ಬುಧವಾರ, ಮೇ 25, 2022
24 °C

2ಜಿ ಹಗರಣ: ರಾಜಾ ವಿರುದ್ಧ ದೋಷಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2ಜಿ ಹಗರಣ: ರಾಜಾ ವಿರುದ್ಧ ದೋಷಾರೋಪ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತು ಮಾಜಿ ಸಚಿವ ಎ.ರಾಜಾ, ಸಂಸದೆ ಕನಿಮೊಳಿ, ಕಾರ್ಪೊರೇಟ್ ಪ್ರಮುಖರು ಸೇರಿದಂತೆ 17 ಮಂದಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ದೋಷಾರೋಪ ಸಿದ್ಧಪಡಿಸಿದೆ. ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಒಪ್ಪಿಕೊಂಡಿದ್ದು, ಮುಂದೆ ಪ್ರಕರಣದ ವಿಚಾರಣೆ ನಡೆಸಲಿದೆ.

ಈ 17 ಆರೋಪಿಗಳು ತಮ್ಮ ವಿರುದ್ಧ ಸಿಬಿಐ ಮಾಡಿರುವ ಆರೋಪಗಳನ್ನು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ಅಲ್ಲಗಳೆದಿದ್ದಾರೆ. ಆದರೆ, ನ್ಯಾಯಾಧೀಶ ಒ.ಪಿ. ಸೈನಿ ಆರೋಪಪಟ್ಟಿಯನ್ನು ಮಾನ್ಯ ಮಾಡಿ, ಮುಂದಿನ ವಿಚಾರಣೆಯನ್ನು ನವೆಂಬರ್ 11ಕ್ಕೆ ನಿಗದಿ ಮಾಡಿದ್ದಾರೆ.

`ಆರೋಪಿಗಳು ಭಾರತೀಯ ದಂಡ ಸಂಹಿತೆ (ಐಪಿಸಿ) 120-ಬಿ (ಕ್ರಿಮಿನಲ್ ಒಳಸಂಚು), 409 (ವಿಶ್ವಾಸ ದ್ರೋಹ), 420 (ವಂಚನೆ), 468 ಮತ್ತು 471 (ನಕಲಿ ದಾಖಲೆ ಸೃಷ್ಟಿ) ಕಲಂಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆಂದು ಮೇಲ್ನೋಟಕ್ಕೆ ತೋರುತ್ತದೆ~ ಎಂದು ಸೈನಿ ತಮ್ಮ 700 ಪುಟಗಳ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಸಚಿವ ಎ.ರಾಜಾ ಮತ್ತು ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ಆರ್.ಕೆ. ಚಂದೋಲಿಯಾ, ಟೆಲಿಕಾಂ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳಿವೆ ಎಂದೂ ನ್ಯಾಯಾಧೀಶರು  ಹೇಳಿದ್ದಾರೆ.

ಈ ಆದೇಶದಿಂದ ಆರೋಪಿಗಳಿಗೆ ಈಗ ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ದೊರಕಿದೆ. ಡಿಎಂಕೆ ಸಂಸದೆ ಕನಿಮೊಳಿ ಈ ಮೊದಲು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ, ಸಿಬಿಐ ನ್ಯಾಯಾಲಯದಲ್ಲಿ ದೋಷಾರೋಪ ನಿಗದಿ ನಂತರ ಜಾಮೀನು ಕೋರಿಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದರು.

ದೂರಸಂಪರ್ಕ ಉದ್ದಿಮೆಗಳಾದ ರಿಲಯನ್ಸ್, ಸ್ವಾನ್ ಮತ್ತು ಯುನಿಟೆಕ್ (ತಮಿಳುನಾಡು) ವೈರ್‌ಲೆಸ್ ಕಂಪೆನಿಗಳ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರವಿದೆ ಎಂದೂ ನ್ಯಾಯಾಧೀಶರು ಹೇಳಿದರು. ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ, ಅಧ್ಯಕ್ಷ ಸುರೇಂದ್ರ ಪಿಪರಾ, ಹಿರಿಯ ಉಪಾಧ್ಯಕ್ಷ ಹರಿ ನಯ್ಯರ್ ವಿರುದ್ಧ ಮಾಡಿರುವ ಆರೋಪಗಳಿಗೂ ತನಿಖಾ ಸಂಸ್ಥೆ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ಸೈನಿ ವಿವರಿಸಿದರು.

ಉಳಿದಂತೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಮತ್ತವರ ಸಂಬಂಧಿ ಆಸಿಫ್ ಬಲ್ವಾ, ಸ್ವಾನ್ ಟೆಲಿಕಾಂ ಉದ್ಯೋಗಿ ರಾಜೀವ್ ಅಗರ್‌ವಾಲ್, ಯುನಿಟೆಕ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಮತ್ತು ಡಿಬಿ ರಿಯಾಲಿಟಿ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಗೋಯಂಕ ವಿರುದ್ಧವೂ ಮುಂದಿನ ವಿಚಾರಣೆ ನಡೆಸಲು ಆದೇಶ ಹೊರಬಿದ್ದಿದೆ.

ಪ್ರಕರಣದ ಪ್ರಮುಖ ಆರೋಪಿ ರಾಜಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡಿಎಂಕೆ ಸಂಸದೆ ಕನಿಮೊಳಿ, ಕಲೈಂಜ್ಞರ್ ವಾಹಿನಿಗೆ ಅನುಕೂಲ ಮಾಡಿಕೊಡಲು ಒಳಸಂಚು ನಡೆಸಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಕಲೈಂಜ್ಞರ್ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಮತ್ತು ಬಾಲಿವುಡ್ ಸಿನಿಮಾ ನಿರ್ಮಾಪಕ ಕರಿಂ ಮೊರಾನಿ ವಿರುದ್ಧದ ಪುರಾವೆಗಳೂ ಮೇಲ್ನೋಟಕ್ಕೆ ಸರಿಯೆಂದು ತೋರುತ್ತವೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ತಾವು ಅನುಸರಿಸಿದ ದೂರಸಂಪರ್ಕ ನೀತಿಯಿಂದಾಗಿ ಕ್ಷೇತ್ರಕ್ಕೆ ಭಾರಿ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹರಿದು ಬಂತು ಎಂಬ ರಾಜಾ ಸಮರ್ಥನೆಯನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಖಾಸಗಿ ಬಂಡವಾಳ ಹೂಡಿಕೆ ಆಕರ್ಷಿಸುವ ಸಲುವಾಗಿ ಕಾನೂನು ಆಡಳಿತವನ್ನು ಸಡಿಲಗೊಳಿಸಲು ಅವಕಾಶ ನೀಡಲಾಗದು ಎಂದು ಸೈನಿ ಸ್ಪಷ್ಟಪಡಿಸಿದರು.

ಬಂಡವಾಳ ಹರಿವಿನ ತಗ್ಗುವಿಕೆ ಅಥವಾ ಹೆಚ್ಚಳದ ಪ್ರಮಾಣವನ್ನು ತೋರಿಸಿ ಕ್ರಿಮಿನಲ್ ಪ್ರಕರಣದಲ್ಲಿ ರಕ್ಷಣೆ ಪಡೆಯಲಾಗದು. ಹಾಗೆಯೇ, ತಮ್ಮ ನೀತಿಯಿಂದ ಎಲ್ಲರಿಗೂ ಮೊಬೈಲ್ ಸಂಪರ್ಕ ಲಭ್ಯವಾಗಿದೆ ಎಂಬುದನ್ನೂ  ಸಮರ್ಥನೆಯಾಗಿ ಪರಿಗಣಿಸಲಾಗದು  ಎಂದರು.

ಸಿಬಿಐ ಸಲ್ಲಿಸಿದ ಆರೋಪಪಟ್ಟಿ ಕುರಿತು ಎರಡು ತಿಂಗಳ ಕಾಲ ಪ್ರಾಥಮಿಕ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು, ಅ. 14ರಂದು ಆದೇಶ ಕಾಯ್ದಿರಿಸಿತ್ತು. ಈಗ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಿದೆ.

ಏ.2ರಂದು ಎ.ರಾಜಾ ಮತ್ತು ಇತರರ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಿದ್ದ ಸಿಬಿಐ, ಕ್ರಿಮಿನಲ್ ಒಳಸಂಚು ನಡೆಸಿ ಅನರ್ಹ ಟೆಲಿಕಾಂ ಕಂಪೆನಿಗಳಿಗೆ 2ಜಿ ತಂಗಾಂತರ  ಹಂಚಿಕೆ ಮಾಡಿದ್ದರಿಂದ ರೂ 30,984 ಕೋಟಿ ಆದಾಯ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಆಪಾದಿಸಿತ್ತು.

ಆತಂಕ, ಮೌನ, ಕಣ್ಣೀರು...

ನವದೆಹಲಿ (ಐಎಎನ್‌ಎಸ್): 2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಕುರಿತು ಇಲ್ಲಿನ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ನ್ಯಾಯಾಲಯ ಶನಿವಾರ ಆದೇಶ ಪ್ರಕಟಿಸಿದಾಗ ಅನೇಕ ಆರೋಪಿಗಳಲ್ಲಿ ಮೌನ- ಆತಂಕ ಮನೆ ಮಾಡಿದ್ದರೆ, ಕೆಲವು ಆರೋಪಿಗಳ ಸಂಬಂಧಿಕರು ಕಣ್ಣೀರು ಇಟ್ಟರು.

ನ್ಯಾಯಾಧೀಶ ಒ.ಪಿ. ಸೈನಿ 700 ಪುಟಗಳಲ್ಲಿ ಆದೇಶದಲ್ಲಿ ಬಹುಮುಖ್ಯವಾದ ಭಾಗಗಳನ್ನು ಮಧ್ಯಾಹ್ನ 12.05ರಲ್ಲಿ ಓದಲು ಆರಂಭಿಸಿದರು.

ಪ್ರಕರಣದ ಪ್ರಮುಖ ಆರೋಪಿಯಾದ ಮಾಜಿ ಸಚಿವ ಎ.ರಾಜಾ ತಮ್ಮ ವಿರುದ್ಧ ಆರೋಪಗಳ ಕುರಿತು ಆದೇಶ ಪ್ರಕಟವಾದಾಗ ಬೆಚ್ಚಿಬಿದ್ದವರಂತೆ ಕಂಡರು. ಕನಿಮೊಳಿ ತಬ್ಬಿಬ್ಬಾದರು.

ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಅವರ ತಾಯಿ ಮತ್ತು ಪತ್ನಿ ಕಣ್ಣೀರಿಟ್ಟರು. ರಿಲಯನ್ಸ್‌ನ ಮೂವರು ಉನ್ನತ ಅಧಿಕಾರಿಗಳು ಮೌನವಾಗಿ ಆದೇಶ ಆಲಿಸಿದರು.

ಸೋನಿಯಾ ಭೇಟಿ ಮಾಡಿದ ಕರುಣಾನಿಧಿ

ನವದೆಹಲಿ (ಐಎಎನ್‌ಎಸ್): ಡಿಎಂಕೆ ಅಧ್ಯಕ್ಷ ಎಂ. ಕುರುಣಾನಿಧಿ ತಮ್ಮ ಮಗಳು ಕನಿಮೊಳಿಯನ್ನು ಭೇಟಿ ಮಾಡುವ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶನಿವಾರ ಭೇಟಿಯಾಗಿದ್ದರು.

ಇದೊಂದು ಸೌಜನ್ಯದ ಭೇಟಿ ಎಂದು ಕರುಣಾನಿಧಿ ಹೇಳಿದ್ದಾರೆ. ಆದರೆ, 2ಜಿ ಹಗರಣ ಕುರಿತು ಆರೋಪಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿಗೊಳಿಸಿ ಮುಂದಿನ ವಿಚಾರಣೆಗೆ ದಿನಾಂಕ ಗೊತ್ತು ಮಾಡಿರುವ ಹಿನ್ನೆಲೆಯಲ್ಲಿ ಅವರು ಸೋನಿಯಾರನ್ನು ಭೇಟಿ ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

`ಜಾಮೀನು ವಿಚಾರಣೆ ಸುಗಮ~

`ಸಿಬಿಐ ವಿಶೇಷ ನ್ಯಾಯಾಲಯವು 2ಜಿ ಹಗರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಿರುವುದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಗೆ ದಾರಿ ಮಾಡಿಕೊಟ್ಟಿದೆ~ ಎಂದು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ.

`ಕೋರ್ಟ್‌ಲ್ಲಿ ವಿಚಾರಣೆ ಬಾಕಿರುವ ಕಾರಣ ಆ ಬಗ್ಗೆ ಪ್ರತಿಕ್ರಿಯಿಸಲಾರೆ. ಮುಂದೇನಾಗುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಕಾದು ನೋಡಬೇಕಷ್ಟೆ~ ಎಂದರು.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.