ಸೋಮವಾರ, ಮೇ 23, 2022
20 °C

2ಜಿ ತರಂಗಾಂತರ:ಸಿಎಜಿ ವರದಿ ಆಧರಿಸಿ ಲೈಸೆನ್ಸ್ ರದ್ದು ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಿಎಜಿ ವರದಿಯೊಂದನ್ನೇ ಆಧರಿಸಿ 2ಜಿ ತರಾಂಗತರ ಹಂಚಿಕೆಯ ಪರವಾನಗಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.‘ತರಂಗಾಂತರ ಹಂಚಿಕೆ ರದ್ದತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳಬೇಕಾದರೂ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿ      ಇತ್ಯರ್ಥವಾಗುವವರೆಗೂ ಕಾಯಲೇಬೇಕು’ ಎಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ನ್ಯಾಯ   ಪೀಠವು ತಿಳಿಸಿದೆ.‘ಈಗ ಸರ್ಕಾರ ಈ ವಿಚಾರವಾಗಿ ಏನು ಮಾಡುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಕ್ರಮ ಜರುಗಿಸಬೇಕಾದರೆ ಕೋರ್ಟ್ ತೀರ್ಪಿಗೆ ಕಾಯಲೇಬೇಕು’ ಎಂದು ತಿಳಿಸಿದೆ.ಅರ್ಹತೆ ಇಲ್ಲದ ಕಂಪೆನಿಗಳಿಗೆ ನೀಡಲಾಗಿರುವ ಪರವಾನಗಿಯನ್ನು ಕ್ರಮಬದ್ಧಗೊಳಿಸದಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಮಾಡಿರುವ ಮನವಿಗೆ ನ್ಯಾಯಪೀಠ ಮೇಲಿನಂತೆ ಪ್ರತಿಕ್ರಿಯಿಸಿದೆ. ಅರ್ಹತೆ ಇಲ್ಲದ ಕಂಪೆನಿಗಳಿಗೆ ನೀಡಲಾಗಿರುವ ಪರವಾನಗಿಯನ್ನು ದಂಡ ವಿಧಿಸುವ ಮೂಲಕ ಕ್ರಮಬದ್ಧಗೊಳಿಸುವ ಯತ್ನ ನಡೆದಿದೆ ಎಂದು ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.ಒಮ್ಮೆ ಸರ್ಕಾರ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ನಿರ್ಧರಿಸಿದ್ದರೆ ಸಿಎಜಿ ವರದಿಯೊಂದನ್ನೇ ಆಧರಿಸಿ ಆ ರೀತಿ  ಮಾಡಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.ಸಿಪಿಐಎಲ್ ಸಂಘಟನೆಯಲ್ಲದೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, 2ಜಿ ತರಂಗಾಂತರ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ದೂರಿದ್ದಾರೆ. ಈ ಅರ್ಜಿಯನ್ನೂ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿದೆ.

ರಾಜಾ ಸೋದರ ವಿಚಾರಣೆ

ನವದೆಹಲಿ, (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ಸಂಬಂಧ ಸಿಬಿಐ ಮಂಗಳವಾರ ಮಾಜಿ ಸಚಿವ ಎ.ರಾಜಾ ಸೋದರ ಎ.ಕೆ.ಪೆರುಮಾಳ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು.ಸಿಬಿಐ ಪ್ರಧಾನ ಕಚೇರಿಗೆ ಬೆಳಿಗ್ಗೆ ಬಂದ ಪೆರುಮಾಳ್ ಅವರನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ವಿಚಾರಣೆಗೆ ಒಳಪಡಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.