ಗುರುವಾರ , ಮೇ 6, 2021
21 °C

12ನೇ ಪಂಚವಾರ್ಷಿಕ ಯೋಜನೆ: 5300 ಮೆಗಾವಾಟ್ ಅಣು ಶಕ್ತಿ ಉತ್ಪಾದನೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಅಣು ಶಕ್ತಿ ಸಾಮರ್ಥ್ಯವನ್ನು 5300 ಮೆಗಾವಾಟ್‌ನಷ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ ದೇಶದ ಒಟ್ಟಾರೆ ಪರಮಾಣು ವಿದ್ಯುಚ್ಛಕ್ತಿ ಸಾಮರ್ಥ್ಯ 9980 ಮೆಗಾವಾಟ್‌ಗಳಿಗೆ ಏರಿಕೆ ಆಗಲಿದೆ.ರಷ್ಯಾ ಸಹಯೋಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕೂಡುಂಕುಳಂ ಪರಮಾಣು ಸ್ಥಾವರದ ಎರಡು ಘಟಕಗಳಲ್ಲಿ ಉತ್ಪಾದನೆಯಾಗುವ 1000 ಮೆಗಾವಾಟ್ ವಿದ್ಯುತ್ ಕೂಡ ಈ ಪ್ರಸ್ತಾವದಲ್ಲಿ ಸೇರಿದೆ.`12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ 5300 ಮೆಗಾವಾಟ್‌ನಷ್ಟು ಅಣುಶಕ್ತಿಉತ್ಪಾದಿಸುವ ಗುರಿ ಇದೆ~ ಎಂದು ಅಣು ಶಕ್ತಿ ಇಲಾಖೆಯು (ಡಿಎಇ) 12ನೇ ಪಂಚವಾರ್ಷಿಕ ಯೋಜನೆಗೆ ಸಿದ್ಧ ಪಡಿಸಿರುವ ಬಜೆಟ್ ಪ್ರಸ್ತಾವದಲ್ಲಿ ಉಲ್ಲೇಖಿಸಿದೆ.ಕಲ್ಪಾಕಂ ಅಣು ಸ್ಥಾವರದ 500 ಮೆಗಾವಾಟ್ ಸಾಮರ್ಥ್ಯದ ಒಂದು ಘಟಕ, ಕಕ್ರಪಾರ್ ಮತ್ತು ರಾವತ್ ಭಾಟ ಅಣು ಸ್ಥಾವರಗಳ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳಿಂದ ಉತ್ಪಾದನೆಯಾಗುವ ಅಣು ವಿದ್ಯುತ್ ಕೂಡ ಡಿಎಇ ಸಿದ್ಧಪಡಿಸಿರುವ ಪ್ರಸ್ತಾವದಲ್ಲಿದೆ.ಕೂಡುಂಕೂಳಂನ ಎರಡು ಘಟಕಗಳು ಮುಂದಿನ ಆಗಸ್ಟ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದ್ದು, ಕಲ್ಪಾಕಂ ಘಟಕದಲ್ಲಿ ಉದ್ದೇಶಿತ ಗುರಿಯ ಅಣು ಶಕ್ತಿ ಉತ್ಪಾದನೆಯನ್ನು 2015-2016ರಲ್ಲಿ ಆರಂಭವಾಗುವ ಸಾಧ್ಯತೆ ಇದೆ.ಇದಲ್ಲದೆ ಗುಜರಾತ್‌ನ ಕಕ್ರಪಾರ್ ಮತ್ತು ರಾಜಸ್ತಾನದ ರಾವತ್ ಭಾಟಗಳಲ್ಲಿ 540 ಮೆಗಾವಾಟ್ ಸಾಮರ್ಥ್ಯದ ನಾಲ್ಕು ಘಟಕಗಳು ನಿರ್ಮಾಣದ ಹಂತದಲ್ಲಿದ್ದು, ಇವು 2016-17ರ ಹೊತ್ತಿಗೆ  ಸಿದ್ಧವಾಗಲಿವೆ. ಇದರಿಂದ 2800 ಮೆಗಾವಾಟ್‌ನಷ್ಟು ಅಣು ಶಕ್ತಿ ಉತ್ಪಾದನೆಯ ನಿರೀಕ್ಷೆ ಇದೆ ಎಂದು ಡಿಎಇ ಪ್ರಸ್ತಾವದಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.