ಶುಕ್ರವಾರ, ಮೇ 27, 2022
27 °C

ಹೋಳಿಯ ಸಂಭ್ರಮ:ಬಣ್ಣದ ಓಕುಳಿಯಲ್ಲಿ ಮಿಂದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಗಜೇಂದ್ರಗಡ: ಹೋಳಿ ಹುಣ್ಣಿಮೆಯ ನಿಮಿತ್ತ ಭಾನುವಾರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಕಾಮ ದಹನ ನಡೆಸಿ ಚಿಣ್ಣರು, ಯುವಕರು, ಯುವತಿಯರು ಓಕುಳಿಯಾಡಿ ಸಂಭ್ರಮಿಸಿದರು.

ವಿವಿಧ ಗಲ್ಲಿಗಲ್ಲಿಗಳಲ್ಲಿ ಯುವಕರು ಕಳೆದ 15ದಿನಗಳಿಂದ ಕದ್ದು ಸಂಗ್ರಹಿಸಿದ್ದ ಕಟ್ಟಿಗೆಗಳನ್ನು ಸೇರಿಸಿ ಕಾಮನ ಭಾವಚಿತ್ರದೊಂದಿಗೆ ದಹಿಸಿದರು. ಈ ಸಂದರ್ಭದಲ್ಲಿ ಯುವಕರು ಹಲಿಗೆ ಬಾರಿಸುತ್ತ ಬಾಯಿ ಬಡಿದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಶನಿವಾರ ರಾತ್ರಿಯಿಂದಲೇ ಯುವಕರು ಅತ್ಯಂತ ಹುರುಪಿನಿಂದ ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚುತ್ತ ವಿವಿಧ ಗಲ್ಲಿಗಲ್ಲಿಗಳಲ್ಲಿ ಅಣುಕ ಶವ ಯಾತ್ರೆ ನಡೆಸಿ ಬಾಯಿ ಬಡಿದುಕೊಳ್ಳುತ್ತ ಹಬ್ಬ ಆಚರಿಸಿದರು. ಭಾನುವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿದಂತೆ ಯುವತಿಯರು ಪಿಚಕಾರಿಯಲ್ಲಿ ನೀರು ಮಿಶ್ರಿತ ಬಣ್ಣ ಚಿಮ್ಮಿಸುತ್ತಿದ್ದರೇ ಮಹಿಳೆಯರು ವಿವಿಧ ಪ್ರದೇಶಗಳಲ್ಲಿ ನಡೆಸಿದ್ದ ಕಾಮ ದಹನದ ಬೆಂಕಿ ಕೆಂಡವನ್ನು ತಂದು ಅದರಿಂದಲೇ ಮನೆಯ ಒಲೆಯನ್ನು ಹೊತ್ತಿಸಿ ಅದರಲ್ಲಿ ಕಡಲೆಯನ್ನು ಸುಟ್ಟು ಮನೆಯವರಿಗೆಲ್ಲ ಹಂಚಿ ತಾವು ತಿಂದು ಸಂಭ್ರಮಿಸಿದರು.ನರಗುಂದ: ಸಂಭ್ರಮದ ಹೋಳಿ


ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬಣ್ಣದ ಹಬ್ಬ ಹೋಳಿಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 6 ಗಂಟೆಯಿಂದಲೇ ಬಣ್ಣ ಸಿಡಿಸಾಟ ಆರಂಭಗೊಂಡಿತ್ತು. ಪಟ್ಟಣದ ದಂಡಾಪೂರದಲ್ಲಿ ಪ್ರಥಮವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಹಬ್ಬದ ಮೆರವಣಿಗೆಗೆ ಚಾಲನೆ ದೊರೆಯಿತು. ಕರಿ ಗಳವು ಮಾರ್ಗದರ್ಶಿಯಂತೆ ಮುಂದೆ ಸಾಗುತ್ತಿತ್ತು. ರಗ್ಗಲಿಗೆ ಬಾರಿಸುತ್ತಾ ಚಿಣ್ಣರಿಂದ ವಯೋವೃದ್ಧರವರೆಗೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದ್ದು ಕಂಡು ಬಂತು.ಶಿರಹಟ್ಟಿ: ಓಕುಳಿಯಾಟ


ಶಿರಹಟ್ಟಿ:  ವಿವಿಧ ವೇಷ ಭೂಷಣಗಳಿಂದ ಅಲಂಕಾರಗೊಂಡು, ಪರಸ್ಪರ ಬಣ್ಣ ಎರಚುತ್ತ ಜನತೆ ಶನಿವಾರ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಹುಲುಗಾಮನ ವಿಶಿಷ್ಟತೆ: ಪಟ್ಟಣದಲ್ಲಿ ಹೋಳಿ ಹಬ್ಬ ವಿಶೇಷವಾಗಿ ಆಚರಿಸಲಾಗುತ್ತಿದೆ. ಪೌರಾಣಿಕ ಹಿನ್ನೆಲೆಯ ರೂಪದಲ್ಲಿ ಆಚರಿಸಲ್ಪಡುವ ಮುನ್ನಾ ದಿನ ವಾಲ್ಮೀಕಿ ನಗರ ಹಾಗೂ ಕೆಲ ಓಣಿಗಳ ಪ್ರಮುಖರು ಭತ್ತದ ಹುಲ್ಲಿನಿಂದ ಹುಲುಗಾಮ (ಕಾಮನ) ಮೂರ್ತಿಯನ್ನು ನಿರ್ಮಾಣ ಮಾಡಿ, ತಲೆಗೆ ಪೇಟ, ರಾಜ ಪೋಷಾಕು, ರತ್ನ ಹಾರಗಳು, ಬಿಲ್ಲೆ, ಕವಚ ಸೇರಿದಂತೆ ವಿವಿಧ ಆಭರಣಗಳಿಂದ ತಯಾರು ಮಾಡುತ್ತಾರೆ.ಬೇವಿನ ಮರದ ಟೊಂಗೆ, ಬಾಳಿಗಿಡದ ತಪ್ಪಲು ಸೇರಿದಂತೆ ವಿವಿಧ ರೀತಿಯಲ್ಲಿ ಬಂಡಿಯನ್ನು ಅಲಂಕಾರ ಮಾಡಿದ ನಂತರ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊಂಡ ಕಾಮನ ಮೆರವಣಿಗೆ, ರಾತ್ರಿಯಲ್ಲಾ ಸಂಚರಿಸಿ ಬೆಳಿಗ್ಗೆ ಪುನ: 6 ಗಂಟೆ ಸಮಯದಲ್ಲಿ ಅದೇ ಸ್ಥಳದಲ್ಲಿ ಆಗಮಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಹುಲುಗಾಮ (ಕಾಮನ) ದಹನ ಮಾಡುತ್ತಾರೆ. ನಂತರ ಬಣ್ಣ ಎರಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಪಟ್ಟಣದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಪರೀಕ್ಷೆಗಳ ಬಿಸಿ ನಡುವೆಯೂ ವಿದ್ಯಾರ್ಥಿಗಳು ಪರಸ್ಪರ ಬಣ್ಣದಾಟದಲ್ಲಿ ತೊಡಗಿದ್ದರು.ಗಟ್ಟಿಗಡಗಿ ಉತ್ಸವ


ಮುಳಗುಂದ: ಪ್ರತಿವರ್ಷದಂತೆ ಹೋಳಿ ಹುಣ್ಣಿಮೆಯ ಅಂಗವಾಗಿ ಆಚರಿಸುವ ಗಟ್ಟಿಗಡಗಿ ಉತ್ಸವ ಸಮೀಪದ ಚಿಂಚಲಿ ಗ್ರಾಮದಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು.

ಕಾಳಿಕಾದೇವಿಗೆ ಕುಂಬಾರ ಮನೆಯಲ್ಲಿ ಪೂಜೆ ಸಲ್ಲಿಸಿ ಬಾಲರಡ್ಡಿ ಓಣಿಯಲ್ಲಿರುವ ಕಾಳಮ್ಮನ ಕಟ್ಟೆಯಲ್ಲಿ ಪ್ರತಿಷ್ಟಾಪಿಸಿದ ನಂತರವೇ ದೇವಿಯ ಗಡಗಿ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.   ಗ್ರಾಮದ ಕ್ಷೌರಿಕರ ಮನೆಯಿಂದ ರೇಷ್ಮೆ ಮಡಿ ತಂದು ಧರ್ಮಣ್ಣವರ ಮನೆತನದ ಹುಡುಗನಿಗೆ ಮಹದೇವಪ್ಪ ಕಾಮರಡ್ಡಿಯವರ ಮನೆಯಲ್ಲಿ ತೊಡಿಸಿ, ಸಿಂಗರಿಸುವುದು ಹಿಂದಿನಿಂದ ನಡೆದುಕೊಂಡ ಸಂಪ್ರದಾಯ.ಸಂಜೆ ನಡೆಯುವ ದೇವಿಯ ಮೆರವಣಿಗೆಯಲ್ಲಿ ಭಕ್ತರ ಮನೆಗಳಿಗೆ ಒಂದು ಕಡೆ ನಿಲ್ಲದೆ ದೇವಿ ದರ್ಶನ ನೀಡುತ್ತಾಳೆ. ಭಕ್ತರು ಸಹ ಉಡಿ ತುಂಬುವ ಮೂಲಕ ಮನೆಗೆ ಬಂದ ದೇವಿಗೆ ತಮ್ಮ ಹರಕೆಯನ್ನು ಮುಟ್ಟಿಸುತ್ತಾರೆ.  ಕಾಳಮ್ಮನಕಟ್ಟಿಯಲ್ಲಿ ಬಂದು ಸೇರುವ ಜನತೆಗೆ ಗಟ್ಟಿಗಡಗಿ ಉತ್ಸವ ಒಂದು ರೀತಿ ಮನರಂಜನೆಯನ್ನುಂಟು ಮಾಡಿದರೆ. ಅದರ ಅಂಗವಾಗಿ ನಡೆದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಆಕರ್ಷಕ ಡೊಳ್ಳು ಕುಣಿತ ನೋಡುಗರ ಮನರಂಜಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.