ಗುರುವಾರ , ಜನವರಿ 30, 2020
19 °C

‘ಕ್ರಿಸ್ತಕಾವ್ಯ’ ನೃತ್ಯರೂಪಕ ನಡೆಸದಂತೆ ಬೆದರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಭಾನುವಾರ ಸಂಜೆ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ನಡೆಯಬೇಕಿದ್ದ ಕೆ.ಎಸ್‌.ಪವಿತ್ರಾ ಅವರ ‘ಕ್ರಿಸ್ತಕಾವ್ಯ’ ನೃತ್ಯ ರೂಪಕವನ್ನು ಕೆಲ ಬಲಪಂಥೀಯ ಸಂಘಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.ಶಿವಮೊಗ್ಗದ ಶ್ರೀ ವಿಜಯ ಕಲಾನಿಕೇತನ ಹಾಗೂ ಧಾರವಾಡದ ಇಂಟ್ಯಾಕ್‌ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಎರಡು ದಿನಗಳ ಹಿಂದೆ ಆಯೋಜಕರಿಗೆ ಕರೆ ಮಾಡಿದ ಕೆಲವರು, ಬಲಪಂಥೀಯ ಸಂಘಟನೆಯೊಂದರ ಹೆಸರು ಹೇಳಿ, ‘ಕ್ರಿಸ್ತಕಾವ್ಯ ನೃತ್ಯ ಮಾಡಿದರೆ ರಂಗಮಂದಿರದ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬೆದರಿಕೆ ಒಡ್ಡಿದ್ದರಿಂದ ಬೇಸರಗೊಂಡ ಆಯೋಜಕರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.‘ನಾವು ಅವರಿಗೆ ಹೆದರಿ ಈ ಕಾರ್ಯಕ್ರಮ ರದ್ದುಗೊಳಿಸುತ್ತಿಲ್ಲ. ಆದರೆ, ಅವರ ಬೆದರಿಕೆಯನ್ನು ಖಂಡಿಸುವುದಕ್ಕಾಗಿ ಈ ನಿರ್ಣಯ ಕೈಗೊಂಡಿದ್ದೇವೆ. ಇದರಲ್ಲಿ ಕ್ರಿಸ್ತನ ಜೀವನಕ್ಕಿಂತ ಒಟ್ಟಾರೆ ಮಾನವ ಧರ್ಮ, ಮೌಲ್ಯದ ಕುರಿತು ವಿವರಣೆಯಿತ್ತು. ಡಾ. ದ.ರಾ.ಬೇಂದ್ರೆ, ಡಾ.ಚನ್ನವೀರ ಕಣವಿ ಸೇರಿದಂತೆ ಹಲವು ಕನ್ನಡ ಕವಿಗಳ ಕವಿತೆಗಳನ್ನೇ ಬಳಸಿಕೊಂಡಿದ್ದೆವು. ಆದರೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಬೇಸರ ತಂದಿದೆ’ ಎಂದು ಆಯೋಜಕರು ಹೇಳಿದ್ದಾರೆ.ಈ ನೃತ್ಯ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಇಂಟ್ಯಾಕ್‌ ಸಂಸ್ಥೆಯ ಧಾರವಾಡ ಘಟಕದ ಸಂಯೋಜಕ ಎನ್‌.ಪಿ.ಭಟ್‌, ‘ಕಲೆಯು ಜಾತಿ, ಭಾಷೆ, ಧರ್ಮಗಳ ಎಲ್ಲೆಯನ್ನೂ ಮೀರಿರುತ್ತದೆ. ಆದರೆ, ಈ ನೃತ್ಯಕ್ಕೆ ಪ್ರತಿರೋಧ ಒಡ್ಡಿದವರ ಮನಸ್ಥಿತಿಯನ್ನು ಕಂಡು ಬೇಸರವಾಗಿದೆ. ಇದು ಸಾಂಸ್ಕೃತಿಕ ನಗರಿ ಧಾರವಾಡಕ್ಕೆ ಶೋಭೆ ತರುವ ಸಂಗತಿಯಲ್ಲ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)