ಮಂಗಳವಾರ, ಮಾರ್ಚ್ 2, 2021
23 °C

‘ಸಿದ್ದರಾಮಾಯಣದಿಂದ ‘ನಮೋ’ ಭಾರತದೆಡೆಗೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿದ್ದರಾಮಾಯಣದಿಂದ ‘ನಮೋ’ ಭಾರತದೆಡೆಗೆ’

ಬೆಂಗಳೂರು: ‘ಕೆಲವು ಸಾಹಿತಿಗಳ ಚಿಂತನೆ ಸಿದ್ದ­ರಾಮಾಯಣದಿಂದ ‘ನಮೋ’ ಭಾರತದೆಡೆಗೆ ಹೊರಳುತ್ತಿದೆ. ಚುನಾವಣೆಗೆ ಮುನ್ನ ಮೋದಿ­ಯನ್ನು ವಿರೋಧಿಸುತ್ತಿದ್ದವರು ಈಗ ಮೆತ್ತಗಾಗಿ­ದ್ದಾರೆ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಟೀಕಿಸಿದರು.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯ­ಯನ ಕೇಂದ್ರವು ನಗರದಲ್ಲಿ ಸೋಮವಾರ ಆಯೋ­ಜಿ­ಸಿದ್ದ  ‘ಆಧುನಿಕ ಕನ್ನಡ ಸಾಹಿತ್ಯ ಚಳವಳಿಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಸಾಹಿತಿಗಳು ಸಮಾಜ­ದಲ್ಲಿ ಹೆಚ್ಚು ಗೊಂದಲವನ್ನು ಸೃಷ್ಟಿಸು­ತ್ತಾರೆ. ಈಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಬಹುತೇಕ ಕಲಾವಿದರು ತಮ್ಮ ದನಿಯನ್ನು  ಹಿಂದೂ­ಸ್ತಾನಿ ಸಂಗೀತಕ್ಕೆ ಮಾರ್ಪಾಡು ಮಾಡಿ­ಕೊಳ್ಳ­ಬೇಕಿದೆ’ ಎಂದು ಮಾರ್ಮಿಕವಾಗಿ ನುಡಿದರು.‘ಲೋಕಸಭಾ ಚುನಾವಣೆಯ ಫಲಿತಾಂಶ ಹಲವು ಸ್ಥಿತ್ಯಂತರಗಳನ್ನು ಹುಟ್ಟುಹಾಕಿದೆ. ವಂಶ­ಪಾರಂಪರ್ಯ ಆಡಳಿತಕ್ಕೆ ಮುಡಿಪಾಗಿದ್ದ ಕಾಂಗ್ರೆಸ್‌ ಪಕ್ಷ ನೆಲಕಚ್ಚಿದೆ. ಆದರೆ, ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದ ಕೋಮುವಾದೀಯ ಬಿಜೆಪಿ  ಬಲೆಗೆ ಸಿಲುಕಿದ್ದೇವೆ’ ಎಂದು ವಿಷಾದಿಸಿದರು.‘ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರ­ಗಳು ಸಾಹಿತ್ಯಿಕ ಚಳವಳಿಗಳನ್ನು ಹುಟ್ಟುಹಾಕುತ್ತವೆ. ಪ್ರಸ್ತುತ  ಸಾಹಿತ್ಯ ವಲಯದಲ್ಲಿ ಚಳವಳಿಗಳು ಪುನ­ಶ್ಚೇತನ­ಗೊಳ್ಳಲು ಸಕಾಲ’ ಎಂದರು.‘ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆಯಲ್ಲಿ  ಜಾತಿ ಧ್ರುವೀಕರಣ ಹೆಚ್ಚುತ್ತಿದೆ. ಸಾಹಿತ್ಯವೂ ಇದಕ್ಕೆ ಹೊರತಾಗಿ ಇಲ್ಲ. ಕನ್ನಡ ಸಾಹಿತ್ಯ ಚಳವಳಿಗಳು ರೂಪುಗೊಳ್ಳುವುದಕ್ಕೆ ಎದುರಾದ ಸಾಂದರ್ಭಿಕ ಒತ್ತಡಗಳನ್ನು ಅರಿತಾಗ ಮಾತ್ರ ಲೇಖಕರು ಹೆಚ್ಚು ಕ್ರಿಯಾಶೀಲರಾಗಬಹುದು’ ಎಂದು ಹೇಳಿದರು.ಕವಿ ಡಾ ಸಿದ್ಧಲಿಂಗಯ್ಯ, ‘ವೈಚಾರಿಕ ಮನೋ­ಭಾವ  ಹಾಗೂ ಮೊನಚಾದ ಹಾಸ್ಯವಿರುವ ಬೀಚಿಯ ವಿಡಂಬನಾತ್ಮಕ ಸಾಹಿತ್ಯವನ್ನು ಯುವ­ಜನತೆ ಹೆಚ್ಚು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.‘ದಲಿತ ಹಾಗೂ ಬಂಡಾಯ ಸಾಹಿತ್ಯ ಯಾವುದೋ ಒಂದು ಜಾತಿಗೆ ಸೀಮಿತವಾಗಿಲ್ಲ. ಇದು ಎಲ್ಲ ವರ್ಗದ ದಮನಿತರ ದನಿ’ ಎಂದು ಬಣ್ಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.