ಗುರುವಾರ , ಜನವರಿ 30, 2020
20 °C

‘ಮುಸುಕಿನ ಜೋಳ ಖರೀದಿಗೂ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಚಾಮರಾಜ ನಗರ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ, ಹನೂರು ಸೇರಿದಂತೆ ಮುಸುಕಿನ ಜೋಳ ಹೆಚ್ಚಾಗಿ ಬೆಳೆಯುವ ಸ್ಥಳಗಳಲ್ಲೂ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಭರವಸೆ ನೀಡಿದರು.ಅವರು ಸೋಮವಾರ ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ ಬತ್ತದ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ತಿಂಗಳ 4 ರಿಂದ ಖರೀದಿ ಕೇಂದ್ರಗಳು ಕೆಲಸ ಆರಂಭಿಸುತ್ತವೆ. ರೈತರು ದೃಢೀಕರಿಸಿದ ಆರ್‌ಟಿಸಿ, 50 ಕಿಲೋ ತೂಕದ ಗೋಣಿ ಚೀಲಗಳಲ್ಲಿ ಬತ್ತವನ್ನು ತುಂಬಬೇಕು . ಗೋಣಿ ಚೀಲಕ್ಕೂ ಸರ್ಕಾರದಿಂದ ನಿಗಧಿಯಾಗಿರುವ ₨ 13ಹಣವನ್ನು ನೀಡಲಾಗುವುದು. ತೇವಾಂಶ ಪರೀಕ್ಷೆಯ ಮೂಲಕ ಬತ್ತವನ್ನು ಖರೀದಿ ಮಾಡುವುದರಿಂದ ಮೊದಲೇ ಚೆನ್ನಾಗಿ ಒಣಗಿಸಿ ಇದನ್ನು ಕೇಂದ್ರಗಳಿಗೆ ತರಬೇಕು. ಖರೀದಿಗೂ ಮುನ್ನವೇ ಬಂದು ಹೆಸರು ನೋಂದಾಯಿಸಿಕೊಂಡು ಮಾಹಿತಿ ಪಡೆದುಕೊಳ್ಳಬೇಕು. ಖರೀದಿ ನಂತರ ನೇರವಾಗಿ ರೈತರ ಖಾತೆಗಳಿಗೆ ಹಣ ತಲುಪುವ ವ್ಯವಸ್ಥೆ ಮಾಡಲಾಗುವುದು ಎಂದರು.ಟಿಎಪಿಸಿಎಂಎಸ್‌ ಅಧ್ಯಕ್ಷ ಶ್ರೀಕಂಠ, ಮಾಜಿ ಅಧ್ಯಕ್ಷ ಶಾಂತರಾಜು, ಆಹಾರ ಇಲಾಖೆಯ ಉಪ ನಿರ್ದೇಶಕ ಶಂಭಯ್ಯ, ತಹಶೀಲ್ದಾರ್‌ ಮಾಳಿಗಯ್ಯ, ವ್ಯವಸ್ಥಾಪಕ ರಾಜಣ್ಣ, ಸದಸ್ಯರಾದ ವಡಗೆರೆದಾಸ್‌, ರವಿ, ಮುಖಂಡರಾದ ಮಹೇಶ್‌, ಲಿಂಗರಾಜಮೂರ್ತಿ, ವಜ್ರಮುನಿ, ಪುಟ್ಟಸುಬ್ಬಪ್ಪ, ಪ್ರಕಾಶ್‌, ಸಿದ್ದರಾಜು ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)