ಬುಧವಾರ, ಜೂನ್ 23, 2021
24 °C
ಡಿವೈಎಫ್ಐ ಮುಖಂಡರ ಟೀಕೆ

‘ಕಾಂಗ್ರೆಸ್‌, ಬಿಜೆಪಿ ಒಂದೇ ನಾಣ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಎರಡೂ ಪಕ್ಷಗಳ ನಾಯಕರಿಂದ ಜನಸಾಮಾನ್ಯರ ಸಮಸ್ಯೆ­ಗಳನ್ನು ಬಗೆಹರಿಸಲು ಇಂದಿಗೂ ಸಾಧ್ಯ­ವಾಗಿಲ್ಲ ಎಂದು ಡಿವೈಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಬಿ.ರಾಜ­ಶೇಖರಮೂರ್ತಿ ಆರೋಪಿಸಿದರು.



ನಗರದಲ್ಲಿ ಶುಕ್ರವಾರ ‘ನಾವೆಲ್ಲ ಚೆನ್ನಾಗಿರಲು.....ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್‌’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ  ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರ­ವಾಗಿದೆ. ಬಡವರ ಮತ್ತು ಜನ­ಸಾಮಾನ್ಯರ ಜೀವನಮಟ್ಟ ಸುಧಾರಿ­ಸು­ವಲ್ಲಿ ಎರಡೂ ಒಕ್ಕೂಟಗಳು  ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



ಸಮರ್ಥ ಮತ್ತು ಸುಭದ್ರ ಆಡಳಿತ ನೀಡುವಲ್ಲಿ ವಿಫಲವಾಗಿರುವ ಯುಪಿಎ ನೇತೃತ್ವದ ಕೇಂದ್ರ ಸರ್ಕಾರವು ಕೋಟ್ಯಂತರ ರೂಪಾಯಿ ಮೌಲ್ಯದ ಭ್ರಷ್ಟಾಚಾರದ ಆರೋಪ ಎದುರಿಸು­ತ್ತಿದೆ. ಎನ್‌ಡಿಎ ಮೈತ್ರಿಕೂಟದ ಅಧಿ­ಕಾರದ ಅವಧಿ­ಯಲ್ಲಿ ಯಾವುದೇ ಜನಪರ, ಉಪ­ಯುಕ್ತ ಯೋಜನೆ­ಗಳನ್ನು ಜಾರಿಗೊಳಿಸ­ಲಿಲ್ಲ ಎಂದು ಟೀಕಿಸಿದರು.



ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ. ನಿರುದ್ಯೋಗ, ಇತರ ಸಮಸ್ಯೆಗಳಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ಕರೆತಂದು ಜೀವನ ಸುಧಾರಿಸಲು ಸಹ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.



ದೇಶ ಎದುರಿಸುತ್ತಿರುವ ಹಲ ಗಂಭೀರ ಸಮಸ್ಯೆಗಳನ್ನು ಮರೆಮಾಚಿ, ಎಲ್ಲವೂ ಚೆನ್ನಾಗಿದೆ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ದೇಶದಲ್ಲಿ ವಾಸ­ವಿರುವ ಜನರ ಸ್ಥಿತಿಗತಿ ಬಗ್ಗೆ ನಾಯಕರು ಗಮನಹರಿಸುತ್ತಿಲ್ಲ ಎಂದು ದೂರಿದರು.



‘ನಾವೆಲ್ಲ ಚೆನ್ನಾಗಿ­ರಲು.....­ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್‌’ ಎಂಬ ಪುಸ್ತಕವನ್ನು 10 ಲಕ್ಷ ಪ್ರತಿ ಮುದ್ರಿಸಲಾಗಿದೆ. ಇದರ ದರ ₨ 10 ನಿಗದಿಗೊಳಿಸಲಾಗಿದೆ. ಸೂಕ್ತ ಅಭ್ಯರ್ಥಿ ಆಯ್ಕೆಗಾಗಿ ಪ್ರಚಾರ ಮಾಡಲಾಗು­ವುದು. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ­ದಿಂದ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜಿ.ವಿ.ಶ್ರೀರಾಮರೆಡ್ಡಿ ಪರವಾಗಿ ಪ್ರಚಾರ ಕೈಗೊಳ್ಳ­ಲಾಗುವುದು ಎಂದರು.

ಇದಕ್ಕೂ ಮುನ್ನ ನೀರಾವರಿ ತಜ್ಞ ಜಿ.ಎಸ್‌.ಪರಮಶಿವಯ್ಯ ಭಾವ­ಚಿತ್ರಕ್ಕೆ ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.



ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯ­ದರ್ಶಿ ಶಿವಪ್ಪ, ಮುಖಂಡರಾದ ದೇವರಾಜ್, ರಾಜ್ಯ ಸಮಿತಿ ಮುಖಂಡ ಕೃಷ್ಣಾರೆಡ್ಡಿ, ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ  ಹೇಮಚಂದ್ರ,­ಕಾರ್ಯದರ್ಶಿ ಜಬೀವುಲ್ಲಾ,  ಶಿಡ್ಲ­ಘಟ್ಟದ ಸದನಂದ, ಚಿಂತಾಮಣಿಯ ನರಸಿಂಹಯ್ಯ, ಪೈಯಾಜ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.