ಮಂಗಳವಾರ, ಜೂನ್ 22, 2021
29 °C
ಬಣ್ಣದ ಓಕುಳಿ ಮನಸ್ಸು ನೋಯಿಸದಿರಲಿ: ಧರ್ಮ ಗುರುಗಳ ಆಶಯ

ಹೋಳಿ ಹಬ್ಬ: ಬಿಗಿ ಬಂದೋಬಸ್ತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಣ್ಣಗಳ ಓಕುಳಿಯಾಟ ಹೋಳಿ ಹಬ್ಬದ ಸಂಭ್ರಮಕ್ಕೆ ಅವಳಿ ನಗರ ಸಿದ್ಧಗೊಳ್ಳುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಇದೇ 16ರಂದು ಹುಬ್ಬಳ್ಳಿಯಲ್ಲಿ 331 ಮತ್ತು ಧಾರವಾಡದಲ್ಲಿ 151 ಸೇರಿ ಅವಳಿನಗರದಲ್ಲಿ ಒಟ್ಟು 482 ಕಾಮಣ್ಣ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಈ ಪೈಕಿ 69 ವಿಗ್ರಹಗಳು ಅತಿ ಸೂಕ್ಷ್ಮ ಮತ್ತು 130 ವಿಗ್ರಹಗಳು ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ.ಧಾರವಾಡದಲ್ಲಿ ಓಕುಳಿ ಮತ್ತು ಕಾಮದಹನ ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 87 ವಿಗ್ರಹಗಳ ಕಾಮದಹನ ಇದೇ 17ರಂದು ನಡೆಯಲಿದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಬಣ್ಣಗಳ ಓಕುಳಿಯಾಟ ಮತ್ತು ಹುಬ್ಬಳ್ಳಿಯ ಇತರ ಎಲ್ಲ ವಿಗ್ರಹಗಳ ಕಾಮದಹನ ರಂಗಪಂಚಮಿ ದಿನವಾದ 20ರಂದು ಜರುಗಲಿದೆ.ಹಬ್ಬದ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರವಿಡೀ ಬಿಗಿ ಬಂದೋಬಸ್ತ್‌ ಏರ್ಪಡಿಸಲು ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರೇಟ್‌ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. 5 ಮಂದಿ ಎಸಿಪಿ, 28 ಪೊಲೀಸ್‌ ಇನ್‌ಸ್ಪೆಕ್ಟರ್‌, 700 ಕಾನ್‌ಸ್ಟೆಬಲ್‌ ಮತ್ತು 200 ಹೋಮ್‌ ಗಾರ್ಡ್‌ ಸೇರಿ ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ಅಲ್ಲದೆ,12 ಕೆಎಸ್‌ಆರ್‌ಪಿ ತುಕಡಿ ಮತ್ತು ನಗರ ಸಶಸ್ತ್ರ ಪೊಲೀಸ್‌ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.ಹಬ್ಬದ ಹಿನ್ನೆಲೆಯಲ್ಲಿ ನಗರದ ಸಿಎಆರ್ ಕವಾಯತು ಮೈದಾನದಲ್ಲಿ ಬುಧವಾರ ಜರುಗಿದ ಶಾಂತಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ರವೀಂದ್ರ ಪ್ರಸಾದ್‌, ‘ಹೋಳಿ ಆಚರಣೆ ವೇಳೆ ನಗರದಾದ್ಯಂತ ಸುಮಾರು 140 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಏರ್ಪಡಿಸಲಾಗುವುದು. ಕಾಮದಹನ ಮೆರವಣಿಗೆ ಸಂದರ್ಭದಲ್ಲಿ ಮೊಬೈಲ್‌ (ಸಂಚಾರಿ) ಕ್ಯಾಮೆರಾ ಅಳವಡಿಸಿದ ವಿಶೇಷ ವಾಹನಗಳು ಸುತ್ತಾಡಲಿವೆ. ಕಮಿಷನರೇಟ್ ವ್ಯಾಪ್ತಿಯ ಎಲ್ಲ 20 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕನಿಷ್ಠ ತಲಾ ಮೂರು ವಾಹನಗಳು ಗಸ್ತು ತಿರುಗಲಿವೆ. ಸಮಾಜ ಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುವ 658 ಮಂದಿಯ ವಿರುದ್ಧ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.‘ಹಬ್ಬದ ದಿನ ಮತ್ತು ಅದರ ಹಿಂದಿನ ದಿನ ಮದ್ಯ ಮಾರಾಟ ನಿಷೇಧಿಸಲಾಗುವುದು. ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದಂತೆ, ಮಿತಿಗಿಂತ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳ ಬಳಕೆಗೂ ಅವಕಾಶ ನೀಡುವುದಿಲ್ಲ’ ಎಂದರು.ಶಾಂತಿ ಸಭೆಯಲ್ಲಿ ವಿವಿಧ ಧರ್ಮಗಳ ಗುರುಗಳು ಭಾಗವಹಿಸಿದ್ದರು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿ, ‘ಶಾಂತಿಯನ್ನು ಎಲ್ಲರೂ ಬಯಸುತ್ತಾರೆ. ಶಾಂತಿ ಎಂದರೆ ನಿಜವಾದ ಸಂಪತ್ತು ಮತ್ತು ಶಕ್ತಿ. ಎಲ್ಲ ಹಬ್ಬಗಳನ್ನು ಎಲ್ಲರೂ ಶಾಂತಿ, ಸೌಹಾರ್ದದಿಂದ ಆಚರಿಸಬೇಕು’ ಎಂದು ಕರೆ ನೀಡಿದರು.‘ಹಬ್ಬ ಎಂದರೇನೆ ಖುಷಿ. ಹೀಗಾಗಿ ಹಬ್ಬವನ್ನು ಸಂತಸದಿಂದ ಆಚರಿಸಬೇಕು. ಈ ದಿನಗಳಲ್ಲಿ ಮದ್ಯ ಸೇವನೆಯಿಂದ ದೂರ ಇದ್ದರೆ ಶಾಂತಿ, ಸೌಹಾರ್ದ ವಾತಾವರಣ ತಾನಾಗಿಯೇ ನೆಲೆಸುತ್ತದೆ’ ಎಂದು ಮುಸ್ಲಿಮ್‌ ಧರ್ಮಗುರು ಸಯ್ಯದ್‌ ತಾಜುದ್ದೀನ್‌ ಖಾದ್ರಿ ಹೇಳಿದರು.ಫಾ. ಜೋಸೆಫ್‌ ರಾಡ್ರಿಗಸ್‌, ‘ಹಬ್ಬದ ದಿನಗಳಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದರು. ಸಿಖ್‌ ಧರ್ಮ ಗುರು ಗುರುಚರಣ್‌ ಸಿಂಗ್‌ ಕೂಡಾ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಪಿ ಸುಭಾಷ್‌ ಗುಡಿಮನಿ, ‘ಬಣ್ಣಗಳ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಸಹಕರಿಸಬೇಕು. ರಾಸಾಯನಿಕ ಮಿಶ್ರಿತ ಬಣ್ಣ ಬಳಸಬಾರದು ಮತ್ತು ಇನ್ನೊಬ್ಬರ ಮನಸ್ಸು ನೋಯಿಸುವ ರೀತಿಯಲ್ಲಿ ಆಚರಣೆ ಸಲ್ಲ’ ಎಂದರು. ಬಳಿಕ ಅವರು ‘ಇದೋ ಬಂತು ಹೋಳಿ ಹಬ್ಬ; ಯುವ ಮಿತ್ರರೇ ಆಚರಣೆ ಬಣ್ಣದ ಜಾಲಿ ಆಗದಿರಲಿ’ ಎಂಬ ಸ್ವರಚಿತ ಕವನ ವಾಚಿಸಿದರು.‘ಸಮಾಜ ಎಲ್ಲ ವರ್ಗದ ಜನರೂ ಹಬ್ಬದಲ್ಲಿ ಭಾಗಿಯಾದರೆ ಯಾವುದೇ ಗಲಭೆ, ಗೊಂದಲಗಳಿಗೆ ಆಸ್ಪದ ಆಗುವುದಿಲ್ಲ. ಪುಂಡರಷ್ಟೇ ಗಲಭೆ ಮಾಡುತ್ತಾರೆ. ಅಂಥವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಗಲಭೆಗೆ ಕಾರಣರಾಗುವವರ ಮೇಲೆ ನಿಗಾ ಇಡಬೇಕು’ ಎಂದು ಉದ್ಯಮಿ ಮದನ ದೇಸಾಯಿ ಸಲಹೆ ನೀಡಿದರು.‘ಬಣ್ಣದ ಹೆಸರಿನಲ್ಲಿ ಕೆಲವೆಡೆ ಟಾರ್‌ ಎರಚುವ ಕೆಲಸವೂ ನಡೆಯುತ್ತದೆ. ಇದು ಸಭ್ಯತೆಯ ಲಕ್ಷಣವಲ್ಲ’ ಎಂದ ಅವರು, ‘ಗಲಾಟೆ ಸಂಭವಿಸಿದರೆ ಹೆಚ್ಚು ನಷ್ಟ ಉಂಟಾಗುವುದು ವ್ಯಾಪಾರಸ್ಥರಿಗೆ. ಹೀಗಾಗಿ ಅವರೆಂದೂ ಗಲಾಟೆ ಬಯಸುವುದಿಲ್ಲ’ ಎಂದರು.ಐ.ಜಿ. ಸನದಿ ಮಾತನಾಡಿ, ‘ಅಭಿವೃದ್ಧಿ ಆಗಬೇಕಿದ್ದರೆ ಶಾಂತಿ– ಸುವ್ಯವಸ್ಥೆ ಅಗತ್ಯ. ಅದರಲ್ಲೂ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸ್ವ ಧರ್ಮ ನಿಷ್ಠೆ; ಪರ ಧರ್ಮ ಸಹಿಷ್ಠುತೆ ವ್ಯಕ್ತಪಡಿಸುವ ಜೊತೆಗೆ ಕ್ಷಮಾಗುಣ ಇದ್ದರೆ ಎಲ್ಲವೂ ಸೌಹಾರ್ದಯುತವಾಗಿ ನಡೆಯುತ್ತದೆ’ ಎಂದು ಆಶಿಸಿದರು.ಜಬ್ಬಾರ್‌ ಖಾನ್‌ ಹೊನ್ನಳ್ಳಿ, ‘ಹೋಳಿ ಎಲ್ಲ ಸಮುದಾಯದವರ ಹಬ್ಬ. ಪರಸ್ಪರ ಪ್ರೀತಿ ವಿಶ್ವಾಸದಿಂದ ಶಾಂತಿಯುತವಾಗಿ ಆಚರಿಸಲು ಮುಂದಾಗಬೇಕು. ಹಳೇಹುಬ್ಬಳ್ಳಿಯಲ್ಲಿ ಕೆಲವು ಕಿಡಿಗೇಡಿಗಳು ಹಬ್ಬದಂತಹ ಸಂದರ್ಭದಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಾರೆ. ಅಂಥವರ ಮೇಲೆ ಪೊಲೀಸರು ಕಣ್ಣಿಡಬೇಕು’ ಎಂದರು.ಕಾಮಣ್ಣನನ್ನು ಕುಳ್ಳಿರಿಸಿದ ಜಾಗಕ್ಕೆ ಹೋಮ್‌ ಗಾರ್ಡ್‌ಗಳ ಭದ್ರತೆ ನೀಡಬೇಕು. ಹಬ್ಬದ ದಿನ ಮೂರು ಮಂದಿಯನ್ನು ಕುಳ್ಳಿರಿಸಿಕೊಂಡು ಕರ್ಕಶ ಶಬ್ದದೊಂದಿಗೆ ಬೈಕ್‌ ಚಲಾಯಿಸು­ವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಬಣ್ಣದ ಗುಣಮಟ್ಟ ಪರಿಶೋಧಿಸಬೇಕು’ ಎಂದು ವೆಂಕಟೇಶ ಸವದತ್ತಿ ಆಗ್ರಹಿಸಿದರು.ಮಹಮ್ಮದ್‌ ಯೂಸುಫ್‌ ಸವಣೂರ, ‘ನಮಾಜ್‌ ನಡೆಯುವ ಮಧ್ಯಾಹ್ನದ ವೇಳೆ ಮುಸ್ಲಿಮ್ ಸಮುದಾಯವರು ಕೆಲವರು ಟೋಪಿ, ಬಿಳಿ ಕುರ್ತಾ ಧರಿಸಿ ಮಸೀದಿಗೆ ಬರು­ತ್ತಾರೆ. ಆಗ ಬಣ್ಣದಾಟ ಆಡುವವರು ಒತ್ತಾಯಪೂರ್ವಕವಾಗಿ ಬಣ್ಣ ಎರಚ­ಬಾರದು’ ಎಂದು ಸಲಹೆ ನೀಡಿದರು.ಪಾಲಿಕೆ ಸದಸ್ಯರಾದ ಶಿವಾನಂದ ಮುತ್ತಣ್ಣವರ, ಅಲ್ತಾಫ್‌ ನವಾಜ್‌ ಕಿತ್ತೂರ ಮತ್ತಿತರರೂ ಅಭಿಪ್ರಾ­ಯಗಳನ್ನು ಹಂಚಿಕೊಂಡರು. ಡಿಸಿಪಿ­ಗಳಾದ ಎ.ಎಸ್‌.ಘೋರಿ, ಎಂ.ಎನ್‌. ಜೋಗಳೇಕರ, ಎಸಿಪಿಗಳಾದ ಎ.ಆರ್‌. ಬಡಿಗೇರ, ಎನ್‌.ಡಿ.ಬಿರ್ಜೆ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.