ಶುಕ್ರವಾರ, ಜನವರಿ 24, 2020
17 °C
ಚಿಕ್ಕಮಗಳೂರು: ಮಲ್ಲಂದೂರಿನಲ್ಲಿ ಹಳ್ಳಿಹಬ್ಬ

‘ಅಧೈರ್ಯವೇ ಕೃಷಿ ಕ್ಷೇತ್ರದ ಸಮಸ್ಯೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲಂದೂರು (ಚಿಕ್ಕಮಗಳೂರು): ಆತ್ಮಸ್ಥೈ­ರ್ಯದ ಕೊರತೆಯೇ ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಸವಾಲು. ಕೃಷಿ ಹಾಗೂ ತೋಟಗಾರಿಕೆಯಲ್ಲಿ ತಾಂತ್ರಿಕತೆ ಹೆಚ್ಚಾಗಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಸುಸ್ಥಿರತೆ ಸಾಧಿಸಬಹುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.ತಾಲ್ಲೂಕಿನ ಮಲ್ಲಂದೂರು ಗ್ರಾಮದಲ್ಲಿ ಭಾನುವಾರ ಕೃಷಿಕ ಯುವಕರ ಬಳಗ ಮತ್ತು ಕೃಷಿಕ ಪತ್ರಿಕೆ ಏರ್ಪಡಿಸಿದ್ದ ಹಳ್ಳಿ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಇಡೀ ಪ್ರಪಂಚವೇ ಕೃಷಿ ಮೂಲದಿಂದ ಆರಂಭಗೊಂಡಿದೆ. ಕೃಷಿಗೆ ಬಗೆಹರಿಸಲಾಗದ ದೊಡ್ಡ ಸವಾಲುಗಳು, ಸಮಸ್ಯೆಗಳು ಇಲ್ಲ. ಆದರೆ ಕೃಷಿಕರಲ್ಲಿರುವ ಆತ್ಮಸ್ಥೈರ್ಯದ ಕೊರತೆಯೇ ದೊಡ್ಡ ಸವಾಲು. ಸರಿಯಾದ ಬೆಲೆ ಇಲ್ಲದ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಅಸಮತೋಲನ ಸರಿಪಡಿಸಲು ಸಾಧ್ಯವಿದೆ ಎಂದರು.ಕಾರ್ಮಿಕರ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳು ಕೃಷಿ ಕ್ಷೇತ್ರದಲ್ಲಿದೆ. ಹಳೆಯ ಕೃಷಿ ಪದ್ಧತಿ ಇನ್ನೂ ಜೀವಂತವಾಗಿರುವುದು ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಆದರೆ, ಬದಲಾವಣೆ ಜಗದ ನಿಯಮ. ಕೃಷಿ ಕ್ಷೇತ್ರವೂ ಬದಲಾವಣೆಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕತೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.‘ನಗರೀಕರಣ ಕೇವಲ ಮಲೆನಾಡು ಭಾಗದ­ಲ್ಲಷ್ಟೇ ಅಲ್ಲ, ದೇಶದ ಮೂಲೆ ಮೂಲೆ­ಗಳಲ್ಲೂ ಆಗುತ್ತಿದೆ. ಯುವ ಜನಾಂಗದಲ್ಲಿ ಆಸೆ, ಆಕಾಂಕ್ಷೆಗಳು ಹೆಚ್ಚುತ್ತಿದೆ. ಅದಕ್ಕೆ ನಮ್ಮಲ್ಲಿ ಸ್ವಾತಂತ್ರ್ಯವೂ ಇದೆ. ಇಡೀ ಜಗತ್ತೇ ಬದಲಾವಣೆ ಕಾಣುತ್ತಿದೆ. ಇದರಿಂದ ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ’ ಎಂದರು.ಮಲೆನಾಡು ಭಾಗದಲ್ಲಿ ಭತ್ತದ ಉತ್ಪಾದನೆ ಹೆಚ್ಚಿಸುವ ಕುರಿತು ಸಂಶೋಧನೆಗಳನ್ನು ಕೈಗೊಳ್ಳುವಂತೆ ಶಿವಮೊಗ್ಗ ಕೃಷಿ ವಿವಿಗೆ ಸೂಚನೆ ನೀಡಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಎಕರೆಗೆ 50 ರಿಂದ 60 ಕ್ವಿಂಟಲ್ ಭತ್ತ ಬೆಳೆಯಲು ಸಾಧ್ಯವಿದೆ. ಆದರೆ, ನಮ್ಮಲ್ಲಿ ಅದರ ಅರ್ಧದಷ್ಟು ಉತ್ಪಾದನೆ ಕಡಿಮೆ ಇದೆ. ಉತ್ಪಾದನೆ ಹೆಚ್ಚಾದರೆ, ಆದಾಯವೂ ಹೆಚ್ಚಾಗುತ್ತದೆ. ಕಾರ್ಮಿಕರ ಸಮಸ್ಯೆ ಹೊರತಾಗಿಯೂ ಹೆಚ್ಚು ಇಳುವರಿ ತೆಗೆಯುವ ತಂತ್ರಜ್ಞಾನದ ಅಳವಡಿಕೆ ಆಗಬೇಕಿದೆ ಎಂದರು.ಕೃಷಿ ಇಲಾಖೆಗೆ 2013ಕ್ಕೆ 100 ವರ್ಷ ತುಂಬಿದೆ. 1913ರಲ್ಲಿ ಮೈಸೂರು ಮಹಾ­ರಾಜರು ಕೃಷಿ ಇಲಾಖೆ ಹುಟ್ಟುಹಾಕಿದ್ದರು. ಕೃಷಿ ವಿಸ್ತರಣಾ ಚಟುವಟಿಕೆ ಅದರ ಮೂಲ ಉದ್ದೇಶವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳ ವಿಸ್ತರಣೆ ನಿಂತು ಹೋಗಿದೆ. ಕೇವಲ ಸಹಾಯಧನ ವಿತರಣೆಗಷ್ಟೇ ಕೃಷಿ ಇಲಾಖೆ ಸೀಮಿತವಾಗುತ್ತಿದೆ. ಇದರಿಂದ ಧೀರ್ಘ ಕಾಲದ ಪರಿಹಾರ ಸಿಗುವುದಿಲ್ಲ. ತಾತ್ಕಾಲಿಕವಾದ ಚಪ್ಪಾಳೆಯನ್ನಷ್ಟೇ ಗಿಟ್ಟಿಸಬಹುದು ಎಂದರು.‘ಸರ್ಕಾರ ಕೃಷಿ ಕ್ಷೇತ್ರದಲ್ಲಿ ಸುಸ್ಥಿರತೆ ತರಲು ದೂರದೃಷ್ಟಿ ಆಲೋಚನೆ ಮಾಡುತ್ತಿದೆ. ರೈತರನ್ನು ಸ್ವಾವಲಂಬಿಗಳಾನ್ನಾಗಿಸುವುದು ನಮ್ಮ ಉದ್ದೇಶ. ಸದಾ ಕಾಲ ಸರ್ಕಾರದ ಸವಲತ್ತಿಗೆ ಅರ್ಜಿ ಹಾಕಿಕೊಂಡು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ಗೌರವದ ವಿಷಯವೂ ಅಲ್ಲ. ಕಾಫಿ ಉದ್ಯಮದ ಪರಿಸ್ಥಿತಿಯೂ ಭಿನ್ನವೇನಲ್ಲ. ನಮ್ಮ ದೇಶದಲ್ಲೇ ಕಾಫಿಗೆ ಉತ್ತಮ ಮಾರುಕಟ್ಟೆ ಇಲ್ಲದಿರುವ ಕಾರಣ ಬೇರೆ ದೇಶ ಅವಲಂಬಿಸಬೇಕಾಗಿದೆ. ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಉತ್ತಮ ಗುಣಮಟ್ಟದ ಕಾಫಿ ಸಿಗುವುದಿಲ್ಲ. ಇನ್ನೂ ಉತ್ತರ ಭಾರತದಲ್ಲಿ ಕಾಫಿಗೆ ಒಳ್ಳೆಯ ಮಾರುಕಟ್ಟೆ ಕಲ್ಪಿಸಿಲ್ಲ. ಈ ಕೆಲಸ ಮೊದಲು ಆಗಬೇಕಿದೆ. ನಮ್ಮ ದೇಶದ ಎಲ್ಲ ಭಾಗಕ್ಕೂ ಕಾಫಿ ಪರಿಚಯಿಸಬೇಕಿದೆ’ ಎಂದರು.ಈ ನಡುವೆ ರಾಜ್ಯ ಸರ್ಕಾರ ಕೃಷಿಕರಿಗೆ ಹಲವು ರೀತಿಯ ನೆರವು ನೀಡುತ್ತಿದೆ. ರೂ.5000­ಗಿಂತಲೂ ಹೆಚ್ಚಿನ ಸಹಾಯ ಧನ ಇನ್ನು ಮುಂದೆ ನೇರವಾಗಿ ರೈತರ ಖಾತೆಗೆ ಜಮೆ ಮಾಡಲು ತೀರ್ಮಾನಿಸಲಾಗಿದೆ. 1600 ಬೆಲೆಯಲ್ಲಿ ಭತ್ತವನ್ನು ಸರ್ಕಾರ ಖರೀದಿಸುತ್ತಿದೆ. ಈ ಸಲುವಾಗಿ ಹಲವೆಡೆ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಕಾಫಿ ಬೆಳೆಗಾರರೂ, ದಾನಿಗಳು ಆದ ಗೌರಮ್ಮ ಬಸವೇಗೌಡ ಸಮಾರಂಭ ಉದ್ಘಾಟಿಸಿ, ಕಾಫಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಬೇಕು. ಮುಂದಿನ ಪೀಳಿಗೆಗೆ ಕಾಫಿ ಉದ್ಯಮದಲ್ಲಿ ತೊಡಗುವಂತೆ ಉತ್ತೇಜನ ನೀಡಬೇಕು ಎಂದರು.ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ರೈತ ಪರವಾದ ಕೃಷಿ ನೀತಿಯನ್ನು ರಾಜ್ಯ ಸರ್ಕಾರ ಶೀಘ್ರ ಜಾರಿಗೆ ತರಬೇಕು. ಕೃಷಿಯಿಂದ ಬೇಸತ್ತು ಪಟ್ಟಣ ಸೇರಿರುವ ಯುವ ಪೀಳಿಗೆ ಹಳ್ಳಿಗಳಿಗೆ ಹಿಂತಿರುಗಬೇಕು. ಕೃಷಿ ಮತ್ತು ಕಾಫಿ ಉದ್ಯಮ  ಲಾಭದಾಯಕವಾಗಿ ಪರಿವರ್ತಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉತ್ತಮ ಕಾಫಿ ಬೆಳೆಗಾರ ಪ್ರಶಸ್ತಿಯನ್ನು ಅರೇಬಿಕಾ ವಿಭಾಗದಲ್ಲಿ ಸಕಲೇಶಪುರ ತಾಲ್ಲೂಕಿನ ವಂಚರವಳ್ಳಿಯ ಧರ್ಮರಾಜು ಹಾಗೂ ರೊಬಸ್ಟಾ ವಿಭಾಗದಲ್ಲಿ  ಮೂಡಿಗೆರೆ ತಾಲ್ಲೂಕಿನ ಹಂತೂರಿನ ವಿಶ್ವನಾಥ ಅವರಿಗೆ ನೀಡಲಾಯಿತು. ಕಾಫಿ ಬೆಳೆಗಾರ ಐ.ಕೆ.ವಸಂತೇಗೌಡ ಮಾತ­ನಾಡಿದರು. ಹೊಲದ­ಗದ್ದೆ ಗಿರೀಶ್‌ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)