ಬುಧವಾರ, ಏಪ್ರಿಲ್ 14, 2021
24 °C

ಹೊಸ ತಾಲ್ಲೂಕು ರಚನೆ:ತಾಲ್ಲೂಕು ಮರು ವಿಂಗಡಣೆಗೆ ಇದು ಸಕಾಲ

ವಿಶ್ವನಾಥ ಅಡಿಗ Updated:

ಅಕ್ಷರ ಗಾತ್ರ : | |

ಹೊಸ ತಾಲ್ಲೂಕು ರಚನೆ:ತಾಲ್ಲೂಕು ಮರು ವಿಂಗಡಣೆಗೆ ಇದು ಸಕಾಲ

ಒಂದಾನೊಂದು ಕಾಲದಲ್ಲಿ ಅಂದಿನ ಸಾಮಾಜಿಕ ಹಾಗೂ ಆಡಳಿತಾತ್ಮಕ ಸನ್ನಿವೇಶಗಳಿಗೆ ಅನುಗುಣವಾಗಿ ಜಿಲ್ಲೆ ಮತ್ತು ತಾಲ್ಲೂಕುಗಳ ಭೌಗೋಳಿಕ ಗಡಿಗಳನ್ನು ಗುರುತಿಸುತ್ತಾ, ಮೈಸೂರು ರಾಜ್ಯ (ಇಂದಿನ ಕರ್ನಾಟಕ)ದ ರಚನೆಯಾಗಿತ್ತು. ಅಂದಿನಿಂದ ಇಂದಿನವರೆಗೆ ನಾಡಿನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.ರಚಿಸುವಾಗಲೇ ಆ ಜಿಲ್ಲೆ ಮತ್ತು ತಾಲ್ಲೂಕುಗಳು ಹೆಚ್ಚಿನ ವಿಸ್ತಾರದಿಂದ ಮತ್ತು ಹೆಚ್ಚಿನ ಜನಸಂಖ್ಯಾ ಹರಿವು ಹೊಂದಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತಾತ್ಮಕ ಸವಲತ್ತುಗಳು ಗ್ರಾಮದ ಕೊನೆಯ ನಾಗರಿಕನಿಗೆ ತಲುಪಿಸುವಲ್ಲಿ ಅನಗತ್ಯ ವಿಳಂಬಗಳಾಗುತ್ತ, ಆಡಳಿತದಲ್ಲಿ ಹಿಡಿತ ಸಾಧಿಸಲು ಅಧಿಕಾರಿಗಳಿಗೆ ತೊಡಕಾಗಿದ್ದಿದೆ.ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲ ಕುಂದತೊಡಗಿದಂತೆಲ್ಲ ಸಾರ್ವಜನಿಕರಿಂದಲೂ `ಕನ್ನಡ ನಾಡಿನಲ್ಲಿರುವ ಜಿಲ್ಲೆ ಮತ್ತು ತಾಲ್ಲೂಕುಗಳ ಮರುವಿಂಗಡಣೆಯ ತುರ್ತು ಅಗತ್ಯವಿದೆ~ ಎಂಬ ಅಹವಾಲುಗಳು ಕೇಳಿ ಬರತೊಡಗಿದವು.ಇದರ ನಡುವೆ 1954 ರಲ್ಲಿ ನೇಮಿಸಿದ ಎಂ. ಶೇಷಾದ್ರಿ ಅಧ್ಯಕ್ಷತೆಯಲ್ಲಿ ಪುನರ್‌ರಚನಾ ಸಮಿತಿಯು ““We notice that the present boundaries are very extensive in point area for efficient administration it would be necessary to regroup the districts and taluks into units of manageable size”   ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.1960 ರಲ್ಲಿ ಭಾರತೀಯ ಅಂಕಿ - ಸಂಖ್ಯೆ ಸಂಸ್ಥೆ“Planning regions in the Mysore state - The need for readjustment of district boundaries” ” ಎಂಬ ವರದಿ ನೀಡಿತ್ತು.ಹಾಗೆಯೇ, ಸರ್ಕಾರ ನೇಮಿಸಿದ (1) 1973ರ ಎಂ. ವಾಸುದೇವರಾವ್ ಆಯೋಗ, (2)1984ರ ಟಿ. ಎಂ. ಹುಂಡೇಕಾರ ಸಮಿತಿ ಮತ್ತು, (3) 1987ರ ಪಿ. ಸಿ. ಗದ್ದೀಗೌಡರ ಸಮಿತಿಗಳು ಜಿಲ್ಲೆ ಮತ್ತು ತಾಲ್ಲೂಕುಗಳ ಪುನರ್‌ರಚನೆಯ ಬಗೆಗೆ ಪರಿಶೀಲಿಸಿ ಶಿಫಾರಸು ಜಾರಿಗೆ ಒತ್ತಾಯಿಸಿದವು.ವಿಕೇಂದ್ರೀಕರಣದ ಬಳಿಕವೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ಬಹುದೂರ ಉಳಿದ ಗ್ರಾಮಗಳಲ್ಲದೆ, ರಾಜ್ಯದ ಗಡಿ ಗ್ರಾಮಗಳು ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ ಹಿಂದಿಂದೇ ಉಳಿದವು. ಇಂತಹ ಗ್ರಾಮಗಳ ಏಳಿಗೆಗಾಗಿ ಪುನರ್ ವಿಂಗಡಣೆಯ ಅನಿವಾರ್ಯತೆಯನ್ನು ಕೊನೆಗೂ ಸರ್ಕಾರ ಮನಗಂಡಿತು.ಅಂತೂ ಇಂತೂ ಹಳೆಯ ಜಿಲ್ಲೆಗಳನ್ನು ಮರುವಿಂಗಡಿಸಿ ಹೊಸದಾದ ಹತ್ತು ಜಿಲ್ಲೆಗಳನ್ನು ರಚಿಸಲಾಯಿತು. ಈ ಕ್ರಿಯಾಶೀಲ ಜನಪರ ವ್ಯವಸ್ಥೆಯಿಂದ ಸರ್ಕಾರದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸ್ವರೂಪದಲ್ಲಾದ ಬದಲಾವಣೆಯು ಗಮನೀಯ.ವಿಪರ್ಯಾಸವೆಂದರೆ ಸಾತ್ವಿಕ ಒತ್ತಾಯದ ನಡು.ವೆಯೂ ಇವತ್ತಿನ ತನಕ ತಾಲ್ಲೂಕುಗಳ ಮರುವಿಂಗಡಣೆ ಮಾಡಲಾಗದ ಏಕೈಕ ರಾಜ್ಯವೆ ನಮ್ಮ ಕರ್ನಾಟಕ! ಯಾವತ್ತೂ ಮೀನ-ಮೇಷ ಎಣಿಸುತ್ತ, ಸಮಯ ಕೊಲ್ಲುವ ಪ್ರವೃತ್ತಿಯ ಪ್ರಜಾಪ್ರಭುತ್ವಕ್ಕೆ ಮಾರಕವಾದುದು.ಇದೇ ಸರ್ಕಾರವು ಸಾರ್ವಜನಿಕರಿಗೆ ಹೆಚ್ಚೆಚ್ಚು ಅನುಕೂಲ ಮಾಡಿಕೊಡುವ ಪರಿಣಾಮಕಾರಿಯಾದ ಮತ್ತು ಸಮರ್ಥ ಆಡಳಿತಕ್ಕಾಗಿ ಸಣ್ಣ ಸಣ್ಣ ತಾಲ್ಲೂಕುಗಳ ಅನಿವಾರ್ಯತೆ ಮತ್ತವುಗಳ ಸಾಧಕ - ಬಾಧಕಗಳನ್ನು ಶಿಫಾರಸು ಮಾಡುವ ಉದ್ದೇಶದಿಂದ ತಾ. 5-10-2007 ರಂದು ಎಂ.ಬಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ 4ನೇ ಸಮಿತಿಯನ್ನು ನೇಮಿಸಿತು.ಸಮಿತಿಯು ತಾಲ್ಲೂಕು ಪುನರ್‌ರಚನೆ ಅವಶ್ಯಕವಾಗಿ ಆಗಬೇಕಾಗಿದ್ದು, ನಮ್ಮ ರಾಜ್ಯ ಬಿಟ್ಟರೆ ಉಳಿದೆಲ್ಲ ರಾಜ್ಯಗಳು ತಾಲ್ಲೂಕುಗಳನ್ನು ಸೂಕ್ತ ರೀತಿಯಲ್ಲಿ ಪುನರ್ ವಿಂಗಡಿಸಲು ಕ್ರಮ ತೆಗೆದುಕೊಂಡಿವೆ. ಕರ್ನಾಟಕ ಸರ್ಕಾರವು ನಮ್ಮ ವರದಿಯ ಮೇಲೆ ನೂತನ ತಾಲ್ಲೂಕು ರಚನೆಗೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತಾ, ಜನಸಾಮಾನ್ಯರ ಆಶಯ ಈಡೇರಿಸುತ್ತದೆ ಎಂಬ ತಾರೀಫು ಮಾಡುತ್ತ 2009ರ ಮೇನಲ್ಲಿ ವರದಿ ಸಲ್ಲಿಸಿತು.ಈ ವರದಿಯನ್ನು ಜಾರಿಗೊಳಿಸುವ ಕನಿಷ್ಠ ಪ್ರಯತ್ನವನ್ನೂ ನಡೆಸದಿರುವುದು ರಾಜಕೀಯ ಇಚ್ಛಾಶಕ್ತಿಯ ಮತ್ತು ಮುತ್ಸದ್ದಿತನದ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಕರ್ನಾಟಕದ ಬಹುಪಾಲು ಜನರು ಗ್ರಾಮವಾಸಿ ರೈತರು. ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಿಂದ ದೂರದಲ್ಲಿದ್ದಾರೆ ಎಂಬ ನೆಪದಲ್ಲಿ ಗ್ರಾಮೀಣ ಜನರಿಂದು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಕಾನೂನು, ರಕ್ಷಣೆ ಮತ್ತು ಮೂಲಭೂತ ಅಭಿವೃದ್ಧಿಗಾಗಿ ರೈತರು ತಾಲ್ಲೂಕು ಮಟ್ಟದ ಆಡಳಿತವನ್ನೇ ಆಶ್ರಯಿಸಿದ್ದಾರೆ.

 

ಹೀಗಾಗಿ `ತಾಲ್ಲೂಕು~ ಆಡಳಿತದ ಕೇಂದ್ರ ಬಿಂದುವಾಗಿ ಹಳ್ಳಿಗರಿಗೆ ಸದಾ ಕೈಗೆಟಕುವಂತಿರಬೇಕು. ಇದಕ್ಕೆ ಸೀಮಿತ ಪ್ರದೇಶ ವ್ಯಾಪ್ತಿ, ಸೀಮಿತ ಜನಸಂಖ್ಯೆಯ ಸಣ್ಣ ತಾಲ್ಲೂಕುಗಳು ಅಪೇಕ್ಷಣೀಯ, ಇದರಿಂದ ಗ್ರಾಮಸ್ಥರು ತಾಲ್ಲೂಕು ಕಚೇರಿಯನ್ನು ಆಗಾಗ ಸಂಪರ್ಕಿಸಲು ಮತ್ತು ತಹಶೀಲ್ದಾರ ಅಂದರೆ ಸರ್ಕಾರವು ಜನಸಾಮಾನ್ಯರ ಬಳಿಗೆ ಹೋಗಲು ಸಾಧ್ಯ.ಇಂದಿನ ತಾಲ್ಲೂಕು ಕೇಂದ್ರಗಳಿಂದ ಹಲವಾರು ಗ್ರಾಮಗಳು 35-40 ಕಿ.ಮಿ. ದೂರದಲ್ಲಿವೆ. ಉದಾಹರಣೆಗೆ ಕೂಡ್ಲಿಗಿ ತಾಲ್ಲೂಕು ಕೇಂದ್ರದಿಂದ ತೂಲಹಳ್ಳಿ ಗ್ರಾಮವು 43 ಕಿ.ಮಿ. ದೂರದಲ್ಲಿದ್ದು, ಒಂದು ದಿನದಲ್ಲಿ ಕಚೇರಿ ಕೆಲಸ ಮುಗಿಸಿ ಊರು ಸೇರಲಾಗುವುದಿಲ್ಲ. ಇದರಿಂದ ಮಾನವ ಶ್ರಮ ಹಾಗೂ ಸಮಯ ವ್ಯರ್ಥ.4ನೇ ಆಯೋಗವು ರಾಜ್ಯದ ಈಗಿರುವ ತಾಲ್ಲೂಕುಗಳ ವಿಸ್ತೀರ್ಣ, ಜನಸಂಖ್ಯಾ ಬಾಹುಳ್ಯ, ಅಭಿವೃದ್ಧಿ ಹೊಂದುವ ಸಾಮರ್ಥ್ಯಗಳಲ್ಲಿ ಬಹಳ ವ್ಯತ್ಯಾಸಗಳನ್ನು ಗುರುತಿಸಿದೆ.

ಅತಿ ಚಿಕ್ಕ ತಾಲ್ಲೂಕೆನಿಸಿರುವ ಗುಡಿಬಂಡೆಯು 225 ಚ. ಕಿ.ಮಿ. ವಿಸ್ತೀರ್ಣ ಹೊಂದಿದ್ದರೆ, ಅತಿ ದೊಡ್ಡ ತಾಲ್ಲೂಕಾದ ಕೊಳ್ಳೇಗಾಲವು 2840 ಚ. ಕಿ.ಮಿ. ವಿಸ್ತೀರ್ಣ ಹೊಂದಿದೆ.

 

ಶೃಂಗೇರಿ ತಾಲ್ಲೂಕಿನ ಜನಸಂಖ್ಯೆಯು 36,930 ಆದರೆ, ಮೈಸೂರು ತಾಲ್ಲೂಕಿನ ಜನಸಂಖ್ಯೆಯು 10,38,000 ಆಗಿದೆ. ತಾಲ್ಲೂಕುಗಳಲ್ಲಿರುವ ಹಳ್ಳಿಗಳ ಸಂಖ್ಯೆಯಲ್ಲೂ ಬಹಳಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ಯಳಂದೂರು ತಾಲ್ಲೂಕಿನಲ್ಲಿ 28 ಹಳ್ಳಿಗಳಿದ್ದರೆ, ಚಿಂತಾಮಣಿ ತಾಲೂಕು 400 ಹಳ್ಳಿಗಳಿಂದಾಗಿದೆ.ಪ್ರಸ್ತುತ 4ನೇ ವರದಿ ಶಿಫಾರಸ್ಸು ಮಾಡಿರುವ ಹೊಸ ಪಟ್ಟಣಗಳೆಲ್ಲವೂ ತಾಲ್ಲೂಕಾಗಲು ಯೋಗ್ಯವಾದವುಗಳು. ಎಂ. ಬಿ. ಪ್ರಕಾಶ್ ಆಯೋಗದಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಶಿಫಾರಸುಗೊಂಡ ಕೊಟ್ಟೂರು ಪಟ್ಟಣವು `116 ಗ್ರಾಮಗಳಿಗೆ ಅತ್ಯಂತ ಸಮೀಪದ ಪಟ್ಟಣವಾಗಿದೆ~ ಎಂಬುದು Director of census operations (Mysore) ಇವರು ಪ್ರಕಟಿಸಿರುವ ““Bellary district census Hand Book” ” ಎಂಬ ಪುಸ್ತಕದಿಂದ ತಿಳಿದು ಬರುತ್ತದೆ.ದೇಶದಲ್ಲಿನ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 603 ಚ.ಕಿ.ಮಿ. ಮತ್ತು ಸರಾಸರಿ ಜನಸಂಖ್ಯೆಯು 1.9 ಲಕ್ಷದಷ್ಟಿದ್ದರೆ, ರಾಜ್ಯದಲ್ಲಿನ ಸದ್ಯದ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 1090 ಚ ಕಿ.ಮಿ. ಮತ್ತು ಜನಸಂಖ್ಯೆಯು ಮೂರು ಲಕ್ಷದಷ್ಟಿದೆ.ಪ್ರಾದೇಶಿಕ ಅಸಮತೋಲನದ ಬಗೆಗೆ ಪರಿಶೀಲಿಸಿದ ಡಾ.ಡಿ. ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳನ್ನು ಗುರುತಿಸಿದೆ. ಅವುಗಳಲ್ಲಿ 34 ತಾಲ್ಲೂಕುಗಳು ರಾಜ್ಯದ ಸರಾಸರಿ ವಿಸ್ತೀರ್ಣವಾದ 1090 ಚ ಕಿ.ಮಿ. ಗಿಂತ ಹೆಚ್ಚಾಗಿದೆ. ಹೆಚ್ಚು ವಿಸ್ತೀರ್ಣವಿರುವ ಸದ್ಯದ ತಾಲ್ಲೂಕುಗಳು ಮಾನವ ಅಭಿವೃದ್ಧಿಯಲ್ಲೂ ತೀರಾ ಹಿಂದುಳಿದಿವೆ ಎಂದು ವರದಿ ಹೇಳಿದೆ.ನಾಲ್ಕನೇ ಆಯೋಗವು ವಿಸ್ತೀರ್ಣ, ಜನಸಂಖ್ಯೆ, ಜಿಲ್ಲೆಯ ಅಭಿವೃದ್ಧಿ ಮಟ್ಟ, ಜನಸಂಖ್ಯೆಯಲ್ಲಿನ ವಿವಿಧ ವರ್ಗಗಳ ವಸ್ತುಸ್ಥಿತಿ, ನೀರಾವರಿ ಯೋಜನೆಗಳ ಪ್ರಗತಿ, ಔದ್ಯೋಗಿಕ ಮತ್ತು ಕೃಷಿ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಗಮನಿಸಿ 11 ಜನರ ತಾಲ್ಲೂಕುಗಳ ಜೊತೆಗೆ 32 ಹೊಸ ತಾಲ್ಲೂಕುಗಳನ್ನು (ಒಟ್ಟು 43) ರಚಿಸಲು ಸೂಚಿಸಿವೆ.ಒಂದೊಮ್ಮೆ ಶಿಫಾರಸ್ಸನ್ನು ಅನುಷ್ಠಾನಗೊಳಿಸಿದರೆ ನಾಡಿನ ತಾಲ್ಲೂಕುಗಳ ಸರಾಸರಿ ವಿಸ್ತೀರ್ಣ 886 ಚ ಕಿ.ಮಿ. ಮತ್ತು ಸರಾಸರಿ ಜನಸಂಖ್ಯೆ 2,41,327 ರಷ್ಟಾಗುತ್ತದೆ ಎಂದೂ ತಿಳಿಸಿದೆ.ಹೊಸ ತಾಲ್ಲೂಕುಗಳ ಮರುವಿಂಗಡಣೆಯು ಸರ್ಕಾರದ ಮೇಲೆ ಆರ್ಥಿಕ ಹೊರೆ ಉಂಟು ಮಾಡಿದರೂ, ಸಮರ್ಥ ಆಡಳಿತಕ್ಕಾಗಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಹೋಲಿಸಿದಲ್ಲಿ ಹೊಸ ತಾಲ್ಲೂಕು ರಚನೆಯು ಅನಿವಾರ್ಯ ಮತ್ತು ಅವಶ್ಯಕ, ದೀರ್ಘ ಕಾಲದಲ್ಲಿದು ಲಾಭದಾಯಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.