ಸೋಮವಾರ, ಜನವರಿ 20, 2020
18 °C
ಕೃಷಿ ಯಂತ್ರೋಪಕರಣಗಳ ಪ್ರದರ್ಶನ

ಹೊಸ ಒಡನಾಡಿಗಳ ಜೊತೆ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಒಡನಾಡಿಗಳ ಜೊತೆ ರೈತರು

ಶಿರಸಿ: ರೀಪರ್‌ ಬೈಂಡರ್‌, ಡ್ರಮ್‌ ಸೀಡರ್‌, ಅಡಿಕೆ ಮರ ಹತ್ತುವ ಸಾಧನ, ಕಬ್ಬು ತುಂಡರಿಸುವ ಯಂತ್ರ, ಬೀಜ ಬಿತ್ತು ಸಾಧನ, ಪಡ್ಲರ್‌, ಕೈಚಾಲಿತ ಭತ್ತ ನಾಟಿ ಯಂತ್ರ, ಭತ್ತ ತೂರಲು ಗಾಳಿ ಫ್ಯಾನ್‌, ಸೈಕಲ್‌ ಚಾಲಿತ ಕಳೆ ತೆಗೆಯುವ ಯಂತ್ರ, ಕೋನೋ ವೀಡರ್ ಇನ್ನೂ ಹತ್ತಾರು ವಿವಿಧ ಬಗೆಯ ರೈತರ ಹೊಸ ಒಡನಾಡಿ ಕೃಷಿ ಯಂತ್ರಗಳನ್ನು ಗ್ರಾಮೀಣ ಜನರು ಕುತೂಹಲದಿಂದ ವೀಕ್ಷಿಸಿದರು.ಗ್ರಾಮೀಣ ಭಾಗದಲ್ಲಿ ತೀವ್ರವಾಗಿ ಕಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರ ಕೊರತೆಗೆ ಉತ್ತರವಾಗಿ ರೈತರು ಸ್ವತಂತ್ರವಾಗಿ ನಿರ್ವಹಣೆ ಮಾಡಬಲ್ಲ ಕಾಸರಗೋಡಿನ ತೋಟಪಟ್ಟಿ ಬೆಳೆಗಳ ಸಂಶೋಧನಾ ಸಂಸ್ಥೆ, ತಮಿಳುನಾಡು ಕೃಷಿ ವಿಶ್ವ ವಿದ್ಯಾಲಯ ಹಾಗೂ ಕೇಂದ್ರೀಯ ಕೃಷಿ ತಾಂತ್ರಿಕ ಸಂಸ್ಥೆ, ಪ್ರಾದೇಶಿಕ ಕೇಂದ್ರ  ಕೊಯಿಮತ್ತೂರು ಅಭಿವೃದ್ಧಿಪಡಿಸಿದ ಯಂತ್ರಗಳು ಪ್ರದರ್ಶನಗೊಂಡವು.‘ಸಣ್ಣ ರೈತರಿಗೆ ಇಂಧನ ಚಾಲಿತ ಯಂತ್ರಗಳು ದುಬಾರಿಯಾಗುತ್ತವೆ. ಮಾನವ ಚಾಲಿತ ಯಂತ್ರಗಳಲ್ಲಿ ನಮಗೆ ಆಸಕ್ತಿ. ಸ್ವತಃ ದುಡಿಯಲು ಅನುಕೂಲವಾಗುವ ಯಂತ್ರಗಳೇ ನಮ್ಮಂಥ ಕೃಷಿಕರಿಗೆ ಖುಷಿ ಕೊಡುತ್ತವೆ’ ಎಂದು ಹೊನ್ನಾವರ ತಾಲ್ಲೂಕು ಹಳದೀಪುರದಿಂದ ಪ್ರದರ್ಶನ ವೀಕ್ಷಣೆಗೆ ಬಂದಿದ್ದ ವೆಂಕಟ್ರಮಣ ಬೀರಪ್ಪ ಗೌಡ ಹೇಳಿದರು.‘ಅಡಿಕೆ ತೋಟದ ರೈತರಿಗೆ ಈ ಪ್ರದರ್ಶನ ಅಷ್ಟೊಂದು ಸಹಾಯಕವಾಗಲಾರದು. ಬಯಲುಸೀಮೆ ಪ್ರದೇಶಕ್ಕೆ ಇಲ್ಲಿನ ಯಂತ್ರಗಳು ಅನುಕೂಲವಾಗಿವೆ. ಅಡಿಕೆ ಕೊಯ್ಲಿನಲ್ಲಿ ತೋಟದಿಂದ ಮನೆಯ ವರೆಗೆ ಗೊನೆ ಹೊತ್ತು ತರಲು ಕೆಲಸಗಾರರು ಲಭ್ಯವಾಗುವುದಿಲ್ಲ. ಗೊನೆ ಹೊತ್ತು ತರುವ ಯಂತ್ರಗಳು ತೋಟಿಗರಿಗೆ ಅವಶ್ಯವಾಗಿ ಬೇಕಾಗಿದೆ’ ಎಂದು ರೈತರಾದ ಶಿಂಗನಳ್ಳಿಯ ನರಸಿಂಹ ಭಟ್ಟ, ಗೋರ್ನಮನೆಯ ರಾಮಕೃಷ್ಣ ಹೆಗಡೆ ಅಭಿಪ್ರಾಯಪಟ್ಟರು.ಸಂಸ್ಥೆಗಳೇ ಅಭಿವೃದ್ಧಿಪಡಿಸಿದ ಯಂತ್ರಗಳು ಬಹಳಷ್ಟು ಸಂಖ್ಯೆಯಲ್ಲಿದ್ದರೂ ರೈತ ರವಿ ಹೆಗಡೆ ತಾವು ಸಿದ್ಧಪಡಿಸಿದ್ದ ಭತ್ತ ತೂರಲು ಗಾಳಿ ಫ್ಯಾನ್ ತಂದಿದ್ದರು. ಎರಡು ಮಾದರಿಯ ಫ್ಯಾನ್‌ಗಳಿದ್ದು, ಯಾವುದೇ ಫ್ಯಾನ್‌ಗಳಿಗಿಂತ ಉತ್ತಮ ಗಾಳಿ ನೀಡುತ್ತವೆ. ಭತ್ತ, ರಾಗಿ, ಜೋಳಗಳ ದೂಳು ಬೇರ್ಪಡಿಸಲು, ಕಾರ್ಯಕ್ರಮಗಳಲ್ಲಿ ಅಳವಡಿಸಲು ಸಹ ಈ ಫ್ಯಾನ್‌ ಅನುಕೂಲವಾಗಿದೆ ಎಂದು ಅವರು ವಿವರಿಸಿದರು.ಪ್ರದರ್ಶನ ಉದ್ಘಾಟಿಸಿದ ಸಂಸದ ಅನಂತಕುಮಾರ್‌ ಹೆಗಡೆ, ಚಿಕ್ಕ ಹಿಡುವಳಿದಾರರಿಗೆ ಸಣ್ಣ ಜಮೀನಿನಲ್ಲಿ ಹೆಚ್ಚಿನ ಲಾಭ ಗಳಿಕೆಯ ತಂತ್ರಜ್ಞಾನ ಇಂದಿನ ಅಗತ್ಯವಾಗಿದೆ ಎಂದರು.ಭೋಪಾಲದ ಕೇಂದ್ರೀಯ ಕೃಷಿ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ. ಪ್ರೀತಮ್ ಚಂದ್ರ್‌ ಮಾತನಾಡಿ, ಕೃಷಿ ಕ್ಷೇತ್ರದ ಜೊತೆಗೆ ಗ್ರಾಮೀಣ ಜೀವನಮಟ್ಟ ಸುಧಾರಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಾದೇಶಿಕ ಅಗತ್ಯದ ಯಂತ್ರಗಳನ್ನು ತಯಾರಿಸುವ ಚಿಕ್ಕ ಉದ್ಯಮಗಳು ಪ್ರಾರಂಭವಾಗಬೇಕು ಎಂದರು.ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಂ.ಬಿ.ಚೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ ಕುಮಾರ ಉಪಸ್ಥಿತರಿದ್ದರು. ಅರಣ್ಯ ಕಾಲೇಜಿನ ಡೀನ್ ಎಸ್.ಎಲ್.ಮಡಿವಾಳರ್‌ ಸ್ವಾಗತಿಸಿದರು. ಪ್ರವೀಣ್‌ ಗೋರೋಜಿ ಕಾರ್ಯಕ್ರಮ ನಿರೂಪಿಸಿದರು. ರೂಪಾ ಪಾಟೀಲ್ ವಂದಿಸಿದರು.

ಪ್ರತಿಕ್ರಿಯಿಸಿ (+)