ಬುಧವಾರ, ಏಪ್ರಿಲ್ 14, 2021
31 °C

ಹೊಸ ವ್ಯವಸ್ಥೆಗೆ ಭಾರತ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: (ಪಿಟಿಐ): ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ (ಸಿಎಚ್‌ಒಜಿಎಂ) ಪಾಲ್ಗೊಳ್ಳಲು ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಗುರುವಾರ ಇಲ್ಲಿಗೆ ಆಗಮಿಸಿದ್ದು, ಮಾನವ ಹಕ್ಕುಗಳ ಉಸ್ತುವಾರಿಗೆ ಹೊಸ ವ್ಯವಸ್ಥೆ ಮಾಡುವ ಪ್ರಸ್ತಾವಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಲಿದೆ.ಶ್ರೀಲಂಕಾದಲ್ಲಿ ಮುಂದಿನ ಸಭೆ ನಡೆಸಲು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸುವ ವಿಚಾರವನ್ನೂ ಭಾರತ ವಿರೋಧಿಸಲಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ಬದಲಿಗೆ ಈ ಸಭೆಯಲ್ಲಿ ಭಾಗವಹಿಸುತ್ತಿರುವ ಅನ್ಸಾರಿ, ಸದಸ್ಯ ರಾಷ್ಟ್ರಗಳ ಮುಂದಿರುವ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಬಲಪಡಿಸುವುದರ ಬಗ್ಗೆ ಒತ್ತು ನೀಡಲಿದ್ದಾರೆ.ಅಧಿಕಾರಿಗಳ ಮಟ್ಟದಲ್ಲಿ ನಡೆದ ಸಭೆಯಲ್ಲಿ 11 ಮಂದಿ ಪ್ರಸಿದ್ಧ ವ್ಯಕ್ತಿಗಳ ಸಮಿತಿಯು ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಉಸ್ತುವಾರಿಯನ್ನು ಈಗಾಗಲೇ ಮಾಡುತ್ತಿರುವುದರಿಂದ ಹೊಸ ವ್ಯವಸ್ಥೆಯ ಅಗತ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.2013ರಲ್ಲಿ ಶ್ರೀಲಂಕಾದಲ್ಲಿ ಸಿಎಚ್‌ಒಜಿಎಂ ನಡೆಸುವ ಬಗ್ಗೆ ಸ್ಪೇನ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುವುದರಿಂದ ಮತ್ತೆ ಈ ಬಗ್ಗೆ ಚರ್ಚೆ ಅನಗತ್ಯ ಎಂಬುದು ಭಾರತದ ನಿಲುವಾಗಿದೆ ಎಂದು ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.ಅನ್ಸಾರಿ ಮತ್ತು ಅವರ ಪತ್ನಿ ಸಲ್ಮಾ ಅವರನ್ನು  ಆಸ್ಟ್ರೇಲಿಯಾದ ರಕ್ಷಣಾ ಸಚಿವ ಸ್ಟೀಫನ್ ಸ್ಮಿತ್ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಪ್ರಾದೇಶಿಕ ಅಭಿವೃದ್ಧಿ ಸಚಿವ ಬ್ರೆಂಡನ್ ಗ್ರಿಲ್ಸ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ನೂತನ ಕಾನ್ಸುಲೇಟ್: ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಬುಧವಾರ ಇಲ್ಲಿ ಭಾರತದ ನೂತನ ಕಾನ್ಸುಲೇಟ್ ಉದ್ಘಾಟಿಸಿದರು. ಸಚಿವ ಸ್ಟೀಫನ್ ಸ್ಮಿತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಬಹಿಷ್ಕಾರ ಸಾಧ್ಯತೆ

ಮೆಲ್ಬರ್ನ್, (ಪಿಟಿಐ):
ಶ್ರೀಲಂಕಾದಲ್ಲಿ 2013ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಮುಂದಿನ ಸಭೆಯನ್ನು ಕೆಲವು ರಾಷ್ಟ್ರಗಳು  ಬಹಿಷ್ಕರಿಸುವ ಸಾಧ್ಯತೆಗಳು ಇವೆ.ಬಹಿಷ್ಕಾರ ಹಾಕುವುದು ಆಯಾ ರಾಷ್ಟ್ರಗಳಿಗೆ ಬಿಟ್ಟ ವಿಚಾರ. ಆದರೆ ಶ್ರೀಲಂಕಾ ಸರ್ಕಾರವು ಈ ಬಗ್ಗೆ ಇರುವ ಭಿನ್ನಾಭಿಪ್ರಾಯವನ್ನು ಗಮನಿಸಬೇಕು ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್  ತಿಳಿಸಿದ್ದಾರೆ.ದೇಶದ ಸಾಮರಸ್ಯಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕಳುಹಿಸುವ ವರದಿಯ ಆಧಾರದ ಮೇಲೆ ಕೆಲವು ದೇಶಗಳು ಬಹಿಷ್ಕಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.  ಶ್ರೀಲಂಕಾ ಸೇನೆಯಿಂದ ದೊಡ್ಡ ಪ್ರಮಾಣದಲ್ಲಿ ಮಾನವ ಹಕ್ಕುಗಳ ದಮನವಾಗಿದೆ ಎಂದು ಆಪಾದಿಸಿರುವ ಕೆನಡಾ ಈಗಾಗಲೇ ಬಹಿಷ್ಕಾರ ಹಾಕುವ ನಿರ್ಧಾರ ತೆಗೆದುಕೊಂಡಿದೆ.ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಿತಿಯು ಪುನಃ ಶ್ರೀಲಂಕಾಕ್ಕೆ ಭೇಟಿ ನೀಡಿ ಮಾನವ ಹಕ್ಕುಗಳ ದಮನದ ಸಂಪೂರ್ಣ ವಿವರ ಪಡೆಯುವಂತೆ ಆದೇಶಿಸಬೇಕು ಎಂದು ರುಡ್ ವಿಶ್ವಸಂಸ್ಥೆಯನ್ನು ಕೋರಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಮರಸ್ಯ ಪ್ರಕ್ರಿಯೆಯಲ್ಲಿ ಮಾನವ ಹಕ್ಕು ದಮನದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಅವರಿಗೆ ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.