ಬುಧವಾರ, ಜನವರಿ 22, 2020
18 °C

‘ಶೆಲ್ ಮ್ಯಾರಥಾನ್’ಗೆ ಯುವ ವಿಜ್ಞಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈಸರ್ಗಿಕ ಇಂಧನದ ಉಳಿವು ಈಗ ಜಗತ್ತಿನ ಮುಂದಿರುವ ಅತ್ಯಂತ ದೊಡ್ಡ ಸವಾಲು. ಈ ಸವಾಲನ್ನು ಮೆಟ್ಟಿ ನಿಲ್ಲಲು ಜಗತ್ತಿನ ಬಹುತೇಕ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್‌ ಕಾಲೇಜು, ಸಂಶೋಧನಾ ಕೇಂದ್ರ, ಖಾಸಗಿ ಕಂಪೆನಿಗಳು ಟೊಂಕಕಟ್ಟಿ ನಿಂತಿವೆ. ಅಲ್ಪ ಇಂಧನದಲ್ಲಿ ಗರಿಷ್ಠ ದೂರ ಕ್ರಮಿಸುವ ವಾಹನಗಳ ಸ್ಪರ್ಧೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುತ್ತವೆ.

ಅಂಥ ಸ್ಪರ್ಧೆಗಳಲ್ಲಿ ಒಂದು ‘ಶೆಲ್ ಇಕೊ ಮ್ಯಾರಥಾನ್‌ ಏಷ್ಯಾ 2014’. 1939ರಲ್ಲಿ ವಿಜ್ಞಾನಿಗಳ ನಡುವೆ ಮೋಜಿಗಾಗಿ ಆರಂಭವಾದ ಈ ಸ್ಪರ್ಧೆ ಜಾಗತಿಕ ಮಟ್ಟದ ಮನ್ನಣೆ ಗಳಿಸಿದೆ. ಇದಕ್ಕಾಗಿ ವಿದ್ಯಾರ್ಥಿ ತಂಡಗಳು ಹಾಗೂ ಪ್ರಾಧ್ಯಾಪಕರು ಶ್ರಮಪಡುತ್ತಿದ್ದಾರೆ. ಈ ಬಾರಿ  ಸ್ಪರ್ಧೆಯನ್ನು ಫಿಲಿಪ್ಪೀನ್ಸ್ನ ಮನಿಲಾದಲ್ಲಿ ಆಯೋಜಿಸಲಾಗಿದೆ.

ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಮಿತ ಇಂಧನ ಬಳಕೆಯ ವಾಹನಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ. ಈ ಸ್ಪರ್ಧೆಯಲ್ಲಿ ಭಾರತದ 15 ವಿಶ್ವವಿದ್ಯಾಲಯಗಳ 17 ತಂಡಗಳು ತಮ್ಮ ಆವಿಷ್ಕಾರಗಳೊಂದಿಗೆ ಅಲ್ಲಿಗೆ ತೆರಳಲಿವೆ. ಇವುಗಳಲ್ಲಿ ದಕ್ಷಿಣ ಭಾರತದ ಎಂಟು ತಂಡಗಳಿಗೆ ಕೀಲಿ ಹಸ್ತಾಂತರ ಸಮಾರಂಭ ಇತ್ತೀಚೆಗೆ ನಗರದಲ್ಲಿ ನಡೆಯಿತು.ಕನಸು ಕಂಗಳನ್ನು ಹೊತ್ತ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡಗಳು ಆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದವು. ಪ್ರತಿಯೊಂದು ತಂಡದ ಆವಿಷ್ಕಾರಗಳೂ ಬಗೆಬಗೆಯದ್ದಾದರೂ ಅವುಗಳ ಧ್ಯೇಯೋದ್ದೇಶ ಇಂಧನದ ಮಿತ ಬಳಕೆ. ಈ ಸ್ಪರ್ಧೆಯಲ್ಲಿ ‘ನಗರ ವಾಹನ’ ಹಾಗೂ ‘ಮಾದರಿ ವಾಹನ’ ಎಂಬ ಎರಡು ವಿಭಾಗಗಳಿವೆ. ಅದರೊಳಗೆ ಪೆಟ್ರೋಲ್‌, ಡೀಸೆಲ್‌, ಬ್ಯಾಟರಿ ಹಾಗೂ ಜಲಜನಕದಿಂದ ಚಲಿಸುವ ವಾಹನಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ.ಈ ನಿಟ್ಟಿನಲ್ಲಿ ಹೆಚ್ಚು ದೂರ ಕ್ರಮಿಸುವ ವಾಹನಗಳ ತಯಾರಿಕೆಗಾಗಿ ಹಗುರವಾದರೂ ಗಟ್ಟಿಮುಟ್ಟಾದ ವಸ್ತುಗಳಾದ ಗ್ಲಾಸ್‌ ಫೈಬರ್‌, ಅಲ್ಯುಮಿನಿಯಂ ಇತ್ಯಾದಿ ಬಳಕೆ ಮಾಡಿದ್ದರು. ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಬ್ಯಾಟರಿ ಚಾಲಿತ ಕಾರು ಅಭಿವೃದ್ಧಿಪಡಿಸಿದರೆ, ಚೆನ್ನೈನ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳು ಬಜಾಜ್‌ ಡಿಸ್ಕವರ್‌ 135 ಸಿಸಿ ಎಂಜಿನ್‌ ಬಳಸಿ ಕಾರು ಅಭಿವೃದ್ಧಿಪಡಿಸಿದರು.

ಇದೇ ಕಾಲೇಜಿನ ಮತ್ತೊಂದು ತಂಡ ಸಿದ್ಧಪಡಿಸಿದ್ದ ಕಾರಿನಲ್ಲಿ ಹೋಂಡ ಎಂಜಿನ್‌ (80 ಸಿಸಿ ಸಾಮರ್ಥ್ಯ) ಕೂರಿಸಲಾಗಿತ್ತು. ಇದರ ಇಂಧನ ಕ್ಷಮತೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 386 ಕಿ.ಮೀ. ಎಂದರೆ ಅಚ್ಚರಿಯಾದರೂ ಸತ್ಯ. ಆದರೆ ಇದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಗ್ನೇಯ ಏಷ್ಯಾ ರಾಷ್ಟ್ರಗಳ ವಿದ್ಯಾರ್ಥಿಗಳು ಸಿದ್ಧಪಡಿಸುವ ವಾಹನಗಳ ಇಂಧನ ಕ್ಷಮತೆ ಪ್ರತಿ ಲೀಟರ್‌ಗೆ 2ರಿಂದ 4 ಸಾವಿರ ಕಿಲೋ ಮೀಟರ್‌ನಷ್ಟು ಎಂದರೆ ಭಾರತದ ವಿದ್ಯಾರ್ಥಿಗಳು ಸಾಗಬೇಕಾದ ಹಾದಿ ಇನ್ನೂ ದೂರ ಇದೆ.‘ಏಷ್ಯಾದ ಇತರ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸಿಗುವಷ್ಟು ವೇದಿಕೆಗಳು, ಅತ್ಯಾಧುನಿಕ ಸಾಧನಗಳು ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಸಿಗುತ್ತಿಲ್ಲ. ನಮ್ಮಲ್ಲಿ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವುದರಿಂದ ಇತರೆ ಚಟುವಟಿಕೆಗಳಲ್ಲಿ ಅವರು ಹಿಂದುಳಿಯುತ್ತಾರೆ. ನಮ್ಮ ಕಾಲೇಜು ಅದಕ್ಕೆ ಅಪವಾದ. ವಿದ್ಯಾರ್ಥಿಗಳು ಈವರೆಗೂ ಮಾಡಿರುವ ಸಾಧನೆ ಹಾಗೂ ಗಳಿಸಿರುವ ಮನ್ನಣೆ ತೃಪ್ತಿಕರವಾಗಿದೆ’ ಎಂದು ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನ ಫ್ಲೂಯಿಡ್‌ ಮೆಕ್ಯಾನಿಕ್ಸ್‌ ವಿಭಾಗದ ಪ್ರಾಧ್ಯಾಪಕ ಪ್ರೊ. ರವೀಂದ್ರ ಕುಲಕರ್ಣಿ ತಿಳಿಸಿದರು.‘ನೈಸರ್ಗಿಕ ಇಂಧನದ ಸಮರ್ಪಕ ಬಳಕೆ ಹಾಗೂ ಪರಿಶುದ್ಧ ವಾತಾವರಣ ಕಾಪಾಡಲು ಶೆಲ್‌ ಕೈಗೊಂಡಿರುವ ಕ್ರಮಗಳಲ್ಲಿ ಇಕೊ ಮ್ಯಾರಥಾನ್‌ ಕೂಡ ಒಂದು. ಶೆಲ್‌ನ ಜಾಗತಿಕ ಮಟ್ಟದ ಮೂರು ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳಲ್ಲಿ ಒಂದು ಬೆಂಗಳೂರಿನಲ್ಲಿ ಆರಂಭವಾಗಿದೆ. ಈ ಮೂಲಕ ಹೊಸ ತಂತ್ರಜ್ಞಾನಗಳ ಆವಿಷ್ಕಾರದಲ್ಲಿ ಶೆಲ್‌ ಸದಾ ಮುಂಚೂಣಿಯಲ್ಲಿದೆ’ ಎಂದು ಶೆಲ್‌ ಕಂಪೆನಿಯ ಮುಖ್ಯಸ್ಥೆ ಡಾ. ಯಾಸ್ಮಿನ್‌ ಹಿಲ್ಟನ್‌ ತಿಳಿಸಿದರು.ಬೆಂಗಳೂರಿನ ಆರ್‌ವಿ, ಸರ್‌ ಎಂವಿಟಿ ಸೇರಿದಂತೆ ಚೆನ್ನೈ ಹಾಗೂ ಹೈದರಾಬಾದ್‌ನ ಎಂಜಿನಿಯರಿಂಗ್‌ ಕಾಲೇಜು ತಂಡಗಳು ಈ ಇಕೊ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಪ್ರಾಯೋಜಕತ್ವದ ಜತೆಗೆ ಸ್ಪರ್ಧೆಯ ಕೀಲಿ ಪಡೆದ ತಂಡಗಳು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದವು. ಶೆಲ್‌ ಕಂಪೆನಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಕಾರುಗಳನ್ನು ಪರಿಶೀಲಿಸಿ ಉತ್ತಮಪಡಿಸಬಹುದಾದ ಇನ್ನಷ್ಟು ಸಾಧ್ಯತೆಗಳನ್ನು ವಿವರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರತಿಕ್ರಿಯಿಸಿ (+)