ಭಾನುವಾರ, ಮಾರ್ಚ್ 7, 2021
20 °C
ಸಾಮಗ್ರಿ ಸಾಗಿಸುತ್ತಿದ್ದ ವಾಹನ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

‘ಕಾವಾ’ ಸ್ಥಳಾಂತರಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾವಾ’ ಸ್ಥಳಾಂತರಕ್ಕೆ ವಿರೋಧ

ಮೈಸೂರು: ಇಲ್ಲಿನ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜನ್ನು (ಕಾವಾ) ಬನ್ನೂರು ರಸ್ತೆಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಪರಿಕರಗಳನ್ನು ಸಾಗಣೆ ಮಾಡುತ್ತಿದ್ದ ವಾಹನ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.ಪಾರಂಪರಿಕ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಪರಿಣಾಮ ಬನ್ನೂರು ರಸ್ತೆಯ ಜರ್ಮನ್‌ ಪ್ರೆಸ್‌ ಬಳಿ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೂತನ ಕಟ್ಟಡದಲ್ಲಿ ಕಾಲೇಜು ಆರಂಭಿಸುವ ಸಿದ್ಧತೆ ನಡೆದಿದೆ. ಜೂನ್‌ 15ರಿಂದಲೇ ಕೆಲ ಉಪನ್ಯಾಸಕರು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ, ಕಟ್ಟಡದಲ್ಲಿದ್ದ ಸಾಮಗ್ರಿಗಳನ್ನು ಸಾಗಿಲು ಮಹಾನಗರ ಪಾಲಿಕೆಯ ವಾಹನ ಗುರುವಾರ ಬೆಳಿಗ್ಗೆ ಕಾವಾ ಆವರಣಕ್ಕೆ ಬಂತು. ಇದನ್ನು ಕಂಡ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದರು.ನಗರದ ಹೊರಭಾಗಕ್ಕೆ ಕಾಲೇಜು ಸ್ಥಳಾಂತರಿಸುವ ಪ್ರಯತ್ನವನ್ನು ನಾಲ್ಕು ವರ್ಷದಿಂದ ವಿರೋಧಿಸುತ್ತಿದ್ದೇವೆ. ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗಾಳಿಗೆ ತೂರಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಅಲ್ಲದೇ, ನೂತನ ಕಟ್ಟಡದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಆಸೀನರಾಗಲು ಕುರ್ಚಿ ಕೂಡ ಈ ಕಟ್ಟಡದಲ್ಲಿ ಇಲ್ಲ. ಚಿತ್ರಕಲೆಗೆ ಅಗತ್ಯವಾದ ಸಾಮಗ್ರಿಗಳಿಗೆ ನಗರಕ್ಕೆ ಬರಬೇಕು. ದೂರದ ಊರಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೂ ಅನಾನುಕೂಲವಾಗುತ್ತದೆ. ಹೀಗಾಗಿ, ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಇದೇ ಕಟ್ಟಡದಲ್ಲಿ ಕಾಲೇಜು ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಬಿಎಫ್‌ಎ ಮತ್ತು ಎಂಎಫ್‌ಎ ವಿಭಾಗ ಸೇರಿದಂತೆ ಕಾವಾದಲ್ಲಿ 350ಕ್ಕೂ ವಿದ್ಯಾರ್ಥಿಗಳಿದ್ದೇವೆ. ಕಲೆಗೆ ಬೇಕಾದ ಪರಿಕಲ್ಪನೆಗಳು ಇಲ್ಲಿ ಲಭ್ಯವಾಗುತ್ತವೆ. ಮಾರುಕಟ್ಟೆ, ಜನಜೀವನ, ಬಸ್‌ ನಿಲ್ದಾಣ, ಜನಸಂದಣಿಯಂತಹ ಅನುಭವಗಳು ಇಲ್ಲಿ ಸಿಗುತ್ತವೆ.ಈ ಅನುಭವಗಳೇ ಕಲೆ ರೂಪಿಸಲು ಪ್ರೇರಣೆ ನೀಡುತ್ತವೆ. ಕಲಾವಿದ ಜನರಲ್ಲಿ ಒಬ್ಬರಾಗಿ ಬೆರೆತರೆ ಮಾತ್ರ ಕಲೆ ಸೃಷ್ಟಿಸಲು ಸಾಧ್ಯ. ಯಾವುದೇ ಮುನ್ಸೂಚನೆ ನೀಡದೇ ಸ್ಥಳಾಂತರಕ್ಕೆ ಮುಂದಾಗಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.