ಭಾನುವಾರ, ಜನವರಿ 19, 2020
25 °C

‘ಕನ್ನಡದಲ್ಲಿ ಅನುವಾದಕರ ಕೊರತೆ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ಕೂಡ ಕನ್ನಡ ಭಾಷೆಯು ಅನುವಾದಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಡಾ.ಸಿ. ನಾಗಣ್ಣ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಾಂಡವಪುರ ವಿಜ್ಞಾನ ಕೇಂದ್ರ  ಇವುಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಜ್ಞಾನ ಕವನ ವಾಚನ ಗೋಷ್ಠಿ’ ಹಾಗೂ ಲೇಖಕಿ ಡಿ. ಫಾತಿಮಾ ಅನುವಾದಿಸಿರುವ ‘ಭಾವಸ್ಪಂದನ ಗೀತಾಂಜಲಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ಸರ್ವ ಸಮರ್ಪಣೆಯ ಗೀತಾಂಜಲಿ: ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕೃತಿಯನ್ನು ಇದುವರೆಗೂ 12ಜನ ಕನ್ನಡಕ್ಕೆ ಅನುವಾದ ಮಾಡಿದ್ದರು. ಈಗ ಲೇಖಕಿ ಡಿ. ಫಾತಿಮಾ ಅವರು ‘ಭಾವಸ್ಪಂದನ ಗೀತಾಂಜಲಿ’ ಎಂಬ ಹೆಸರಿನಲ್ಲಿ ಈ ಕೃತಿಯನ್ನು ಸಮರ್ಥವಾಗಿ ಅನುವಾದಿಸಿ 13ನೇಯವರಾಗಿದ್ದಾರೆ.ಸರ್ವ ಸಮರ್ಪಣೆಯು ಠಾಕೂರರ ಗೀತಾಂಜಲಿಯ ಜೀವಾಳವಾಗಿ,  ಜೀವ ಮತ್ತು ದೇವರ ಸಂಬಂಧವಾಗಿದೆ. ಗೀತಾಂಜಲಿಯ ಪದ್ಯವನ್ನು ಓದಿದ ಯಾರೇ ನಾಸ್ತಿಕರಾಗಿ ಉಳಿಯುವುದಿಲ್ಲ. ಮನುಷ್ಯನ ದೈನಂದಿನ ಹೋರಾಟದಲ್ಲಿ ಹಣ ಮಾಡುವುದು ಮತ್ತು ರಾಜಕಾರಣದಲ್ಲಿ ತೊಡಗುವುದು ನಮ್ಮ ಪ್ರಮುಖ ಕಾಳಜಿಗಳಾಗಿರುವ ಇಂದಿನ ಹೊತ್ತಿನಲ್ಲಿ ಗೀತಾಂಜಲಿ ಚಿತ್ತ ಶಾಂತಿಯನ್ನು ದಯಪಾಲಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭವನ್ನು ಉದ್ಪಾಟಿಸಿದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಜನಸಮುದಾಯದ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುವುದರ ಜತೆಗೆ ಜನಶಕ್ತಿಯನ್ನು ಹುಟ್ಟುಹಾಕುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಸಾಹಿತ್ಯ ಎಲ್ಲ ಆವರಿಸಿಕೊಂಡಿರುವ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕಾಗಿದೆ ಎಂದರು.ನಿವೃತ್ತಿ ಜಂಟಿ ನಿರ್ದೇಶಕ ಎನ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಿ. ಫಾತಿಮಾ, ಉಪನ್ಯಾಸಕ ಡಾ.ನಾಗಚಾರಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ.ಕೃಷ್ಣೇಗೌಡ, ಅವಿನಾಶ್ ಪ್ರಸಾದ್, ತಾಕಸಾಪ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಾರ್ಯದರ್ಶಿ ಚಂದ್ರಶೇಖರಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

ನಂತರ ನಡೆದ ವಿಜ್ಞಾನ ಕವಿ ಗೋಷ್ಠಿಯಲ್ಲಿ ಸುಮಾರು 20್ ಕ್ಕೂ ಹೆಚ್ಚು ಕವಿಗಳು ಕವನಗನ್ನು ವಾಚಿಸಿದರು.

ಪ್ರತಿಕ್ರಿಯಿಸಿ (+)