ಮಂಗಳವಾರ, ಜೂನ್ 15, 2021
24 °C

10ಕೆ ಓಟಕ್ಕೆ ಪುನೀತ್ ಸಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10ಕೆ ಓಟಕ್ಕೆ ಪುನೀತ್ ಸಾಥ್

ವೇದಿಕೆಯ ಒಂದು ಬದಿ ಡೊಳ್ಳುಕುಣಿತ, ಮತ್ತೊಂದು ಬದಿ ಕಪ್ಪು ಪರದೆ ಮೇಲೆ ವ್ಯಕ್ತಿಯ ಭಾವಚಿತ್ರ  (ಉಲ್ಟಾಪಲ್ಟಾ) ಮೂಡಿಸುತ್ತಿರುವ ಯುವಕ. ನಿಧಾನವಾಗಿ ಡೊಳ್ಳಿನ ಸದ್ದಡಗುತ್ತಲೇ ಪರದೆಯ ಮೇಲೆ ಮೂಡಿದ ವ್ಯಕ್ತಿ ಪ್ರತ್ಯಕ್ಷ.... ಹಿನ್ನೆಲೆಯಲ್ಲಿ `ಶಿವ ಅಂತಾ ಹೋಗುತ್ತಿದ್ದೆ ರೋಡಿನಲಿ~ ಹಾಡಿನ ಟ್ರ್ಯಾಕ್...
`ಈಟ್ ರೈಟ್; ರನ್ ವೆಲ್~

`ಕನ್ನಡದ ಕೋಟ್ಯಧಿಪತಿ~ಯಲ್ಲಿ ಒಂದು... ಎರಡು... ಮೂರು... ಎಂದು ಕ್ಷಣಗಣನೆ ಮಾಡುತ್ತಾ ಸ್ಪರ್ಧಿಗಳ ಎದೆಬಡಿತ ಹೆಚ್ಚುವಂತೆ ಮಾಡುವ ಪುನೀತ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಮಾತ್ರ ಒಂದು ಗಂಟೆ ತಡವಾಗಿ.

ಬಂದವರೇ `ಮೊದಲನೆಯದಾಗಿ ಎಲ್ಲರಿಗೂ ನಮಸ್ಕಾರ~ ಎಂದು ಮಾತು ಶುರುವಿಟ್ಟರು. `ನಾನು ಈ ರಾಯಭಾರವನ್ನು ತುಂಬಾ ಇಷ್ಟಪಟ್ಟು ಒಪ್ಪಿಕೊಂಡಿದ್ದೇನೆ. ಹೆಲ್ತ್ ಬಗ್ಗೆ ನಂಗೆ ತುಂಬಾ ಆಸಕ್ತಿ ಇದೆ. ಅವತ್ತು (ಮೇ 27) ನಾನೂ ಓಡ್ತೀನಿ. ಬೆಂಗಳೂರಿಗರೆಲ್ಲರೂ ಓಡಬೇಕು. ಓಡಿ ಓಡಿ ಆರೋಗ್ಯವನ್ನು ಫಿಟ್‌ಆಗಿ ಇಟ್ಕೋಬೇಕು~ ಎಂದು ಪಟಪಟ ಮಾತಾಡಿದರು.

ಅಷ್ಟರಲ್ಲೇ ನಿರೂಪಕ ಅವರ ಮಾತಿಗೆ ಬ್ರೇಕ್ ಹಾಕಿ, ನಿಮ್ಮ ಫಿಟೆನೆಸ್‌ನ ರಹಸ್ಯವೇನು ಎಂದು ಕೇಳಿದರು. `ಈಟ್ ರೈಟ್, ರನ್ ವೆಲ್~ ಎಂದು ಚುಟುಕಾಗಿ ಉತ್ತರಿಸಿ, `ಜೀವನದಲ್ಲಿ ಸಂತೋಷವಿರಬೇಕೆಂದರೆ ಆರೋಗ್ಯ ಸರಿ ಇರಬೇಕು. ಅದಕ್ಕಾಗಿ ದಿನವೂ ಓಡಬೇಕು~ ಎಂದು ಓಟದ ಮರ್ಮದ ಬಗ್ಗೆ ಮಾತು ಸೇರಿಸಿದರು.

`ವೈ ಡು ಯು ರನ್~ ಎಂದು ಕೇಳಿದ್ದಕ್ಕೆ, `ಫ್ರಾಂಕ್ ಆಗಿ ಹೇಳಬೇಕೆಂದರೆ ಹಿಂದಿನ ದಿನ ಜಾಸ್ತಿ ತಿಂದಿರ್ತಿನಿ. ಅದನ್ನು ಬ್ಯಾಲೆನ್ಸ್ ಮಾಡಲು ಓಡ್ತಿನಿ. ಕೆಲವೊಬ್ಬರಿಗೆ ಡ್ರಿಂಕ್ ಮಾಡಿದ್ರೆ ಕಿಕ್ ಹೊಡೆಯುತ್ತೆ, ಆದ್ರೆ ನಂಗೆ ಓಡಿದ್ರೆ ಕಿಕ್ ಹೊಡೆಯುತ್ತೆ~ ಅಂತಾರೆ ಪುನೀತ್.

`ಓಡುವುದನ್ನು ಇಷ್ಟಪಡುವ ನೀವು ಯಾವುದನ್ನ ಕಂಡ್ರೆ ದೂರ ಓಡ್ತೀರ~ ಎಂದು ಕೇಳಿದ್ದಕ್ಕೆ `ಹಬ್ಬದೂಟ~ದಿಂದ ಎಂದು ನಕ್ಕರು.

ಪುನೀತ್ ಓಡುವುದನ್ನು ಎಷ್ಟು ಇಷ್ಟ ಪಡುತ್ತಾರೆಂದರೆ ಅವರ ಸ್ನೇಹಿತರೊಂದಿಗೆ 3-4 ತಿಂಗಳಿಗೊಮ್ಮೆ 10 ಕಿ.ಮೀ.ನಷ್ಟು ದೂರ ಓಡುತ್ತಾರಂತೆ!

ಅಷ್ಟು ಹೊತ್ತು ಕಾಯುತ್ತಿದ್ದವರೆಲ್ಲರೂ ಪುನೀತ್ ರಾಜ್‌ಕುಮಾರ್ ಅವರ ಅಚ್ಚರಿಯ ಎಂಟ್ರಿಯಿಂದಾಗಿ ಬೆರಗುಗಣ್ಣು ಬಿಡುತ್ತಾ ನೋಡುತ್ತಲಿದ್ದರು.ಇದೆಲ್ಲಾ ಕಂಡದ್ದು ಐಟಿಸಿ ವಿಂಡ್ಸರ್‌ಮ್ಯಾನರ್ ಹೊಟೇಲ್‌ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನವರು ಏರ್ಪಡಿಸಿದ್ದ ಕೂಟದಲ್ಲಿ. ವಿಶ್ವ 10ಕೆ ಓಟ ಮೇ 27ರಂದು ನಡೆಯುತ್ತಲಿದ್ದು, ಇದರ ರಾಯಭಾರವನ್ನು ಪುನೀತ್ ವಹಿಸಿಕೊಂಡಿದ್ದಾರೆ. ಅದರ ಸೂಚ್ಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಉದ್ಯಾನನಗರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ `ವಿಶ್ವ 10ಕೆ ಓಟ ಬೆಂಗಳೂರು~ ನಡೆಯುತ್ತಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಪ್ರಾಯೋಜಕತ್ವದಲ್ಲಿ ಇದು 2ನೇ ಆವೃತ್ತಿಯಾಗಿದೆ. 5ನೇ ಟಿಸಿಎಸ್ ವಿಶ್ವ 10ಕೆ ಓಟ ಇದಾಗಿದೆ.ಜಗತ್ತಿನ ಮುಂಚೂಣಿ ಟ್ರ್ಯಾಕ್ ಮತ್ತು ದೂರ ಅಂತರದ ಓಟಗಾರರು ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಿಗೆ ಆಗಮಿಸಲ್ದ್ದಿದು, ಅವರಿಗೆ ಭಾರತದ ಓಟಗಾರರು ಹಾಗೂ ನಗರದ ಸಹಸ್ರಾರು ಉತ್ಸಾಹಿಗಳು ಓಟದಲ್ಲಿ ಸಾಥ್ ನೀಡಲಿದ್ದಾರೆ.ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿದವರಿಗೆ 1.7 ಲಕ್ಷ ಡಾಲರ್ ಬಹುಮಾನವನ್ನು ನೀಡಲಾಗುತ್ತದೆ. ಒಟ್ಟು ಏಳು ಬಗೆಯ ರೇಸ್‌ಗಳನ್ನು ಏರ್ಪಡಿಸಲಾಗಿದೆ. ಎಲೈಟ್ ಪುರುಷರು ಮತ್ತು ಮಹಿಳೆಯರ ವಿಶ್ವ 10ಕೆ ಓಟ, ನೇಷನ್ಸ್ ಚಾಲೆಂಜ್, ಮುಕ್ತ 10ಕೆ ಓಟ, ಕಾರ್ಪೋರೇಟ್ ಚಾಲೆಂಜ್, ಮಜಾ ರನ್ (5.7 ಕಿ.ಮೀ), ಹಿರಿಯ ನಾಗರಿಕರ ಓಟ (4 ಕಿ.ಮೀ), ಗಾಲಿಕುರ್ಚಿ (4 ಕಿ.ಮೀ) ಸ್ಪರ್ಧೆಗಳು ಇರುತ್ತವೆ.

ಓಡುವ ಸಂಸ್ಕೃತಿಯನ್ನು ಬೆಂಗಳೂರಿಗರಲ್ಲಿ ಬೆಳೆಸಬೇಕೆಂಬುದು ಇದರ ಉದ್ದೇಶ.

 

ಈ ಸಂಸ್ಕೃತಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಸದೃಢ ಸಮಾಜ ನಿರ್ಮಾಣವಾಗಬೇಕೆಂದರೆ ಆರೋಗ್ಯವಂತ ಜನ ಅಗತ್ಯ. ಇದರಲ್ಲಿ ಭಾಗವಹಿಸುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಿದೆ ಎಂದು ಟಿಸಿಎಸ್‌ನ ಹಣಕಾಸು ಸೇವೆಯ ಅಧ್ಯಕ್ಷ ಎನ್.ಜಿ.ಸುಬ್ರಹ್ಮಣ್ಯ ಹೇಳಿದರು.ಉದ್ಯಾನನಗರಿ ಮೊದಲಬಾರಿಗೆ ಈ ಓಟಕ್ಕೆ ಸಾಕ್ಷಿಯಾಗಿದ್ದು 2008ರಲ್ಲಿ. ಆಗ ಎಲ್ಲರೂ ಇದನ್ನು ಉತ್ಸಾಹದಿಂದಲೇ ಸ್ವಾಗತಿಸಿದ್ದರು. ಆನಂತರದ ವರ್ಷಗಳಲ್ಲಿ ಸ್ಪರ್ಧಿಗಳ ಸಂಖ್ಯೆ 23 ಸಾವಿರದವರೆಗೆ ವಿಸ್ತರಿಸಿದೆ. ಕಳೆದ 5 ವರ್ಷಗಳಲ್ಲಿ ಈ ರೇಸ್ ತನ್ನದೇ ಆದ ಸ್ಥಾನಮಾನ ಪಡೆದಿದೆ. ವಿಶ್ವಮಟ್ಟದ ಸಂಘಟನೆಯಿಂದಾಗಿ ಅಥ್ಲೆಟಿಕ್ ಒಕ್ಕೂಟಗಳ ಅಂತರರಾಷ್ಟ್ರೀಯ ಸಂಸ್ಥೆ (ಐಎಎಎಫ್) ಈ ಕೂಟಕ್ಕೆ 3ನೇ ವರ್ಷ ಸ್ವರ್ಣ ದರ್ಜೆ (ಗೋಲ್ಡ್ ಲೇಬಲ್) ನೀಡಿ ಗೌರವಿಸಿದೆ ಎಂದರು ಐಎಎಸ್ ಅಧಿಕಾರಿ ಪೆರುಮಾಳ್.ಬಿಎಂಡಬ್ಲ್ಯು ಗ್ರೂಪ್‌ನ ಇಂಡಿಯಾ ಅಧ್ಯಕ್ಷ ಡಾ.ಆಂಡ್ರಿಯಾಸ್ ಶಾಫ್, ಪೆಪ್ಸಿಕೋ ಬಿವರೇಜಸ್ ಇಂಡಿಯಾದ ಮಾರುಕಟ್ಟೆ ನಿರ್ದೇಶಕಿ ದೀಪಿಕಾ ವಾರಿಯರ್ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.ಟ್ಟಟ್ಚಞ್ಟ್ಠ್ಞ್ಞಜ್ಞಿಜ.ಜ್ಞಿ ಗೆ ಲಾಗಿನ್ ಆಗಿ.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.