ಮಂಗಳವಾರ, ಜೂನ್ 15, 2021
25 °C

‘ನೀತಿ ಸಂಹಿತೆ ಉಲ್ಲಂಘಿಸಿದರೆ ಸೂಕ್ತ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಲೋಕಸಭೆ ಸಾರ್ವತ್ರಿಕ ಚುನಾವಣೆಯ- ೨೦೧೪ರ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಜತೆಗೆ ನೀತಿ ಸಂಹಿತೆ ಉಲ್ಲಂಘಿಸಿದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಮಂಜುನಾಥ ನಾಯಕ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜರುಗಿದ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚುನಾವಣಾ ನೀತಿ ಸಂಹಿತೆ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಏಳು ತಾಲೂಕಿನಲ್ಲಿ ಪ್ರತಿಯೊಂದು ಗ್ರಾ.ಪಂ., ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ.ಚುನಾವಣೆ ವೆಚ್ಚಗಳಿಗೆ ಮತ್ತು  ಚುನಾವಣೆಗೆ ಸಂಬಂಧಪಟ್ಟ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಬಗ್ಗೆ ನಿಗಾವಹಿಸಲು ಕಣ್ಗಾವಲು ಸೆಕ್ಟರ್ ಅಧಿಕಾರಿಗಳ ತಂಡವನ್ನು ತಾಲೂಕು ಮಟ್ಟದಲ್ಲಿ ರಚಿಸಲಾಗಿದೆ ಎಂದರು.ಜಿಲ್ಲೆಯ ಪ್ರತಿಯೊಂದು ಚೆಕ್ ಪೋಸ್ಟ್‌ಗಳಲ್ಲಿ ಅನಧೀಕೃತ ವಾಹನಗಳ ಹಾಗೂ ಕಾನೂನು ಬಾಹಿರ ಸಾಗಾಣಿಕೆ ವಾಹನಗಳ ತಪಾಸಣೆ ಮಾಡಲು ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ಆದಷ್ಟು ಸಭೆ ನಡೆಸಿ ವರದಿಯನ್ನು ಚುನಾವಣೆ ಶಾಖೆಗೆ ಕಳುಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿಡಿಯೊ  ವೀಕ್ಷಣೆಗೆ ತಂಡ

ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳುವುದರಿಂದ ಆಯಾ ತಾಲ್ಲೂಕಿನ ಸಿಬ್ಬಂದಿ ವಿವರಗಳನ್ನು ಎಚ್ಆರ್ ಎಂಎಸ್‌ನಲ್ಲಿ  ಅಳವಡಿಸಬೇಕು ಎಂದರಲ್ಲದೇ, ಜಿಲ್ಲೆಯಲ್ಲಿ ಜರುಗುವ ಪ್ರತಿಯೊಂದು ರಾಜಕೀಯ ಪಕ್ಷಗಳ ಸಭೆ ಸಮಾರಂಭ ಹಾಗೂ ಇತ್ಯಾದಿ ಚಟುವಟಿಕೆಗಳ ಬಗ್ಗೆ ಚಿತ್ರೀಕರಿಸುವ ವಿಡಿಯೊ ವೀಕ್ಷಣೆಗೆ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ಎಲ್ಲಾ ಅಧಿಕಾರಿಗಳು ಲೋಕಸಭಾ ಚುನಾವಣೆ ಮುಗಿಯುವವರೆಗೆ ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದು. ಅತೀ ಅವಶ್ಯವಿದ್ದಲ್ಲಿ ಮಾತ್ರ ಜಿಲ್ಲಾ ಚುನಾವಣಾಧಿ ಕಾರಿಗಳ ಅನುಮತಿ ಪಡೆದು ತೆರಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಾಹೀರಾತು ಫಲಕ ತೆಗೆಸಿ

ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರು, ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಸರ್ಕಾರದ ಸಾಧನೆಯ ಕುರಿತು  ಹೋಲ್ಡಿಂಗ್ಸ್‌ನಲ್ಲಿ ಹಾಕಿದ ಪ್ಲೆಕ್ಸ್ ಮತ್ತು  ಬಂಟಿಂಗ್ಸ್‌ ತೆಗೆದು ಹಾಕಬೇಕೆಂದು ಸಂಬಂಧಪಟ್ಟ ಗ್ರಾ.ಪಂ. ಮತ್ತು ತಹಶೀಲ್ದಾರ್‌ಗೆ ಹಾಗೂ ಅಧಿಕಾರಿಗೆ ಸೂಚಿಸಿದರು.ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ೧೨ ಚೆಕ್ ಪೋಸ್ಟ್ ಗುರುತಿಸಲಾಗಿದ್ದು, ಅಲ್ಲಿ ೨೪ ಗಂಟೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಚುನಾವಣೆಗೆ ಅಗತ್ಯವಾದ ವಾಹನವನ್ನು ಅಧಿಕಾರಿಗಳು ಒದಗಿಸಬೇಕು. ಎಂ.ಸಿ.ಸಿ. ತಂಡದ ಸದಸ್ಯರು ಚುನಾವಣೆಯ ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಮಟ್ಟದಲ್ಲಿ  ಸಮಿತಿಗಳನ್ನು ರಚಿಸಲಾಗಿದ್ದು, ಈ ಸಾರಿ ಸ್ಥಳೀಯ ಚಾನಲ್‌ಗಳ ಮೂಲಕ ಪ್ರಚಾರ, ಕಾಲೇಜುಗಳಲ್ಲಿ ವಿಶೇಷ ಶಿಬಿರಗಳ ಆಯೋಜನೆ, ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳೊಂದಿಗೆ ಮತದಾನ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್‌ನ ಅಧ್ಯಕ್ಷ ಕೆ.ಬಿ.ಆಂಜನಪ್ಪ ತಿಳಿಸಿದರು.ಗದಗ ಜಿ.ಪಂಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರುಮರಿ, ಗದಗ   ಎಸ್‌ಪಿ ಬಾಲಕೃಷ್ಣ, ಗದಗ ಅಪರ ಜಿಲ್ಲಾಧಿಕಾರಿ ನಾಗರಾಜ ಮಾತನಾಡಿದರು. ಸಭೆಯಲ್ಲಿ ಹಾವೇರಿ ಎ.ಎಸ್.ಪಿ.ಜಗಮಯ್ಯ, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.