ಗುರುವಾರ , ಫೆಬ್ರವರಿ 25, 2021
20 °C

23ರಿಂದ ಮಾವು– ಹಲಸು ಘಮಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

23ರಿಂದ ಮಾವು– ಹಲಸು ಘಮಲು

ಬೆಂಗಳೂರು: ಕಳಪೆ ಗುಣಮಟ್ಟದ ಮಾವು ಹಾಗೂ ಹಲಸಿನ ಹಣ್ಣುಗಳನ್ನು ತಿಂದು ಮುಖ ಹುಳಿ ಮಾಡಿಕೊಂಡ ನಗರದ ಮಾವು ಹಾಗೂ ಹಲಸು ಪ್ರಿಯರಿಗೆ ಸಿಹಿ ಸುದ್ದಿ. ಲಾಲ್‌ಬಾಗ್‌­ನಲ್ಲಿ ಉತ್ತಮ ಗುಣಮಟ್ಟದ ತಾಜಾ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಸವಿಯಬಹುದು.‘ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗ­ದಲ್ಲಿ ನಗರದ ಲಾಲ್‌ಬಾಗ್‌ನಲ್ಲಿ ಇದೇ 23ರಿಂದ ಜೂನ್‌ 15ರ ವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸ­ಲಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಪ್ರಭಾರ ನಿರ್ದೇಶಕ ಜಿ.ಸತೀಶ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘23ರಂದು ಮಧ್ಯಾಹ್ನ 12 ಗಂಟೆಗೆ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮೇಳವನ್ನು ಉದ್ಘಾಟಿಸು­ವರು. ಮಾವು ಹಾಗೂ ಹಲಸಿನ ತಳಿಗಳ ಪ್ರದರ್ಶನ ಮೇ 30 ರ ವರೆಗೆ ಮಾತ್ರ ಇರಲಿದೆ. ಮಾರಾಟ ಮೇಳ ಜೂನ್‌ 15ರ ವರೆಗೆ ಮುಂದುವರಿ­ಯ­ಲಿದೆ. ಮೇಳದಲ್ಲಿ 600 ಟನ್‌ ಮಾವಿನ ಹಣ್ಣು ಮಾರಾಟ ಆಗುವ ನಿರೀಕ್ಷೆ ಇದೆ’ ಎಂದರು.ಮೇಳದ ಉದ್ದೇಶ: ‘ಬೆಳೆಗಾರರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ತಾಜಾ ಹಣ್ಣುಗಳು ದೊರಕುವಂತೆ ಮಾಡುವುದು ಮೇಳದ ಉದ್ದೇಶ. ಒಂದೇ ಸೂರಿನಡಿಯಲ್ಲಿ ಬೆಳೆಗಾರರು, ಅಧಿಕಾರಿಗಳು, ವಿಜ್ಞಾನಿಗಳು, ಉದ್ದಿಮೆ-­ದಾರ­ರನ್ನು ಸೇರಿಸಿ ವಿಚಾರ ವಿನಿ­ಮಯಕ್ಕೆ ಅವಕಾಶ ಕಲ್ಪಿಸುವುದು, ಜನಸಾಮಾನ್ಯರಿಗೆ ಹಾಗೂ ಗ್ರಾಹಕರಿಗೆ ತಳಿ­ಗಳ ವೈವಿಧ್ಯತೆ ಬಗ್ಗೆ ತಿಳಿಸುವ ಪ್ರಯತ್ನ ಮಾಡುವುದು ಮತ್ತು ಗ್ರಾಹಕ­ರಿಗೆ ಕಾರ್ಬೈಡ್‌ ಮುಕ್ತ, ಸಹಜ­ವಾದ ಮಾಗಿದ ಹಣ್ಣುಗಳನ್ನು ಒದಗಿ­ಸುವ ಉದ್ದೇಶ ಹೊಂದಲಾಗಿದೆ’ ಎಂದರು.‘ಮಾವಿನ ಹಣ್ಣುಗಳನ್ನು ರಟ್ಟಿನ ಡಬ್ಬಿಗಳಲ್ಲಿ ಹಾಗೂ ಜೈವಿಕ ವಿಘಟನೆ ಚೀಲಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು’ ಎಂದರು

‘ಮೇಳದಲ್ಲಿ ವಿವಿಧ ತಳಿಗಳ ಮಾರಾಟ ಬೆಲೆಯನ್ನು ನಿಗದಿ ಮಾಡಲು ಒಂದು ಸಮಿತಿಯನ್ನು ರಚಿಸಲಾಗಿದೆ’ ಎಂದು ಅವರು ವಿವರಿಸಿದರು.ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್‌. ಜಯಪ್ರಕಾಶ್ ಮಾತನಾಡಿ, ‘ಮಾವು ಉತ್ಪಾದನೆಗೆ ರಾಜ್ಯ ಪ್ರಸಿದ್ಧವಾಗಿದೆ. ನಗರಕ್ಕೆ ಕೋಲಾರ, ರಾಮನಗರ, ಚಿಕ್ಕಬಳ್ಳಾ­ಪುರ ಮತ್ತಿತರ ಕಡೆಗಳಿಂದ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ’ ಎಂದರು.‘ಮಳೆ ಕೊರತೆಯಿಂದ ರಾಜ್ಯದಲ್ಲಿ ಈ ಸಲ ಮಾವಿನ ಇಳುವರಿ ಕಡಿಮೆ ಆಗಿದೆ. ಈ ವರ್ಷದ ಮಾವಿನ ಇಳುವರಿ ನಾಲ್ಕು ಲಕ್ಷ ಟನ್‌ ಮಾತ್ರ. ಸಾಮಾನ್ಯವಾಗಿ ರಾಜ್ಯದಲ್ಲಿ 10 ಲಕ್ಷ ಟನ್‌ ಮಾವು ಇಳುವರಿ ಬರುತ್ತದೆ. ಮಾವಿನ ಹಣ್ಣುಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ ಆಗಿದೆ’ ಎಂದರು.ಭಾರತದ ಆಲ್ಫಾನ್ಸೊ ಮಾವಿನ ಹಣ್ಣುಗಳ ಆಮದಿಗೆ ಐರೋಪ್ಯ ಒಕ್ಕೂಟ ತಾತ್ಕಾಲಿಕ ನಿಷೇಧ ಹೇರಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಭಾರತಕ್ಕೆ ಐರೋಪ್ಯ ಒಕ್ಕೂಟ ದೊಡ್ಡ ಮಾರುಕಟ್ಟೆ ಅಲ್ಲ. ಹೀಗಾಗಿ ನಿಷೇಧದಿಂದ ಹೆಚ್ಚಿನ ಸಮಸ್ಯೆ ಆಗುವು­ಲ್ಲ. ದೇಶದಿಂದ 8,000 ಟನ್‌ ಮಾವು ರಫ್ತು ಮಾಡಲಾಗುತ್ತದೆ. ಇದರಲ್ಲಿ ಗಲ್ಫ್‌ ರಾಷ್ಟ್ರಗಳಿಗೆ 5,000 ಟನ್‌ ಮಾವು ರಫ್ತು ಆಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಮಾವು ತಳಿ

ಬಾದಾಮಿ, ಮಲಗೋವಾ, ಸಿಂಧೂರ, ರಸಪೂರಿ, ಮಲ್ಲಿಕಾ, ನೀಲಂ,  ಸಕ್ಕರೆಗುತ್ತಿ, ತೋತಾ­ಪುರಿ, ಬಂಗನಪಲ್ಲಿ, ಬೆನಿಶಾನ್‌ ಮತ್ತಿತರ ತಳಿಗಳು ಇರಲಿವೆ.

ಹಲಸಿನ ತಳಿ

ಸ್ವರ್ಣ, ಲಾಲ್‌ಬಾಗ್‌ ಮಧುರಾ, ಲಾಲ್‌ಬಾಗ್‌ ಭೀಮಾ, ತೂಬುಗೆರೆ, ಜಾಣಗೆರೆ ಮತ್ತಿತರ ತಳಿಗಳು ಇರಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.