ಸೋಮವಾರ, ಏಪ್ರಿಲ್ 19, 2021
33 °C

ಹೋರಾಟಕ್ಕೆ ಮಸಿ ಯತ್ನ: ಅಣ್ಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದ್‌ನಗರ, ಮಹಾರಾಷ್ಟ್ರ (ಪಿಟಿಐ):  ಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಹೋರಾಟವನ್ನು ಟೀಕಿಸುವ ಮತ್ತು ಕೆಟ್ಟ ಅಭಿಪ್ರಾಯ ಮೂಡಿಸುವ ಮೂಲಕ ಹೋರಾಟವನ್ನು ದುರ್ಬಲಗೊಳಿಸುವ ರಾಜಕೀಯ ಮತ್ತು ಅಪರಾಧಿ ಶಕ್ತಿಗಳ ವಿರುದ್ಧ  ಅಣ್ಣಾ ಹಜಾರೆ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಳೇಗಣ ಸಿದ್ಧಿ ಗ್ರಾಮದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಲೋಕಪಾಲ ಮಸೂದೆಗೆ ಸಾಮಾನ್ಯ ಜನರೂ ಜಾಗೃತರಾಗಿ ನೀಡಿರುವ ಭಾರಿ ಬೆಂಬಲವನ್ನು ಕಂಡು ಕೆಲವು ರಾಜಕೀಯ ಮತ್ತು ಅಪರಾಧಿ ಶಕ್ತಿಗಳು ಆತಂಕಕ್ಕೊಳಗಾಗಿವೆ. ಭ್ರಷ್ಟಾಚಾರವನ್ನು ತೊಲಗಿಸುವ ಸಲುವಾಗಿ ಹುಟ್ಟಿಕೊಂಡ ಹೋರಾಟದಲ್ಲಿ ಗೊಂದಲ ಮೂಡಿಸುವುದಲ್ಲದೆ ಅಪಖ್ಯಾತಿ ಉಂಟುಮಾಡುವ ಮೂಲಕ ಅದನ್ನು ಅಸ್ಥಿರಗೊಳಿಸಲು ಈ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.ರಾಜಕೀಯ ಮುಖಂಡರ ವಿರುದ್ಧದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ತಾವು ಎಲ್ಲಾ ರಾಜಕಾರಣಿಗಳೂ ಭ್ರಷ್ಟರೆಂದು ಹೇಳಿಲ್ಲ ಎಂದರು. ಎಲ್ಲಾ ಹಂತಗಳಲ್ಲಿಯೂ ಭ್ರಷ್ಟಾಚಾರದಿಂದ ಹೊರತಾದವರು ಕೆಲವರು ಇದ್ದೇ ಇರುತ್ತಾರೆ. ಆದರೆ ಅಂಥಹವರು ತಮ್ಮ ಸುತ್ತ ನಡೆಯುವ ಭ್ರಷ್ಟಾಚಾರ ವಿರುದ್ಧ ದನಿ ಎತ್ತಿದರೆ ಮಾತ್ರ ಅವರನ್ನು ಗೌರವಿಸಬಹುದು. ಭ್ರಷ್ಟಾಚಾರದ ವಿಷಯದಲ್ಲಿ ದನಿ ಎತ್ತದಿರುವುದು ಸಹ ಭ್ರಷ್ಟಾಚಾರಕ್ಕೆ ಮೌನವಾಗಿ ಬೆಂಬಲ ನೀಡಿದಂತೆ. ಅಂತಹ ವರ್ಗದ ನಾಯಕರಿಂದ ದೇಶಕ್ಕೆ ಯಾವುದೇ ಉಪಯೋಗವಾಗಲಾರದು ಎಂದು ಅಣ್ಣಾ ಹೇಳಿದರು.ಮತದಾರರು ಭ್ರಷ್ಟ ಮತ್ತು ಅಪ್ರಾಮಾಣಿಕರಾಗುತ್ತಿದ್ದಾರೆ ಎಂಬ ತಮ್ಮ ಹೇಳಿಕೆಗೆ ಕಾಂಗ್ರೆಸ್ ಮತ್ತು ಎನ್‌ಸಿಪಿಗಳಿಂದ ಟೀಕೆ ವ್ಯಕ್ತವಾದ ಬಗ್ಗೆ ಪ್ರತಿಕ್ರಿಯಿಸಿ, ಮತದಾರ ಭ್ರಷ್ಟಗೊಳ್ಳುವುದಕ್ಕೆ ರಾಜಕೀಯ ಪಕ್ಷಗಳೇ ಹೊಣೆ. ಅಧಿಕಾರ ಬಳಸಿ, ಅಪಾರ ಕಪ್ಪುಹಣ ಸಂಪಾದಿಸುತ್ತಾರೆ. ತಮ್ಮ ಭ್ರಷ್ಟತೆಯನ್ನು ಮುಚ್ಚಿಟ್ಟು ಅನುಕಂಪ ಗಿಟ್ಟಿಸಲು ಅದರಲ್ಲಿ ಅತ್ಯಲ್ಪ ಭಾಗವನ್ನು ಜನರಿಗೆ ಹಂಚುತ್ತಾರೆ ಎಂದು ವ್ಯಂಗ್ಯವಾಡಿದರು.ಕಪ್ಪು ಹಣವಿಲ್ಲದೆ ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಅಭ್ಯರ್ಥಿಯೊಬ್ಬ ಇಂದಿನ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.