ಸೋಮವಾರ, ಏಪ್ರಿಲ್ 12, 2021
22 °C

ಹೊಸ ಶೈಲಿಯ ಹುಡುಕಾಟದಲ್ಲಿ

ನಿರೂಪಣೆ: ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

ನಮ್ಮ ತಂದೆಯದೊಂದು ಷರತ್ತು. ನಾನು, ನನ್ನ ಅಣ್ಣ, ತಂಗಿ ಮೂವರು ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಬೇಕು ಎಂಬುದು. ಅದರಂತೆ ನಾವು ಕನ್ನಡ ಮಾಧ್ಯಮದಲ್ಲಿ ಓದಿದೆವು. ನಾನು ಓದುತ್ತಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯತೊಡಗಿದೆ.

 

ನನ್ನ ಸಂಗೀತ ಪಾಠಕ್ಕೆ ಮತ್ತು ಇಂದಿನ ನನ್ನ ವೃತ್ತಿ ಬದುಕಿಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ತುಂಬಾ ಸಹಾಯವಾಯಿತು. ನಾನು ಬಿ.ಎ ಮುಗಿಸಿದೆ. ಅಣ್ಣ ಕೊಳಲು ವಾದನದಲ್ಲಿ ಆಸಕ್ತನಾಗಿದ್ದ. ತಂಗಿ ಪಿಟೀಲು ನುಡಿಸುತ್ತಿದ್ದಳು ಮತ್ತು ಹಾಡುತ್ತಿದ್ದಳು. ನನಗೂ ಸಂಗೀತದ ಕಡೆ ಮನ ತುಡಿಯುತ್ತಿತ್ತು. ಸ್ಯಾಕ್ಸೋಫೋನ್ ನುಡಿಸಲು ಬರುತ್ತಿತ್ತು.ಆದರೆ ಅಪ್ಪನ ಕ್ಷೇತ್ರಕ್ಕೆ ಪ್ರವೇಶ ಪಡೆದಾಗ ನನ್ನ ಮೇಲೆ ಜನರ ನಿರೀಕ್ಷೆ ಜಾಸ್ತಿ ಇರುತ್ತದೆ ಎನಿಸಿ ಆ ದಾರಿಯನ್ನು ಪಕ್ಕಕ್ಕೆ ಇರಿಸಿದೆ. ಆದರೆ ಸಂಗೀತದಿಂದ ವಿಮುಖನಾಗಲು ನನ್ನಿಂದ ಆಗಲಿಲ್ಲ. ಸಂಗೀತದಲ್ಲಿಯೇ ಏನಾದರೂ ವಿಭಿನ್ನವಾದ ಸಾಧನೆ ಮಾಡಬೇಕು ಎನಿಸಿತು. ಚೆನ್ನೈನತ್ತ ಪಯಣ ಬೆಳೆಸಿದೆ.ಅಪ್ಪ ತಮ್ಮ ಶಿಫಾರಸು, ಬೆಂಬಲ ಏನೂ ಸಿಗಲ್ಲ. ನಿನ್ನ ದಾರಿಯನ್ನು ನೀನೇ ಕಂಡುಕೊಳ್ಳಬೇಕು. ಆದರೆ ತಮ್ಮ ಹಾರೈಕೆ ಸದಾ ಇರುತ್ತದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.

 

ನಾನು ಚೆನ್ನೈನಲ್ಲಿ ಸಂಗೀತ ನಿರ್ದೇಶನದ ವಿವಿಧ ಆಯಾಮಗಳನ್ನು ಕರಗತ ಮಾಡಿಕೊಳ್ಳತೊಡಗಿದೆ. ಮೊದಲಿಗೆ ಸಾಫ್ಟ್‌ವೇರ್ ಎಂಜಿನಿಯರಿಂಗ್ ಡಿಪ್ಲೊಮೋ ಕೋರ್ಸ್ ಮುಗಿಸಿದೆ. ಇವತ್ತಿನ ದಿನಮಾನದ ಸಂಗೀತಕ್ಕೆ ಅದು ನೆರವಾಯಿತು.ಎಲೆಕ್ಟ್ರಾನಿಕ್ ಮ್ಯೂಸಿಕ್, ಸೌಂಡ್ ಎಂಜಿನಿಯರಿಂಗ್ ಜೊತೆಗೆ ಸಂಗೀತ ನಿರ್ದೇಶನದ ತಂತ್ರಗಳನ್ನು ಕಲಿತೆ. ಸಹಾಯಕ ಸಂಗೀತ ನಿರ್ದೇಶಕನಾಗಿ ದುಡಿದೆ. ನಂತರ ಸ್ವತಂತ್ರವಾಗಿ ಸಂಗೀತ ನಿರ್ದೇಶನಕ್ಕೆ ಧುಮುಕಿದೆ.`ಡ್ರೀಮ್ ಜರ್ನಿ~ ನನ್ನ ಮೊದಲ ವಾದ್ಯಗಳ ಆಲ್ಬಂ. ಅದು ಯಶಸ್ಸು ಗಳಿಸಿತು. ಅದಾದ ನಂತರ ಸಾಕಷ್ಟು ಮ್ಯೂಸಿಕ್ ಆಲ್ಬಂಗಳಿಗೆ ಮತ್ತು ಭಕ್ತಿಗೀತೆಗಳಿಗೆ ಸಂಗೀತ ನೀಡಿದೆ. ಅದೇ ಸಮಯದಲ್ಲಿ ಮಲಯಾಳಂನ `ಅನು ಮಳಯಾಯಿರುನ್ನು~ ಹೆಸರಿನ ಟೆಲಿ ಸೀರಿಯಲ್‌ನ ಶೀರ್ಷಿಕೆ ಗೀತೆಗೆ ಸಂಗೀತ ನೀಡಿದೆ. ಅದು ಫ್ಯೂಶನ್ ಮತ್ತು ಕ್ಲಾಸಿಕಲ್ ಮಿಶ್ರಣವಾಗಿದ್ದ ಸಂಗೀತ.ಅದನ್ನು ಗುರುತಿಸಿ ಕೇರಳ ರಾಜ್ಯದ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ನೀಡಿತು. ಅದರಿಂದ ನನ್ನ ಹುಮ್ಮಸ್ಸು ಹೆಚ್ಚಿತು. ಆತ್ಮವಿಶ್ವಾಸ ಗಟ್ಟಿಯಾಯಿತು. ಅದಷ್ಟೇ ಅಲ್ಲ `ಸ್ಮಾರ್ಟ್ ಸಿಟಿ~ ಎಂಬ ಹೆಸರಿನ ಮಲಯಾಳಂ ಚಿತ್ರಕ್ಕೆ ಸಂಗೀತ ನೀಡಲು ಅವಕಾಶ ದೊರಕಿತು. ಆ ಮೂಲಕ ನನ್ನ ಸಿನಿಮಾ ಸಂಗೀತ ನಿರ್ದೇಶನದ ಬದುಕು ಆರಂಭವಾಯಿತು.ಆಗ ನನಗಿನ್ನೂ 24ರ ಹರೆಯ. ಅದೇ ಸಮಯದಲ್ಲಿ ಕನ್ನಡದ `ಮಿ.ಗರಗಸ~ ಚಿತ್ರಕ್ಕೆ ಸಂಗೀತ ನೀಡಲು ಕರೆ ಬಂತು. ಒಪ್ಪಿಕೊಂಡೆ. ಆನಂತರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದೆ. ನನಗೆ ಮಲಯಾಳಂ ಮತ್ತು ತೆಲುಗು ಅರ್ಥವಾಗುತ್ತದೆ.ಆದರೆ ಮಾತನಾಡಲು ಬರುವುದಿಲ್ಲ. ತಮಿಳು ಮತ್ತು ಕನ್ನಡವನ್ನು ಚೆನ್ನಾಗಿ ಬಲ್ಲೆ. ಮಲಯಾಳಂನ `ಚಂದ್ರನೀಲೆಕ್ಕೊರು ವಳಿ~, `ಆರೆಂಜ್~, ತೆಲುಗಿನ `ಆವಕಾಯಿ ಬಿರಿಯಾನಿ~, `ವಿಲೇಜುಲೊ ವಿನಾಯಕುಡು~, `ಗೂಂಡಾಯಿಸಮ್~, ತಮಿಳಿನಲ್ಲಿ `ಉದಯನ್~ ನಾನು ಸಂಗೀತ ನೀಡಿರುವ ಚಿತ್ರಗಳು.

 

ಕನ್ನಡದಲ್ಲಿ `ಗಣೇಶ~, `ಇಜ್ಜೋಡು~, `ಮಳೆಬಿಲ್ಲೆ~, `ಪೃಥ್ವಿ~, `ಕ್ರೇಜಿ ಲೋಕ~, `ಮದುವೆ ಮನೆ~ ಚಿತ್ರಗಳಿಗೆ ಸಂಗೀತ ನೀಡಿರುವೆ. ಇದೀಗ `ರಾಧಿಕನ ಗಂಡ~ ಮತ್ತು ಜೇಕಬ್ ವರ್ಗೀಸ್ ಅವರ `ಸವಾರಿ-2~ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ತೆಲುಗಿನಲ್ಲೂ ಎರಡು ಚಿತ್ರಗಳಿಗೆ ಸಂಗೀತ ನೀಡುತ್ತಿರುವೆ.ಹೀಗೆ ಅವಕಾಶಗಳನ್ನು ಎಚ್ಚರದಿಂದ ಆರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಬಂದ ಅವಕಾಶಗಳನ್ನೆಲ್ಲಾ ಒಟ್ಟಿಗೆ ಒಪ್ಪಿಕೊಂಡು ಒತ್ತಡ ಮಾಡಿಕೊಳ್ಳುವುದು ನನಗಿಷ್ಟವಿಲ್ಲ. ಸಂಗೀತ ಎಂಬುದು ಒತ್ತಡದಿಂದ ಬರುವಂಥದಲ್ಲ. ಅದನ್ನು ಎಂಜಾಯ್ ಮಾಡುತ್ತಾ ಸಂಯೋಜನೆ ಮಾಡಬೇಕು ಎಂಬುದು ನನ್ನಾಸೆ.

 

ನಾನು ಸಿನಿಮಾ ಅವಕಾಶವನ್ನು ಒಪ್ಪಿಕೊಂಡ ನಂತರ ಸ್ಕ್ರಿಪ್ಟ್ ಕೇಳಿ, ಚರ್ಚೆ ನಡೆಸಿ ನನ್ನದೇ ಆದ ಕಾಲಾವಕಾಶ ಕೇಳುತ್ತೇನೆ. ಯಾಕೆಂದರೆ ಕತೆಯೊಳಗೆ ತನ್ಮಯನಾಗಿ ಸಂಗೀತ ನೀಡಬೇಕೆಂಬುದು ನನ್ನಾಸೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ.ನನಗೆ ಯಾವುದೇ ಟ್ರೆಂಡ್‌ನ ಹಿಂದೆ ಹೋಗಲು ಇಷ್ಟವಿಲ್ಲ. `ಸವಾರಿ~ ಚಿತ್ರಕ್ಕೆ ನಾನು ಸಂಗೀತ ನೀಡಿದಾಗ, ಅದು ಕೆಲವೊಂದು ಚಿತ್ರಗಳ ಸಂಗೀತಕ್ಕೆ ಸ್ಫೂರ್ತಿಯಾಗಿತ್ತು.

ಪ್ರತೀ ಸಿನಿಮಾದಲ್ಲಿಯೂ ಹೊಸ ಗಾಯಕರನ್ನು ಪರಿಚಯಿಸುವ ಸಂಕಲ್ಪ ನನ್ನದು.ಐಶ್ವರ್ಯಾ ಮಜುಂದಾರ್, ಸುರಮುಖಿ, ಗುರುಪ್ರಿಯಾ, ಸೂರತ್ ಸಂತೋಷ್ ಮುಂತಾದವರನ್ನು ಪರಿಚಯಿಸಿದ್ದೇನೆ. ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಆಡಿಯೋ ಕಂಪೆನಿಯೊಂದನ್ನು ಆರಂಭಿಸುತ್ತಿದ್ದೇನೆ. ಅದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅದರಿಂದ ಸಿನಿಮಾ ಹೊರತಾದ ಸಂಗೀತ ಇರುತ್ತದೆ.ಇನ್ನು ಸ್ಥಳೀಯ ಗಾಯಕರಿಂದ ಹಾಡಿಸಬೇಕು ಎಂಬ ಆಸೆ ನನಗೇನೋ ಇದೆ. ಕೆಲವರಿಗೆ ಅವಕಾಶಗಳನ್ನೂ ಕೊಟ್ಟ್ದ್ದಿದೇನೆ. ಆದರೆ ಅಂತಿಮವಾಗಿ ನಿರ್ಮಾಪಕರು ಪರಭಾಷಾ ಗಾಯಕರಿಂದ ಹಾಡಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಸಂಗೀತ ನಿರ್ದೇಶಕರು ಅಸಹಾಯಕರಾಗುವುದೇ ಅಲ್ಲಿ.ಪ್ರಸ್ತುತ ಕಲಿಯಲು ಅವಕಾಶ ಇದೆ ಎಂಬ ಕಾರಣಕ್ಕೆ ನಾನು ಚೆನ್ನೈನಲ್ಲಿ ನೆಲೆಸಿರುವೆ. ನಾನು ಎಲ್ಲೇ ಇದ್ದರೂ ಕನ್ನಡದವನು. ಇನ್ನೊಂದು ವಿಚಾರ; ನಾನು ಶಾಸ್ತ್ರೀಯ ಸಂಗೀತ ಕಲಿತಿರುವುದರಿಂದ ಹಾಡಲೂ ಬಲ್ಲೆ. ಎರಡು ಮೂರು ಸಿನಿಮಾಗಳಿಗೆ ಬಿಟ್ ಹಾಡುಗಳನ್ನು ಹಾಡಿರುವೆ. `ಆವಕಾಯಿ ಬಿರಿಯಾನಿ~ ಎಂಬ ತೆಲುಗು ಚಿತ್ರ ಮತ್ತು ಕನ್ನಡದ `ಮದುವೆ ಮನೆ~ ಚಿತ್ರದ ಒಂದು ಹಾಡನ್ನು ಹಾಡಿರುವೆ.ಇತ್ತೀಚೆಗೆ ಹಾಡುಗಳಲ್ಲಿ ಸಂಗೀತದ ಅಬ್ಬರ ಜಾಸ್ತಿ ಎಂಬ ದೂರು ಇದೆ. ಅದರ ಬಗ್ಗೆ ನನಗೂ ಬೇಸರವಿದೆ. ಆದರೆ ಜನರಿಗೆ ಅದು ಇಷ್ಟವಾಗುತ್ತಿದೆ. ನನಗಂತೂ ಮಾಧುರ್ಯಭರಿತ ಹಾಡುಗಳೆಂದರೆ ತುಂಬಾ ಇಷ್ಟ. ಆದರೆ ಮನರಂಜನೆಯ ದೃಷ್ಟಿಯಿಂದ ಕತೆಗೆ ತಕ್ಕಂಥ ಸಂಗೀತ ನೀಡುವುದೂ ನನ್ನ ಕರ್ತವ್ಯ.ಇತ್ತೀಚೆಗೆ ವಾದ್ಯಗಳನ್ನು ಬಳಸಿ ಸಂಗೀತ ನಿರ್ದೇಶಿಸುವುದು ಕಡಿಮೆಯಾಗಿದೆ ಎಂಬ ಮಾತಿದೆ. ಸಾಫ್ಟ್‌ವೇರ್‌ಗಳು ಯಾವುದೇ ಸಂಗೀತವನ್ನು ಸೃಷ್ಟಿಸುವುದಿಲ್ಲ. ಅವುಗಳನ್ನು ಒಂದು ತಂತ್ರಜ್ಞಾನದಂತೆ ಮಾತ್ರ ಬಳಸಿಕೊಳ್ಳಬಹುದು. ಇತ್ತೀಚೆಗೆ ಮತ್ತೆ ವಾದ್ಯಗಳ ಸಂಗೀತವನ್ನೇ ಬಳಸಿಕೊಳ್ಳುವ ಟ್ರೆಂಡ್ ಬರುತ್ತಿದೆ. ನಾನೂ ಶೇ 90ರಷ್ಟು ವಾದ್ಯಗಳನ್ನೇ ಬಳಸಿ ಸಂಗೀತ ನೀಡುತ್ತೇನೆ.

 

ಇಂದಿಗೂ ನಾನೊಬ್ಬ ಸಂಗೀತದ ವಿದ್ಯಾರ್ಥಿ. ಕೆಲವು ಅಪರೂಪದ ರಾಗಗಳನ್ನು ಕೇಳುತ್ತಿರುತ್ತೇನೆ. ಅಪ್ಪನಿಂದಲೂ ಕಲಿಯುತ್ತಿರುತ್ತೇನೆ. ಕರ್ನಾಟಕ ಸಂಗೀತ ಕಲಿತಿರುವುದರಿಂದ ಹಿಂದೂಸ್ತಾನಿಯ ಕಡೆ ಮುಖ ಮಾಡಿದ್ದೇನೆ. ನನಗೆ ರಾಗವನ್ನು ಆಧರಿಸಿದ ಸಂಯೋಜನೆ ಬಹಳ ಇಷ್ಟ.ಒಂದು ಹಾಡನ್ನು ಕೇಳಿದಾಗ ಇನ್ನೆಲ್ಲೋ ಹಾಡನ್ನು ಕೇಳಿದಂಥ ಭಾವ ಮೂಡುವುದು ಸಹಜ. ಅದಕ್ಕೆ ಬೇರೊಬ್ಬರ ಟ್ಯೂನ್‌ಗಳನ್ನು ಸಂಗೀತ ನಿರ್ದೇಶಕರು ಕದಿಯುತ್ತಾರೆ ಎನ್ನಲಾಗುತ್ತದೆ. ಸಂಗೀತದಲ್ಲಿ ಇರುವುದು ಏಳೇ ಸ್ವರ. ಅವುಗಳನ್ನು ಬಳಸಿಯೇ ನಾವು ಹೊಸ ಶೈಲಿಯಲ್ಲಿ ಸಂಗೀತ ಸೃಷ್ಟಿಸುತ್ತಿರಬೇಕು. ಕೆಲವೊಮ್ಮೆ ಸ್ಫೂರ್ತಿ ಪಡೆದರೂ ಅದು ನಕಲಾಗುವ ಸಾಧ್ಯತೆ ಇರುತ್ತದೆ. ಅಲ್ಲಿ ಎಚ್ಚರ ಅಗತ್ಯ.ನಾನು ರಾಗ ಸಂಯೋಜಿಸಿದ `ಮರಳಿ ಮರೆಯಾಗಿ..~, `ಹಸಿರಿನ ತಂಪಲಿ..~, `ನಿನಗೆಂದೇ ವಿಶೇಷವಾದ..~ ಹಾಡುಗಳು ನನಗಿಷ್ಟ. ಇಳಯರಾಜ, ಹಂಸಲೇಖ, ಎ ಆರ್ ರೆಹಮಾನ್, ರಾಜನ್ ನಾಗೇಂದ್ರ, ಅರ್ಜುನ್ ಜನ್ಯ, ಹರಿಕೃಷ್ಣ ನಾನು ಇಷ್ಟಪಡುವ ಸಂಗೀತ ನಿರ್ದೇಶಕರು.ನನ್ನದೇ ವಿಶಿಷ್ಟ ಪ್ರಯೋಗಗಳಲ್ಲಿ ಮುಳುಗುವುದೆಂದರೆ ನನಗಿಷ್ಟ. ಹೊಸ ಹೊಸ ಶೈಲಿಗಳನ್ನು ಹುಡುಕುವುದೇ ನನಗೆ ಖುಷಿ. ಸಿನಿಮಾದಲ್ಲಿ ನಮ್ಮ ಪ್ರಯೋಗಗಳಿಗೆ ಮಿತಿ ಇರುತ್ತದೆ. ಹೊಸ ಶೈಲಿಗಳಿಗೆ ಸಿನಿಮಾ ನಿರ್ದೇಶಕರ ಒಪ್ಪಿಗೆ ಬೀಳುವುದಿಲ್ಲ.

 

ನಮ್ಮ ಮ್ಯೂಸಿಕ್ ಆಲ್ಬಂಗಳಲ್ಲಿ ನಮ್ಮ ಶೈಲಿಯ ಸಂಗೀತವನ್ನು ಅಳವಡಿಸಿಕೊಳ್ಳಲು ಸಾಧ್ಯ ಇರುತ್ತದೆ. ಅದರಿಂದ ಮ್ಯೂಸಿಕ್ ಆಲ್ಬಂಗಳಲ್ಲಿಯೇ ಪ್ರಯೋಗಗಳಿಗೆ ಒಡ್ಡಿಕೊಳ್ಳುವಾಸೆ ನನ್ನದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.