ಸೋಮವಾರ, ಜನವರಿ 27, 2020
17 °C

‘ಕಾವ್ಯಶ್ರೀ’ಯಲ್ಲಿ ಮೇಳಕರ್ತ ರಾಗ ಪ್ರಯೋಗ

–ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಶಾಸ್ತ್ರೀಯ ಸಂಗೀತಕ್ಕೂ, ಸಾಹಿತ್ಯಕ್ಕೂ ಅನನ್ಯ ನಂಟು. ಕನ್ನಡ ಸಾಹಿತ್ಯ, ಆಂಗ್ಲ ಭಾಷಾ ಸಾಹಿತ್ಯ, ಹಿಂದಿ ಸಾಹಿತ್ಯ... ಹೀಗೆ ಎಲ್ಲವೂ ಸಂಗೀತದೊಂದಿಗೆ ಸಂಬಂಧ ಬೆಸೆದಿವೆ. ಈ ಸಂಬಂಧವನ್ನು ಪ್ರಯೋಗಕ್ಕೆ ಒಳಪಡಿಸಿದರೆ ಈ ಸಂಬಂಧ ಗಟ್ಟಿಯಾಗಿ ಬೆಸೆಯುತ್ತದೆ. ಈ ನಿಟ್ಟಿನಲ್ಲಿ ರವೀಂದ್ರನಾಥ ಟ್ಯಾಗೋರರ ಸಾಹಿತ್ಯ, ಬಿಎಂಶ್ರೀ ಅವರ ಕಾವ್ಯ, ಶೇಕ್ಸ್‌ಪಿಯರ್‌ ಸಾಹಿತ್ಯ, ಹಿಂದಿ ಕಥೆಗಾರ ಪ್ರೇಮ್‌ಚಂದ್‌ ಅವರ ಸಾಹಿತ್ಯ ರಚನೆಗಳೊಂದಿಗೆ ಸಂಗೀತದ ಕಂಪನ್ನು ಬೆಸೆದವರು ವಿದುಷಿ ಸುಕನ್ಯಾ ವಿಜಯಕುಮಾರ್‌. ಇವರು ಲಕ್ಕಸಂದ್ರದಲ್ಲಿ ‘ಕಾವ್ಯಶ್ರೀ ಸಂಗೀತ ಪಾಠ ಶಾಲೆ’ ನಡೆಸುತ್ತಿದ್ದು, ಇಲ್ಲಿ ಸಾಹಿತ್ಯ- ಸಂಗೀತದ ಸಂಗಮವನ್ನು ಕಾಣಬಹುದು.ಕಾವ್ಯಶ್ರೀ ಸಂಗೀತ ಪಾಠ ಶಾಲೆ ಕಳೆದ 30 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣೆ, ಗಿಟಾರ್‌, ಪಿಯಾನೊಗಳ ಜತೆಗೆ ಪಾಶ್ಚಾತ್ಯ ಸಂಗೀತವನ್ನೂ ಹೇಳಿಕೊಡುತ್ತಾ ಬಂದಿದೆ. ಆರರಿಂದ 60 ವರ್ಷದವರೆಗಿನ ಸುಮಾರು 60ಕ್ಕೂ ಹೆಚ್ಚು ಶಿಷ್ಯಂದಿರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಪ್ರತ್ಯೇಕ ಪಾಠ ಮತ್ತು ಗುಂಪಿನಲ್ಲಿ ಪಾಠ ಎರಡೂ ಇಲ್ಲಿ ಲಭ್ಯ. ಶಾಲಾ ಮಕ್ಕಳಲ್ಲದೆ ಗೃಹಿಣಿಯರು, ಎಂಜಿನಿಯರ್‌, ವೈದ್ಯರು ಮುಂತಾದ ವೃತ್ತಿಪರರೂ ಇಲ್ಲಿ ಸಂಗೀತ, ವಾದ್ಯ ಸಂಗೀತ ಕಲಿಯುತ್ತಿದ್ದಾರೆ. ಐಎಎಸ್‌ ಅಧಿಕಾರಿ ರಶ್ಮಿ, ಐಪಿಎಸ್‌ ಅಧಿಕಾರಿ ಸುಮನಾ ಪಟೇಲ್‌ ಅವರೂ ಇಲ್ಲಿನ ಶಿಷ್ಯವರ್ಗದಲ್ಲಿ ಸೇರಿದ್ದಾರೆ.ಇಲ್ಲಿ ಕಲಿತ ಅನೇಕ ಮಕ್ಕಳು ಸಂಗೀತದ ಜೂನಿಯರ್‌, ಸೀನಿಯರ್‌ ಗ್ರೇಡ್‌ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಪಾಸಾಗಿದ್ದಾರೆ. ದೂರದರ್ಶನ, ಆಕಾಶವಾಣಿಯಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ, ಶಾಲಾ ಕಾಲೇಜುಗಳಲ್ಲಿ, ವಿವಿಧ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಲ್ಲಿ, ವಿವಿಧ ಉತ್ಸವಗಳ ವೇದಿಕೆಗಳಲ್ಲಿ ಹಾಡಿ ಕೇಳುಗರ ಮೆಚ್ಚುಗೆ ಪಡೆದಿದ್ದಾರೆ.ಹಿರಿಯ ಸಂಗೀತ ವಿದ್ಯಾರ್ಥಿನಿಯರಾದ ಸ್ನೇಹಲತಾ, ಶೈಲಜಾ, ನಾರಾಯಣಿ ಭಟ್‌, ಚಿರಾಗ್‌, ಸುಷ್ಮಿತಾ, ತೇಜಶ್ರೀ ಮುಂತಾದವರು ವಿವಿಧ ವೇದಿಕೆಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ‘ಶಾಸ್ತ್ರೀಯ ಸಂಗೀತ ಕಲಿಯದೇ ಇದ್ದವರಿಗೂ ಮೇಳಕರ್ತ ರಾಗಗಳ ಪರಿಚಯ ಆಗಲಿ ಎಂಬ ಉದ್ದೇಶದಿಂದ ಎಲ್ಲ ಮೇಳಕರ್ತ ರಾಗಗಳ ಮೇಲೆ ಪ್ರಯೋಗ ಮಾಡಿದ್ದೇನೆ. ಇದನ್ನೇ ಸಂಗೀತ ಶಿಬಿರಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಮಕ್ಕಳಿಗೆ ಹೇಳಿಕೊಡುತ್ತಿದ್ದೇನೆ’ ಎಂದು ಹೇಳುತ್ತಾರೆ ವಿದುಷಿ ಸುಕನ್ಯಾ.ಬಹುಮುಖ ಪ್ರತಿಭೆ

ಸುಕನ್ಯಾ ವಿಜಯಕುಮಾರ್‌ ಮೈಸೂರು ವಿವಿಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ, ಬೆಂಗಳೂರು ವಿವಿಯಿಂದ ಕರ್ನಾಟಕ ಸಂಗೀತದಲ್ಲಿ ಎಂ.ಎ ಪದವಿ ಪಡೆದವರು. ಜತೆಗೆ ಹಿಂದಿಯಲ್ಲಿ ಪ್ರವೀಣ್‌ ಹಾಗೂ ಬಿ.ಎಡ್‌. ಪದವಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಗಮಕ ಪಾರೀಣ ಪದವಿಯನ್ನೂ ಪಡೆದಿದ್ದಾರೆ. ಮೂಲತಃ ಮೈಸೂರಿನವರಾದ ಇವರು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಜಯಮ್ಮ ಪಾರ್ಥಸಾರಥಿ ಅವರ ಬಳಿ ಮತ್ತು ವೀಣೆಯನ್ನು ವಿದುಷಿ ಸುಕನ್ಯಾ ಅವರ ಬಳಿ ಕಲಿತವರು.

ಸುಗಮ ಸಂಗೀತವನ್ನು ಎಚ್‌.ಆರ್‌. ಲೀಲಾವತಿ ಅವರ ಬಳಿ, ಗಮಕವನ್ನು ವಸಂತಲಕ್ಷ್ಮಿ ಸೀತಾರಾಮಯ್ಯ ಅವರ ಬಳಿ ಮತ್ತು ಪಾಶ್ಚಾತ್ಯ ಸಂಗೀತವನ್ನು ಮರ್ವಿನ್‌ ಮಿನೇಜಸ್‌ ಅವರ ಬಳಿ ಕಲಿತರು. ಗಾಯನದ ಜತೆಗೆ ವೀಣೆ, ಗಿಟಾರ್‌, ಪಿಯಾನೊಗಳನ್ನೂ ನುಡಿಸುತ್ತಾರೆ. ಪಾಶ್ವಾತ್ಯ ಸಂಗೀತವನ್ನೂ ಹವ್ಯಾಸಕ್ಕಾಗಿ ಕಲಿತಿರುವ ಈ ವಿದುಷಿ ಈ ಎಲ್ಲವನ್ನೂ ಮಕ್ಕಳಿಗೆ ಕಲಿಸುತ್ತಾರೆ.ನಾಡಿನಾದ್ಯಂತ ಹಲವಾರು ಸಂಗೀತ ಕಛೇರಿಗಳನ್ನು ನೀಡಿರುವ ಈ ವಿದುಷಿಗೆ ಉತ್ತಮ ಗಮಕ ವಾಚನಕ್ಕಾಗಿ ‘ಕಾವ್ಯವಾಚನ ರತ್ನ’ ಬಿರುದು ಬಂದಿದೆ. ಹಳೆಗನ್ನಡ ಶಾಸನಗಳು ಎಂಬ ಸಾಕ್ಷ್ಯಚಿತ್ರಕ್ಕೆ ಸಂಗೀತ ನಿರ್ದೇಶನ, ಹಾಡುಗಾರಿಕೆ ಮತ್ತು ಅಭಿನಯ ಮಾಡಿದ ಅನುಭವ ಇವರಿಗಿದೆ. ಅನೇಕ ಧ್ವನಿಸುರುಳಿಗಳನ್ನೂ ಹೊರತಂದಿದ್ದಾರೆ. ‘ಕರ್ನಾಟಕ ಸಂಗೀತ ಜೂನಿಯರ್‌ ಗ್ರೇಡ್‌ ಪಠ್ಯಗಳು’, ಇಂಗ್ಲಿಷ್‌ ಪಾಪ್‌ ಮೆಲೊಡೀಸ್‌ನ ‘ವೈಬ್ರೇಷನ್‌’, ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’, ಬಿಎಂಶ್ರೀ ಅವರ ಇಂಗ್ಲಿಷ್‌ ಗೀತೆಗಳು ಮತ್ತು ಗಮಕ ಕಲೆ ಎಂಬ ಸೀಡಿಗಳು ಸಂಗೀತಪ್ರಿಯರ ಮೆಚ್ಚುಗೆ ಗಳಿಸಿವೆ.ಮೇಳಕರ್ತ ರಾಗಗಳ ಪ್ರಯೋಗ

ಕರ್ನಾಟಕ ಸಂಗೀತದಲ್ಲಿ ಮೇಳಕರ್ತ ರಾಗಗಳ ಪಾತ್ರ ಬಹಳ ಮಹತ್ವದ್ದು. ಈ ರಾಗಗಳಿಗೆ ಜನಕ ರಾಗ, ಸಂಪೂರ್ಣ ರಾಗ ಎಂಬ ಹೆಸರುಗಳೂ ಇವೆ. ಸಂಗೀತ ವಿದ್ವಾಂಸ ವೆಂಕಟಮಖಿ ಈ ಮೇಳಕರ್ತ ರಾಗಗಳ ಪ್ರವರ್ತಕರು. ಒಟ್ಟು 72 ಮೇಳಕರ್ತ ರಾಗಗಳಿದ್ದು ಈ ಜನಕ ರಾಗಗಳಿಂದಲೇ ಸಾವಿರಾರು ಜನ್ಯರಾಗಗಳು ಹುಟ್ಟಿಕೊಂಡಿವೆ. ಒಟ್ಟು 72 ಸಂಪೂರ್ಣ ರಾಗಗಳಲ್ಲಿ ಎಲ್ಲ ರಾಗಗಳನ್ನು ಬಳಸಿ ಹಾಡುವುದು ಬಹಳ ಕಡಿಮೆ. ಹೀಗಾಗಿ ಕೆಲವು ಮೇಳಕರ್ತ ರಾಗಗಳು ಪ್ರಚಲಿತದಲ್ಲಿರದೆ ಅವುಗಳ ಬಳಕೆಯೂ ಇಲ್ಲದೆ ಮಕ್ಕಳಿಗೆ ಇವುಗಳ ಜ್ಞಾನ ಸಿಗದೇ ಹೋಗುತ್ತದೆ.ಹೆಚ್ಚಾಗಿ ಪ್ರಚಲಿತದಲ್ಲಿರದೇ ಇರುವ ಕನಕಾಂಗಿ (ಒಂದನೇ ಮೇಳಕರ್ತ ರಾಗ), ಹೇಮಾವತಿ (58ನೇ ಮೇಳಕರ್ತ), ಚಿತ್ರಾಂಬರಿ (66ನೇ ಮೇಳಕರ್ತ ರಾಗ) ಮತ್ತು ರಸಿಕಪ್ರಿಯ (72ನೇ ಮೇಳಕರ್ತ ರಾಗ)ಗಳನ್ನು ಬಿಎಂಶ್ರೀ ಗೀತೆಗಳಿಗೆ ಸಂಯೋಜಿಸಿ ಇವರು ಹಾಡಿದ್ದಾರೆ. ಶೇಕ್ಸ್‌ಪಿಯರ್‌ ಅವರ ‘ಅಂಡರ್‌ ದಿ ಗ್ರೀನ್‌ ವುಡ್‌ ಟ್ರೀ’ ಸಂಕಲನದ ಹಾಡುಗಳಿಗೂ ಮೇಳಕರ್ತ ರಾಗಗಳನ್ನು ಸಂಯೋಜಿಸಿದ್ದಾರೆ. ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’ ಕವನ ಸಂಕಲನದ ಹಾಡುಗಳಿಗೂ ಮೇಳಕರ್ತ ರಾಗಗಳನ್ನು ಅಳವಡಿಸಲಾಗಿದೆ. ಒಟ್ಟು10 ಕನ್ನಡ ಹಾಗೂ 10 ಇಂಗ್ಲಿಷ್‌ ಹಾಡುಗಳಿಗೆ ಮೇಳಕರ್ತ ರಾಗಗಳನ್ನು ಸಂಯೋಜಿಸಿ ಹಾಡಿದ್ದು ಇವರ ಸಾಧನೆ.‘ಈ ಎಲ್ಲ ಸಂಗೀತವನ್ನು ಸೀಡಿ ರೂಪದಲ್ಲಿ ಹೊರತಂದು ಎಲ್ಲ ಸಂಗೀತ ಶಾಲೆಗಳಿಗೆ ತಲುಪಿಸಿದ್ದೇನೆ. ಹಾಗೆಯೇ ಸಂಚಿ ಹೊನ್ನಮ್ಮ ಅವರ ‘ಹದಿಬದೆಯ ಧರ್ಮ’ದ ಕಾವ್ಯಕ್ಕೆ ಗಮಕ ಶೈಲಿಯನ್ನು ಅಳವಡಿಸಿ ಹಾಡಿದ್ದೇನೆ. ಹರಿಹರನ್‌ ರಗಳೆಯಲ್ಲಿರುವ ‘ತಿರುನೀಲಕಂಠ ರಗಳೆ’ ಯನ್ನೂ ಮೇಳಕರ್ತ ರಾಗ ಬಳಸಿ ರಗಳೆ ಶೈಲಿಯಲ್ಲಿ ಹಾಡಿದ ಸೀಡಿಯನ್ನೂ ಹೊರತಂದಿದ್ದೇನೆ. ಎಲ್ಲ 72 ರಾಗಗಳೂ ಬಳಕೆಗೆ ಬರಬೇಕು. ಅದಕ್ಕೆ ಭಾವಗೀತೆ, ಶಾಸ್ತ್ರೀಯ ಸಂಗೀತ, ಗಮಕ ಶೈಲಿಗೆ ಅಳವಡಿಸಿ ಮಕ್ಕಳಿಗೆ ಸಿಗಲಿ ಎಂದು ಪ್ರಯೋಗ ಮಾಡಿದ್ದೀನಿ’ ಎಂದು ವಿವರಿಸುತ್ತಾರೆ ಅವರು. ಇವೆಲ್ಲದರ ಜತೆಗೆ ಸಾಯಿಬಾಬ ಜೀವನ ಚರಿತ್ರೆ ಪುಸ್ತಕ ಮತ್ತು ಪ್ರೇಮ್‌ಚಂದ್‌ ಅವರ ಸಣ್ಣಕತೆಗಳಲ್ಲಿ 21 ಸಣ್ಣಕತೆಗಳನ್ನು ಭಾಷಾಂತರ ಮಾಡಿದ ಪುಸ್ತಕವನ್ನೂ ಹೊರತಂದಿದ್ದಾರೆ.

ಚಿರಾಗ್‌ ಗಿಟಾರ್‌ ಗೀಳು

ಕಳೆದ ವರ್ಷ ನನ್ನ ಶಾಲೆಯಲ್ಲಿ ವಾರ್ಷಿಕೋತ್ಸವ ಇತ್ತು. ಆಗ ಒಬ್ಬ ವಿದ್ಯಾರ್ಥಿ ಅಲ್ಲಿ ಗಿಟಾರ್‌ ನುಡಿಸಿದ. ಅದರ ನಾದ ಬಹುವಾಗಿ ನನ್ನನ್ನು ಸೆಳೆಯಿತು. ಹೀಗಾಗಿ ನಾನೂ ಗಿಟಾರ್‌ ಕಲಿಯಬೇಕು ಎಂಬ ಆಸೆಯಿಂದ ಗುರು ಸುಕನ್ಯಾ ಅವರ ಬಳಿ ಹೋದೆ. ಅವರ ಗಿಟಾರ್‌ ನುಡಿಸಾಣಿಕೆ ನೋಡಿ, ಕೇಳಿ ಬಹಳ ಆನಂದಪಟ್ಟೆ. ಅಂದಿನಿಂದಲೇ ಅವರ ಬಳಿ ಗಿಟಾರ್‌ ಕ್ಲಾಸ್‌ಗೆ ಸೇರಿದೆ. ಕಳೆದ ಆರು ತಿಂಗಳಿನಿಂದ ನಾನು ಕಾವ್ಯಶ್ರೀ ಸಂಗೀತ ಶಾಲೆಯಲ್ಲಿ ಗಿಟಾರ್‌ ಕಲಿಯುತ್ತಿದ್ದೇನೆ.ಇದೀಗ ಪಿಯುಸಿಯಲ್ಲಿ ಓದುತ್ತಿದ್ದು, ನನ್ನ ತಂದೆ ಭೀಮೇಶ್‌ ಮತ್ತು ತಾಯಿ ನಿರ್ಮಲಾ ಬಹಳ ಪ್ರೋತ್ಸಾಹ ಕೊಡುತ್ತಾರೆ. ಆರು ತಿಂಗಳಿನಲ್ಲಿ ಒಟ್ಟು 12 ಹಾಡುಗಳನ್ನು ನುಡಿಸಲು ಕಲಿತೆ. ಇನ್ನೂ ಹೆಚ್ಚು ಕಲಿಯುವ ಮಹತ್ವಾಕಾಂಕ್ಷೆ ನನಗಿದೆ.

–-ಚಿರಾಗ್‌.

ಸೌಹಾರ್ದ ಸಂಬಂಧ

ಗುರು-ಶಿಷ್ಯ ಸಂಬಂಧ ಉತ್ತಮವಾಗಿರಬೇಕು, ಸ್ನೇಹಯುತ ಸಂಬಂಧವಿದ್ದು, ಗುರು ಸಂಗೀತ ಕಲಿಸುವಾಗ ವಿದ್ಯಾರ್ಥಿಯೊಂದಿಗೆ ತಾಳ್ಮೆ, ಸಹನೆಯಿಂದ ವರ್ತಿಸಿ ಸೌಹಾರ್ದಯುತ ವಾತಾವರಣ ಇರುವ ಹಾಗೆ ಮಾಡಬೇಕು. ಈ ಎಲ್ಲ ಗುಣಗಳನ್ನು ಹೊಂದಿರುವ ನನ್ನ ಗುರು ಸುಕನ್ಯಾ ವಿಜಯಕುಮಾರ್‌ ನಿಜವಾಗಿ ಒಬ್ಬ ಆದರ್ಶ ಸಂಗೀತ ಶಿಕ್ಷಕಿ ಎಂದು ನಾನು ಭಾವಿಸುತ್ತೇನೆ.

ಅವರ ಎಲ್ಲ ಶಿಷ್ಯರನ್ನೂ ಸಮಾನವಾಗಿ ಕಂಡು ಸಂಗೀತ ಕಲಿಸುವ ರೀತಿ ಕೂಡ ಅನನ್ಯವಾದ್ದದ್ದು. ಹೀಗಾಗಿ ಕಾವ್ಯಶ್ರೀ ಸಂಗೀತ ಶಾಲೆಗೆ ಸೇರಿದ ಮಕ್ಕಳು ಮಧ್ಯದಲ್ಲೇ ಪಾಠ ತಪ್ಪಿಸುವುದು, ಚಕ್ಕರ್‌ ಕೊಡುವುದು ಮಾಡುವುದೇ ಇಲ್ಲ. ಇಲ್ಲಿ ಗುಣಮಟ್ಟದ ಸಂಗೀತ ಶಿಕ್ಷಣ ಸಿಗುತ್ತದೆ. ಮಕ್ಕಳ ಬುದ್ಧಿಮತ್ತೆಯನ್ನು ಆಧರಿಸಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತವೋ, ಸುಗಮ ಸಂಗೀತವೋ, ಗಮಕವೋ, ಪಾಶ್ಚಾತ್ಯ ಸಂಗೀತವೋ ಎಂಬುದನ್ನು ಗುರುವೇ ನಿರ್ಧರಿಸುತ್ತಾರೆ. ಈ ಪದ್ಧತಿ ಕೂಡ ವಿಶಿಷ್ಟವಾದದ್ದೇ ಎನ್ನಬಹುದು.

-ನಾರಾಯಣಿ ಭಟ್‌.

ಮಾದರಿ ಪ್ರಯೋಗ

ಕಳೆದ ಮೂರು ವರ್ಷಗಳಿಂದ ಕಾವ್ಯಶ್ರೀ ಸಂಗೀತ ಶಾಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ ನಾನು ಸದ್ಯ ನಮ್ಮ ಗುರು ಸುಕನ್ಯಾ ಅವರ ಬಳಿ ಗಮಕ ವಾಚನವನ್ನೂ ಕಲಿಯಲಾರಂಭಿಸಿದ್ದೇನೆ. ಹಾಡುಗಾರಿಕೆಯಲ್ಲದೆ ವೀಣೆ, ಕೀಬೋರ್ಡ್‌, ಗಿಟಾರ್‌, ಗಮಕ, ಪಾಶ್ಚಾತ್ಯ ಸಂಗೀತಗಳಲ್ಲೂ ಪರಿಣತಿ ಸಾಧಿಸಿರುವ ನಮ್ಮ ಗುರು ಬಹುಮುಖ ಪ್ರತಿಭೆಯುಳ್ಳವರು.

ಅವರ ಪಾಠ ಕ್ರಮವೂ ನನಗೆ ತುಂಬ ಇಷ್ಟ. ಎಲ್ಲ ಮಕ್ಕಳನ್ನು ಪ್ರೀತಿಯಿಂದ ಕಾಣುವ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ರೀತಿ ಕೂಡ ಎಲ್ಲರನ್ನು ಸೆಳೆಯುತ್ತದೆ. ಸಂಗೀತದ ಜೂನಿಯರ್‌ ಪರೀಕ್ಷೆ ಪಾಸಾಗಿರುವ ನಾನು ಸದ್ಯ ಸೀನಿಯರ್‌ ಪಠ್ಯ ಅಭ್ಯಾಸ ಮಾಡುತ್ತಿರುವೆ.

–ತೇಜಶ್ರೀ ವಿ.

ವಿಳಾಸ: ವಿದುಷಿ ಎಂ.ವಿ. ಸುಕನ್ಯಾ ವಿಜಯಕುಮಾರ್‌, ಕಾವ್ಯಶ್ರೀ ಸಂಗೀತ ಪಾಠ ಶಾಲೆ, ನಂ. 52, ಒಂದನೇ ಅಡ್ಡರಸ್ತೆ, ಲಕ್ಕಸಂದ್ರ, ಬೆಂಗಳೂರು- 30.

ಫೋನ್‌: 9611525942 .

ಪ್ರತಿಕ್ರಿಯಿಸಿ (+)