ಸೋಮವಾರ, ಮೇ 16, 2022
29 °C

ಹೊಸ ಬದಲಾವಣೆಗೆ ಜನತೆ ಕಾತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಬದಲಾವಣೆಗೆ ಜನತೆ ಕಾತರ

ಆಲಮಟ್ಟಿ: ಮುಂಬೈ ಕರ್ನಾಟಕದಲ್ಲಿ ಜೆಡಿಎಸ್ ಬಲಾಢ್ಯಗೊಳಿಸುವ ನಿಟ್ಟಿನಲ್ಲಿ ಇಲ್ಲಿಯ ಸ್ಥಳೀಯ ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ, ಅವುಗಳಿಗೆ ಪರಿಹಾರ ದೊರಕಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಆಲಮಟ್ಟಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಂಬೈ ಕರ್ನಾಟಕದಲ್ಲಿ ಜೆ.ಡಿ.ಎಸ್. ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದು ವಾರಗಳ ಕಾಲ ಇಲ್ಲಿಯೇ ಪ್ರವಾಸ ಮಾಡಿ ಜನತೆಯ ಕಷ್ಟಗಳಿಗೆ ಸ್ಪಂದಿಸಿ, ಪರಿಹಾರಕ್ಕಾಗಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾದಾಗ, ನಾರಾಯಣಪುರ ಭಾಗದ ಸಂಪೂರ್ಣ ಕಾಲುವೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಈ ಭಾಗದ ನೀರಾವರಿಗೆ ಹೊಸ ದಿಕ್ಕನ್ನು ಬರೆದರು. ಅವರು ಪ್ರಧಾನಿಯಾಗಿದ್ದಾಗ ಎ.ಐ.ಎ.ಡಿ.ಬಿ. ಎಂಬ ಕೇಂದ್ರ ಸರಕಾರದ ಯೋಜನೆ ಜಾರಿಗೆ ತಂದು ರಾಜ್ಯಗಳಿಗೆ ತ್ವರಿತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ವಿಶೇಷ ಅನುದಾನವನ್ನು ಮಂಜೂರಿ ಮಾಡಿದರು.

 

ಅದೇ ಅನುದಾನದಿಂದ ರಾಜ್ಯ ಸರಕಾರ ಇಲ್ಲಿಯವರೆಗೆ 8000 ಕೋಟಿ ರೂ ಅನುದಾನ ಪಡೆದಿದೆ ಎಂದರು. ಸಮರ್ಪಕ ಅಂದಾಜು ಪತ್ರಿಕೆ ತಯಾರಿಸಿ, ಪ್ರಯತ್ನಿಸಿದರೇ ಕೇಂದ್ರದಿಂದ ಇನ್ನೂ ಸಾಕಷ್ಟು ನೀರಾವರಿಗಾಗಿ ಅನುದಾನ ಬರಲಿದೆ, ಆದರೇ ರಾಜ್ಯ ಸರಕಾರ ಇದನ್ನು ಪ್ರಯತ್ನಿಸುತ್ತಿಲ್ಲ ಎಂದರು.ರಾಜ್ಯದಲ್ಲಿ  ಬರ ಸ್ಥಿತಿಯಲ್ಲಿಯೂ ರಾಜ್ಯದ ಸಚಿವರು, ನಾಯಕತ್ವ ಬದಲಾವಣೆಗಾಗಿ ಪಟ್ಟು ಹಿಡಿಯುತ್ತಾ, ತಮ್ಮ ಇಲಾಖೆಯ ಜವಾಬ್ದಾರಿಯನ್ನು ಮರೆತಿದ್ದಾರೆ, ಅಭಿವೃದ್ಧಿಗಿಂತ ಅಧಿಕಾರವೇ ಮುಖ್ಯವಾಗಿದೆ. ಇದರಿಂದ ಜನತೆ ರೋಸಿ ಹೋಗಿದ್ದು, ಹೊಸ ಬದಲಾವಣೆಗೆ ಕಾತರರಾಗಿದ್ದಾರೆ ಎಂದರು.20 ತಿಂಗಳು ಅಧಿಕಾರ ನಡೆಸಿದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ರೈತರ ಸಾಲಮನ್ನಾ, ಈ ಭಾಗದಲ್ಲಿನ ನೀರಾವರಿಗೆ ಆದ್ಯತೆ, ಚಿಮ್ಮಲಗಿ ಏತ ನೀರಾವರಿಗೆ ಮಂಜೂರಿ ಸೇರಿದಂತೆ ನಾನಾ ರೈತಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ (ಯತ್ನಾಳ), ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮನಗೂಳಿ, ಅಪ್ಪುಗೌಡ ಪಾಟೀಲ, ಶಿವನಗೌಡ ಬಿರಾದಾರ, ಜೆಡಿಎಸ್ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭು ದೇಸಾಯಿ, ಸಂಗಮೇಶ ಬಬಲೇಶ್ವರ, ಬಸನಗೌಡ ಮಾಡಗಿ, ಎಂ.ಎಚ್. ಹಾಲಣ್ಣವರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.