ಭಾನುವಾರ, ಜೂನ್ 13, 2021
21 °C

‘ವಚನ ಸಾಹಿತ್ಯ; ಗಂಭೀರ ಅಧ್ಯಯನ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ವಚನ ಸಾಹಿತ್ಯ, ದಲಿತ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯಗಳ ಹೆಸರಿನಲ್ಲಿ ಏನನ್ನಾದರೂ ಹೇಳಬಹುದು ಎಂಬ ಭ್ರಮೆ ಇಟ್ಟುಕೊಂಡು ಮಾತನಾಡುವವರ ಧೋರಣೆಗಳು ಬದಲಾಗಬೇಕು ಎಂದು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್‌.ಡಿ. ಉಮಾಶಂಕರ್ ಹೇಳಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ಕಲ್ಪತರು ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಮಾರೇನಹಳ್ಳಿ ಲೋಕೇಶ್‌ರ ‘ಲೋಕಾನುಭವ ಶತಕ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಮ್ಮತ್ತ ಸೆಳೆದುಕೊಳ್ಳುವ ಶಕ್ತಿಯಿರುವ ವಚನ, ದಲಿತ ಹಾಗೂ ಬಂಡಾಯ ಸಾಹಿತ್ಯವನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ವಚನ ಸಾಹಿತ್ಯದ ಬಗ್ಗೆ ಗಂಭೀರವಾದ ಅಧ್ಯಯನ ಮತ್ತು ವಿಮರ್ಶೆಗಳು ನಡೆಯುವ ಅಗತ್ಯವಿದೆ. ವಚನಗಳು ಸಾಮಾಜಿಕ ಸಂಬಂಧಗಳ ಮೂಲಕ ಸಮಾಜವನ್ನು ಅರ್ಥೈಸಲು ಯತ್ನಿಸಿವೆ. ಮನುಷ್ಯ–ಮನುಷ್ಯರನ್ನು ಪ್ರೀತಿಸಬೇಕೆಂದು ಅದು ಪ್ರತಿಪಾದಿಸಿದೆ. ಇಟ್ಟ ಹೆಜ್ಜೆ ಮತ್ತು ಸಾಗಬೇಕಾದ ಬದುಕಿನ ದಾರಿಯ ಪಾರದರ್ಶಕತೆಯನ್ನು ವಚನ ಸಾಹಿತ್ಯ ತೋರಿಸಿದೆ. ಮಾನವ ಧರ್ಮವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಂಸ್ಕೃತಿಯನ್ನು ಇದು ಬೆಳೆಸಿದೆ ಎಂದು ಅವರು ತಿಳಿಸಿದರು.‘ಲೋಕಾನುಭವ ಶತಕ’ ಕೃತಿಯಲ್ಲಿ ಜೀವನ ಮೌಲ್ಯಗಳು ಹೇರಳವಾಗಿವೆ. ಸಾಮಾಜಿಕ ವಸ್ತುಸ್ಥಿತಿಯ ಚಿತ್ರಣ ಕೃತಿಯಲ್ಲಿ ಅಭಿವ್ಯಕ್ತಗೊಂಡಿದೆ. ಆದರೆ, ವಚನಗಳನ್ನು ಕಟ್ಟಿಕೊಡುವ ವಚನಕಾರರ ರೀತಿ ಮತ್ತಷ್ಟು ಪಳಬೇಕಾಗಿದೆ. ಪದಗಳ ಬಳಕೆಯಲ್ಲಿ ವಚನಕಾರರು ಇನ್ನೂ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಎಂದು ತಿಳಿಸಿದರು.ಕಲ್ಪತರು ಕಾಲೇಜಿನ ಅಧ್ಯಕ್ಷ ವಿಠಲಾಪುರ ಜಯರಾಮು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್‌. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಉಪನ್ಯಾಸಕರಾದ ಡಿ.ಆರ್‌. ನಾಗೇಶ್‌, ನಂಜುಂಡಯ್ಯ, ನಾಗೇಗೌಡ, ಸಾಹಿತಿಗಳಾದ ಡಾ.ಟಿ. ನರಸಿಂಹ ರಾಜು, ಕೆ.ಜಿ. ನಾಗರಾಜು, ಕೈಗೋನಹಳ್ಳಿ ರತ್ನ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.