ಮಂಗಳವಾರ, ಜನವರಿ 28, 2020
21 °C

17ನೇ ರಾಷ್ಟ್ರೀಯ ಯುವಜನೋತ್ಸವ: ಭಾಷೆ, ಗಡಿ ಮೀರಿದ ಸಂಭ್ರಮ

ಪ್ರಜಾವಾಣಿ ವಾರ್ತೆ / ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಿನಿ ಭಾರತವೇ ಅವತರಿಸಿತ್ತು. ಅಲ್ಲಿದ್ದವರ ಸಂಭ್ರಮ ವಿವರಿಸಲು ಪದಗಳೇ ಸಾಲುವಂತಿರಲಿಲ್ಲ! ಅಲ್ಲಿ ಗುಂಪುಗೂಡಿದ್ದವರಲ್ಲಿ ಹಲವರಿಗೆ ಪರಸ್ಪರರ ಭಾಷೆ ಗೊತ್ತಿರಲಿಲ್ಲ, ಆದರೆ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೇನೂ ಅಡ್ಡಿ ಇರಲಿಲ್ಲ, ಮಿತಿಯೂ ಇರಲಿಲ್ಲ. ಮಿಜೋರಾಂನವರು ತೊಟ್ಟಿದ್ದ ಕಿರೀಟವನ್ನು ಕೇರಳದವರು ತೊಟ್ಟು ಸಂಭ್ರಮಿಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ...

17ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೂ ಮುನ್ನ ಗುರುವಾರ ಬೆಳಿಗ್ಗೆ ಕೊಡಿಯಾಲ್‌ಬೈಲ್‌ನ ಟಿಎಂಎ ಪೈ ಸಭಾಂಗಣದಲ್ಲಿ ಹಲವು ರಾಜ್ಯಗಳ ಯುವ ಪ್ರತಿಭೆಗಳು ಒಂದೆಡೆ ಸೇರಿದ್ದರು. ತಮ್ಮ ಪಾಡಿಗೆ ತಮ್ಮ ಭಾಗದ ಹಾಡು, ಕುಣಿತವನ್ನಷ್ಟೇ ಮಾಡುತ್ತಿದ್ದರೆ ಅವರು ಸಾಧಾರಣವಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಇಲ್ಲಿ ಉತ್ತರ, ದಕ್ಷಿಣದ ಸಂಗಮ ಇತ್ತು. ಪೂರ್ವ, ಪಶ್ಚಿಮದ ಸೆಳೆತವಿತ್ತು. ಮಿಜೋರಾಂನವರ ಬಣ್ಣ ಬಣ್ಣದ ಸಾಂಪ್ರದಾಯಿಕ ಕಿರೀಟವನ್ನು ಕೇರಳದ ಯುವ ಕಲಾವಿದರು ಧರಿಸಿ ಸಂಭ್ರಮಿಸುತ್ತಿದ್ದರು. ಮತ್ತೊಂದೆಡೆಯಲ್ಲಿ ರಾಜಸ್ತಾನದ ಯುವಕರೂ ನೆರೆ ರಾಜ್ಯದವರ ಧಿರಿಸು ಪಡೆದು ಧರಿಸಿ ಖುಷಿ ಪಡುತ್ತಿದ್ದರು. ಮಿಜೋರಾಂನ ಈ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವತಿಯರ ಜತೆಗೆ ಅದೆಷ್ಟು ಮಂದಿ ಫೊಟೊ ತೆಗೆಸಿಕೊಂಡರೋ ಲೆಕ್ಕವೇ ಇಲ್ಲ.

ಸಭಾಂಗಣದ ನೆಲ ಅಂತಸ್ತಿನ ವಿಶಾಲ ಸ್ಥಳದಲ್ಲಿ ಸಹ ಮಣಿಪುರ, ಒಡಿಶಾ, ಡಿಯು ಡಾಮನ್, ಸಿಕ್ಕಿಂಗಳಿಂದ ಬಂದಿದ್ದ ನೂರಾರು ಯುವಕರು ಹಾಡಿ, ಕುಣಿಯುತ್ತಿದ್ದರು. ಒಡಿಶಾದವರು ಡೋಲು ಬಡಿಯುತ್ತಿದ್ದರೆ ಅವರಿಗೆ ಪರಿಚಯವೇ ಇಲ್ಲದ ಮಿಜೋರಾಂನವರು ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರು. ಒಡಿಶಾದ ಸಿಂಗಾರಿ ನೃತ್ಯದವರು ತಮ್ಮ ಪಾಡಿಗೆ ತಾವು ಡೋಲು ಬಡಿಯುತ್ತಿದ್ದರು ಎಂದು ಭಾವಿಸಿದರೆ ತಪ್ಪಾಗುತ್ತಿತ್ತು. ಅದೇ ತಾಳಕ್ಕೆ ಅಲ್ಲೇ ದೂರದಲ್ಲಿ ಮಣಿಪುರದವರು, ನಾಗಾಲ್ಯಾಂಡ್‌ನವರು ಹೆಜ್ಜೆ ಹಾಕುತ್ತಿದ್ದರು.

ಪಂಜಾಬ್, ರಾಜಸ್ತಾನದ ಯುವಕರು ಟಿಎಂಎ ಪೈ ಸಭಾಂಗಣದ ಹೊರಗಡೆ ಸೇರಿ ಬಾಂಗ್ರಾ ನೃತ್ಯ ಮಾಡುತ್ತಿದ್ದರು. ರಾಜಸ್ತಾನದವರ ಮುಂಡಾಸು, ಪಂಜಾಬ್‌ನವರ ರುಮಾಲುಗಳು ಎದ್ದು ಕಾಣಿಸುತ್ತಿದ್ದವು. ಬಾಂಗ್ರಾ ನೃತ್ಯಕ್ಕೆ ಅವರಷ್ಟೇ ಹೆಜ್ಜೆ ಹಾಕುತ್ತಿರಲಿಲ್ಲ, ಅಲ್ಲಿ ಕರ್ನಾಟಕದವರಿದ್ದರು, ಆಂಧ್ರದವರೂ ಇದ್ದರು. ಎಲ್ಲರೂ ಜತೆಗೂಡಿಯೇ ಹೆಜ್ಜೆ ಹಾಕುತ್ತಿದ್ದರು. `ವಿವಿಧತೆಯಲ್ಲಿನ ಏಕತೆ~ಯ ಈ ಪ್ರಹಸನ ಕಂಡು ಹರಿಯಾಣದ ಯುವತಿಯರು ಶಿಳ್ಳೆ ಹಾಕುತ್ತಿದ್ದರೆ ನೆರೆದಿದ್ದವರಲ್ಲಿ ನಗೆಯ ಕೇಕೆ.

ತಂಪು ನೆಲವಾದ ಹಿಮಾಚಲ ಪ್ರದೇಶದಿಂದ ಆಗಮಿಸಿದ್ದ, ರಂಗು ರಂಗಿನ ಟೋಪಿ ಧರಿಸಿದ್ದ ನಾಲ್ಕಾರು ಮಂದಿ ಮಂಗಳೂರಿನ ಸೆಖೆಗೆ ಹೊಂದಿಕೊಳ್ಳಲಾಗದೇ ಬೆವರುತ್ತಿದ್ದರು. ಸ್ಪರ್ಧೇತರ ಕರಾಟೆ ವಿಭಾಗದಲ್ಲಿ ತಮ್ಮ ಕೈಚಳಕ ತೋರಿಸಲು ಅವರು ಆಗಮಿಸಿದ್ದರು.

ಅಲ್ಲೊಬ್ಬರು ತಬಲಾ ನುಡಿಸುತ್ತಿದ್ದರು, ಅವರು ಉತ್ತರ ಭಾರತದವರು ಆಗಿದ್ದುದು ಅವರ ವೇಷ ಭೂಷಣದಿಂದಲೇ ಗೊತ್ತಾಗುತ್ತಿತ್ತು. ತಬಲಾ ದನಿ ಕೇಳಿ ಪಕ್ಕಕ್ಕೆ ಬಂದ ಕೇರಳದವರು ತಾಳಕ್ಕೆ ದನಿಯಾದರು. ಲಯಬದ್ಧವಾದ ತಬಲಾ ಬಡಿತಕ್ಕೆ ರಾಗವಾಗಿ ಹಾಡಲು ಆರಂಭಿಸಿದರು. ಹಾಡಿನ ಅರ್ಥ ಗೊತ್ತಿಲ್ಲದಿದ್ದರೇನಂತೆ, ಸಂಗೀತಕ್ಕೆ ಭಾಷೆಯ ಗಡಿಯೇನೂ ಇಲ್ಲ ಎಂಬಂತೆ ತಬಲಾ ಬಾರಿಸುವಾತ ಮತ್ತಷ್ಟು ಉತ್ಸಾಹದಿಂದ ಬಾರಿಸಿದ. ಅಲ್ಲೊಂದು ಸುಮಧುರ ಸಂಗೀತ ಕಛೇರಿಯೇ ನಿರ್ಮಾಣವಾಗಿಬಿಟ್ಟಿತು.

ಕರ್ನಾಟಕದ ಸ್ಪರ್ಧಾ ವಿಭಾಗದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವಕರು ಬೂದು ಬಣ್ಣದ ಜಾಕೆಟ್ ತೊಟ್ಟಿದ್ದರು. ಕಡಲತಡಿಯ ನಗರದ ಬಿಸಿ ಹವೆಗೆ ಬೆವರು ಕಿತ್ತುಬರಲಾರಂಭಿಸಿದಾಗ ಜಾಕೆಟ್ ತೆಗೆದಿಡುವುದು ಅವರಿಗೆ ಅನಿವಾರ್ಯವಾಯಿತು.

ಸ್ಪರ್ಧೇತರ ವಿಭಾಗದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬೆಂಗಳೂರಿನ ಮತ್ತೊಂದು ತಂಡ ಯುವಜನೋತ್ಸವದ ಟೀಶರ್ಟ್ ತೊಟ್ಟುಕೊಂಡು ಇತರೆ ರಾಜ್ಯಗಳ ಯುವಕರೊಂದಿಗೆ ಹರಟೆಯಲ್ಲಿ ತೊಡಗಿತ್ತು. ಅಲ್ಲಿ ಭಾಷೆಯ ವೈಷಮ್ಯವೇನೂ ಕಾಣಲಿಲ್ಲ. ಹಳೆಯ ಸ್ನೇಹಿತರ ಹರಟೆಯಂತೆ ಗೋಚರಿಸುತ್ತಿತ್ತು.

ಟಿಎಂಎ ಪೈ ಸಭಾಂಗಣದ ಆವರಣಕ್ಕೆ ಮಿನಿ ಭಾರತದ ತುಣುಕನ್ನು ತಂದು ಇಟ್ಟಂತಿತ್ತು. ಹಾಡು, ಕುಣಿತ, ಹರಟೆಯಲ್ಲಿ ಯುವಕರು, ಯುವತಿಯರು ಮೈಮರೆತಿದ್ದರು. ವಿವಿಧತೆಯಲ್ಲಿ ಏಕತೆ ಎಂಬ ದೇಶದ ಧ್ವೇಯವಾಕ್ಯ ಇಲ್ಲಿ ಸಾಕಾರಗೊಂಡಿತ್ತು.

ಪ್ರತಿಕ್ರಿಯಿಸಿ (+)