ ಹೋರಾಟವೆಂಬ ಕಿರೀಟ ಅದಕ್ಕಿತ್ತು. ದುರಂತವೆಂದರೆ 1985ರ ನಂತರ ಚಳವಳಿ ಎಡ-ಬಲ ಜಾತಿಗಳಲ್ಲಿ ವಿಭಜನೆಯಾಯಿತು. ಅದರ ಶಕ್ತಿ ಈ ಎಡ-ಬಲ ಸಮಸ್ಯೆಯನ್ನು ಪರಿಹರಿಸುವುದರಲ್ಲಿಯೇ ಕಳೆದುಹೋಯಿತು.ಎರಡನೆಯದಾಗಿ, ಜಾತಿಯ ಸಂಘರ್ಷದ ಸಂದರ್ಭದಲ್ಲಿ ಯಾವ ಜಾತಿ ದಲಿತರ ಪ್ರಾಥಮಿಕ ವಿರೋಧಿಯೆಂಬ ಮೂಲಭೂತ ಪ್ರಶ್ನೆಗಳನ್ನು ಅದು ಎತ್ತದೇ ಹೋಯಿತು. ಅದರೊಂದಿಗೆ ದಲಿತ ಚಳವಳಿ ದಲಿತೇತರೊಂದಿಗೆ ಗುರುತಿಸಿಕೊಳ್ಳಲು ಅಸಾಧ್ಯವಾಯಿತು. ದಲಿತ-ಮುಸ್ಲಿಂರನ್ನಾಗಲೀ. ದಲಿತ-ಕ್ರಿಶ್ಚಿಯನ್ನರನ್ನಾಗಲೀ ಅದು ಮುಟ್ಟಲು ಸಾಧ್ಯವಾಗಲಿಲ್ಲ.

 

ಇದೇ ಕಾರಣಕ್ಕಾಗಿಯೇ ಅಂಬೇಡ್ಕರ್ ಸೀಮಿತ ರೂಪಕವಾಗುತ್ತಾ ಹೋದರು. ಆ ರೂಪಕ ಅಲ್ಪಸಂಖ್ಯಾಕರನ್ನು, ಬುಡಕಟ್ಟುಗಳನ್ನು ಮುಟ್ಟದೇ ಹೋಯಿತು. ವಿಚಿತ್ರವೆಂದರೆ ದಲಿತ ಆಧುನಿಕತೆಯ ರೂಪಕವಾಗಿದ್ದ ಅಂಬೇಡ್ಕರ್ ಅವರನ್ನು ಸರ್ಕಾರ ತನ್ನ ರಾಜಕಾರಣಕ್ಕಾಗಿ ಅಪಹರಿಸಿತ್ತು, ಅವರನ್ನು ಉದಾರವಾದದ, ಪ್ರಜಾಪ್ರಭುತ್ವ ಚೌಕಟ್ಟಿನ ರೂಪಕವಾಗಿ ಉಪಯೋಗಿಸಿತ್ತು.ಕೋಮು ಗಲಭೆ ಸಂದರ್ಭದಲ್ಲಿ ಒಂದೆಡೆ ದಲಿತರು ಹಿಂದುತ್ವದತ್ತ ವಾಲುತ್ತಿದ್ದರೂ ದಲಿತ ಚಳವಳಿ ಅದಕ್ಕೆ ಪರ್ಯಾಯಗಳನ್ನು ಸೂಚಿಸಲಿಲ್ಲ. ದಲಿತರು ಮತ್ತು ದಲಿತೇತರ ನಡುವೆ ಸಂವಾದಗಳು ನಡೆಯದಷ್ಟು ಕಂದಕ ಬೆಳೆಯಿತು. ಇದೇ ಕಾರಣಕ್ಕಾಗಿ ದಲಿತ ಚಳವಳಿ ಒಂದೆಡೆ ಸಾಮಾಜಿಕ ತಳಹದಿಗಳನ್ನು ಕಳೆದು ಕೊಳ್ಳುತ್ತಾ ಇನ್ನೊಂದೆಡೆ ಪ್ರಗತಿಪರ ಚಳವಳಿಯ ಆಯಾಮಗಳನ್ನೂ ಕಳೆದುಕೊಳ್ಳುತ್ತಾ ಹೋಯಿತು.ಇವತ್ತು ದಲಿತ ಚಳವಳಿ ಬೆದರುಬೊಂಬೆ ಚಳವಳಿಯಲ್ಲ. ಸರ್ಕಾರ ದಲಿತ ಚಳವಳಿಗೆ ಹೆದರುವುದಿಲ್ಲ. ಒಂದು ಕಾಲದಲ್ಲಿ ಸರ್ಕಾರಕ್ಕೆ ಬೆದರುಬೊಂಬೆಯಾಗಿದ್ದ ಚಳವಳಿ ಸರ್ಕಾರದೊಂದಿಗೆ ಪದೇ ಪದೇ ಸಂಧಾನ ಮಾಡಿಕೊಳ್ಳುವ ಸ್ಥಿತಿಗೆ ಬಂದು ತಲುಪಿದೆ. ಇದು ಚಳವಳಿಯ ದುರಂತವೆನ್ನಬಹುದು.ಚಳವಳಿಗೆ ಇರುವ ಮೂರನೇ ಆರೋಪವೆಂದರೆ ಅದು ಸರ್ಕಾರೇತರ ಸಂಸ್ಥೆಯ ರೂಪಕವನ್ನು ಪಡೆಯುತ್ತಿದೆ. ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಯಾಕೆಂದರೆ ಕರ್ನಾಟಕದ ತುಂಬೆಲ್ಲಾ, ನೂರಾರು ಸರ್ಕಾರೇತರ ಸಂಸ್ಥೆಗಳು ಒಂದೋ ಅಂಬೇಡ್ಕರ್ ಅವರ ಹೆಸರಿನಲ್ಲಿ ಹುಟ್ಟಿವೆ ಅಥವಾ ದಲಿತ ಚಳವಳಿಯ ಪ್ರತಿಛಾಯೆಯಾಗಿ ಹುಟ್ಟಿವೆ.ಸಅವುಗಳ ಮೂಲ ಧೋರಣೆ ಸಶಕ್ತ ಸಮುದಾಯದ ಹೆಸರಿನಲ್ಲಿ `ರಾಜಕೀಯ ನಿರ್ಲಿಪ್ತ~ ಸಮುದಾಯಗಳನ್ನು ನಿರ್ಮಿಸುವುದಾಗಿದೆ. ಆದಕಾರಣವೇ ಅವುಗಳು ಭೂ ಸಂಬಂಧಿ ಪ್ರಶ್ನೆಗಳನ್ನು, ಜಾಗತೀಕರಣಕ್ಕೆ ಮುಖಾಮುಖಿಯಾದ ತಂತ್ರಗಾರಿಕೆಯನ್ನಾಗಲೀ, ಸಂಕಥನವನ್ನಾಗಲೀ, ಪರ್ಯಾಯವನ್ನಾಗಲೀ  ನಿರ್ಮಿಸುವುದಿಲ್ಲ. ಬದಲಿಗೆ, ದಲಿತ ಸಂಸ್ಕೃತಿಯನ್ನು, ಪರಂಪರೆಯನ್ನು ಉತ್ಸವರೂಪದಲ್ಲಿ ವೈಭವೀಕರಿಸುತ್ತವೆ. ಉತ್ಸವಗಳೇ ಪರ್ಯಾಯಗಳು ಎಂದೆಲ್ಲಾ ನಂಬಿಸುತ್ತದೆ. ಈ ರಾಜಕಾರಣದಲ್ಲಿ ಚಳವಳಿಯ ಮೂಲ ಸತ್ವ ನಷ್ಟವಾಗಿ ಬಿಡುತ್ತದೆ.ಇದೆಲ್ಲದರ ಅರ್ಥ ಇವತ್ತಿನ ಸಂದರ್ಭದಲ್ಲಿ ದಲಿತ ಚಳವಳಿಗೆ ಅವಕಾಶಗಳಿಲ್ಲವೆಂದಲ್ಲ. ದಲಿತ ಆಧುನಿಕತೆಯೊಂದಿಗೆ ಹುಟ್ಟಿದ ದಲಿತ ಚಳವಳಿಯನ್ನು ಸಾರಾಸಗಟಾಗಿ ಚರಿತ್ರೆಯಿಂದ ಕಿತ್ತು ಹಾಕಲು ಸಾಧ್ಯವಿಲ್ಲ.

 

ಅದು ಫೀನಿಕ್ಸ್ ಹಕ್ಕಿಯಂತೆ ಪುನರ್ ಜನ್ಮ ಪಡೆಯಲು ಅವಕಾಶಗಳು ಸಾಕಷ್ಟಿವೆ. ವಿಚಿತ್ರವೆಂದರೆ ಅದರ ಸಾಂಸ್ಕೃತಿಕ, ವೈಚಾರಿಕ, ಚೌದ್ಧಿಕ ಹಾಗೂ ತಾತ್ವಿಕ ಕೊಡುಗೆಗಳು ನಮ್ಮೆಲ್ಲರನ್ನು ಭಾದಿಸುತ್ತಲೇ ಇರುತ್ತವೆ. ಆ ಕಾರಣವೇ ದಲಿತ ಚಳವಳಿಯ ಪ್ರಭಾವದಿಂದ ನಾವು ವಿಮುಖರಾಗಿರಲು ಸಾಧ್ಯವಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.