ಮಂಗಳವಾರ, ಮೇ 11, 2021
20 °C

17 ಮಂದಿ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಣನೂರು: ಕುಲುವಾಡಿಕೆ ಕೆಲಸ ಮಾಡಲು ನಿರಾಕರಿಸಿದ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಕುಳವಾಡಿಕೆ ಕೆಲಸ ಮಾಡಲು ಒಪ್ಪದ ಕಾರಣ ಜಾತಿ ನಿಂದನೆ ಮಾಡಿ ತಮಗೆ ಜೀವ ಬೆದರಿಕೆ ಒಡ್ಡಿ ಊರಿನಿಂದ ಹೊರಗೆ ಕಳುಹಿಸುವುದಾಗಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿ ದಲಿತರು ನೀಡಿರುವ ದೂರಿನ ಮೇರೆಗೆ ಗುರುವಾರ ಕೊಣನೂರು ಪೊಲೀಸ್ ಠಾಣೆಯಲ್ಲಿ 17 ಮಂದಿ ಸವರ್ಣೀಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆ ಹಿನ್ನೆಲೆ: ಸಿದ್ದಾಪುರದಲ್ಲಿ ಗಣಪತಿ ಹಬ್ಬದ ದಿನ ಸರ್ವರ್ಣೀಯರ ಬೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಲುವಾಗಿ ಚಪ್ಪರ ಹಾಕಲು ದಲಿತರನ್ನು ಆಹ್ವಾನಿಸಲಾಗಿದೆ. ಇದನ್ನು ನಿರಾಕರಿಸಿದ ದಲಿತರೊಂದಿಗೆ ಕೆಲ ಸವರ್ಣೀಯರು ಗಲಾಟೆ ಮಾಡಿದ್ದಾರೆ. ಇದಲ್ಲದೇ ಕಳೆದ ಬುಧವಾರ ಗ್ರಾಮದಲ್ಲಿ ಸಾವನ್ನಪ್ಪಿದ್ದ ಸವರ್ಣೀಯ ವ್ಯಕ್ತಿಯೊಬ್ಬರ ಶವವನ್ನು ಹೂಳಲಿಕ್ಕೆ ಗುಂಡಿ ತೆಗೆಯಲು ಬರಲು ದಲಿತರು ಒಪ್ಪಿರಲಿಲ್ಲ.ಇದರಿಂದ ಕುಪಿತರಾದ ಗ್ರಾಮದ ಕೆಲ ಸವರ್ಣೀಯರು ಹಿಂದಿನಿಂದಲೂ ಅನೂಚನಾಗಿ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಧಿಕ್ಕರಿಸಿದ ಪರಿಣಾಮ ದಲಿತರನ್ನು ಕರೆಸಿ ಪಂಚಾಯಿತಿ ಸಭೆ ಮಾಡಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ದಲಿತರಿಗೆ ಅಂಗಡಿಯಲ್ಲಿ ಸಾಮಾನುಗಳನ್ನು ಖರೀದಿಸಲು ಬಿಡದೇ, ಪ್ಲೋರ್ ಮಿಲ್‌ಗೆ ಹೋಗುವಂತಿಲ್ಲ. ಶೇವಿಂಗ್ ಮತ್ತು ಕಟಿಂಗ್ ಮಾಡಿಸಿಕೊಳ್ಳಲು ಶಾಪ್‌ಗೆ ಬರಕೂಡದು. ಟೈಲರ್‌ಗಳು ಬಟ್ಟೆ ಹೊಲಿದು ಕೊಡಬಾರದು.ದೇವಸ್ಥಾನದೊಳಗೆ ಹೋಗಬಾರದು. ಸವರ್ಣೀಯರ ಜಮೀನುಗಳ ಮೇಲೆ ದನ- ಕರುಗಳನ್ನು ಬಿಡಕೂಡದು. ಇದನ್ನು ಉಲ್ಲಂಘಿಸಿದ ವರಿಂದ ದಂಡ ವಸೂಲಿ ಮಾಡುವುದಾಗಿ ಬೆದರಿಕೆ ಹಾಕಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ತಮಗೆ ರಕ್ಷಣೆ ಇಲ್ಲದೇ ಜೀವ ಭಯದಿಂದ ಬದುಕುವಂತಾಗಿದೆ ಎಂದು ದಲಿತರು ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.ಸಿದ್ದಾಪುರ: ಶಾಂತಿ ಸಭೆ

ಕೊಣನೂರು:
ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ದಲಿತರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಡೀ ಗ್ರಾಮದಲ್ಲಿ ಪೊಲೀಸರ ಕಾವಲು ಹಾಕಲಾಗಿತ್ತು. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.ಗುರುವಾರ ಬೆಳಿಗ್ಗೆ ಗ್ರಾಮದ ದಲಿತರ ಕೇರಿಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಬಿ. ಕಿತ್ತಳಿ, ಅರಕಲಗೂಡು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಜೆ. ಕುಮಾರಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ವಸಂತ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜು ಮತ್ತಿತರರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಕಲೋಕಿಸಿದರು.ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ದಲಿತರು ಹಾಗೂ ಸವರ್ಣೀಯ ಮುಖಂಡರನ್ನು ಒಂದೆಡೆ ಕರೆಸಿ ಶಾಂತಿ ಸಭೆ ನಡೆಸಲಾಯಿತು. ಅರಕಲಗೂಡು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಜೆ. ಕುಮಾರಸ್ವಾಮಿ ಮಾತನಾಡಿ, ಪ್ರಕರಣ ಕುರಿತು ಪೊಲೀಸರಿಂದ ಸಮಗ್ರ ತನಿಖೆ ನಡೆಸಲಾಗುವುದು. ಸತ್ಯಾಂಶ ಹೊರಬಂದ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.