ಸೋಮವಾರ, ಮೇ 17, 2021
22 °C

18ಕ್ಕೆ ಪಂಚಾಯಿತಿ ನೌಕರರಿಂದ ವಿಧಾನಸೌಧ ಚಲೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ 2011ರಲ್ಲಿ ಸರ್ಕಾರವೇ ನಿಗದಿ ಮಾಡಿದ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆಯನ್ನು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಇದೇ 18ಕ್ಕೆ `ವಿಧಾನಸೌಧ ಚಲೋ' ಬೃಹತ್ ಜಾಥಾವನ್ನು ಹಮ್ಮಿಕೊಂಡಿದೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, 18ರಂದು ಬೆಳಿಗ್ಗೆ 11ಗಂಟೆಗೆ  ನಗರ ರೈಲು ನಿಲ್ದಾಣದಿಂದ ಪ್ರಾರಂಭವಾಗುವ ಜಾಥಾ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೊನೆಗೊಳ್ಳಲಿದೆ ಎಂದರು.ರಾಜ್ಯದಲ್ಲಿ ಒಟ್ಟು 5627 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 50 ಸಾವಿರಕ್ಕೂ ಹೆಚ್ಚಿನ ನೌಕರರು ಕರ ವಸೂಲಿ, ನೀರು ಸರಬರಾಜು, ಕಂಪ್ಯೂಟರ್ ನಿರ್ವಹಣೆ ಹಾಗೂ ಕಸವಿಲೇವಾರಿ ಮಾಡುವ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.`ಬಿಲ್ ಕಲೆಕ್ಟರ್'ಗೆ ರೂ. 4919, ನೀರು ಸರಬರಾಜುಗಾರರಿಗೆ ರೂ. 4808, ಕಂಪ್ಯೂಟರ್ ನಿರ್ವಹಣೆಗಾರರಿಗೆ ರೂ. 4919, ಜವಾನರಿಗೆ ರೂ. 4587 ಹಾಗೂ ಕಸವಿಲೇವಾರಿ ಮಾಡುವವರಿಗೆ ರೂ. 3484 ಎಂದು ಕನಿಷ್ಠ ವೇತನವನ್ನು ನಿಗದಿ ಮಾಡಿ 2011 ಫೆಬ್ರುವರಿ 21ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಲ್ಲಿಯವರೆಗೂ ಈ ಆದೇಶ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾಮ ಪಂಚಾಯತಿಗಳಿಂದ ನೇಮಕಗೊಂಡು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಇನ್ನೂ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಿಲ್ಲ. ಇಂತಹ ನೌಕರರ ನೇಮಕಾತಿ ಅಕ್ರಮ ಎಂದು ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ನೌಕರರಿಗೆ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡುವುದರ ಜೊತೆಗೆ ಎಲ್ಲಾ ನೌಕರರಿಗೂ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ರಾಜ್ಯದ ವಿವಿಧೆಡೆಯಿಂದ 10 ಸಾವಿರ ನೌಕರರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದು ದಿನದ ಮಟ್ಟಿಗೆ ಕುಡಿಯುವ ನೀರು ಸರಬರಾಜು ಹೊರತುಪಡಿಸಿ, ಉಳಿದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗುವುದು. ಜಾಥಾ ಕೊನೆಗೊಂಡ ನಂತರ ಸಂಘದ ಅಧ್ಯಕ್ಷರು ಹಾಗೂ ಕೆಲ ನೌಕರರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸುವರು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.