ಬುಧವಾರ, ಮಾರ್ಚ್ 3, 2021
23 °C

‘ಕಲಬೆರಕೆ’ ಮದ್ಯಸಂಹಿತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಲಬೆರಕೆ’ ಮದ್ಯಸಂಹಿತೆ!

‘ಕುಡಿಯದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂದುಕೊಂಡಿರುವ ಜನರಿದ್ದಾರೆ. ಅವರನ್ನು ‘ಜವಾಬ್ದಾರಿಯುತ ಕುಡುಕ’ರನ್ನಾಗಿ ಮಾಡುವ ಪ್ರಯತ್ನ ಚಿತ್ರದ್ದು’ ಎಂದರು ನಿರ್ದೇಶಕ ಮಧು ದಿವಾಕರ್‌.ಕಲಬೆರಕೆ ಇಲ್ಲದ ವಸ್ತು ಇಲ್ಲ ಎನ್ನುವುದು ಅವರ ನಂಬಿಕೆ. ಅದರಲ್ಲಿಯೂ ಕಲಬೆರಕೆಯಿಲ್ಲದ ಕುಡಿತವೇ ಇಲ್ಲ. ಅವರ ‘ಕಲಬೆರಕೆ’ ಚಿತ್ರದ ವಸ್ತುವೂ ಕುಡಿತ. ಆದರಿಲ್ಲಿ ದಿವಾಕರ್‌ ಕುಡಿತದ ಕಲಬೆರಕೆಯನ್ನು ಮಾತ್ರ ಹೇಳುತ್ತಿಲ್ಲ. ಕುಡುಕರ ವೈವಿಧ್ಯಮಯ ವ್ಯಕ್ತಿತ್ವಗಳ ಕಲಬೆರಕೆಯನ್ನೂ ಹೇಳುತ್ತಿದ್ದಾರೆ. ಅದರ ಮೂಲಕ ಪರಿಣಾಮಕಾರಿ ಸಂದೇಶ ಸಾರುವ ಬಯಕೆ ಅವರದು. ಅನೇಕ ವೈದ್ಯರು, ಮನೋವಿಜ್ಞಾನಿಗಳು, ಕುಡುಕರು, ಮದ್ಯಪಾನ ವ್ಯಸನಮುಕ್ತ ಕೇಂದ್ರಗಳು ಹೀಗೆ ನಾನಾಕಡೆ ಓಡಾಟ ನಡೆಸಿ, ತಜ್ಞರನ್ನು ಸಂಪರ್ಕಿಸಿ ಅಧ್ಯಯನ ನಡೆಸಿದ್ದಾರೆ ನಿರ್ದೇಶಕರು.‘ಮಠ’ ಗುರುಪ್ರಸಾದ್‌ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿರುವ ಅನುಭವ ಇರುವ ಮಧು ದಿವಾಕರ್‌ ಅವರದು ನಿರ್ದೇಶಕರಾಗಿ ಇದು ಮೊದಲ ಸ್ವತಂತ್ರ ಸಿನಿಮಾ. ಮದ್ಯಪಾನ ವ್ಯಸನಮುಕ್ತ ಕೇಂದ್ರಕ್ಕೆ ಬರುವ 30 ಕುಡುಕರನ್ನು, ಅವರ ಕುಡಿತಕ್ಕೆ ಕಾರಣ, ಅವರ ತೊಳಲಾಟಗಳು ಇತ್ಯಾದಿ ಗಂಭೀರ ಸಂಗತಿಗಳನ್ನು ನವಿರು ಹಾಸ್ಯದ ಮೂಲಕ ಕಟ್ಟಿಕೊಡುವುದು ಅವರ ಉದ್ದೇಶ. ಕುಡಿತದ ಬಗ್ಗೆ ಸಂದೇಶ ಸಾರುವ ‘90’ ಎಂಬ ಚಿತ್ರ ಬಂದಿತ್ತು.ನಿಮ್ಮ ಚಿತ್ರದಲ್ಲಿ ಅದಕ್ಕಿಂತ ವಿಭಿನ್ನವಾದ್ದು ಏನಿದೆ? ಎಂಬ ಪ್ರಶ್ನೆಗೆ ಅವರ ಉತ್ತರ, ‘ಅದು ನೈಂಟಿ, ಇದು ಫುಲ್‌ ಬಾಟಲ್‌!’ ಸಮಾಜದಲ್ಲಿನ ಹೊಣೆಗಾರಿಕೆಗಳನ್ನು ನೆನಪಿಸುವುದರ ಮೂಲಕ ಅವರನ್ನು ‘ಜವಾಬ್ದಾರಿಯುತ ಕುಡುಕ’ರನ್ನಾಗಿಸುವುದು ನಿರ್ದೇಶಕರ ಗುರಿ. ಚಿತ್ರದ ನಾಯಕ ಅನಿರುದ್ಧ ಅವರದು ಕುಡಿತದ ವಿರುದ್ಧ ಜಾಗೃತಿ ಮೂಡಿಸುವ ಪಾತ್ರ. ಗಂಭೀರ ವಸ್ತುವನ್ನು ಮನರಂಜನೆಗಾಗಿ ಹಾಸ್ಯ, ರೊಮ್ಯಾನ್ಸ್‌, ಒಳ್ಳೆಯ ಹಾಡುಗಳು, ಮನಸಿಗೆ ತಟ್ಟುವ ಸನ್ನಿವೇಶಗಳೊಂದಿಗೆ ಪೋಣಿಸಲಾಗಿದೆ ಎಂದರು.ಸಂಗೀತ ನಿರ್ದೇಶಕ ಕೀರ್ತಿ ಜೈನ್‌, ಬಹುರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ. ಬಿಡುವಿನ ವೇಳೆಯಲ್ಲಿ ಸಂಗೀತ ಹೊಸೆದು ಆಲ್ಬಮ್‌ಗಳನ್ನು ಹೊರತರುತ್ತಿದ್ದ ಅವರಿಗೆ ‘ಕಲಬೆರಕೆ’ಗೆ ಮಟ್ಟು ಹಾಕುವ ಅವಕಾಶ ಅನಿರೀಕ್ಷಿತವಾಗಿ ಒಲಿದಿದೆ. ಐದು ವೈವಿಧ್ಯಮಯ ಹಾಡುಗಳನ್ನು ನೀಡಿದ ಖುಷಿ ಅವರಲ್ಲಿತ್ತು. ತಂತ್ರಜ್ಞರೇ ಒಂದಷ್ಟು ಮಂದಿ ಸೇರಿಕೊಂಡು ಬಂಡವಾಳ ಹೂಡಿ ಸಿನಿಮಾ ಮಾಡುತ್ತಿದ್ದರು. ಸಿನಿಮಾ ನಿರ್ಮಾಣ ಕಷ್ಟದಲ್ಲಿದ್ದಾಗ ಶ್ರೀಧರ್‌ ಎಂಬುವವರು ಚಿತ್ರತಂಡದ ಕೈಹಿಡಿದು ಬಂಡವಾಳ ಹೂಡಿದರು.ನಟ ಮನಮೋಹನ್‌ ರೈ, ಸಹನಿರ್ದೇಶಕ ಸೂರ್ಯಕಾಂತ್‌, ನೃತ್ಯನಿರ್ದೇಶಕ ಸದಾ ಇದ್ದರು. ನಾಯಕಿಯರಾದ ಸಂಜನಾ ಪ್ರಕಾಶ್‌ , ಶ್ರೀಮಾಯಾ ಸುದ್ದಿಗೋಷ್ಠಿ ಮುಗಿದ ಬಳಿಕ ಮುಖದರ್ಶನ ಮಾಡಿಸಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.