ಗುರುವಾರ , ಮೇ 28, 2020
27 °C

2ನೇ ಹಂತಕ್ಕೆ ವಿರೋಧ: ನಳಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಮಂಗಳೂರು ವಿಶೇಷ ಆರ್ಥಿಕ ವಲಯ ಎರಡನೇ ಹಂತದ (2035 ಎಕರೆ) ವಿಸ್ತರಣೆಗೆ ನನ್ನ ಪ್ರಬಲ ವಿರೋಧವಿದೆ. ನಮ್ಮ ಪಕ್ಷವೂ ವಿರೋಧ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಡಿನೋಟಿಫೈ ಮಾಡುವ ಭರವಸೆಯನ್ನೂ ಕೊಟ್ಟಿದ್ದಾರೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದರು.‘ನಾನು ಹಿಂದಿನಿಂದಲೂ ವಿಶೇಷ ಆರ್ಥಿಕ ವಲಯದ ವಿಸ್ತರಣೆಗೆ ವಿರೋಧ ಸೂಚಿಸಿದ್ದೇನೆ. ಮೊದಲ ಹಂತದಲ್ಲಿ ತೆಗೆದುಕೊಂಡ 1800 ಎಕರೆ ಪ್ರದೇಶದಲ್ಲಿ ಭರವಸೆ ನೀಡಿದಷ್ಟು ಕಂಪೆನಿಗಳು ಬಂದಿಲ್ಲ. ಎಷ್ಟು ಕಂಪೆನಿಗಳೂ ಬಂದಿವೆ ಎಂಬ ಮಾಹಿತಿಯನ್ನೂ ನೀಡಿಲ್ಲ. ಅವರ ಲೆಕ್ಕದಲ್ಲಿ 60 ಕಂಪೆನಿಗಳು ಬರಬೇಕಿತ್ತು. ಆದರೆ ಬಂದಿರೋದು ಮೂರು ಕಂಪೆನಿಗಳು’ ಎಂದರು.ನಗರದ ಪತ್ರಕರ್ತರ ಅಧ್ಯಯನ ಕೇಂದ್ರ ಗುರುವಾರ ಸಹೋದಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಎಂಎಸ್‌ಇಝೆಡ್: ಜನಪ್ರತಿನಿಧಿ ಸಂವಾದ’ ಕಾರ್ಯಕ್ರಮದಲ್ಲಿ ಅವರು ತಮ್ಮ ಖಚಿತ ಅಭಿಪ್ರಾಯ ಮಂಡಿಸಿದರು.‘ಉದ್ಯಮದ ಹೆಸರಿನಲ್ಲಿ ಗೂಂಡಾಗಿರಿ ಮಾಡುವ, ಕೃಷಿಕರ ಭೂಮಿಯನ್ನು ಬಲವಂತವಾಗಿ ಕಬಳಿಸುವ ಯೋಜನೆಗಳಿಗೆ ನನ್ನ ವಿರೋಧವಿದೆ. ಜನ ಸ್ವಯಂಪ್ರೇರಿತರಾಗಿ ಕೊಟ್ಟರೆ ವಿರೋಧವಿಲ್ಲ. ಆದರೆ ಸಂಸದನಾಗುವ ಮೊದಲೇ ನಾನು ಈ ಯೋಜನೆಗೆ ವಿರೋಧ ಸೂಚಿಸಿದ್ದೆ. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇದೇ ವಿಚಾರವಾಗಿ ನಡೆಸುತ್ತಿರುವ ಹೋರಾಟವನ್ನೂ ಬೆಂಬಲಿಸುತ್ತಾ ಬಂದಿದ್ದೇನೆ’ ಎಂದು ಹೇಳಿದರು.‘ಮಂಗಳೂರಿಗೆ ಎಂಆರ್‌ಪಿಎಲ್ ಬಂದಾಗ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಜಿಲ್ಲೆಗೆ ಎಂಆರ್‌ಪಿಎಲ್‌ನ ಕೊಡುಗೆ ಏನೂ ಇಲ್ಲ. ಯೋಜನೆ ಸಂತ್ರಸ್ತರ ಕಾಲೊನಿಯನ್ನೂ ಸಮರ್ಪಕವಾಗಿ ನಿರ್ಮಿಸಿಲ್ಲ. ಭರವಸೆ ನೀಡಿದಂತೆ ಮೂರು ಗ್ರಾಮಗಳನ್ನು ದತ್ತು ಸಹ ತೆಗೆದುಕೊಂಡಿಲ್ಲ. ಈಗ ಎಂಎಸ್‌ಇಝೆಡ್ 300-400 ಜನರಿಗೆ ತರಬೇತಿ ನೀಡಿದೆ. ಆದರೆ ಕೆಲಸವನ್ನೇ ನೀಡಿಲ್ಲ. ತರಬೇತಿಗೆ ಅಧಿಕೃತ ಪ್ರಮಾಣಪತ್ರವೂ ಇಲ್ಲವಾಗಿದೆ ಎಂದು ಅವರು ಪರಿಸ್ಥಿತಿಯ ಚಿತ್ರಣ ನೀಡಿದರು.ಸುಳ್ಳು ಮಾಹಿತಿ ಕೊಡುವುದರಲ್ಲಿ ಎಸ್‌ಇಝೆಡ್ ಅಧಿಕಾರಿಗಳು ಮೊದಲಿಗರು ಎಂದು ಕುಟುಕಿದ ಸಂಸದ, ‘ಯಾವುದೇ ಮಾಧ್ಯಮದವರೂ ಎಸ್‌ಇಝೆಡ್ ವಿರುದ್ಧ ಹೋರಾಟಕ್ಕೆ ಹೆಚ್ಚು ಪ್ರಚಾರ ನೀಡುವುದಿಲ್ಲ. ನ್ಯಾಯ ದೊರಕಿಸಿಕೊಡುವುದು ಜನಪ್ರತಿನಿಧಿಗಳ ಕೆಲಸವೇ ಆಗಿದ್ದರೂ ಮಾಧ್ಯಮಗಳಿಗೂ ಹೊಣೆಗಾರಿಕೆ ಇದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಬಿಜೆಪಿ ಮಾಡಲಿದೆ’ ಎಂದರು.ಅಭಯಚಂದ್ರ ಸಲಹೆ:  ‘ಈ ಹೋರಾಟದಲ್ಲಿ ಈಗಾಗಲೇ ಹಲವು ಸ್ವಾಮೀಜಿಗಳು ಭಾಗಿಯಾಗಿದ್ದಾರೆ. ಹೀಗಾಗಿ ನಾನು ಮುಂದೆ ಹೋಗಿಲ್ಲ. ನಾನು ರಾಜಕೀಯ ಮಾಡಲು ಇಷ್ಟಪಡುವುದಿಲ್ಲ. ಆದರೆ ಕೈಗಾರಿಕೆಗಳ ವಿಸ್ತರಣೆ ಸಂದರ್ಭದಲ್ಲಿ ಕೃಷಿ ಭೂಮಿಯನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರುತ್ತದೆ’ ಎಂದು ಶಾಸಕ ಅಭಯಚಂದ್ರ ನುಡಿದರು.‘ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದರೆ, ಎಂಎಸ್‌ಝೆಡ್ ಕಾರಣವಾಗಿ ಉಂಟಾಗಿರುವ ಎಲ್ಲ ಗೊಂದಲಗಳಿಗೂ ಕೊನೆಹಾಡಲು ಸಾಧ್ಯ’ ಎಂದು ಅವರು ಸಲಹೆ ನೀಡಿದರು.‘ನನ್ನ ಕ್ಷೇತ್ರದಲ್ಲಿ ಹೊಸ ಯೋಜನೆಗಳಿಗೆ ವಿರೋಧ ಸೂಚಿಸಿದ್ದೇನೆ. ಹಾಗಾಗಿಯೇ ಸುವರ್ಣ ಕಾರಿಡಾರ್ ಯೋಜನೆ, ಆಶಾಪುರ ಮೈನಿಂಗ್ ಯೋಜನೆ ಹಿಂದೆ ಸರಿದಿವೆ’ ಎಂದರು.ಕುಡುಬಿ ಸಮುದಾಯದ ಪರ ಗಿರಿಯ ಗೌಡ ಮಾತನಾಡಿ, ‘ಕೃಷಿಯನ್ನು ಅವಲಂಬಿಸಿದ್ದ ನಮಗೆ ಈಗ ದಿಕ್ಕೇ ತೋಚದಾಗಿದೆ. ಗುತ್ತಿನ ಮನೆಯ ದೈವ-ದೇವರುಗಳಿಗೆ ನೆಲೆ ಕಲ್ಪಿಸಲು ನಮ್ಮ ಬೆಳೆಗಳನ್ನು ಹಾಳು ಮಾಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಮನೆ ಇರುವ ಜಾಗವನ್ನೂ ಕಬಳಿಸಲು ಮುಂದಾಗಿದ್ದಾರೆ. ನಮಗೂ ದೈವ-ದೇವರು ಇದ್ದಾರೆ. ಅವುಗಳಿಗೆ ಎಲ್ಲಿ ನೆಲೆ ಕಲ್ಪಿಸುವುದು?’ ಎಂಬ ಪ್ರಶ್ನೆ ಮುಂದಿಟ್ಟರು.ಜಿಲ್ಲಾ ಪಂಚಾಯಿತಿ ಬಜ್ಪೆ ಕ್ಷೇತ್ರದ ಸದಸ್ಯ ರಿತೇಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್ ಅವರೂ ಎಂಎಸ್‌ಇಝೆಡ್ ಎರಡನೇ ಹಂತದ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದರು.      ಭೂಸ್ವಾಧೀನ ಪ್ರಕ್ರಿಯೆಯಿಂದ ಸಂತ್ರಸ್ತರಾಗಿರುವ ಕುಡುಬಿ ಜನಾಂಗದ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿದ್ದರು. ಆದರೆ ಪೆರ್ಮುದೆ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿರಲಿಲ್ಲ.‘ಆಮಿಷಕ್ಕೆ ಬಲಿಯಾಗಿಲ್ಲ’

‘ನಾನು ಎಂಎಸ್‌ಇಝೆಡ್‌ನ ಯಾವುದೇ ಒತ್ತಡಕೆ ಆಮಿಷಕ್ಕೆ ಬಲಿಯಾಗಿಲ್ಲ. ಎಸ್‌ಇಝೆಡ್ ಮೇಲೆ ನನಗೆ ದ್ವೇಷವಿಲ್ಲ, ಪ್ರೀತಿಯೂ ಇಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ವ್ಯವಹರಿಸುತ್ತಿದ್ದೇನೆ’ ಎಂದರು ಸಂಸದ ನಳಿನ್ ಕುಮಾರ್.‘ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ನಾನು ಯಾವುದೇ ಸಂಘ-ಸಂಸ್ಥೆಗಳಿಂದ ದೇಣಿಗೆ ಪಡೆದಿಲ್ಲ. ಪಕ್ಷವೂ ಇದೇ ರೀತಿ ನಿರ್ದೇಶನ ನೀಡಿತ್ತು’ ಎಂದು ಅವರು ಕೆಲವು ವದಂತಿಗಳಿಗೆ ತೆರೆ ಎಳೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.