ಗುರುವಾರ , ಅಕ್ಟೋಬರ್ 1, 2020
24 °C

ಹೊಸ ರಾಗಗಳತ್ತ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ರಾಗಗಳತ್ತ ಪಯಣ

ಬಾಂಬೆ ಜಯಶ್ರೀ ರಾಮನಾಥ್ ಕರ್ನಾಟಕ ಸಂಗೀತದ ಹೆಸರಾಂತ ಕಲಾವಿದೆ. ಖ್ಯಾತ ಪಿಟೀಲು ವಾದಕ ಲಾಲ್‌ಗುಡಿ ಜಯರಾಮನ್ ಅವರ ಶಿಷ್ಯೆ, ಪಂ. ಅಜಯ್ ಪೋಹನ್‌ಕರ್ ಅವರ ಬಳಿ ಆರು ವರ್ಷ ಹಿಂದೂಸ್ತಾನಿ ಸಂಗೀತವನ್ನೂ ಕಲಿತಿದ್ದಾರೆ.

 

ಮುಂಬೈಯಲ್ಲಿ ಹುಟ್ಟಿ ಚೆನ್ನೈಯಲ್ಲಿ ನೆಲೆಸಿರುವ ಜಯಶ್ರೀ ಗಾಯಕಿ, ಶಿಕ್ಷಕಿ, ಸಂಗೀತ ಸಂಯೋಜಕಿಯಾಗಿ ಸಂಗೀತದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಂಗೀತ, ಸಿನಿಮಾ ಸಂಗೀತಗಳ ಜತೆಗೆ ಫ್ಯೂಷನ್‌ನಲ್ಲೂ ಇವರದು ಮುಂಚೂಣಿ ಹೆಸರು.

 

`ಲಿಸನಿಂಗ್ ಟು ಲೈಫ್- ದಿ ಜರ್ನಿ ಆಫ್ ನ್ಯೂ ರಾಗ~ ಎಂಬ ವಿಶೇಷ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಬಾಂಬೆ ಜಯಶ್ರೀ ಆಗಸ್ಟ್ 2 ಮತ್ತು 3ರಂದು ನಗರದಲ್ಲಿ ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ `ಸಮಕಾಲೀನ ಸಂಗೀತ~ದ ಅಪರೂಪದ ಕಲಾವಿದೆ `ಮೆಟ್ರೊ~ ಜತೆಗೆ ಆಪ್ತವಾಗಿ ಮಾತನಾಡಿದ್ದಾರೆ.ಈ ವಿಶಿಷ್ಟ ರೀತಿಯ ಸಂಗೀತ ಕಛೇರಿಗೆ ಪ್ರೇರಣೆ ಏನು?

ನನ್ನ ಇಡೀ ಸಂಗೀತ ಜೀವನದಲ್ಲಿ ನಾನು ಕಂಡುಕೊಂಡ ಸತ್ಯ- ಏನೆಂದರೆ ನಾವು ಸಂಗೀತವನ್ನು ಹೇಗೆ ನಮ್ಮ ಬದುಕಿನೊಂದಿಗೆ ಬೆಸೆಯುತ್ತೇವೆಯೋ ಹಾಗೆಯೇ ಸಂಗೀತವೂ ನಮ್ಮಂದಿಗೆ ಕಾರ್ಯನಿರ್ವಹಿಸುತ್ತದೆ- ಎಂಬುದು. ಇದು ಕರ್ನಾಟಕ ಸಂಗೀತವೇ ಆಗಿರಬಹುದು, ಹಿಂದೂಸ್ತಾನಿ ಗಾಯನದ ಸೊಬಗಿನಲ್ಲೇ ಅಡಗಿರಬಹುದು ಅಥವಾ ಸಿನಿಮಾ ಗೀತೆಗಳ ಮೂಲಕವೂ ಮೊಳಗಬಹುದು.ಒಟ್ಟಿನಲ್ಲಿ ಎಲ್ಲ ರೀತಿಯ ಸಂಗೀತವನ್ನೂ ಕೇಳುಗರು ಆಸ್ವಾದಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುವ ಬಗ್ಗೆ ಆಲೋಚಿಸಿದೆ. ಇದರ ಪರಿಣಾಮವೇ `ದಿ ಜರ್ನಿ ಆಫ್ ನ್ಯೂ ರಾಗ~ ಎಂಬ ಪರಿಕಲ್ಪನೆ.ಈ ಕಾರ್ಯಕ್ರಮದ ವಿಶೇಷತೆಗಳೇನು?

ಇಡೀ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳಿವೆ. ಇಲ್ಲಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತದ ಜತೆಗೆ ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗೀತೆಗಳನ್ನೂ ಕೇಳುವ ಅವಕಾಶ ಸಹೃದಯರಿಗಿದೆ.

 

ಸ್ಥಳೀಯ ಕಲಾವಿದೆ ಎಂ.ಡಿ. ಪಲ್ಲವಿ ಚಿತ್ರಗೀತೆಗಳಿಗೆ ದನಿಗೂಡಿಸುವರು. ಕಲಾವಿದನೊಬ್ಬ ಸಂಗೀತದ ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಬದಲಾಗುವುದು ಬಹಳ ಅಪರೂಪ. ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ.ತಲೆಮಾರಿನ ಸಂಗೀತವನ್ನು ನೀವು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲಿದ್ದೀರಿ. ಇಲ್ಲಿ ನಿಮ್ಮ ಸವಾಲುಗಳೇನು?

ಸಂಗೀತವನ್ನು ಜನರ ಅಭಿರುಚಿಗೆ ಅನುಗುಣವಾಗಿ ಪ್ರಸ್ತುತಪಡಿಸುವುದು ಒಂದು ಸವಾಲು. ಆದರೆ ಇಡೀ ಕಾರ್ಯಕ್ರಮವನ್ನು ಬರೀ ತೊಂಬತ್ತೇ ನಿಮಿಷಗಳಲ್ಲಿ ಮುಗಿಸಬೇಕಾದದ್ದು ದೊಡ್ಡ ಸವಾಲು.ಫ್ಯೂಷನ್ ಸಂಗೀತದಲ್ಲೂ ನೀವು ಪಳಗಿದ್ದೀರಿ. ನಿಮ್ಮ ಪ್ರಮುಖ ಫ್ಯೂಷನ್ ಕಛೇರಿ ಬಗ್ಗೆ ಹೇಳಿ?


ಫ್ಯೂಷನ್ ಸಂಗೀತ ತುಂಬಾ ಥ್ರಿಲ್ ಕೊಡುತ್ತದೆ. ಹಿಂದೂಸ್ತಾನಿ ಗಾಯಕಿ ಶುಭಾ ಮುದ್ಗಲ್, ಲೀಲಾ ಸ್ಯಾಮ್‌ಸನ್, ಪ್ರಿಯಾ ಗೋವಿಂದ್, ಟಿ.ಎಂ. ಕೃಷ್ಣ, ಈಜಿಪ್ಟ್‌ನ ಹಿಷಮ್ ಅಬ್ಬಾಸ್ ಇವರೆಲ್ಲರ ಜತೆಗೆ ಫ್ಯೂಷನ್ ಹಾಡಿದ್ದೇನೆ.ಸಾಮಾನ್ಯವಾಗಿ ಕರ್ನಾಟಕ ಸಂಗೀತದಲ್ಲಿ ಖ್ಯಾತರಾದವರು ಬೇರೆ ಸಂಗೀತವನ್ನು ಮಿಕ್ಸ್ ಮಾಡಲು ಸಿದ್ಧರಿರುವುದಿಲ್ಲ. ನೀವು ಫ್ಯೂಷನ್ ಸಂಗೀತವನ್ನೂ ನಿಮ್ಮ ಶೈಲಿಗೆ ಹೇಗೆ ಒಗ್ಗಿಸಿಕೊಂಡಿರಿ?

ನಾನು ಬೆಳೆದು ಬಂದ ವಾತಾವರಣವೇ ಸಂಗೀತದ್ದು. ಕರ್ನಾಟಕ ಸಂಗೀತ ಕಲಿತ ಮೇಲೆ ಅದರಲ್ಲಿನ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಿದೆ. ಇದರೊಂದಿಗೆ ಹಿಂದೂಸ್ತಾನಿ, ಫ್ಯೂಷನ್ ಸಂಗೀತವನ್ನೂ ಕೇಳಲಾರಂಭಿಸಿದೆ. ಬಹಳಷ್ಟು ಹಿಡಿಸಿತು. ಇವೆಲ್ಲವನ್ನೂ ಕೇಳಿ ಕೇಳಿ ನನ್ನದೇ ಒಂದು ಶೈಲಿ ರೂಢಿಸಿಕೊಂಡೆ. ಒಬ್ಬ ರಸಿಕ ಎಲ್ಲ ರೀತಿಯ ಸಂಗೀತವನ್ನೂ ಆಸ್ವಾದಿಸಬೇಕು.ಹಲವು ಭಾಷೆಗಳ ಸಿನಿಮಾಗಳಿಗೂ ನೀವು ಹಿನ್ನೆಲೆ ಸಂಗೀತ ನೀಡಿದ್ದೀರಿ. ಯಾವ ಭಾಷೆಯ ಗೀತೆ ನಿಮಗೆ ಅತ್ಯಂತ ಆಪ್ತ ಎನಿಸಿತು?

ಹಿಂದಿ, ತಮಿಳು, ಭೋಜ್‌ಪುರಿ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳ ಹಲವಾರು ಗೀತೆಗಳನ್ನು ಹಾಡಿದ್ದೇನೆ. ಇಳಯರಾಜ ಅವರ ಸಂಗೀತ ಸಂಯೋಜನೆಯ `ಕಾಯ್ ವೀಣಾಯೈ~, ತಮಿಳಿನ `ನಿನ್ನೈ ಚರಣ ಆದೈನ್‌ದೆನ್~, ಮಲಯಾಳಂನ `ಪ್ರಣಯ ಸಂಧ್ಯಾ..~, ಹಿಂದಿಯಲ್ಲಿ ಶಂಕರ್ ಈಶನ್ ಅವರ `ಖುಲ್‌ಕೇ ಮುಸ್ಕುರಾಯೇ~ ಹಾಡುಗಳು ನನಗೆ ತುಂಬ ಇಷ್ಟವಾದವು. ಇವೆಲ್ಲವೂ ನಾನು ಎಂದೂ ಮರೆಯದ ಹಾಡುಗಳು.ಹಳೆಯ ತಲೆಮಾರಿನ ಎಂ.ಎಸ್. ಸುಬ್ಬುಲಕ್ಷ್ಮಿ, ಎಂ.ಎಲ್. ವಸಂತಕುಮಾರಿ ಇವರೆಲ್ಲರೂ ಸಂಗೀತ ಕಛೇರಿಯನ್ನು ಪ್ರಸ್ತುತಪಡಿಸುತ್ತಿದ್ದ ರೀತಿಗೂ ಇಂದಿನ ತಲೆಮಾರಿನ ಗಾಯನಕ್ಕೂ ನೀವು ಗುರುತಿಸುವ ವ್ಯತ್ಯಾಸಗಳೇನು?

ಹಳೆಯ ಕಾಲದ ಸಂಗೀತ ಕಛೇರಿಗಳನ್ನು ಇಂದಿನ ಕಛೇರಿಗಳಿಗೆ ಹೋಲಿಸುವ ಹಾಗೆಯೇ ಇಲ್ಲ. ನಾವು ಅವರ ಹಾದಿಯನ್ನು ಅನುಸರಿಸುತ್ತೇವೆ. ಅಂದಿನ ಮಹಾನ್ ಗಾಯಕ ಗಾಯಕಿಯರ ಕಛೇರಿಗಳನ್ನು ಇಂದಿನ ಯಾವುದೇ ಕಛೇರಿಗಳಿಗೆ ಹೋಲಿಸಲಾಗದು.ಸಂಗೀತದಲ್ಲಿ ಮುಂದಿನ ಹೆಜ್ಜೆ?

ಸಂಗೀತ... ರಾಗಗಳೊಂದಿಗೆ ಪಯಣ..! ಮಕ್ಕಳನ್ನು ಶಾಸ್ತ್ರೀಯ ಸಂಗೀತದಲ್ಲಿ ತೊಡಗಿಸಿಕೊಳ್ಳಬೇಕೆಂಬ ಯೋಜನೆಯಿದೆ. ನಮ್ಮ ದೇಶ ಅಲ್ಲದೆ ವಿದೇಶಗಳಲ್ಲೂ ನಿರಂತರವಾಗಿ ಕರ್ನಾಟಕ ಸಂಗೀತ ಕಛೇರಿ ಕೊಟ್ಟು ಇನ್ನಷ್ಟು ಸಂಗೀತವನ್ನು ಜನಪ್ರಿಯಗೊಳಿಸಬೇಕು ಎಂಬುದು ಮಹದಾಸೆ.ಬೆಂಗಳೂರಿನ ಶ್ರೋತೃಗಳ ಬಗ್ಗೆ ನಿಮ್ಮ ಅನಿಸಿಕೆ...

ನನಗೂ ಬೆಂಗಳೂರು ಅಂದರೆ ಬಹಳ ಇಷ್ಟ. ಹಿಂದೆ ಶುಭಾ ಮುದ್ಗಲ್, ಬಾನ್ಸುರಿ ಮಾಂತ್ರಿಕ ರೋಣು ಮಜುಂದಾರ್ ಮುಂತಾದವರ ಜತೆಗೆ ಸಂಗೀತ ಕಛೇರಿ ನೀಡಿದಾಗ ನನ್ನ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಈ ಸಲವೂ ನಾನು ಅದನ್ನೇ ನಿರೀಕ್ಷಿಸುತ್ತೇನೆ. ಬೆಂಗಳೂರಿನ ಕೇಳುಗರಿಗೆ ನಾನು ಯಾವತ್ತೂ ಆಭಾರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.