ಶುಕ್ರವಾರ, ಜನವರಿ 24, 2020
28 °C

15 ದಿನದಲ್ಲಿ ಕೃಷಿ ಬೆಲೆ ಆಯೋಗ: ಜಯಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದ­ಕ್ಕಾಗಿ ‘ರಾಜ್ಯ ಕೃಷಿ ಬೆಲೆ ಆಯೋಗ’ 15 ದಿನಗಳೊಳಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಕೃಷಿ ಬೆಲೆ ಆಯೋಗ ರಚನೆ ಕುರಿತ ಪ್ರಸ್ತಾವ ಪರಿಶೀಲಿಸಿ, ಶಿಫಾರಸು ಸಲ್ಲಿ­ಸಲು ಜಯಚಂದ್ರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಶುಕ್ರವಾರ ವಿಧಾನಸೌಧದಲ್ಲಿ ಸಮಿತಿಯ ಮೊದಲ ಸಭೆ ನಡೆಯಿತು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಕಾನೂನು ಸಚಿವರು, ‘ಕೃಷಿ ಬೆಲೆ ಆಯೋಗ ರಚನೆ ಪ್ರಕ್ರಿಯೆ ಬಹುತೇಕ ಅಂತಿಮಗೊಳ್ಳುವತ್ತ ಸಾಗಿದೆ ಎಂದರು.ಕೃಷಿ ಬೆಲೆ ಆಯೋಗ ರಚಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿತ್ತು.  ಈ ಕುರಿತು ಗುರು­ವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಹೆಚ್ಚಿನ ಪರಿಶೀಲನೆಗಾಗಿ ವಿಷಯವನ್ನು ತಮ್ಮ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಗೆ ಒಪ್ಪಿಸುವ ತೀರ್ಮಾನ ಕೈಗೊಳ್ಳಲಾ­ಯಿತು. ಕೃಷಿ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಅವರು ಸಮಿತಿಯ ಸದಸ್ಯರಾಗಿದ್ದಾರೆ ಎಂದು ವಿವರಿಸಿದರು.ಕೃಷಿ, ಮಾರುಕಟ್ಟೆ ಮತ್ತು ಆರ್ಥಿಕ ವಿಚಾರಗಳಲ್ಲಿ ಪರಿಣತಿ ಹೊಂದಿರುವ ಒಬ್ಬರು ಆಯೋಗದ ಅಧ್ಯಕ್ಷರಾಗಿರು­ತ್ತಾರೆ. ಒಬ್ಬರು ಅಧಿಕಾರಿಗಳು ಮತ್ತು ಒಬ್ಬ ರೈತ ಸದಸ್ಯರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿಯೂ ಇರುತ್ತಾರೆ. ಇದು ಮೂರು ವರ್ಷಗಳ ಅಧಿಕಾರಾವಧಿ ಹೊಂದಿರುತ್ತದೆ ಎಂದು ಹೇಳಿದರು.ಕೇಂದ್ರ ಸರ್ಕಾರದಲ್ಲಿ ಕೇಂದ್ರ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (ಸಿಎಸಿಪಿ) ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುತ್ತದೆ. ಸಿಎಸಿಪಿ ನಿಗದಿ ಮಾಡುವ ದರಗಳು ಪಂಜಾಬ್‌, ಹರ್ಯಾಣ ಮತ್ತು ಆಂಧ್ರ­ಪ್ರದೇಶದ ರೈತರಿಗೆ ಲಾಭದಾ­ಯಕ ಆಗಿರುತ್ತವೆ. ಆದರೆ, ಕರ್ನಾಟಕದ ರೈತರು ನಷ್ಟ ಅನುಭವಿಸುತ್ತಾರೆ. ಈ ಎಲ್ಲ ವಿಷಯಗಳನ್ನೂ ಗಮನದಲ್ಲಿ ಇರಿಸಿ­ಕೊಂಡು ಆಯೋಗ ರಚಿಸಲಾಗುವುದು ಎಂದರು.ಬೆಳೆಗಳಲ್ಲಿ ಬದಲಾವಣೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಮೌಲ್ಯವರ್ಧನೆ ಮತ್ತಿತರ ವಿಷಯಗಳ ಬಗ್ಗೆಯೂ ಸಲಹೆ ನೀಡುವ ಅಧಿಕಾರ­ವನ್ನು ಆಯೋಗಕ್ಕೆ ನೀಡುವ ಚಿಂತನೆ ಇದೆ. ಆಯೋಗ ರಚನೆಗೆ ಸಂಬಂಧಿಸಿ­ದಂತೆ ಸೂಕ್ತ ಸಲಹೆಗಳನ್ನು ನೀಡುವಂತೆ ಸರ್ಕಾರದ ವಿವಿಧ ಇಲಾಖೆಗಳು, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಕೋರಲಾಗಿದೆ. ಶೀಘ್ರ­ದಲ್ಲಿ ಮತ್ತೊಂದು ಸಭೆ ನಡೆಸಿ ಆಯೋಗ ರಚನೆಗೆ ಸಂಬಂಧಿಸಿದ ಪ್ರಸ್ತಾ­ವವನ್ನು ಅಂತಿಮ­ಗೊಳಿ­ಸಲಾ­ಗುವುದು ಎಂದು ಜಯಚಂದ್ರ ತಿಳಿಸಿದರು.

ಪ್ರತಿಕ್ರಿಯಿಸಿ (+)