ಭಾನುವಾರ, ಜನವರಿ 19, 2020
27 °C

‘ಸಿರಿವಂತ ತತ್ವಪದ, ವಚನಗಳ ದಾಖಲೆಗೆ ಕರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ವಚನಗಳು ಮತ್ತು ತತ್ವಪದಗಳು ನವೋದಯ ಸಾಹಿತ್ಯ ಪ್ರಕಾರದ ಬೇರುಗಳಾಗಿದ್ದು, ಈ ಶ್ರೀಮಂತ ಸಾಹಿತ್ಯವನ್ನು ಕೃತಿರೂಪದಲ್ಲಿ ಹೆಚ್ಚಾಗಿ ಹೊರತರುವ ಅಗತ್ಯವಿದೆ ಎಂದು ಸಾಹಿತಿ ಡಾ. ಕೆ.ಆರ್‌. ಸಿದ್ದಗಂಗಮ್ಮಾ ಅವರು ಭಾನುವಾರ ಆಭಿಪ್ರಾಯಪಟ್ಟರು.ನಗರದ ರಂಗಮಂದಿರದಲ್ಲಿ ಅವರು ಬೀದರ್‌ ಜಿಲ್ಲಾ ದ್ವಿತೀಯ ಮಹಿಳಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದಂದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ತತ್ವಕಾರರು ಮತ್ತು ವಚನಕಾರರ ಶಕ್ತಿ ದೊಡ್ಡದು. ದೇಶಿ ಸೊಗಡನ್ನು ದಾಖಲಿಸುವ ಮೂಲಕ ಆ ಸಾಹಿತ್ಯದ ಶ್ರೀಮಂತಿಕೆ ಮತ್ತು ಬೇರು ಹೊಸ ಪೀಳಿಗೆಯನ್ನು ತಲುಪುವಂತೆ ನೋಡಿ­ಕೊಳ್ಳಬೇಕಾಗಿದೆ ಎಂದರು.ಕವನ ರಚನೆ ಭಾವನೆಗಳಿಗೆ ಪೂರಕವಾಗಿ ಇರಬೇಕು. ಕೇವಲ ಕವಿಗೋಷ್ಠಿಗೆಂದೋ, ಪ್ರಕಟಣೆ­ಗಾಗಿಯೇ ತುರ್ತಾಗಿ ಪದಗಳನ್ನು ಪೋಣಿಸುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.ಕವನಗಳ ವೈವಿಧ್ಯತೆ: ಬಳಿಕ ನಡೆದ ಕವಿಗೋಷ್ಠಿ­ಯಲ್ಲಿ 25ಕ್ಕೂ ಹೆಚ್ಚಿನ ಕವಯತ್ರಿಯರು ಕವನಗಳನ್ನು ವಾಚಿಸಿ ಗಮನಸೆಳೆದರು.

ವರದಕ್ಷಿಣೆ, ಶಿಕ್ಷಣ, ಗೆಳೆತನ, ಬಾಂಧವ್ಯದ ಜೊತೆಗೆ ಸಮಕಾಲೀನ ವಿಷಯಗಳಾದ ಶಾದಿಭಾಗ್ಯ­ವನ್ನು ಕವನದ ವಸ್ತುವಾಗಿಸಿ ವಾಚನೆ ಮಾಡಿದ್ದು ಸೆಳೆಯಿತು. ಕವನವನ್ನು ಕೆಲವರು ವಾಚಿಸಿದರೆ, ಕೆಲವರು ಓದಿದರು.ಅರುಂಧತಿ ಚಾಂದ್‌ಕವಡೆ ಅವರಿಗೆ ಹೆಣ್ಣಿನ ಕ್ಷಮಯಾಧರಿತ್ರಿ ಗುಣವೇ ಕವನದ ವಸ್ತುವಾದರೆ; ಶಾಂತಾ ಖಂಡ್ರೆ ಅವರು ‘ಹೆಣ್ಣೆ ನೀ ಹೇಡಿ­ಯಾಗಬೇಡ; ಬೆಂಕಿಯೊಳಗಿನ ಉಪ್ಪು ಸಿಡಿವಂತೆ ನೀ ಸಿಡಿದೇಳು’ ಎಂದು ಕರೆ ನೀಡಿದರು.

ಸುಮನ್‌ ಹೆಬ್ಬಾರ್‌ ಅವರು ಶಾದಿಭಾಗ್ಯವನ್ನೇ ಕವನದ ವಸ್ತುವಾಗಿಸಿ ಗಮನಸೆಳೆದರು. ‘ಜಾತಿ­ಗೊಂದು ಜಯಂತಿ, ಜಾತಿಗೊಂದು ಭಾಗ್ಯ..ಇವು ಕಾಳಸಂತೆಕೋರರಿಗೆ ಬಯಸದೇ ಬಂದ ಭಾಗ್ಯ’ ಎಂದು ವ್ಯಂಗ್ಯವಾಡುವ ಜೊತೆಗೆ,  ‘ಬೇಕಾಗಿದೆ ಉದ್ಯೋಗ ಭಾಗ್ಯ, ಶೌಚಾಲಯ ಭಾಗ್ಯ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಭಾಗ್ಯ’ ಎಂಬ ಬೇಡಿಕೆ­ಯನ್ನುಮಂಡಿಸಿದವು. ಈ ಬೇಡಿಕೆಗೆ ಚಪ್ಪಾಳೆ­ಗಳ ಅನುಮೋದನೆಯೂ ದೊರೆಯಿತು.ನೀಲಾಂಬಿಕಾ ಗುರಶೆಟ್ಟಿ ಅವರು, ‘ಸಂಬಂಧಗಳೇ ಹೀಗೆ..’ ಕವನದಲ್ಲಿ  ಅದರ ವ್ಯಾಖ್ಯಾನವನ್ನು ಕಟ್ಟಿ­ಕೊಟ್ಟರೆ, ಲಾವಣ್ಯ ಹಂಗಲಗಿ ಅವರು, ಗೆಳೆತಿಯ ಆಪ್ತತೆ­ಯನ್ನೇ ಕವನವಾಗಿಸಿದ್ದರು. ರಾಜಮ್ಮ ಚಿಕ್ಕ­ಪೇಟೆ ಅವರು ವರದಕ್ಷಿಣೆ ಸಮಸ್ಯೆಯತ್ತ ಬೆಳೆಕು ಚೆಲ್ಲಿ­ದರೆ; ಶೈಲಜಾ ದಿವಾಕರ್‌ ಅವರು, ಕನ್ನಡ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಕವನದಲ್ಲಿ ಬಣ್ಣಿಸಿದರು.ಇದೇ ಸಂದರ್ಭದಲ್ಲಿ ಶೈಲಜಾ ದಿವಾಕರ್ ಅವರ ‘ಭಾವನಾ ಹಕ್ಕಿ’ ಕವನ ಸಂಕಲದ ಬಿಡುಗಡೆಯೂ ಆಯಿತು.  ಸಾರಿಕಾ ಗಂಗಾ, ಕರುಣಾ ಸಲಗಾರ ಮೀನಾ ಬೋರಾಳಕರ ಅವರು ಕವನ ವಾಚಿಸಿದರು. ಜಗದೇವಿ ಬೋಸ್ಲೆ ಸ್ವಾಗತಿಸಿದರು. ಪ್ರತಿಭಾ ಚಾಮಾ ನಿರೂಪಿಸಿದರು. ನಿರ್ಮಲಾ ಗುತ್ತೆ ವಂದಿಸಿದರು.ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ನೀಲಾ ಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಅವರು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)