ಗುರುವಾರ , ಫೆಬ್ರವರಿ 25, 2021
30 °C

‘ಮಯೂರಿ’ಯ ರೂವಾರಿ

ಮಂಜುಶ್ರೀ ಎಂ.ಕಡಕೋಳ Updated:

ಅಕ್ಷರ ಗಾತ್ರ : | |

‘ಮಯೂರಿ’ಯ ರೂವಾರಿ

 * ಸಾಮಾನ್ಯ ಗೃಹಿಣಿಯಾಗಿದ್ದವರು ನೀವು, ಈ ಉದ್ಯಮಕ್ಕೆ ಬಂದದ್ದು ಹೇಗೆ?

ನಾನು ಮನಃಶಾಸ್ತ್ರ ಪದವೀಧರೆ. ಓದು ಮುಗಿದ ಬಳಿಕ ಬಹುತೇಕರಂತೆ ಮದುವೆಯಾಗಿ ಗೃಹಿಣಿಯಾಗಿದ್ದವಳು ನಾನು. ಸೀರೆಗಳೆಂದರೆ ಮೊದಲಿನಿಂದಲೂ ನನಗೆ ಪಂಚಪ್ರಾಣ. ನನ್ನ ಆಯ್ಕೆ ಚೆನ್ನಾಗಿರುತ್ತದೆ ಎಂದು ಸ್ನೇಹಿತರು ಮತ್ತು ಬಂಧು ಬಳಗದವರು ನನ್ನನ್ನು ಬಟ್ಟೆ ಆಯ್ಕೆ ಮಾಡಲು ಬಾ ಎನ್ನುತ್ತಿದ್ದರು.ಮಕ್ಕಳು ಶಾಲೆಗೆ ಹೋಗುವಷ್ಟು ದೊಡ್ಡವರಾದ ಮೇಲೆ ನನ್ನದೇ ವಿನ್ಯಾಸದ ಸೀರೆಗಳ ಸಂಗ್ರಹ ಮಾಡುವ ಆಲೋಚನೆ ಮೂಡಿತು. ಇದಕ್ಕೆ ಸ್ನೇಹಿತರು ಮತ್ತು ಕುಟುಂಬದವರ ಸಹಕಾರವೂ ದೊರೆಯಿತು. ಆರಂಭದಲ್ಲಿ ಕೇವಲ 100 ಸೀರೆಗಳನ್ನಷ್ಟೇ ರೂಪಿಸಿದ್ದೆ.

ಅದನ್ನು ತಿರುವನಂತಪುರಂನ ವಸ್ತು ಪ್ರದರ್ಶನವೊಂದರಲ್ಲಿ ಪ್ರದರ್ಶಿಸುವ ಅವಕಾಶ ದೊರೆತಿತ್ತು. ಅಲ್ಲಿ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಇದರಿಂದ ಪ್ರೇರಿತವಾಗಿ 1982ರಲ್ಲಿ ನನ್ನದೇ ಆದ ‘ಮಯೂರಿ’ ಸಂಗ್ರಹ ಆರಂಭಿಸಿದೆ. ಯಶಸ್ಸು ನನ್ನ ಕೈಹಿಡಿಯಿತು. ಈಗ ಚೆನ್ನೈನಲ್ಲಿಯೇ ‘ಮಯೂರಿ’ಯ ಎರಡು ಮಳಿಗೆಗಳಿವೆ. * ವಸ್ತ್ರವಿನ್ಯಾಸಕ್ಕೆ ಸೀರೆಯನ್ನು ಏಕೆ ಆರಿಸಿಕೊಂಡಿರಿ?

ನಾನು ಸೀರೆ ವಿನ್ಯಾಸ ಆರಂಭಿಸಿದ ದಿನಗಳಲ್ಲಿ ಸೀರೆ ವಿನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಸೀರೆ ಆಧುನಿಕತೆ ಮತ್ತು ಸೊಬಗು ಎರಡನ್ನೂ ಮೇಳೈಸಿಕೊಂಡಿರುವ ಅಪರೂಪದ ವಸ್ತ್ರ.  ಸೀರೆ ಉಡಲು ವಯಸ್ಸಿನ ಭೇದವಿಲ್ಲ.

ಭಾರತೀಯ ಮಹಿಳೆಯಾಗಿ ನನಗೆ ನಮ್ಮ ಸಾಂಪ್ರದಾಯಿಕ ಉಡುಪನ್ನು ಮತ್ತಷ್ಟು ಪ್ರವರ್ಧಮಾನಕ್ಕೆ ತರಬೇಕೆಂಬ ಆಸೆಯಿತ್ತು. ಹಾಗಾಗಿ, ಸೀರೆ ವಿನ್ಯಾಸ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಅಪರೂಪದ ವಿನ್ಯಾಸಗಳ ಸೀರೆಗಳಿಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ.* ‘ಮಯೂರಿ’ ಸಂಗ್ರಹದ ವಿಶೇಷವೇನು?

32 ವರ್ಷಗಳಿಂದ ಸೀರೆ ವಿನ್ಯಾಸ ಮಾಡುತ್ತಿದ್ದೇನೆ. ಬಣ್ಣ, ಬಟ್ಟೆ, ನೇಯ್ಗೆ ಮತ್ತು ಬಾರ್ಡರ್‌ಗಳ ಬಳಕೆಯಲ್ಲಿ ವಿನೂತನ ಪ್ರಯೋಗ ಮಾಡುತ್ತಲೇ ಬಂದಿದ್ದೇನೆ.‘ಟೈ ಅಂಡ್ ಡೈ’, ‘ಹ್ಯಾಂಡ್ ಬ್ಲಾಕ್ಸ್‌’ ಮಿಶ್ರಣ ಮಯೂರಿ ಸಂಗ್ರಹದ ವಿಶೇಷತೆ. ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಮಿಶ್ರಣವೇ ಮಯೂರಿಯ ವಿಶೇಷ ಗುರುತು. ನಾವು ನೈಸರ್ಗಿಕ ಬಟ್ಟೆಗಳನ್ನು ಮಾತ್ರ ಬಳಸುತ್ತೇವೆ. ಅನುಭವಿ ಕುಶಲಕರ್ಮಿಗಳ ಕೈಯಲ್ಲಿ ಮಯೂರಿ ಸೀರೆಗಳು ರೂಪುಗೊಳ್ಳುತ್ತವೆ.* ಸೀರೆಗಳ ವಿನ್ಯಾಸಕ್ಕೆ ಎಲ್ಲಿಂದ ಸ್ಫೂರ್ತಿ ಪಡೆಯುತ್ತೀರಿ?

ನಾನು ಯಾವಾಗಲೂ ನನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ನನ್ನ ಬಹುತೇಕ ವಿನ್ಯಾಸಗಳು ಪ್ರಕೃತಿಯಿಂದಲೇ ಪ್ರೇರಣೆ ಪಡೆದಂಥವು. ಕಲಾಕೃತಿಗಳು, ಭೂಮಿ, ಎಲೆಗಳು, ಪಕ್ಷಿಗಳಿಂದ ವರ್ಣ ಸಂಯೋಜನೆಯ ಸ್ಫೂರ್ತಿ ಪಡೆಯುತ್ತೇನೆ.  ನನ್ನ ಕನಸುಗಳಿಂದಲೂ ಎಷ್ಟೋ ಬಾರಿ  ಸ್ಫೂರ್ತಿ ಪಡೆದದ್ದೂ ಉಂಟು. ಒಬ್ಬೊಬ್ಬರ ಭಿನ್ನ ವ್ಯಕ್ತಿತ್ವದಿಂದಲೂ ಪ್ರೇರಣೆ ಪಡೆದು ವಿನ್ಯಾಸಗಳನ್ನು ರೂಪಿಸಿದ್ದೇನೆ.* ಯಶಸ್ವಿ ವಸ್ತ್ರವಿನ್ಯಾಸಕಿಯಾಗಿ ನಿಮ್ಮ ಹಾದಿ ರೂಪುಗೊಂಡ ಬಗ್ಗೆ ಹೇಳಿ?

ಸಾಂಪ್ರದಾಯಿಕ ಹಿನ್ನೆಲೆಯಿರುವ ಮಹಿಳೆಯರು ಉದ್ಯಮಿಯಾಗಿ ರೂಪುಗೊಳ್ಳುವುದು ಸುಲಭವಲ್ಲ. ಉದ್ಯೋಗ ಮತ್ತು ಕುಟುಂಬ ಎರಡನ್ನೂ ನಿಭಾಯಿಸುವುದು ಕಷ್ಟ. ಎಷ್ಟೋ ಬಾರಿ ಕಾರ್ಮಿಕರ ಸಮಸ್ಯೆಯಿಂದಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.ಆದರೆ, ಈ ವಿಷಯದಲ್ಲಿ ನಾನು ಅದೃಷ್ಟವಂತೆ. ನನ್ನ ಪತಿ ಮತ್ತು ಕುಟುಂಬದಿಂದ ನನಗೆ ಅಪಾರ ಪ್ರೋತ್ಸಾಹ ದೊರೆಯಿತು. ನನ್ನ ಇಬ್ಬರು ಹೆಣ್ಣುಮಕ್ಕಳು ಸದಾ ನೆರವಿಗಿರುತ್ತಿದ್ದರು.ನನ್ನಮ್ಮ ಮಸಾಲೆ ಪುಡಿ ಮಾಡಿ ಮಾರುತ್ತಿದ್ದರು. ಆಗೆಲ್ಲಾ ಅವರು ಕುಟುಂಬ ಮತ್ತು ಉದ್ಯಮ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಇದುವೇ ನನಗೆ ಸ್ಫೂರ್ತಿ ನೀಡಿತು. 35 ವರ್ಷಗಳಿಂದ ವಸ್ತ್ರವಿನ್ಯಾಸಕಿಯಾಗಿ ರೂಪುಗೊಂಡದ್ದರ ಹಿಂದೆ ನನ್ನ ‘ಮಯೂರಿ’ಕುಟುಂಬದ ಕಾರ್ಮಿಕರ ಶ್ರಮವಿದೆ. ಯಶಸ್ವೀ ವಸ್ತ್ರ ವಿನ್ಯಾಸಕಿಯಾಗುವ ನನ್ನ ಕನಸನ್ನು ನನಸಾಗಿಸಿದ ಕೀರ್ತಿ ಇವರೆಲ್ಲರದ್ದು.* ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌?

ಭಿನ್ನ ವ್ಯಕ್ತಿಗಳ ವ್ಯಕ್ತಿತ್ವವನ್ನು ಮನಸಿನಲ್ಲಿಟ್ಟುಕೊಂಡೇ ಪ್ರತಿ ಸೀರೆ ಮತ್ತು ವಸ್ತ್ರಗಳ ವಿನ್ಯಾಸ ರೂಪುಗೊಂಡಿರುತ್ತದೆ.  ಈ ಬಗ್ಗೆ ನಾವು ಮಾತನಾಡುವುದಕ್ಕಿಂತ ನಮ್ಮ ವಿನ್ಯಾಸಗಳೇ ಮಾತನಾಡುವಂತಾಗಬೇಕು.***

ಇಂದು ಮತ್ತು ನಾಳೆ ಪ್ರದರ್ಶನ

‘ಮಯೂರಿ’ ಸೀರೆಗಳು ಆಗಸ್ಟ್‌ 5 ಮತ್ತು 6ರಂದು ಪ್ರದರ್ಶನಕ್ಕಿವೆ. ಸ್ಥಳ: ದಿ ರೇನ್ ಟ್ರೀ, ಸ್ಯಾಂಕಿ ರಸ್ತೆ, ವಿಂಡ್ಸರ್ ಮ್ಯಾನರ್ ಹೋಟೆಲ್ ಎದುರು, ಸಮಯ: ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ. ಹೆಚ್ಚಿನ ಮಾಹಿತಿಗೆ 080–2235 4396.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.