ಶುಕ್ರವಾರ, ಮಾರ್ಚ್ 5, 2021
27 °C
ಆಶ್ರಯ ಯೋಜನೆ: ಮೋಸ ಹೋಗಬೇಡಿ– ಅಬ್ಬಯ್ಯ ಮನವಿ

‘ಅರ್ಜಿ’ ಸಿಕ್ಕವರಿಗೆ ‘ಮನೆ’ ಪಡೆದಷ್ಟೇ ಸಂಭ್ರಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅರ್ಜಿ’ ಸಿಕ್ಕವರಿಗೆ ‘ಮನೆ’ ಪಡೆದಷ್ಟೇ ಸಂಭ್ರಮ!

ಹುಬ್ಬಳ್ಳಿ: ‘ಇನ್ನೇನು... ಮನೆ ಸಿಕ್ಕೇ ಬಿಟ್ತು’ ಎಂಬ ಸಂತಸ­ದಲ್ಲಿದ್ದಾರೆ ‘ಆಶ್ರಯ’ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಅರ್ಜಿ ಕೈಗೆ ಸಿಕ್ಕ ನಿವೇ­ಶನರಹಿತ ಜನ!ಆದರೆ ಪಾಲಿಕೆಯ ಮೂಲಗಳ ಪ್ರಕಾರ, ಯಲ್ಲಾ­­ಪುರ ಗ್ರಾಮ ಮಂಟೂರು ರಸ್ತೆಯಲ್ಲಿರುವ 34.27 ಎಕರೆ ಪ್ರದೇಶದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಡಿ ಜಿ–2 ಪರಿ­ಕಲ್ಪನೆಯಲ್ಲಿ ನಿರ್ಮಿಸಿ ಹಂಚಿಕೆ ಮಾಡಲು ಉದ್ದೇ­ಶಿಸಿದ ಸುಮಾರು 3,000 ‘ಆಶ್ರಯ’ ಮನೆ ಯೋಜನೆ ಇನ್ನೂ ಸ್ಪಷ್ಟ ರೂಪ ಪಡೆದಿಲ್ಲ.‘ಅರ್ಜಿ ಆಹ್ವಾನಿಸಿದ ಕ್ರಮ, ಕೂಸು ಹುಟ್ಟು ಮುನ್ನ­ವೇ ಕುಲಾವಿ ಹೊಲಿಸಿದರು ಎಂಬಂತಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ!ಈ ಮಧ್ಯೆ, ಮುಂಬರುವ ಲೋಕಸಭಾ ಚುನಾ­ವಣೆ­ಯನ್ನು ಗಮನದಲ್ಲಿಟ್ಟು ‘ವಸತಿ ಯೋಜನೆ’ ಘೋಷಿಸಿ ಅರ್ಜಿ ವಿತರಿಸಲು ಆರಂಭಿಸಲಾಗಿದೆ. ಅರ್ಜಿ ಸ್ವೀಕರಿಸುವ ಅವಧಿ ಫೆ. 28ರೊಳಗೆ ಮುಗಿದು ವಾರ ಕಳೆಯುವಷ್ಟರಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ನಂತರ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದು ಇಡೀ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಖಚಿತ. ಯಾವುದೇ ಪೂರ್ವಯೋಜನೆ ಇಲ್ಲದೆ ಅರ್ಜಿ ಆಹ್ವಾನಿಸಿರುವುದು ಚುನಾವಣಾ ಸ್ಟಂಟ್‌’ ಎಂಬ ಮಾತೂ ಪಾಲಿಕೆ ಅಂಗಳದಲ್ಲಿ ಕೇಳಿಬರುತ್ತಿದೆ.‘ಶಾಸಕ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ಪಾಲಿಕೆ ಆಯುಕ್ತ, ಆಶ್ರಯ ಯೋಜನೆ ವಿಭಾಗ ಮತ್ತು ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ‘ಆಶ್ರಯ’ ಯೋಜನೆ­ಯಡಿ ಸುಮಾರು 3000 ಮನೆ ನಿರ್ಮಿಸಿ ಹಂಚಿಕೆ ಮಾಡಲು ವಸತಿರಹಿತರಿಂದ ಅರ್ಜಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಅದನ್ನು ಹೊರತುಪಡಿಸಿದರೆ, ಈ ನಿಟ್ಟಿನಲ್ಲಿ ಬೇರೆ ಯಾವುದೇ ಬೆಳವಣಿಗೆ ಆಗಿಲ್ಲ’ ಎಂದು ಪಾಲಿಕೆಯ ಅಧಿಕಾರಿಗಳೇ ಒಪ್ಪಿ­ಕೊಂಡಿದ್ದಾರೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿರುವ ಪಾಲಿಕೆಯ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ, ‘ಆಶ್ರಯ ಯೋಜನೆ­ಯಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ’ ಎಂದಷ್ಟೆ ಹೇಳಿದ್ದಾರೆ. ‘ಆಶ್ರಯ ಯೋಜನೆಯ ರೂಪುರೇಷೆ ಇನ್ನೂ ಅಂತಿಮ­­ಗೊಂಡಿಲ್ಲ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದು­ವರಿದಿದೆ. ಈ ಮಧ್ಯೆಯೇ ಅರ್ಜಿ ಆಹ್ವಾ­ನಿಸಲಾಗಿದೆ’ ಎಂದು ಪಾಲಿಕೆಯ ಕಂದಾಯ ಅಧಿ­ಕಾರಿ ಎಂ.ಬಿ. ಸಬರದ ತಿಳಿಸಿದ್ದಾರೆ.ತಲೆಯ ಮೇಲೊಂದು ಸೂರಿಗಾಗಿ ಕಾತರಿಸುವ ಬಡ­ವರ್ಗ, ಅರ್ಜಿ ಪಡೆಯುವ ಆಸೆಯಿಂದ ಬೆಳ್ಳಂ­ಬೆಳಿಗ್ಗೆ ವಲಯ ಕಚೇರಿಗಳ ಎದುರು ಜಮಾಯಿ­ಸುತ್ತಿದ್ದಾರೆ. ಅಂದಾಜು ಮೂರು ಸಾವಿರ ಮನೆ ಹಂಚಿ­ಕೆಗೆ ಅರ್ಜಿ ಆಹ್ವಾನಿಸಿದ್ದರೂ, 30 ಸಾವಿ­ರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಬಹುದು ಎನ್ನುವ ನಿರೀಕ್ಷೆ ಪಾಲಿಕೆ ಅಧಿಕಾರಿಗಳದ್ದು. ಪೂರ್ವಯೋಜನೆ ಇಲ್ಲ:‘ಆಶ್ರಯ ಮನೆ ಯೋಜನೆ ಮೂಲಕ ತಲೆಯ ಮೇಲೊಂದು ಸೂರು ಕಲ್ಪಿಸಿ­ಕೊಳ್ಳಬೇಕೆಂಬ ಆಸೆಯಿಂದ ಅರ್ಜಿ ಪಡೆಯಲು ವಲಯ ಕಚೇರಿಗಳ ಎದುರು ಸಾಲುಗಟ್ಟಿ ನಿಂತವರನ್ನು ಕಂಡಾಗ ಮನಸ್ಸು ಕರಗುತ್ತದೆ. ಆಶ್ರಯ ಮನೆಗಾಗಿ ಈ ಹಿಂದೆ ಸಾವಿರಾರು ಮಂದಿ ಸಲ್ಲಿಸಿದ ಅರ್ಜಿಗಳು ಪಾಲಿಕೆ ಕಚೇರಿಯಲ್ಲಿವೆ. ಯಾವುದೇ ಪೂರ್ವ­ಯೋಜನೆ ಇಲ್ಲದೆ ಅರ್ಜಿ ಆಹ್ವಾನಿಸಿ, ಜನರಿಗೆ ಮಂಕುಬೂದಿ ಎರಚುವುದು ಸರಿಯಲ್ಲ’ ಎಂದು ಪಾಲಿಕೆ ಚುನಾಯಿತ ಸದಸ್ಯ ಅಲ್ತಾಫ್‌ ಕಿತ್ತೂರ ಪ್ರತಿಕ್ರಿಯಿಸಿದ್ದಾರೆ.ಮೋಸ ಹೋಗಬೇಡಿ: ಶಾಸಕ ಅಬ್ಬಯ್ಯ

‘ವಸತಿರಹಿತ ಮನೆ ಒದಗಿಸುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ವಲಯ ಕಚೇರಿ ನಂ. 8,9,10,11ರಲ್ಲಿ ಉಚಿತವಾಗಿ ವಿತ­ರಿಸ­ಲಾಗುತ್ತಿದೆ. ಪಾಲಿಕೆ ವೆಬ್‌ಸೈಟ್‌ನಿಂದಲೂ ಅರ್ಜಿ ಪಡೆದು ಸಲ್ಲಿಸಬಹುದು. ಜನರು ಕಳೆದ ನಾಲ್ಕು ದಿನ­ಗಳಿಂದ ಹಗಲಿರುಳು ಸರದಿಯಲ್ಲಿ ನಿಂತು ಅರ್ಜಿ ಪಡೆ­­ಯುತ್ತಿದ್ದಾರೆ. ಅಮಾ­ಯಕರನ್ನು ಗುರಿಯಾಗಿ­ಸಿ­ಕೊಂಡು ಅರ್ಜಿಗಳನ್ನು ಮನಬಂದಂತೆ ಹಣಕ್ಕೆ ಮಾರಾಟ ಮಾಡು­ತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಮೋಸಗಾರರಿಗೆ ಅವಕಾಶ ನೀಡಬಾರದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.