ಶುಕ್ರವಾರ, ಮಾರ್ಚ್ 5, 2021
29 °C

‘ಮರಾಠರಿಗೆ ಮೀಸಲಾತಿ: ಹೋರಾಟ ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮರಾಠರಿಗೆ ಮೀಸಲಾತಿ: ಹೋರಾಟ ಅನಿವಾರ್ಯ’

ವಿಜಾಪುರ: ‘ಮರಾಠಾ ಸಮಾಜಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಒಟ್ಟಾಗಿ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಬೆಂಗಳೂರು ಗವಿಪುರಂನ ಗೋಸಾಯಿ ಮಠ ಭವಾನಿ ಪೀಠದ ಬುದ್ಧಿ ಯೋಗಾನಂದ ಸ್ವಾಮೀಜಿ ಹೇಳಿದರು.ಸೋಮವಾರ ಇಲ್ಲಿಯ ಮುಳ್ಳಗಸಿ ಗವಳಿಗಲ್ಲಿಯಲ್ಲಿರುವ ಸಟವಾಯಿ (ಮರಗಮ್ಮ) ದೇವಸ್ಥಾನದ ಕಳಸಾರೋಹಣ ಹಾಗೂ ನವಗ್ರಹ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.‘ಮರಾಠ ಎಂದರೆ ಮರ್‌ಹಠ್‌, ಮರಣಕ್ಕೆ ಅಂಜದವರು ಎಂದರ್ಥ. ಇಂದಿನ ಕಲಿಯುಗದಲ್ಲಿ ಇಂಥಹ ಸಮಾಜದ ಸಂಘಟನೆಗೆ ಒತ್ತು ನೀಡುವುದು ಬಹಳ ಮುಖ್ಯ. ಮರಾಠ ಸಮಾಜವನ್ನು ಒಗ್ಗೂಡಿಸಲು ಸಮಾವೇಶಗಳನ್ನು ಸಂಘಟಿಸಬೇಕು. ಈ ಸಮಾಜದ ವಿದ್ಯಾರ್ಥಿಗಳು ಐ.ಎ.ಎಸ್‌., ಐ.ಪಿ.ಎಸ್‌. ನಂತಹ ಹುದ್ದೆ ಪಡೆಯಬೇಕು. ಬಡ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯದ ಸೌಲಭ್ಯ ಕಲ್ಪಿಸಬೇಕು’ ಎಂದರು.‘ನಾವು ಶರೀರ ಧಾರಿಗಳು, ಈ ಶರೀರದಲ್ಲಿ ದೇವರು ಚೈತನ್ಯ ರೂಪದಲ್ಲಿ ಬೆಳಗುತ್ತಿದ್ದಾನೆ. ಮರಾಠ ಸಮಾಜದಲ್ಲಿ ಜನಿಸಿದ ಶಿವಾಜಿಯು ಶಿವನ ಶಕ್ತಿ ಅವತಾರಿ. ಹೀಗಾಗಿ ನೂರಾರು ಯುದ್ಧ ಮಾಡಿದರೂ ಶಿವಾಜಿಗೆ ಗಾಯಗಳಾಗಿರಲಿಲ್ಲ’ ಎಂದು ಹೇಳಿದರು.‘ಸರಸ್ವತಿ, ಲಕ್ಷ್ಮಿ, ದುರ್ಗಿ, ಭವಾನಿ, ನವದುರ್ಗೆ, ಸಟವಾಯಿ ಇವು ದೇವಿಯ ಅವತಾರಗಳು. ಪುರಾಣಕಾಲದಲ್ಲಿ ಮಹಿಷಾಸುರನಂತಹ ಅನೇಕ ರಾಕ್ಷಸರನ್ನು ಸಂಹರಿಸಿದ ದುರ್ಗೆ ಯಾವತ್ತೂ ಜೊತೆಯಾಗಿ­ರುತ್ತಾಳೆ. ಕುಲ ದೇವತೆಯಾದ ದೇವಿಯನ್ನು ಸಂಕಷ್ಟದಲ್ಲಿ ಸ್ಮರಿಸಬೇಕು’ ಎಂದು ಹೇಳಿದರು.ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಮೋಹನ ಕೋರವಾರ, ‘ಸಟವಾಯಿ ಅಂದರೆ ಏಳು ಮಕ್ಕಳ ತಾಯಿ. ನಗರದ ಮೊಹಿತೆ ಕುಟುಂಬದವರು ಹಲವು ವರ್ಷಗಳಿಂದ ಈ ದೇವಿ­ಯನ್ನು ಪೂಜಿಸುತ್ತ ಬಂದಿದ್ದಾರೆ. ಸಟವಾ­ಯಿಯ ಮಹಿಮೆ ಬಲು ದೊಡ್ಡದು’ ಎಂದರು.

ಮುಖ್ಯ ಅತಿಥಿಯಾಗಿದ್ದ ರಾಣೇಬೆನ್ನೂರಿನ ಡಾ. ಎಂ.ಸಿ. ಪುನೀತ್‌, ಶಿವಾಜಿ ಮಹಾರಾಜ್‌ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಸದಾಶಿವ ಪವಾರ ಮಾತನಾಡಿದರು.ಬುದ್ಧಿ ಯೋಗಾನಂದ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ವ್ಯವಸ್ಥಾಪಕ ಡಾ.ಪಿ.ಟಿ. ಜಾಧವ, ಖಜಾಂಚಿ ಡಾ.ರಜನಿ ಪಿ. ಜಾಧವ ಹಾಗೂ ಮರಾಠ ಸಮಾಜದ ಹಲವು ಮುಖಂಡರನ್ನು ಸನ್ಮಾನಿಸಲಾಯಿತು.ಅಖಿಲ ಭಾರತ ಮರಾಠ ಮಹಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಾರಾಮ ಗಾಯಕವಾಡ, ಪ್ರಮುಖರಾದ ಶಿವಾಜಿರಾವ್‌ ಕದಂ, ವಿಜಯಕುಮಾರ ಘಾಟಗೆ, ಶಶಿಕಾಂತ ಜಗದಾಳೆ, ಅರುಣ ವಿ.ಕದಂ, ಹರಿಭಾವು ಮೋರೆ, ಸುರೇಶ ಸಂಕಪಾಳ, ಶಿವಾಜಿ ಗಾಯಕವಾಡ, ರವೀಂದ್ರ ಭೋಸಲೆ, ಬಿ.ಆರ್‌. ಮೊಹಿತೆ, ಹಿರಿಯ ಪತ್ರಕರ್ತೆ ಮನೀಷಾ ಮೊಹಿತೆ ಮುಂತಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.