ಬುಧವಾರ, ಮಾರ್ಚ್ 3, 2021
31 °C
ರಾಜಕಾಲುವೆ ದಂಡೆಮೇಲೆ ಜೆಸಿಬಿ ಸದ್ದು * ಹೆಚ್ಚಿದ ಸ್ವಯಂಪ್ರೇರಿತ ತೆರವು

25 ಬಿಬಿಎಂಪಿ ಮಳಿಗೆಗಳು ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ಬಿಬಿಎಂಪಿ ಮಳಿಗೆಗಳು ನೆಲಸಮ

ಬೆಂಗಳೂರು: ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರವೂ ಮುಂದುವರಿಯಿತು. ಮಹದೇವಪುರ, ಆರ್‌.ಆರ್‌.ನಗರ ಮತ್ತು ಯಲಹಂಕ ವಲಯಗಳ ವಿವಿಧ ವಾರ್ಡ್‌ಗಳಲ್ಲಿ ಜೆಸಿಬಿಗಳು ಸದ್ದು ಮಾಡಿದವು.ಒಂದೆಡೆ ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ ತೀವ್ರಗೊಂಡರೆ, ಇನ್ನೊಂದೆಡೆ ಒತ್ತುವರಿ ಪ್ರದೇಶದಲ್ಲಿದ್ದ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ  ಕಟ್ಟಡದ ಭಾಗವನ್ನು ತೆರವು ಮಾಡಿದರು. ಬಿಬಿಎಂಪಿಗೆ ಸೇರಿದ್ದ 25 ಮಳಿಗೆಗಳು ಸಹ ನೆಲಸಮಗೊಂಡವು.ಮಹದೇವಪುರ ವಲಯದ ಕ್ಯಾಲಸನಹಳ್ಳಿಯಲ್ಲಿ 1.62 ಕಿ.ಮೀ. ಉದ್ದದ ರಾಜಕಾಲುವೆಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಯಿತು. 

‘ಕ್ಯಾಲಸನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಜಾಗದಲ್ಲಿ ಯಾವುದೇ ಮನೆಗಳು ಇರಲಿಲ್ಲ. ಹೀಗಾಗಿ 1.62 ಕಿ.ಮೀ. ಉದ್ದದ ಜಾಗವನ್ನು ವಶಕ್ಕೆ ಪಡೆದಿದ್ದೇವೆ. ಗುರುವಾರವೂ ತೆರವು ಕಾರ್ಯಾಚರಣೆ ಮುಂದುವರೆಯಲಿದೆ’ ಎಂದು ಮಹದೇವಪುರ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಎಂ.ಮುನಿವೀರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.ವಾಣಿಜ್ಯ ಸಂಕಿರ್ಣ ತೆರವು: ಕೆ.ಆರ್‌.ಪುರದ ಉದಯನಗರದಲ್ಲಿ ರಾಜಕಾಲುವೆ ಮೇಲೆ ಬಿಬಿಎಂಪಿ (ಆಗಿನ ನಗರಸಭೆ) ನಿರ್ಮಿಸಿದ್ದ ವಾಣಿಜ್ಯ ಸಂಕಿರ್ಣವನ್ನು ತೆರವುಗೊಳಿಸಲಾಯಿತು. 2003ರಲ್ಲಿ ನಿರ್ಮಿಸಿದ್ದ ವಾಣಿಜ್ಯ ಸಂಕಿರ್ಣದಲ್ಲಿ 25 ಮಳಿಗೆಗಳಿದ್ದವು.ವಾಣಿಜ್ಯ ಸಂಕಿರ್ಣದ ಕಟ್ಟಡವನ್ನು ತೆರವುಗೊಳಿಸುವುದಕ್ಕೆ ಮಳಿಗೆಗಳ ಬಾಡಿಗೆದಾರರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‘ನಾವು ಮಳಿಗೆಗಳಿಗೆ ಅರ್ಜಿ ಹಾಕಿ ಬಹಳಷ್ಟು ವರ್ಷಗಳು ಆಗಿವೆ. ನಮಗಿನ್ನೂ ಮಳಿಗೆಗಳು ಮಂಜೂರು ಮಾಡಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಈಗ ಇಡೀ ಕಟ್ಟಡವನ್ನೇ ತೆರವುಗೊಳಿಸಲಾಗುತ್ತಿದೆ’ ಎಂದು ದೂರಿದರು.‘13 ವರ್ಷಗಳಿಂದ ಈ ಮಳಿಗೆಗಳಲ್ಲಿ ವ್ಯಾಪಾರ–ವಹಿವಾಟು ನಡೆಸುತ್ತ ಬಂದಿದ್ದೇವೆ. ಆದರೆ, ಯಾವುದೇ ನೋಟಿಸ್‌ ನೀಡದೆ ಮಳಿಗೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ಪಾಲಿಕೆ ಮಾಡಿದ ತಪ್ಪಿಗೆ ನಾವು ಬೀದಿಪಾಲಾಗಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಳಿಗೆಯ ಮಾಲೀಕರೊಬ್ಬರು ಆಗ್ರಹಿಸಿದರು.ದೊಡ್ಡಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆ ಸ್ಥಗಿತ: ರಾಜಕಾಲುವೆ ಒತ್ತುವರಿ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದರಿಂದ ಯಲಹಂಕ ವಲಯದ ದೊಡ್ಡಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆಯನ್ನು ಬುಧವಾರ ಸ್ಥಗಿತಗೊಳಿಸಲಾಯಿತು.ದೊಡ್ಡಬೊಮ್ಮಸಂದ್ರದಲ್ಲಿ ಕಳೆದ ಒಂದು ವಾರದಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.  ಅದರಂತೆ ಬುಧವಾರ ಬೆಳಿಗ್ಗೆ 9 ಗಂಟೆಗೆ ಒತ್ತುವರಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾದರು. 2–3 ಕಟ್ಟಡಗಳನ್ನು ತೆರವುಗೊಳಿಸಿದರು. ಆದರೆ, ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು, ‘ಪ್ರಭಾವಿಗಳ ಒತ್ತಡಕ್ಕೆ ಮಣಿದು ರಾಜಕಾಲುವೆಯ ಒತ್ತುವರಿ ಮಾರ್ಗವನ್ನು ಬದಲಿಸಲಾಗಿದೆ. ಹಳೆಯ ಕಾಲುವೆಯನ್ನು ಬಿಟ್ಟು ಬೇರೆ ಕಡೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ನಿಖರ ಸರ್ವೆ ನಡೆಯಬೇಕು. ಅಲ್ಲಿಯವರೆಗೆ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.‘ರಾಜಕಾಲುವೆ ಒತ್ತುವರಿ ಮಾರ್ಗವನ್ನು ಬದಲಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಗುರುವಾರ ಸರ್ವೆ ಮಾಡಿ ನಿಖರ ಮಾರ್ಗವನ್ನು ಗುರುತಿಸಿದ ಬಳಿಕ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸುತ್ತೇವೆ’ ಎಂದರು.‘ದೊಡ್ಡ ಬೊಮ್ಮಸಂದ್ರದಲ್ಲಿ ಈವರೆಗೆ 800 ಮೀಟರ್‌ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 2.5 ಕಿ.ಮೀ. ತೆರವು ಕಾರ್ಯಾಚರಣೆ ಬಾಕಿ ಇದೆ. ಮತ್ತೊಮ್ಮೆ ಸರ್ವೆ ನಡೆಸಿ ತೆರವುಗೊಳಿಸಬೇಕಿರುವ ಮನೆಗಳಿಗೆ ಗುರುತು ಹಾಕುತ್ತೇವೆ. ಬಳಿಕ ತೆರವು ಕಾರ್ಯಾಚರಣೆ ನಡೆಸುತ್ತೇವೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.