ಭಾನುವಾರ, ಜೂನ್ 20, 2021
28 °C

12 ನೂತನ ಬಸ್ ಸಂಚಾರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗಕ್ಕೆ ಮಂಜೂರಾದ ನಾಲ್ಕು ರಾಜಹಂಸ ಸೇರಿದಂತೆ 12 ನೂತನ ಬಸ್‌ಗಳ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಹಸಿರು ನಿಶಾನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸಕ್ತ ವರ್ಷ ಉತ್ತರ ಕನ್ನಡ ವಿಭಾಗಕ್ಕೆ 87 ಹೊಸ ಬಸ್ ನೀಡುವ ಗುರಿ ಹೊಂದಿದ್ದು, ಈವರೆಗೆ 80 ಹೊಸ ಬಸ್ ದೊರೆತಿವೆ. ಮಾರ್ಚ್ ಅಂತ್ಯದ ಒಳಗೆ 20 ಹೆಚ್ಚುವರಿ ಬಸ್‌ಗಳು ಲಭ್ಯವಾಗುವ ನಿರೀಕ್ಷೆ ಇದೆ.

 

ವಾಯವ್ಯ ಸಾರಿಗೆ ಬಲಪಡಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಸಾರಿಗೆ ಇಲಾಖೆಯಿಂದ ಸಾರ್ವಜನಿಕ ಸೇವೆ ಉತ್ತಮ ಪಡಿಸಲು ಕ್ರಮಕೈಕೊಳ್ಳಲಾಗುತ್ತಿದೆ ಎಂದರು. ಸಾರ್ವಜನಿಕರು ಖಾಸಗಿ ಹಾಗೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸರ್ಕಾರದ ಸಾರಿಗೆ ವಾಹನದ ಮೇಲೆ ಪ್ರಯಾಣಿಸಬೇಕು. ಇದರಿಂದ ಅಪಘಾತ, ವಾಹನ ನಿಲುಗಡೆ ಸಮಸ್ಯೆ, ವಾಹನ ದಟ್ಟಣೆ ಕಡಿಮೆ ಆಗುತ್ತದೆ.  ಆಡಳಿತಾತ್ಮಕವಾಗಿ ಜಿಲ್ಲೆಯ ಯಾವುದೇ ಭಾಗ ಇತರ ವಿಭಾಗಕ್ಕೆ ಒಳಪಟ್ಟರೂ ಜಿಲ್ಲೆಯ ಸಾರಿಗೆ ವ್ಯವಸ್ಥೆಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲಾಗುತ್ತದೆ ಎಂದರು. ಹೊನ್ನಾವರ, ಮುಂಡಗೋಡ ಹಾಗೂ ಸಿದ್ಧಾಪುರದಲ್ಲಿ ಬಸ್ ಡಿಪೋ ಸ್ಥಾಪನೆಗೆ ಪ್ರಯತ್ನ ನಡೆದಿದೆ.

 

ಶಿರಸಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಬೇರೆ ವಿಭಾಗಳಿಂದ ಹೆಚ್ಚುವರಿ ಬಸ್ ತರಿಸಿಕೊಳ್ಳಲಾಗುತ್ತಿದೆ. ಶಿರಸಿ- ಕುಮಟಾ ರಸ್ತೆ ಉನ್ನತೀಕರಣ ಕಾಮಗಾರಿ ನಡೆಯುತ್ತಿದ್ದು, ಜಾತ್ರೆ ವೇಳೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.ಬಿಎಸ್‌ಎನ್‌ಎಲ್ ಮೊಬೈಲ್ ಗ್ರಾಹಕರಿಗೆ ಇಲಾಖೆಯಿಂದ ಕಳಪೆ ಸೇವೆ ದೊರೆಯುತ್ತಿರುವ ಕುರಿತು ಪ್ರಶ್ನಿಸಿದಾಗ `ಈ ಸಂಗತಿ ಗಮನಕ್ಕೆ ಬಂದಿದ್ದು, ಜಾತ್ರೆ ವೇಳೆ ಹೆಚ್ಚುವರಿ ತಾತ್ಕಾಲಿಕ ಟವರ್ ಅಳವಡಿಸುವ ಕುರಿತು ಇಲಾಖೆಗೆ ತಿಳಿಸಲಾಗುವುದು~ ಎಂದರು.

 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಡಿ.ಹೆಗಡೆ, ಶೋಭಾ ನಾಯ್ಕ, ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್.ಗದ್ದಿನಕೇರಿ ಮತ್ತಿತರರು ಹಾಜರಿದ್ದರು.ನೀರಿನ ಸಮಸ್ಯೆಗೆ ಸ್ಪಂದನೆ: ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಹಾಗೂ ನಗರದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಸಾರ್ವಜನಿಕರ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಧಿಕಾರಿ, ಎಲ್ಲ ತಹಶೀಲ್ದಾರರು, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.ಸರ್ಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ. ಸ್ಥಳೀಯವಾಗಿ ಲಭ್ಯವಿರುವ ನೀರಿನ ಮೂಲ ಬಳಸಿ ನೀರು ಪೂರೈಕೆ ಮಾಡಬೇಕು. ಸಾಧ್ಯವಿಲ್ಲದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ತಹಶೀಲ್ದಾರರು ಈ ಕುರಿತು ವಿಶೇಷ ಜವಾಬ್ದಾರಿ ನಿರ್ವಹಿಸಬೇಕು.ನೀರಿನ ಮೂಲವೇ ಇಲ್ಲವೋ ಅಂತಹ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು. ನೀರು ಪೂರೈಕೆ ಕಾಮಗಾರಿ ನಡೆಯುತ್ತಿದ್ದರೆ ವಿಳಂಬ ಇಲ್ಲದೆ ಪೂರ್ಣಗೊಳಿಸಬೇಕು ಎಂದು ಸಚಿವ ಕಾಗೇರಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.