ಶನಿವಾರ, ಜನವರಿ 18, 2020
19 °C
ಹಂಪಿ ಉತ್ಸವ: ಅನುದಾನ ನೀಡಲು ಸರ್ಕಾರ ಹಿಂದೇಟು

‘ಅಕ್ಕಿ ಮೇಲೆ ಆಸೆ; ನೆಂಟರ ಮೇಲೆ ಪ್ರೀತಿ’

ಪ್ರಜಾವಾಣಿ ವಾರ್ತೆ / ಬಸವರಾಜ ಮರಳಿಹಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’. ಇದು ಜನವರಿ 10 ರಿಂದ 3 ದಿನಗಳ ಕಾಲ ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ನಡೆಯಲಿರುವ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನೀತಿ. ಕಡಿಮೆ ಹಣ ಖರ್ಚಾಗಬೇಕು, ಉತ್ಸವ ಕಳೆದ ಬಾರಿಗಿಂತಲೂ ಹೆಚ್ಚು ಅದ್ದೂರಿಯಾಗಿ ನಡೆಯ­ಬೇಕು ಎಂಬ ಸರ್ಕಾರದ ನೀತಿಯಿಂದ, ಜಿಲ್ಲಾ­ಡಳಿತ ಕಂಗಾಲಾಗಿದೆ. ಉತ್ಸವಕ್ಕೆ ಕಳೆದ ಬಾರಿ­ಗಿಂತ ಈ ಬಾರಿ ₨ 1 ಕೋಟಿ ಅನುದಾನದ ಕೊರ­ತೆ­ಯಾಗಿದ್ದು, ಲಭ್ಯವಿರುವ ಅನುದಾನ­ದಲ್ಲೇ ಸರಿದೂಗಿಸಲು ಜಿಲ್ಲಾಡಳಿತ ಹೆಣಗಾಡುತ್ತಿದೆ.ಕಳೆದ ಬಾರಿ 2010ರಲ್ಲಿ ನಡೆದಿದ್ದ ಉತ್ಸವಕ್ಕೆ ₨ 6 ಕೋಟಿ ಖರ್ಚಾಗಿದ್ದು, ಈ ಬಾರಿ  ₨ 5 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಲು ಸರ್ಕಾರ ಆದೇಶಿಸಿದೆ. ಇದರಲ್ಲಿ ಸರ್ಕಾರದ ಪಾಲು ಕೇವಲ ₨ 2 ಕೋಟಿಯಾಗಿದ್ದು, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ₨ 1 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.ಮಿಕ್ಕಂತೆ ಉತ್ಸವದಲ್ಲಿ ಬರುವ ಆದಾಯ ಹಾಗೂ ಸಾರ್ವಜನಿಕರು, ಕಾರ್ಖಾನೆಗಳಿಂದ ಸಂಗ್ರಹವಾಗುವ ದೇಣಿಗೆಯಿಂದ ₨ 2.36 ಕೋಟಿ ಹಣ ಸಂಗ್ರಹಿಸಲು ನಿರ್ಧರಿಸಲಾಗಿದೆ. ಮಿಕ್ಕ ₨ 64 ಲಕ್ಷ ಅನುದಾನಕ್ಕೆ ದೊಡ್ಡ ಕಂಪೆನಿಗಳ ಪ್ರಾಯೋಜಕತ್ವ ಪಡೆಯಲು ನಿರ್ಧರಿಸಲಾಗಿದೆ.ಹೆಚ್ಚುವರಿ ಚಟುವಟಿಕೆ: ಉತ್ಸವದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ ಕ್ರೀಡಾ ಚಟುವಟಿಕೆ ಹಾಗೂ ಕೆಲ ಕಾರ್ಯಕ್ರಮಗಳನ್ನು ಆಯೋಜಿಸಲು ಸಚಿವರು ಜಿಲ್ಲಾಧಿಕಾರಿಗಳ ದುಂಬಾಲು ಬಿದ್ದಿದ್ದಾರೆ. ಅಂಗವಿಕಲರ ಕ್ರೀಡಾಕೂಟ ಹಾಗೂ ಮಹಿಳಾ ಉತ್ಸವ ಈ ಬಾರಿಯ ಉತ್ಸವದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಈ ಎರಡು ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಜಿಲ್ಲಾಧಿಕಾರಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ, ಈ ಬಾರಿಯ ಉತ್ಸವದಲ್ಲಿ ಹಂಪಿ ಬೈ ಆರ್ಟ್‌, ಹಂಪಿ ಬೈ ಲೆನ್ಸ್‌ ಸ್ಪರ್ಧೆಗಳು ಹಾಗೂ ಹಂಪಿ ಬೈ ಸ್ಕೈ ಎಂಬ ಹೊಸ ಯೋಜನೆಯೂ ಈಗಾಗಲೇ ಸೇರ್ಪಡೆಯಾಗಿದೆ. ಕಳೆದ ಬಾರಿ ಆರು ವೇದಿಕೆಗಳಿದ್ದರೆ ಈ ಬಾರಿ ಕೇವಲ ಮೂರು ವೇದಿಕೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದಲೇ ಉತ್ಸವಕ್ಕೆ ಕಳೆ ತರುವಂತೆ ಸರ್ಕಾರದ ಉನ್ನತ ಮಟ್ಟದಿಂದ ಸೂಚನೆ ದೊರೆತಿದೆ.‘ಈ ಬಾರಿಯ ಉತ್ಸವದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಉತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಬೇಕು. ಕಲಾವಿದರಿಗೆ ಸೂಕ್ತ ಗೌರವಧನ ನೀಡುವ ಮೂಲಕ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಸಚಿವೆ ಉಮಾಶ್ರೀ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಉತ್ಸವದ ಪೂರ್ವಸಿದ್ಧತೆ ಕುರಿತು ಸೋಮವಾರವಷ್ಟೇ ಹೊಸಪೇಟೆಯಲ್ಲಿ ನಡೆದ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿರುವುದು ಜಿಲ್ಲಾಡಳಿತಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.‘ಕಳೆದ ಬಾರಿಗಿಂತ ಈ ಬಾರಿಯ ಉತ್ಸವಕ್ಕೆ ₨ 1 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ. ಉತ್ಸವಕ್ಕೆ ಕೊರತೆ ಆಗುವ ಅನುದಾನವನ್ನು ದೊಡ್ಡ ಕಂಪೆನಿಗಳ ಪ್ರಾಯೋಜಕತ್ವ ಪಡೆಯುವ ಮೂಲಕ ಭರಿಸಲು ಚಿಂತನೆ ನಡೆಸಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಿರುವುದರಿಂದ ಈ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್‌.‘ಹಂಪಿ ಉತ್ಸವಕ್ಕೆ ಹಿಂದಿನ ಸರ್ಕಾರಗಳು ಬಿಡುಗಡೆ ಮಾಡಿದಷ್ಟು ಅನುದಾನ ನೀಡುವ ಮೂಲಕ ಅದ್ದೂರಿಯಾಗಿ ಆಚರಿಸಲು ಪ್ರಸ್ತುತ ಸರ್ಕಾರವೂ ಮುಂದಾಗಬೇಕು. ಹಣದ ಕೊರತೆಯ ನೆಪವೊಡ್ಡಿ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಉತ್ಸವದ ಚಟು­ವಟಿ­ಕೆಗಳಿಗೆ ಮಂಕು ಕವಿಯುವಂತೆ ಮಾಡ­ಬಾರದು’ ಎಂದು ರೈಲ್ವೆ ಸಲಹಾ ಸಮಿತಿಯ ಸದಸ್ಯ ಹೊಸಪೇಟೆಯ ಕೆ.ಮಹೇಶ್ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)