ಶನಿವಾರ, ಜನವರಿ 25, 2020
29 °C

‘ಡಿಸಿ ಹಠಾವೊ, ದಲಿತ್‌ ಬಚಾವೊ’ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಗದ್ಯಾಳದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ನಾಲ್ಕು ತಿಂಗಳಾದರೂ ಇದುವರೆಗೆ ಗ್ರಾಮಕ್ಕೆ ಭೇಟಿ ನೀಡಿ, ನೈಜ ಸ್ಥಿತಿ ಅರಿಯದೇ ದಲಿತ ವಿರೋಧ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ವಿರುದ್ಧ ‘ಡಿಸಿ ಹಠಾವೊ, ದಲಿತ್‌ ಬಚಾವೊ’ ಹೋರಾಟ ನಡೆಸಲಾಗು­ವುದು ಎಂದು ದಲಿತ ಮುಖಂಡ ಪರಶುರಾಮ ಮಹಾರಾಜನ್ನವರ ತಿಳಿಸಿದರು.ಜಿಲ್ಲಾಧಿಕಾರಿಗಳು ಕೇವಲ ಸವರ್ಣೀಯರ ಅಭಿಪ್ರಾಯ ಮತ್ತು ತಾಲ್ಲೂಕು ಅಧಿಕಾರಿಗಳು ನೀಡಿದ ವರದಿ ಆಧರಿಸಿ ಸಾಮಾಜಿಕ ಬಹಿಷ್ಕಾರ ನಡೆದಿಲ್ಲ ಎಂಬ ಏಕ ಪಕ್ಷೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಜಿಲ್ಲಾಧಿಕಾರಿಯವರು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ದಲಿತರ ನೋವು ಆಲಿಸಬೇಕು, ಅನ್ಯಾಯಕ್ಕೆ ಒಳಗಾದ­ವರಿಗೆ ಸೂಕ್ತ ನ್ಯಾಯ ಕೊಡಿಸಬೇಕು ಇಲ್ಲವಾದರೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು.ಬಹಿಷ್ಕಾರ ಪ್ರಕರಣದಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಿಲ್ಲಾಧಿಕಾರಿ ಹವಣಿಸುತ್ತಿದ್ದಾರೆ.  ಅವರ ಮೇಲೆ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಪ್ರಭಾವ ಬೀರುತ್ತಿದ್ದಾರೆ ಎಂದು ದೂರಿದರು.ಗದ್ಯಾಳದಲ್ಲಿ ಸಾಮಾಜಿಕ ಬಹಿಷ್ಕಾರ ನಡೆದಿಲ್ಲ ಎಂದಾದರೆ ತಹಶೀಲ್ದಾರ್‌ ಅವರು ಏಕೆ ದಲಿತರಿಗೆ ಪ್ರತ್ಯೇಕ ಜೋಳ ಒಡೆಯುವ ಯಂತ್ರ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಹಿಷ್ಕಾರ ನಡೆದಿರುವುದಕ್ಕೆ ಜಿಲ್ಲಾಡಳಿತಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದರು.ಸಾಮಾಜಿಕ ಬಹಿಷ್ಕಾರ ನಡೆದಿರುವ ಬಗ್ಗೆ ಇದುವರೆಗೂ ದೂರು ದಾಖಲಾ­ಗಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ನೆಪ ಹೇಳುತ್ತಿ­ದ್ದಾರೆ. ದಲಿತರು ದೂರು ನೀಡಲು ಹೋದಾಗ ಅಧಿಕಾರಿಗಳು ನಿರಾಕರಿಸಿದ್ದಾರೆ. ಪೊಲೀಸರು ಸುಳ್ಳು ಕಾಳಜಿ ವ್ಯಕ್ತಪಡಿಸು­ತ್ತಿದ್ದಾರೆ. ಪ್ರಕರಣವನ್ನು ತಿರುಚಲು ಪೊಲೀಸರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.ಸಚಿವರ ಮನೆ ಎದುರು ಧರಣಿ: ಬಹಿಷ್ಕಾರಕ್ಕೆ ಒಳಗಾಗಿರುವ ದಲಿತರಿಗೆ ಮುಂದಿನ ಸೋಮವಾರದ ಒಳಗಾಗಿ  ರಕ್ಷಣೆ, ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.ಪಾಟೀಲ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಅಹಿಂದ ಮುಖವಾಡ ಹೊತ್ತು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗತೊಡಗಿವೆ ಎಂದು ಆರೋಪಿಸಿದರು.ಸ್ವಾಮೀಜಿ ಖಂಡನೆ: ಗದ್ಯಾಳ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ನಾಲ್ಕು ತಿಂಗಳಾದರೂ ಪ್ರಕರಣವನ್ನು ಇತ್ಯಾರ್ಥ ಪಡಿಸದೇ ಇರುವ ಜಿಲ್ಲಾಡಳಿತದ ನಡೆಯನ್ನು  ಚಿತ್ರದುರ್ಗದ ಛಲವಾದಿ ಸಂಸ್ಥಾನಮಠದ ಬಸವನಾಗಿದೇವ ಸ್ವಾಮೀಜಿ ತೀವ್ರವಾಗಿ ಖಂಡಿಸಿದರು.ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನೊಂದಿರುವ ದಲಿತರಿಗೆ ನ್ಯಾಯ ಒದಗಸಿಬೇಕು ಇಲ್ಲವಾದರೆ ಮಠದ ವತಿಯಿಂದ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ದಲಿತರು ಮತ್ತು ಸವರ್ಣೀಯ­ರನ್ನು ಮುಖಾಮುಖಿ ಸೇರಿಸಿ ಶಾಂತಿ ಸಭೆ ನಡೆಸಬೇಕು, ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥಪಡಿಸ­ಬೇಕು ಎಂದರು.ಗದ್ಯಾಳದಲ್ಲಿ ದಲಿತರು ಮತ್ತು ವಿವಿಧ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಅಥವಾ ಸಮಸ್ಯೆಗಳಿ­ದ್ದರೆ ಮಾತುಕತೆ ಮೂಲಕ ಅಥವಾ ಕಾನೂನಾತ್ಮಕವಾಗಿ ಬಗೆಹರಿಸಿ­ಕೊಳ್ಳಬಹುದಿತ್ತು. ಅಂಬೇಡ್ಕರ್‌ ಭಾವಚಿತ್ರಕ್ಕೆ ರಾಡಿ ಬಡಿದು ಅವಮಾನ ಮಾಡುವ ಅಗತ್ಯವಿರಲಿಲ್ಲ ಎಂದರು.ದಲಿತ ಮುಖಂಡರಾದ ಸದಾಶಿವ ಕೊಡಬಾಗಿ, ತಿಪ್ಪಣ್ಣ ನೀಲನಾಯಕ, ನಾಗೇಶ ಗಚ್ಚಿನಮನಿ, ಮಹಾದೇವ ಹಾದಿಮನಿ ಮತ್ತು ಗದ್ಯಾಳ ಗ್ರಾಮದ ದಲಿತ ಮುಖಂಡರು ಪತ್ರಿಕಾಗೋಷ್ಠಿ­ಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)