ಗುರುವಾರ , ಮೇ 26, 2022
30 °C

10 ಲಕ್ಷ ಶ್ರೀಗಂಧ ಸಸಿ ನೆಡಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸಿರಿ ಚಂದನವನ~ ಕಾರ್ಯಕ್ರಮದಡಿ ಅರಣ್ಯ ಇಲಾಖೆ ವತಿಯಿಂದ ರಾಜ್ಯದ ವಿವಿಧೆಡೆ ಹತ್ತು ಲಕ್ಷ ಶ್ರೀಗಂಧದ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಶುಕ್ರವಾರ ಇಲ್ಲಿ ತಿಳಿಸಿದರು.

ಅರಣ್ಯ ಭೂಮಿಯಲ್ಲೇ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಇದಕ್ಕೆ ಬೇಕಾದ ಹತ್ತು ಸಾವಿರ ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಿದ್ದು, ಎರಡು ತಿಂಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಕೋಲಾರ, ರಾಮನಗರ, ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ತುಮಕೂರು, ಬೀದರ್ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಸಸಿಗಳನ್ನು ನೆಡಲಾಗುವುದು. ಇದಕ್ಕೆ 4 ರಿಂದ 5 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದರು.ಈಗ ಸಸಿಗಳನ್ನು ನೆಟ್ಟರೆ 20 ವರ್ಷಕ್ಕೆ ಕಟಾವು ಮಾಡಬಹುದು. ಆಗ ಒಂದು ಮರದಿಂದ ಒಂದು ಕೋಟಿ ರೂಪಾಯಿ ಆದಾಯ ಬರುತ್ತದೆ. ಒಂದು ಟನ್ ಶ್ರೀಗಂಧದ ಬೆಲೆ ಸುಮಾರು 60 ಲಕ್ಷ ರೂಪಾಯಿ. ಎಕರೆ ಪ್ರದೇಶದಲ್ಲಿ ಒಂದು ಸಾವಿರ ಸಸಿಗಳನ್ನು ನೆಡಬಹುದು ಎಂದು ತಿಳಿಸಿದರು.ಸರ್ಕಾರದ ವಶಕ್ಕೆ: ಬ್ರಿಟಿಷರ ಕಾಲದಲ್ಲಿ ಗುತ್ತಿಗೆಗೆ ನೀಡಲಾಗಿದ್ದ ಕೊಡಗಿನ ನಾಲ್ಕು ಖಾಸಗಿ ರಬ್ಬರ್ ಎಸ್ಟೇಟ್‌ಗಳ 4,000 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗಿದೆ. 99 ವರ್ಷದ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.`ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದಲ್ಲಿ ಟಾಟಾ ಸಂಸ್ಥೆಗೆ ನೀಡಲಾಗಿದ್ದ 1,200 ಎಕರೆ ಕಾಫಿ ತೋಟದ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ಆ ಭೂಮಿಯನ್ನು ಸಹ ಇಲಾಖೆಯ ವಶಕ್ಕೆ ಪಡೆಯಲಾಗುವುದು. ವಿಧಾನ ಪರಿಷತ್ ಸದಸ್ಯ ಟಿ.ಜಾನ್ ಅವರ ಕುಟುಂಬಕ್ಕೆ ನೀಡಿದ್ದ 1,000 ಎಕರೆ ಭೂಮಿಯನ್ನೂ ಇದೇ ಕಾರಣಕ್ಕೆ ಹಿಂದಕ್ಕೆ ಪಡೆಯಲಾಗುವುದು~ ಎಂದು ತಿಳಿಸಿದರು.`ಜಮ್ಮಾ ಮಲೆ~ಯಡಿ ಬ್ರಿಟಿಷರ ಕಾಲದಲ್ಲಿ ಹತ್ತು ಸಾವಿರ ಎಕರೆ ಭೂಮಿಯನ್ನು ಕೊಡಗಿನ ವಿವಿಧೆಡೆ ರೈತರಿಗೆ ನೀಡಲಾಗಿದೆ. ಆ ಭೂಮಿಯ ಮೇಲೆ ಅವರಿಗೆ ಹಕ್ಕು ಇದ್ದರೂ, ಮಾಲೀಕತ್ವ ಇಲ್ಲ. ಆ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಸಂಪುಟದ ಮುಂದೆ ಪ್ರಸ್ತಾವನೆ ಇಡಲಾಗುವುದು ಎಂದರು.

ಹಾಸನ ಜಿಲ್ಲೆಯ ಬಿಸ್ಲೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿದ 23 ಸಾವಿರ ಎಕರೆ ಭೂಮಿ ಇದೆ. ಅದನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಆನೆಗಳ ಹಾವಳಿ ಇರುವುದರಿಂದ ರೈತರೇ ಭೂಮಿ ನೀಡಲು ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದರು.ಆಲೂರಿನಿಂದ ಆನೆಗಳನ್ನು ಸ್ಥಳಾಂತರಿಸುವ ಸಂಬಂಧ ತಜ್ಞರ ವರದಿಗಾಗಿ ಕಾಯಲಾಗುತ್ತಿದೆ. ರಾಜ್ಯದ 11 ಆನೆಗಳನ್ನು ಮಧ್ಯಪ್ರದೇಶಕ್ಕೆ ನೀಡುವ ಪ್ರಸ್ತಾವ ಕೈಬಿಡಲಾಗಿದೆ. ಜುಲೈ 11ರಂದು ವನ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಇಲಾಖೆಯ ಸಿಬ್ಬಂದಿಯನ್ನು ಗೌರವಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.