ಸೋಮವಾರ, ಮೇ 17, 2021
21 °C

14ರಿಂದ ತಾಲ್ಲೂಕು ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಪಟ್ಟಣದಲ್ಲಿ ಜೂ.14ರಂದು ನಡೆಯಲಿರುವ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ  ಸಿದ್ಧತೆ ಭರದಿಂದ ಸಾಗಿದೆ ಎಂದು ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಅಶ್ವತ್ಥ್ ಸೋಮವಾರ ಇಲ್ಲಿ ತಿಳಿಸಿದರು.ಪಟ್ಟಣದ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. 14ರ ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ಎಸ್.ಆರ್.ಉಷಾ ರಾಷ್ಟ್ರಧ್ವಜ, ಕ.ಸಾ.ಪ ತಾಲ್ಲೂಕು ಘಟಕ ಅಧ್ಯಕ್ಷ ಆರ್.ಅಶ್ವತ್ಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.ಸಮ್ಮೇಳನದ ವೇದಿಕೆಗೆ `ಅರಳು ಮಲ್ಲಿಗೆ' ಗಂಗಾಧರ ಅವರ ಹೆಸರನ್ನು, ಮಹಾದ್ವಾರಕ್ಕೆ `ನಂಗಲಿ ಶಿವಾನಂದಂ' ಅವರ ಹೆಸರನ್ನು ಇಡಲಾಗಿದೆ. ಮಹಾದ್ವಾರದಿಂದ 9 ಗಂಟೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಂದಿ ಮೆಡಿಕಲ್ಸ್, ಕುವೆಂಪು ವೃತ್ತ, ಕೋಲಾರ ಮುಖ್ಯ ರಸ್ತೆ ಮೂಲಕ ಮೂಲ ಸ್ಥಾನಕ್ಕೆ ಹಿಂತಿರುಗಲಿದೆ.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಪ್ರೊ.ಬಿ.ಗಂಗಾಧರ ಮೂರ್ತಿ ಸಮಾರಂಭ ಉದ್ಘಾಟಿಸುವರು. ಕ.ಸಾ.ಪ ಜಿಲ್ಲಾ ಘಟಕ ಅಧ್ಯಕ್ಷ ಜೆ.ಜಿ.ನಾಗರಾಜ್ ಅವರಿಂದ ಸ್ಮರಣ ಸಂಚಿಕೆ ಬಿಡುಗಡೆ, ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರಿಂದ ಕಲಾ ಪ್ರದರ್ಶನ , ತೇ.ಸಿ.ಬದರೀನಾಥ್ ಅವರಿಂದ ಮಂಜು ಕನ್ನಿಕಾ ಅವರ ಪುಸ್ತಕ ಬಿಡುಗಡೆ ನಡೆಯಲಿದೆ.ತಾಲ್ಲೂಕು ಘಟಕ ಅಧ್ಯಕ್ಷ ಆರ್.ಅಶ್ವತ್ಥ್ ಅವರಿಂದ ಆಶಯ ನುಡಿ, ಕೋಗಿಲಹಳ್ಳಿ ಕೃಷ್ಣಪ್ಪರಿಂದ ಸಮ್ಮೇಳನಾಧ್ಯಕ್ಷರ ನುಡಿ ಆಯೋಜಿಸಲಾಗಿದೆ. ಮಧ್ಯಾಹ್ನ 3.30 ರಿಂದ 5ರವರೆಗೆ ಮೊದಲನೇ ಗೋಷ್ಠಿ ನಡೆಯಲಿದೆ.  ಸಂಜೆ 5ಕ್ಕೆ ಡ್ಯಾನ್ಸ್ ಮಾಸ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.15ರಂದು ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಪಿ ನಾರಾಯಣಪ್ಪ ವಹಿಸುವರು. `ನೀರಿನ ಸಮಸ್ಯೆ ಮತ್ತು ನಿರ್ವಹಣೆ' ಬಗ್ಗೆ ಮಧ್ಯಾಹ್ನ 12 ರಿಂದ 1.30ರವರೆಗೆ ತೃತೀಯ ಕವಿಗೋಷ್ಠಿ  ನಡೆಯಲಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ  ಸಾಧನೆಗೈದ ಗಣ್ಯರಿಗೆ, ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಹೇಳಿದರು.ಮಾನಸಿಕ ಅಸ್ವಸ್ಥ ಮಹಿಳೆ ಸಂಚಾರ: ಗೊಂದಲ

ಕೋಲಾರ: ನಗರದ ದೊಡ್ಡಪೇಟೆಯಲ್ಲಿರುವ ಉದ್ಯಮಿಯೊಬ್ಬರ ಮಾನಸಿಕ ಅಸ್ವಸ್ಥ ಮಗಳೊಬ್ಬರು ಕೈಗೆ ಕಬ್ಬಿಣದ ಸರಪಳಿ ಧರಿಸಿದ ಸ್ಥಿತಿಯಲ್ಲಿ ಓಡಾಡಿದ ಘಟನೆ ತೀವ್ರ ಕುತೂಹಲಕ್ಕೆ ದಾರಿ ಮಾಡಿತ್ತು. ದೊಡ್ಡಪೇಟೆ ಸಮೀಪದ ರಸ್ತೆಗಳಲ್ಲಿ ವಿವಾಹಿತ ಮಾನಸಿಕ ಅಸ್ವಸ್ಥೆಯೊಬ್ಬರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಕ್ಷಿಪ್ರಗತಿಯಲ್ಲಿ ಹರಡಿ ಜನ ಗುಂಪುಗೂಡಿದ್ದರು.ಈಚೆಗಷ್ಟೆ ಯುವತಿಯೊಬ್ಬರನ್ನು ಪೋಷಕರು ಕೂಡಿ ಹಾಕಿದ್ದ ಘಟನೆ ಬೆಂಗಳೂರಿನ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಇದೂ ಕೂಡ ಅಂಥದ್ದೇ ಘಟನೆ ಆಗಿರಬಹುದು ಎಂಬ ಅನುಮಾನವೂ ಮೂಡಿತ್ತು. ಆದರೆ ಅದಕ್ಕೆ ಸ್ಪಷ್ಟನೆ ನೀಡಿದ ಆಕೆಯ ಕುಟುಂಬದ ಸದಸ್ಯರು, ವಿವಾಹಿತಳಾಗಿ ಪತಿಯಿಂದ ದೂರವಾಗಿ ತವರು ಮನೆಯಲ್ಲಿರುವ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು ಅಮಾವಾಸ್ಯೆ ಆಸುಪಾಸಿನಲ್ಲಿ ಮನೆಯ ವಸ್ತುಗಳನ್ನು ಧ್ವಂಸಗೊಳಿಸುವ ಅಭ್ಯಾಸ ಹೊಂದಿರುವುದರಿಂದ ಆಕೆಯನ್ನು ನಿಯಂತ್ರಿಸಲು ಕೈಗೆ ಸಣ್ಣ ಕಬ್ಬಿಣದ ಸರಪಳಿ ಹಾಕಲಾಗಿತ್ತು ಎಂದು ಸ್ಪಷ್ಟನೆ ನೀಡಿದರು.ತುರ್ತು ಸಭೆ: ಶಿಕ್ಷಣಾಧಿಕಾರಿಗೆ ಆಗ್ರಹ

ಗೌರಿಬಿದನೂರು: ಖಾಸಗಿ ಶಾಲೆ ಮುಖ್ಯಸ್ಥರ, ಪೋಷಕರ ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೆ ಸಭೆ ಕರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಪ್ರಧಾನ ಕಾರ್ಯದರ್ಶಿ ಜಿ.ಎಲ್.ಅಶ್ವತ್ಥನಾರಾಯಣ, ರೈತ ಸಂಘದ ಕಾರ್ಯದರ್ಶಿ ಲೋಕೇಶ್‌ಗೌಡ ಒತ್ತಾಯಿಸಿದರು.

ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಬಹುತೇಕ ಖಾಸಗಿ ಶಾಲೆಗಳು ಪಠ್ಯಪುಸ್ತಕ, ಸಮವಸ್ತ್ರ, ಶಾಲಾ ಅಭಿವೃದ್ಧಿ ಹೆಸರಿನಲ್ಲಿ ಪ್ರತಿ ಮಗುವಿನಿಂದ 19ರಿಂದ 25 ಸಾವಿರದವರೆಗೆ ಶುಲ್ಕ ವಸೂಲಿ ಮಾಡುತ್ತಿವೆ. ಕೆಲವು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಸಣ್ಣ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ತುಂಬಿಸಿ ತರಗತಿ ನಡೆಸುತ್ತಾರೆ. ಅಧಿಕ ಶುಲ್ಕ ವಸೂಲಿಯಿಂದ ಮಧ್ಯಮ ವರ್ಗದ ಪೋಷಕರಿಗೆ ತೀವ್ರ ಹೊರೆಯಾಗಿದ್ದು, ಈಗಾಗಲೇ ಪಡೆದ ಹೆಚ್ಚುವರಿ ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೆ ತಾಲ್ಲೂಕು ಮಟ್ಟದ ಸಭೆ ಕರೆಯಬೇಕು. ಇಲ್ಲದಿದ್ದಲ್ಲಿ ವಿವಿಧ ಸಂಘಟನೆಗಳು ಸೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಚ್ಚಿಸಿ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.